ADVERTISEMENT

ಗರ್ಭಕೋಶ ಶಸ್ತ್ರಚಿಕಿತ್ಸೆ ಯಾವಾಗ ಅಗತ್ಯ?

ಡಾ.ಸಲೀಮ ನದಾಫ
Published 3 ಜನವರಿ 2020, 19:30 IST
Last Updated 3 ಜನವರಿ 2020, 19:30 IST
   

ಸಣ್ಣಪುಟ್ಟ ಸಮಸ್ಯೆಗಳಿಗೂ ಗರ್ಭಕೋಶವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಮಹಿಳೆಯರಲ್ಲಿ ಮೂಳೆ ಸವೆತ, ಮೊಣಕಾಲು, ಸೊಂಟನೋವಿನ ತೊಂದರೆಗಳು ಸಾಮಾನ್ಯ. ಹೀಗಾಗಿ ಗಂಭೀರ ಸಮಸ್ಯೆ ಇದ್ದರೆ ಮಾತ್ರ ಇಂತಹ ಶಸ್ತ್ರಚಿಕಿತ್ಸೆಯ ಮೊರೆ ಹೋಗಬಹುದು.

‘ಡಾಕ್ಟ್ರೇ ಸೊಂಟ ನೋವು. ಆವಾಗಾವಾಗ ‌ಕಾಟ ಕೊಡುತ್ತದೆ. ಏನಾದರೂ ಮಾಡಿ’ ಎಂದು ಮಧ್ಯವಯಸ್ಕ ಮಹಿಳೆಯರು ತೊಂದರೆ ಹೇಳಿದಾಗ ಕೇಳುವ ಸಹಜ ಪ್ರಶ್ನೆ ‘ನಿಮ್ಮ‌ ಮುಟ್ಟು ಹೇಗಿದೆ?’ ಎಂದು.

‘ಅಯ್ಯೋ‌ ಅದೆಲ್ಲಾ‌ ನಿಂತೋಯ್ತು. ನಾನು ದೊಡ್ಡ ಆಪರೇಷನ್ ಮಾಡಿಸ್ಕೊಂಡೆ. ಗರ್ಭ ಚೀಲ‌ ತೆಗೆದು ಹಾಕಿದ್ರು‌. ಆವಾಗಿಂದ ಈ ತೊಂದರೆ’ ಎಂದು ವಿವರ ಬಿಚ್ಚಿಡುತ್ತಾರೆ.

ADVERTISEMENT

ಗರ್ಭಕೋಶ ತೆಗೆಸಿದ ಶೇ 90ರಷ್ಟು ಮಹಿಳೆಯರು ಯಾವುದೇ ಗಂಭೀರ ತೊಂದರೆ ಇರದಿದ್ದರೂ ಗರ್ಭಕೋಶಕ್ಕೆ ಕತ್ತರಿ ಹಾಕಿಸಿಕೊಂಡಿರುವುದು ಬಹಿರಂಗವಾಗಿದೆ.

ವಿಪರೀತ ರಕ್ತಸ್ರಾವ, ಬಿಳಿ ಮುಟ್ಟು ಮೊದಲಾದ ಕಾರಣಗಳಿಂದಲೂ ಗರ್ಭಕೋಶ ತೆಗೆಸುವುದು ಸಾಮಾನ್ಯವಾಗಿಬಿಟ್ಟಿದೆ. ಮಾಸಿಕ ಸ್ರಾವ ಹೆಚ್ಚಾಗಲಿ ಅಥವಾ ಅಂತರ್‌ ಮಾಸಿಕ‌ ಸ್ರಾವ ಅಥವಾ ಅಕಾಲಿಕ‌ ಸ್ರಾವವಿರಲಿ ಅದಕ್ಕೆ‌ ಮೊದಲು ಔಷಧಿ ಮಾಡಿ ನಂತರ ಪರಿಸ್ಥಿತಿ‌ ಕೈ ಮೀರಿದರೆ ಗರ್ಭಕೋಶ ತೆಗೆಸಬಹುದು. ಆದರೆ ಒಂದೆರಡು ಸ್ರಾವಗಳು ಏರುಪೇರಾದರೆ ಗರ್ಭಕೋಶ ತೆಗೆಸುವ ಅಗತ್ಯವಿಲ್ಲ.

ಹಾರ್ಮೋನ್‌ ಉತ್ಪತ್ತಿ

ಹುಡುಗಿಯೊಬ್ಬಳು ಮೈನೆರೆದು ಮಹಿಳೆಯಾದ ದಿನದಿಂದ ದೇಹದಲ್ಲಿ ಹಾರ್ಮೋನ್‌ಗಳ ಸ್ರಾವ ಅಧಿಕವಾಗುತ್ತದೆ. ಈಸ್ಟ್ರೋಜೆನ್ ಪ್ರೊಜೆಸ್ಟಿರಾನ್‌ ಮೊದಲಾದ ಹಾರ್ಮೋನ್‌ಗಳು ದೇಹದಲ್ಲಿ ಉತ್ಪತ್ತಿಯಾಗುತ್ತಿರುತ್ತವೆ. ಇದರಲ್ಲಿ‌ ಕೆಲವು ಸಲ ಕೆಲವೊಂದು ಹಾರ್ಮೋನ್, ರಸದೂತಗಳ ಸ್ರಾವ ಹೆಚ್ಚು ಕಡಿಮೆಯಾದರೆ ಋತುಚಕ್ರಗಳಲ್ಲಿ ಏರುಪೇರು ಸಾಮಾನ್ಯ.

ಇನ್ನು ಸ್ತ್ರೀ ರಸದೂತಗಳ ಕೆಲಸವೆಂದರೆ ಇಪ್ಪತ್ತೆಂಟು ದಿನಗಳ ಋತುಚಕ್ರ ನಿರ್ವಹಣೆಯಿಂದ‌ ಹಿಡಿದು ಗರ್ಭಕೋಶದ ಬೆಳವಣಿಗೆ, ಗರ್ಭಧಾರಣೆಯ ತಯಾರಿ‌, ಒಟ್ಟು ಗರ್ಭಕೋಶದ ಆರೋಗ್ಯ ನಿರ್ವಹಣೆಯವರೆಗೆ. ಇದರ ಜೊತೆಗೆ ಬೇರೆ ಮುಖ್ಯ ಕೆಲಸಗಳೆಂದರೆ ಮಹಿಳೆಯ ಮಾನಸಿಕ‌ ಸಂತುಲನ‌ ಕಾಪಾಡುವುದು. ಮುಟ್ಟು‌ ನಿಂತ ಮೇಲೆ‌ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಖಿನ್ನತೆಗೆ ಕಾರಣ ಈಗ ಗೊತ್ತಾಗಿರಬಹುದು. ಅದರ ಜೊತೆಗೆ ದೇಹದ ಕೊಬ್ಬಿನ‌ ನಿರ್ವಹಣೆ. ಇದು ಹೃದಯಾಘಾತವಾಗುವುದನ್ನು ತಡೆಯುತ್ತದೆ. ಮೂಳೆಗಳನ್ನು ಗಟ್ಟಿಗೊಳಿಸುವುದು, ಮೂಳೆಯಲ್ಲಿನ‌ ಕ್ಯಾಲ್ಶಿಯಂ ಹಾಗೂ ಇತರೆ ಲವಣಗಳ ಸಮತೋಲನ ನೋಡಿಕೊಳ್ಳುವುದು ಈ ಹಾರ್ಮೋನ್‌ಗಳು‌.ಮೈನೆರೆದ ಕಿಶೋರಿಯೊಬ್ಬಳು ಮಹಿಳೆಯಾಗಿ ಬೆಳೆಯುವುದಕ್ಕೂ ಇದೇ ಹಾರ್ಮೋನ್ ಬೇಕು. ಅಂಗಾಂಗ ಬೆಳವಣಿಗೆ, ಪುರುಷರತ್ತ ಆಕರ್ಷಣೆ ಎಲ್ಲವೂ ಈ ಹಾರ್ಮೋನ್‌ಗಳ ಕೆಲಸ.

ಮೂಳೆ ಸವೆತ

ಈ ಹಾರ್ಮೋನ್‌ಗಳು ಒಟ್ಟಾಗಿ ಉಳಿದೆಲ್ಲ ಹಾರ್ಮೋನ್‌ಗಳ ಜೊತೆ ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಕೆಲ‌ವು ಬೇರೆ ಹಾರ್ಮೋನ್‌ ಏರುಪೇರಾದರೆ ಮುಟ್ಟಿನ‌ ತೊಂದರೆ ಆಗಬಹುದು. ಗರ್ಭಕೋಶ ತೆಗೆಸಿ ಮುಟ್ಟು ನಿಲ್ಲಿಸಿದಾಗ ಮೊಟ್ಟ ಮೊದಲ ಕಷ್ಟ ಎದುರಾಗುವುದು ಸೊಂಟದ ನೋವು. ಮೂಳೆಗಳುಮೆದುವಾಗುವ ಮೊದಲ‌ ಚಿಹ್ನೆ. ಕ್ಯಾಲ್ಶಿಯಂ ಲವಣ ನಿರ್ವಹಿಸುವವರಿಲ್ಲದೆ ಮೂಳೆಗಳು ಮೆತ್ತಗಾಗಿ ಸಮಸ್ಯೆ ಶುರುವಾಗುತ್ತದೆ. ನಿರಂತರಆಸ್ಪತ್ರೆಗಳ ಅಲೆದಾಟ. ಮಹಿಳೆ ಅನಾರೋಗ್ಯದ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾಳೆ.

ಲೈಂಗಿಕ ಆಸಕ್ತಿ ಕೊರತೆ

ಗರ್ಭಕೋಶ ತೆಗೆದ ಬಳಿಕ ಅದರ ಮುಖಾಂತರ ಹೋಗುವ ಅಂಡಾಶಯದ ರಕ್ತನಾಳಗಳು ಮೊಟಕಾಗುವುದರಿಂದ ಅಂಡಾಶಯಗಳಿಂದ ಒಸರುವಹಾರ್ಮೋನ್‌ಗಳಲ್ಲಿ ತೀವ್ರ ಏರುಪೇರು ಶುರುವಾಗಬಹುದು. ಲೈಂಗಿಕ ಆಸಕ್ತಿ ಕಡಿಮೆಯಾಗಿ ಗಂಡಹೆಂಡಿರ ಹೊಂದಾಣಿಕೆಗಳು ತಾಳತಪ್ಪಿ ಸಂಶಯದಿಂದ‌ ಆರಂಭವಾಗುವ ಸಮಸ್ಯೆ, ಗಲಾಟೆ ಜಗಳದಲ್ಲಿ ಮುಂದುವರಿಯಬಹುದು. ಗರ್ಭಕೋಶವಿಲ್ಲದೆ ಜನನಾಂಗದ ತೇವಾಂಶ ಕಡಿಮೆಯಾಗಿಗಂಡಹೆಂಡಿರ ಸಮಾಗಮ ಮಹಿಳೆಗೆ ನೋವು ಕೊಡಬಹುದು ಅಥವಾ ಸರಿಯಾದ ಸಂತೃಪ್ತಿ ಲಭಿಸದೆ ಮಹಿಳೆ ದೈಹಿಕ ಸುಖದಿಂದ ವಿಮುಖಳಾಗಬಹುದು.

ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯ ಕಿಬ್ಬೊಟ್ಟೆಯ ಅಂಗಾಂಗಗಳ ಸಮಗ್ರತೆಗೆ ಭಂಗವಾಗಿ ಮೂತ್ರ, ಬಹಿರ್ದೆಸೆಯ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ.

* ಮುಟ್ಟಿನ ಏರುಪೇರುಗಳಿದ್ದರೆ ಅದಕ್ಕೆ ಸರಿಯಾದ ಚಿಕಿತ್ಸೆ ಮಾಡಬೇಕು.

* ಬಿಳುಪಿನ ತೊಂದರೆಯಿರುವವರು ವೈಯುಕ್ತಿಕ ಶುಚಿತ್ವದತ್ತ ತೀವ್ರ ನಿಗಾ ವಹಿಸಿ ಸರಿಯಾದ ಚಿಕಿತ್ಸೆ ಪಡೆಯಬೇಕು.

* ಶಿಲೀಂಧ್ರ ( ಫಂಗಸ್), ಸೂಕ್ಷ್ಮಾಣು ಜೀವಿಗಳ ವಿರುದ್ಧ ಸರಿಯಾದ ಔಷಧಿ ಬಳಸಿದರೆ ಬಿಳಿ ಸೆರಗಿನಿಂದ ಮುಕ್ತಿ ಹೊಂದಬಹುದು.

* ಪ್ರಾಣಕ್ಕೆ ಮಾರಕವಾಗುವಂತಹ ಕ್ಯಾನ್ಸರ್ ಅಥವಾ ವಿಪರೀತ ಸ್ರಾವಗಳಂತಹ ಅಸಾಮಾನ್ಯ ತೊಂದರೆಗಳಿದ್ದರೆ ಗರ್ಭಕೋಶ ತೆಗೆಸಬಹುದು.

* ದೊಡ್ಡದಾದ ಫೈಬ್ರಾಯ್ಡ್‌ ಇದ್ದರೂ ಗರ್ಭಕೋಶ ತೆಗೆದುಹಾಕುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.