ADVERTISEMENT

ಕೊರೊನಾ ಸಾಂತ್ವನ: ಕೋವಿಡ್ ತೀವ್ರತೆ ತಡೆಗೆ ಲಸಿಕೆ ಸಹಕಾರಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 19:31 IST
Last Updated 15 ಏಪ್ರಿಲ್ 2021, 19:31 IST
ಡಾ. ವಿಶಾಲ್‌ ರಾವ್‌       
ಡಾ. ವಿಶಾಲ್‌ ರಾವ್‌          

ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡಿದ್ದು, ಮೊದಲಿಗಿಂತ ವೇಗವಾಗಿ ವೈರಾಣು ವ್ಯಾಪಿಸಿಕೊಳ್ಳುತ್ತಿದೆ. ಈಗ ಕಾಯಿಲೆಯ ತೀವ್ರತೆಯಿಂದ ರಕ್ಷಿಸಿಕೊಳ್ಳಲು ಲಸಿಕೆಯಿದೆ. ಅರ್ಹತೆ ಇರುವ ಎಲ್ಲರೂ ಆದಷ್ಟು ಬೇಗ ಲಸಿಕೆಪಡೆದುಕೊಂಡರೆ ಎರಡನೇ ಅಲೆಯನ್ನು ಧೈರ್ಯವಾಗಿ ಎದುರಿಸಲು ಸಾಧ್ಯ.

60 ವರ್ಷ ಮೇಲ್ಪಟ್ಟವರು ಹಾಗೂ ಕೋವಿಡೇತರ ಕಾಯಿಲೆ ಎದುರಿಸುತ್ತಿರುವವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರಲಿದೆ. ಇವರಿಗೆ ಸೋಂಕು ತಗುಲಿದರೆ ಹೆಚ್ಚಿನ ಪ್ರಮಾಣದಲ್ಲಿ ಅಸ್ವಸ್ಥರಾಗುವ ಸಾಧ್ಯತೆ ಇರುತ್ತದೆ. ಈಗಾಗಲೇ ವರದಿಯಾದ ಕೋವಿಡ್‌ ಮರಣ ಪ್ರಕರಣಗಳನ್ನು ಗಮನಿಸಿದಲ್ಲಿ 60 ವರ್ಷ ಮೇಲ್ಪಟ್ಟವರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗಿದ್ದಾರೆ. ಹಾಗಾಗಿ, ಹಿರಿಯ ನಾಗರಿಕರಿಗೆ ರಕ್ಷಣೆ ಒದಗಿಸಬೇಕಿದೆ.

ಕಳೆದ ವರ್ಷ ಲಸಿಕೆ ಇರಲಿಲ್ಲ. ಇದರಿಂದಾಗಿ ಹೆಚ್ಚಿನ ಸಾವು–ನೋವು ಸಂಭವಿಸಿತು. ಈಗ ಉತ್ತಮ ಫಲಿತಾಂಶ ನೀಡುವ ‘ಕೋವ್ಯಾಕ್ಸಿನ್’ ಮತ್ತು ‘ಕೋವಿಶೀಲ್ಡ್‌’ ಲಸಿಕೆಯಿದೆ. ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ‌

ADVERTISEMENT

ಲಸಿಕೆ ಪಡೆದ ಬಳಿಕ ಸೋಂಕು ತಗುಲುವುದಿಲ್ಲ ಎಂದು ಹೇಳಲಾಗದು. ಆದರೆ, ಸೋಂಕು ತಗುಲಿದರೂ ಜೀವಕ್ಕೆ ಅಪಾಯವಾಗದು ಎಂಬ ಭರವಸೆ ನೀಡಬಹುದು. ಈಗ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾದವರ ಸಂಖ್ಯೆ 500ರ ಗಡಿ ದಾಟಿದೆ. ಕಳೆದ ವರ್ಷ ಸೆಪ್ಟೆಂಬರ್‌ ಅವಧಿಯಲ್ಲಿ 800 ಮಂದಿ ಐಸಿಯುನಲ್ಲಿ ಇದ್ದರು. ಅವರಲ್ಲಿ ಶೇ 60 ರಷ್ಟು ಮಂದಿ ನಮಗೆ ಕೋವಿಡ್ ಏನು ಮಾಡದು ಎಂಬ ಮನೋಭಾವ ಹೊಂದಿದ್ದರು. ಈಗ ಕೂಡ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕಿ, ಕೋವಿಡ್ ಪೀಡಿತರಾಗಿ ಆಸ್ಪತ್ರೆ ಸೇರಿದಲ್ಲಿ ವೆಂಟಿಲೇಟರ್ ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯಕ್ಕೆ ಲಕ್ಷಾಂತರ ರೂಪಾಯಿ ಪಾವತಿಸಬೇಕಾಗುತ್ತದೆ.

ಇದು ರೂಪಾಂತರಗೊಂಡ ವೈರಾಣು ಆಗಿರುವ ಕಾರಣ ಹರಡುವಿಕೆಯ ವೇಗ ಈ ಮೊದಲಿಗಿಂತ ಶೇ 60 ರಷ್ಟು ಹೆಚ್ಚಿರಲಿದೆ. ನಮ್ಮ ಜತೆಗೆ ಕುಟುಂಬದ ಸದಸ್ಯರೂ ಸೋಂಕಿತರಾಗಿ ಸಮಸ್ಯೆ ಎದುರಿಸುವ ಸಾಧ್ಯತೆಗಳಿರುತ್ತವೆ. ಸಾಮಾಜಿಕ ಕಳಕಳಿ ಮತ್ತು ಆರೋಗ್ಯದ ದೃಷ್ಟಿಯಿಂದ ಲಸಿಕೆ ಪಡೆದುಕೊಳ್ಳುವುದು ನಮ್ಮ ಕರ್ತವ್ಯ. ಲಸಿಕೆ ಹಾಕಿಸಿಕೊಂಡ ಬಳಿಕವೂ ಮುಖಗವಸು ಧರಿಸುವಿಕೆ, ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ವಿವಿಧ ನಿಯಮಗಳನ್ನು ಪಾಲಿಸಬೇಕು. ಕೈಗಳ ಶುಚಿತ್ವಕ್ಕೆ ಆದ್ಯತೆ ನೀಡಬೇಕು.

- ಡಾ. ವಿಶಾಲ್ ರಾವ್, ಕ್ಯಾನ್ಸರ್ ತಜ್ಞ, ಎಚ್‌ಸಿಜಿ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.