ADVERTISEMENT

ತೊಡೆಗೆ ಬಲ; ಜೀರ್ಣಶಕ್ತಿ ವೃದ್ಧಿಗೆ ವಿರಿಂಚ್ಯಾಸನ

ಯೋಗಾ ಯೋಗ

ಜಿ.ಎನ್.ಶಿವಕುಮಾರ
Published 4 ಆಗಸ್ಟ್ 2019, 19:30 IST
Last Updated 4 ಆಗಸ್ಟ್ 2019, 19:30 IST
ವಿರಿಂಚ್ಯಾಸನ
ವಿರಿಂಚ್ಯಾಸನ   

ವಿರಿಂಚಿ ಎಂದರೆ ತ್ರಿಮೂರ್ತಿಗಳಲ್ಲಿ ಒಬ್ಬರಾದ ಚತುರ್ಮುಖ ಬ್ರಹ್ಮನ ಹೆಸರುಗಳಲ್ಲಿ ಒಂದು. ವಿಶ್ವದ ಸೃಷ್ಟಿಕ್ರಮದ ಜವಾಬ್ದಾರಿ ಈತನದು ಎಂದು ಹೇಳಲಾಗಿದೆ. ಅರ್ಧಪದ್ಮಾಸನ ಹಾಗೂ ಏಕಪಾದ ಶೀರ್ಷಾಸನವನ್ನೊಳಗೊಂಡು ಕೈಗಳಿಂದ ಮುಂಡದ ಹಿಂಭಾಗದಲ್ಲಿ ಕಾಲನ್ನು ಬಂಧಿಸಿಟ್ಟು ಅಭ್ಯಾಸ ನಡೆಯುತ್ತದೆ. ಈ ಆಸನ ವಿರಿಂಚಿ ಹೆಸರಿಗೆ ಮೀಸಲಾಗಿದ್ದು, ವಿರಿಂಚ್ಯಾಸನ ಎಂದು ಹೆಸರಿಸಲಾಗಿದೆ.

ಅಭ್ಯಾಸಕ್ರಮ

ಕಾಲುಗಳನ್ನು ಚಾಚಿಟ್ಟು ಕುಳಿತುಕೊಳ್ಳಿ. ಬಲಗಾಲನ್ನು ಮಡಿಚಿ ಪಾದವನ್ನು ಎಡತೊಡೆಯ ಮೇಲೆ ಮೇಲ್ಮೊಗವಾಗಿರಿಸಿ ಅರ್ಧಪದ್ಮಾಸನ ಹಾಕಿ. ಎಡಗಾಲನ್ನು ಮಡಿಚಿ ಮುಂಡದತ್ತದ ಸೆಳೆದು ಕಾಲ್ಗಿಣ್ಣನ್ನು ಹಿಡಿದು ಮೇಲೆತ್ತಿ ತಲೆಯ ಹಿಂಬದಿಗೆ ತಂದು ಏಕಪಾದ ಶೀರ್ಷಾಸನ ಹಾಕಿ. ಈ ಹಂತದಲ್ಲಿ ಒಂದೆರೆಡು ಸರಳ ಉಸಿರಾಟ ನಡೆಸಿ.

ADVERTISEMENT

ಬಳಿಕ, ಎದೆಯನ್ನು ಮುಂದಕ್ಕೊತ್ತಿ ಕುತ್ತಿಗೆಯನ್ನು ನೇರವಾಗಿಸಿ, ಬಲಗೈಯನ್ನು ಬೆನ್ನಹಿಂದೆ ತಂದು ಅಂಗೈ ತಲೆಯತ್ತ ಬರುವಂತೆ ಮುಂದೋಳನ್ನು ಮೇಲಕ್ಕೆ ಸರಿಸಿ. ನಂತರ, ಎಡಗೈಯನ್ನು ತಲೆಯ ಮೇಲ್ಭಾಗದಿಂದ ಹಿಂದಕ್ಕೊಯ್ದು ಬೆರಳುಗಳನ್ನು ಹೆಣೆದು ಕಾಲನ್ನು ಬಂಧಿಸಿಡಿಯಿರಿ.

ಸರಳ ಉಸಿರಾಟ ನಡೆಸುತ್ತಾ ಅಂತಿಮ ಸ್ಥಿತಿಯಲ್ಲಿ 15ರಿಂದ 20 ಸೆಕೆಂಡು ನೆಲೆಸಿ. ಅವರೋಹಣ ಮಾಡುವಾಗ ಕಾಲನ್ನು ನಿಧಾನವಾಗಿ ಬಿಡಿಸಿಟ್ಟು ವಿರಮಿಸಿ. ಬಳಿಕ, ವಿರುದ್ಧ ದಿಕ್ಕಿನಲ್ಲಿ ಅಭ್ಯಾಸ ನಡೆಸಿ.

* ವಿರಿಂಚ್ಯಾಸನದ ಮುಂದುವರಿದ ಹಂತ ಇದ್ದು, ಅದು ಅರ್ಧವೀರಾಸನ ಹಾಗೂ ಏಕಪಾದ ಶೀರ್ಷಾಸನವನ್ನೊಳಗೊಂಡು ಅಭ್ಯಾಸ ನಡೆಯುತ್ತದೆ.

ಸೂಚನೆ

ಕಿಬ್ಬೊಟ್ಟೆಯು ಹೆಚ್ಚು ಕುಗ್ಗಿ ಹಾಗೂ ಕಾಲಿನಿಂದ ಬೆನ್ನು ಮುಂದಕ್ಕೆ ಒತ್ತುವ ಮೂಲಕ ಅಭ್ಯಾಸ ನಡೆಯುವುದರಿಂದ ಉಸಿರಾಟವು ತುಸು ಶ್ರಮದಿಂದ ಕೂಡಿರುತ್ತದೆ. ಒತ್ತಾಯಪೂರ್ವಕವಾಗಿ ಯಾವುದೇ ಆಸನಗಳನ್ನು ಅಭ್ಯಾಸಿಸಲು ಯತ್ನಿಸಬೇಡಿ. ಪುನರಾವರ್ತನೆ ಅಭ್ಯಾಸಕ್ಕೆ ಹೆಚ್ಚು ಒತ್ತು ನೀಡಿ ಹಾಗೂ ತಾಳ್ಮೆಯಿಂದ ಅಭ್ಯಾಸ ಮುಂದುವರಿಸಿ.

ಫಲಗಳು

ಈ ಆಸನದ ಎರಡೂ ಹಂತಗಳ ಅಭ್ಯಾಸದ ಪ್ರಯೋಜನಗಳು ಬಹುತೇಕ ಒಂದೇ ಆಗಿವೆ. ಅಭ್ಯಾಸದ ಭಂಗಿಯಲ್ಲಿ ತುಸು ವ್ಯತ್ಯಾಸಗಳಿವೆ.

* ಭುಜಗಳ ಚಲನೆಗಳು ಸುಗಮವಾಗುತ್ತವೆ.

* ಬೆನ್ನು ಮತ್ತು ಕುತ್ತಿಗೆ ಬಲಗೊಳ್ಳುತ್ತವೆ.

* ತೊಡೆಗಳು ಮತ್ತು ಜಾನುರಜ್ಜುಗಳ ಸ್ನಾಯುಗಳು ಸಂಕುಚನಕ್ಕೊಳಗಾಗಿ ಜೀರ್ಣಶಕ್ತಿಯನ್ನು ವೃದ್ಧಿಸುತ್ತವೆ.

* ತೊಡೆಯ ಮೇಲ್ಭಾಗ ಹಾಗೂ ಕೆಳಭಾಗದ ನರಗಳು, ಬೆನ್ನಿನ ನರಗಳು ಸೆಳೆಯಲ್ಪಟ್ಟು ವಿಶ್ರಾಂತಿಯನ್ನು ಹೊಂದುತ್ತವೆ. ಜತೆಗೆ, ಉತ್ತಮ ರಕ್ತಪರಿಚಲನೆಗೆ ನೆರವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.