ADVERTISEMENT

ನಾಲಿಗೆ ನಮ್ಮ ಆರೋಗ್ಯದ ಬಾಗಿಲು; ರೋಗಸೂಚಕವೂ ಹೌದು

ಡಾ.ವಿಜಯಲಕ್ಷ್ಮಿ ಪಿ.
Published 27 ಸೆಪ್ಟೆಂಬರ್ 2021, 19:30 IST
Last Updated 27 ಸೆಪ್ಟೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಾಲಿಗೆ ನಮ್ಮ ಆರೋಗ್ಯದ ಬಾಗಿಲೂ ಹೌದು. ನಾಲಿಗೆ ಸರಿಯಾಗಿದ್ದರೆ ಆರೋಗ್ಯ ಸರಿ ಇದೆ ಎಂದರ್ಥ.

ಆಚಾರವಿಲ್ಲದ ನಾಲಿಗೆ - ಎಂಬುದು ಪ್ರಸಿದ್ಧ ದಾಸರ ಪದ. ನಾವು ಆಚರಿಸುವುದೆಲ್ಲವೂ ಆಚಾರವೇ. ಊಟ, ಮಾತು, ಚಿಂತನೆಯೂ ಆಚಾರವೇ. ನಾಲಿಗೆ ಎಂಬುದು ನಮ್ಮ ದೇಹದಲ್ಲಿ ಒಂದು ವಿಶಿಷ್ಟವಾದ ಅಂಗ. ಕಾಯ, ವಾಕ್, ಮನಸ್ಸು ಎಲ್ಲಕ್ಕೂ ಕೊಂಡಿಯಾಗಿರುವ ಏಕೈಕ ಅಂಗ ನಾಲಿಗೆ.

ನಾಲಿಗೆ ತಪ್ಪು ಮಾಡಿದರೆ ದೇಹಕ್ಕೂ ಮನಸ್ಸಿಗೂ ಎರಡಕ್ಕೂ ರೋಗ. ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯವಾಗಿ ಕಾರ್ಯನಿರ್ವಹಿಸುವ ಅಂಗ ನಾಲಿಗೆ. ನಾವು ಸೇವಿಸುವ ಆಹಾರದಂತೆ ನಮ್ಮ ಮನೋಭಾವ, ಚಿಂತನೆಗಳು, ಅದಕ್ಕನುಗುಣವಾಗಿ ಮಾತು. ಹೀಗಾಗಿ ನಾಲಿಗೆಯ ಮೇಲೆ ನಮ್ಮ ಆರೋಗ್ಯ, ಯಶಸ್ಸು ಅವಲಂಬಿಸಿದೆ. ಮಾತು, ಆಹಾರ ಯಾವುದೇ ಆದರೂ ಅತಿಯಾಗದೆ, ಕಡಿಮೆಯೂ ಆಗದೆ, ಅಹಿತವಲ್ಲದ ರೀತಿ ಇದ್ದರೆ ಆರೋಗ್ಯ. ರುಚಿಯಾಗಿದೆ ಎಂದು ಹೆಚ್ಚು ಸೇವಿಸಿದರೆ ಆಜೀರ್ಣವಾಗುತ್ತದೆ. ಪಥ್ಯ ಎಂದು ಅತಿ ಕಡಿಮೆ ಸೇವಿಸಿದರೆ ದೇಹ ದುರ್ಬಲವಾಗುತ್ತದೆ. ಇಷ್ಟ ಎಂದು ಕಂಡಕಂಡದ್ದೆಲ್ಲವನ್ನೂ ವಿವೇಚನೆ ಇಲ್ಲದೆ ಸೇವಿಸಿದರೆ ರೋಗಕಾರಕವಾಗುತ್ತದೆ. ಹಾಗಾಗಿ ಯಾವಾಗಲೂ ಹಿತವಾಗುವಂತಹದ್ದನ್ನು ವಿವೇಚನೆಯಿಂದ ಮಿತವಾಗಿ ಸೇವಿಸಬೇಕು.

ADVERTISEMENT

ವಿವೇಚನೆ ಎಂಬುದು ನಮ್ಮ ದೇಹ ಪ್ರಕೃತಿ, ಆಯಾ ಪ್ರದೇಶದ ಹವಾಮಾನ, ಅವರವರ ಉದ್ಯೋಗ, ಬದುಕುವ ಪರಿಸರವನ್ನು ಅವಲಂಬಿಸಿರುತ್ತದೆ. ಆದ್ದರಿಂದ ಎಲ್ಲರಿಗೂ ಎಲ್ಲ ಆಹಾರಗಳೂ ಹಿತವಾಗುವುದಿಲ್ಲ. ಶರೀರ ಪುಷ್ಟಿಯಾಗಬೇಕಾದರೆ ಸಮತೋಲನ ಆಹಾರವನ್ನು ಸೇವಿಸಬೇಕು ಎನ್ನುವುದು ನಿರ್ವಿವಾದ. ಆದರೆ ಸಮತೋಲನ ಎಂದರೇನು ಎಂದರೆ ಪಿಷ್ಠ ಅಥವಾ ಪೋಷಕಾಂಶ, ಕೊಬ್ಬು, ಪ್ರೊಟೀನ್‌ಗಳ ಹಾಗೂ ವಿಟಮಿನ್‌ಗಳು ಪೂರಕವಾಗಿ ಹೊಂದಿಕೆಯಾಗುವಂತಹ ಆಹಾರ. ಇಷ್ಟು ಮಾತ್ರವೇ ಎಂದರೆ ಇವು ಇರುವಂತಹ ಆಹಾರವು ಸಿಹಿ, ಹುಳಿ, ಉಪ್ಪು, ಖಾರ, ಕಹಿ, ಒಗರು ಹೀಗೆ ಆರು ರಸಗಳಿಂದ ಕೂಡಿದ್ದರೆ ನಾವು ಸೇವಿಸಿದ ಆಹಾರವು ದೇಹದ ಭಾಗವಾಗಲು ಸಾಧ್ಯ; ಅದು ಆರೋಗ್ಯಪ್ರದವೂ ಆಗುತ್ತದೆ. ಅದಲ್ಲದೆ ಕೇವಲ ಸಿಹಿ, ಕೇವಲ ಕಹಿ – ಹೀಗೆ ಒಂದೇ ರಸದಿಂದ ಕೂಡಿದ ಆಹಾರವನ್ನು ಹೆಚ್ಚು ಸೇವಿಸುವುದು ಅಥವಾ ಖಾರವನ್ನೋ ಕಹಿಯನ್ನೋ ಸೇವಿಸದೆಯೇ ಇರುವುದು – ಇಂತಹವು ಆಹಾರ ಪರಿಪೂರ್ಣವಾಗಿ ದೇಹಧಾತುವಾಗಿ ಪರಿಣಾಮ ಹೊಂದಲು ಒಂದು ಆಡಚಣೆ ಎಂದೇ ಹೇಳಬೇಕು.

ನಾಲಿಗೆಗೆ ರುಚಿ ಎಂದು ಆಯಾ ಪ್ರದೇಶದ್ದಲ್ಲದ ಆಹಾರವನ್ನು ನಿರಂತರ ಸೇವಿಸುವುದೂ ಅನಾರೋಗ್ಯಕ್ಕೆ ನಾಂದಿ ಹಾಡಿದಂತೆಯೇ. ಆಯಾ ಪ್ರದೇಶದಲ್ಲಿ ಬೆಳೆಯುವ ಹಣ್ಣು, ತರಕಾರಿ, ದವಸಧಾನ್ಯಗಳ ಸೇವನೆ, ಆ ಪ್ರದೇಶದ ವಾತಾವರಣಕ್ಕೆ ಪೂರಕವಾದ ಪೋಷಕಾಂಶಗಳನ್ನು ಹೊಂದಿದ್ದು ಆರೋಗ್ಯಕರವಾಗುವುದಲ್ಲದೆ, ಅನಾರೋಗ್ಯವು ಬಾಧಿಸದಂತೆಯೂ ತಡೆಗಟ್ಟುತ್ತದೆ. ರುಚಿ ಎಂದು ದೇಶ ಕಾಲಗಳ ಪರಿವೆ ಇಲ್ಲದೆ ಎಲ್ಲಾ ದೇಶದ ಆಹಾರವನ್ನು, ಎಲ್ಲಾ ಕಾಲಗಳಲ್ಲಿಯೂ ಸೇವಿಸುವುದು ಒಳಿತಲ್ಲ. ಕೇರಳಕ್ಕೆ ತೆಂಗಿನೆಣ್ಣೆಯಾದರೆ ಕರ್ನಾಟಕಕ್ಕೆ ಕಡಲೆ ಎಣ್ಣೆ, ಮಹಾರಾಷ್ಟ್ರಕ್ಕೆ ಕುಸುಬೆ ಎಣ್ಣೆಯಾದರೆ ಆಂಧ್ರಕ್ಕೆ ಎಳ್ಳೆಣ್ಣೆ; ಹಾಗೆಯೇ ಉತ್ತರ ಭಾರತಕ್ಕೆ ಸಾಸಿವೆ ಎಣ್ಣೆ, ಅತಿ ಚಳಿ ಇರುವ ಪ್ರದೇಶದಲ್ಲಿ ಆಲೀವ್ ಎಣ್ಣೆ ಹಿತಕರ. ಹಾಗೆಯೇ ಧಾನ್ಯಗಳೂ ಸಹ. ರುಚಿಕರವೆಂದು ತನ್ನ ಪ್ರದೇಶಕ್ಕೆ ಒಗ್ಗದ ಅಕಾಲದ ಧಾನ್ಯ ತರಕಾರಿ, ಹಣ್ಣು, ಹಾಗೂ ತಯಾರಿಸಿ ಶೇಖರಿಸಿದ ಪದಾರ್ಥಗಳು ಅನಾರೋಗ್ಯ ಕಾರಕವೇ.

ನಾಲಿಗೆ ನಮ್ಮ ಆರೋಗ್ಯಸೂಚಕವೂ ಹೌದು. ನಾಲಿಗೆಯ ಮೇಲೆ ಬಿಳಿ ಪದರವೊಂದು ಕಾಣುತ್ತಿದ್ದರೆ ಹೊಟ್ಟೆಯಲ್ಲಿ ಅಜೀರ್ಣ ಇದೆ ಎಂಬುದನ್ನು ಸೂಚಿಸಿದರೆ, ಪದೇ ಪದೇ ಬಾಯಿ ಹುಣ್ಣಾಗುವುದು ಕರುಳಿನ ಆರೋಗ್ಯ ಸರಿ ಇಲ್ಲ ಎಂಬುದನ್ನು ಸೂಚಿಸುತ್ತದೆ. ಇನ್ನು ಕೆಲವೊಮ್ಮೆ ದೇಹಕ್ಕೆ ಬೇಕಾಗುವ ಪೋಷಕಾಂಶಗಳಾದ ಬಿ ಕಾಂಪ್ಲೆಕ್ಸ್ ಇತ್ಯಾದಿಗಳ ಕೊರತೆಯನ್ನೂ ಸೂಚಿಸುತ್ತದೆ. ಬಾಯಿ ರುಚಿ ಇಲ್ಲದಿರುವಿಕೆಯು ಜ್ವರ ಇತ್ಯಾದಿ ರೋಗದ ಮುನ್ಸೂಚನೆಯೂ ಆಗಿದೆ. ಕೆಲವು ಸಂದರ್ಭಗಳಲ್ಲಿ ಮೂಗು ಕಟ್ಟಿದ್ದರೂ, ವಿಪರೀತ ಹಳೇ ನೆಗಡಿಯಾದರೂ, ಸೈನಸ್‌ಗಳ ಉರಿಯೂತ ಇದ್ದರೂ, ಉಸಿರಾಟದ ತೊಂದರೆಯಿಂದಾಗಿಯೂ ಬಾಯಿ ರುಚಿ ಇರುವುದಿಲ್ಲ.

ಪ್ರಸಕ್ತ ಕೋವಿಡ್ ಸಂದರ್ಭದಲ್ಲಿ ಪ್ರಮುಖ ಲಕ್ಷಣವೇ ಬಾಯಿರುಚಿ ಇಲ್ಲದಿರುವುದು ಎಂದಾಗಿತ್ತು. ಬಾಯಿರುಚಿ ಇಲ್ಲದಿದ್ದರೆ ಕಾಮಾಲೆ ಮುಂತಾದ ಯಕೃತ್ ಸಂಬಂಧಿ ರೋಗದಿಂದ ಹಿಡಿದು ಸಂಪೂರ್ಣ ಬಾಯಿಯಿಂದ ಹಿಡಿದು ಎಲ್ಲಾ ಜೀರ್ಣಾಂಗಗಳ ಮತ್ತು ಶ್ವಾಸಾಂಗಗಳಲ್ಲಿ ಎಲ್ಲಿ ತೊಂದರೆ ಇದೆ, ಕ್ಯಾನ್ಸರ್ ಮುಂತಾದ ರೋಗಗಳ ಮುನ್ಸೂಚನೆಯೋ ಎಂದು ಗಮನಿಸುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿ ಬಾಯಿ ರುಚಿ ಇಲ್ಲದಿರುವುದವ್ವು ಒಂದು ಸಾಮಾನ್ಯ ಲಕ್ಷಣ ಎಂದು ಉದಾಸೀನ ಮಾಡುವುದು ತರವಲ್ಲ. ಹಾಗೆಯೇ ನಾಲಿಗೆ ಹಳದಿಯಾಗಿದ್ದರೆ ಪಿತ್ತಸಂಬಂಧಿ ರೋಗಗಳನ್ನು, ಬೆಳ್ಳಗಿದ್ದರೆ ರಕ್ತಹೀನತೆ, ಇತರೆ ಪೊಷಕಾಂಶಗಳ ಕೊರತೆ ಹಾಗೂ ಕಫಸಂಬಂಧಿ ರೋಗಗಳನ್ನು, ನಾಲಿಗೆ ಕಪ್ಪು ಅಥವಾ ನೀಲಿಯಾಗಿದ್ದರೆ, ವಾತವ್ಯಾಧಿಯೋ ಅಥವಾ ಹೃದಯಸಂಬಂಧಿ ರೋಗಗಳನ್ನೂ ಚಿಂತಿಸಬೇಕು. ಆದ್ದರಿಂದ ನಾಲಿಗೆ ನಮ್ಮ ಆರೋಗ್ಯದ ಬಾಗಿಲೂ ಹೌದು. ನಾಲಿಗೆ ಸರಿಯಾಗಿದ್ದರೆ ಆರೋಗ್ಯ ಸರಿ ಇದೆ ಎಂದರ್ಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.