ADVERTISEMENT

Water in Birth: ನೀರಿನಲ್ಲಿ ಹೆರಿಗೆ ಸರಾಗ

ರೂಪಾ .ಕೆ.ಎಂ.
Published 9 ಮೇ 2025, 23:37 IST
Last Updated 9 ಮೇ 2025, 23:37 IST
   

ಜಲಪ್ರಸವವೆಂಬುದು ಬಹಳ ಹಿಂದೆಯೇ ಅಸ್ತಿತ್ವದಲ್ಲಿದ್ದರೂ ಈಗೀಗ ಜನಪ್ರಿಯವಾಗುತ್ತಿದೆ. ಸಹಜ ಹೆರಿಗೆಯ ವಿಧಾನಗಳಲ್ಲಿ ನೀರಿನಲ್ಲಿ ಆಗುವ ಹೆರಿಗೆಯೂ ಒಂದಾಗಿದೆ. ಆಧುನಿಕ ಕಾಲಘಟ್ಟದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದು, ಜಲಪ್ರಸವವು ಪರ್ಯಾಯ ಆಯ್ಕೆಯಾಗಬಲ್ಲದು.

ಬಹಳ ಹಿಂದೆ ಮನೆಗಳಲ್ಲಿಯೇ ಹೆರಿಗೆ ಆಗುತ್ತಿತ್ತು. ನಂತರ ವೈದ್ಯಕೀಯ ಸೇವೆ ಆರಂಭಗೊಂಡಿತು. ಅವಳಿ ಗರ್ಭಧಾರಣೆ, ಫೈಬ್ರಾಯ್ಡ್‌ಗಳು, ಬ್ರೀಚ್ ಪ್ರಸೆಂಟೇಷನ್ ಮತ್ತು ಪ್ಲೆಸೆಂಟಾ ಪ್ರೀವಿಯಾದಂಥ ಸಂಕೀರ್ಣ ಪರಿಸ್ಥಿತಿಗಳನ್ನು ಸೂಕ್ತವಾಗಿ ನಿಭಾಯಿಸಿ ಸುರಕ್ಷಿತ ಹೆರಿಗೆ ಮಾಡಿಸುವಷ್ಟರ ಮಟ್ಟಿಗೆ ವೈದ್ಯಕೀಯ ವಿಜ್ಞಾನ ಬೆಳೆದಿದೆ. ಈಗೀಗ ಜಲಪ್ರಸವಕ್ಕೆ ಹೆಚ್ಚು ಆದ್ಯತೆ ಸಿಗುತ್ತಿದೆ.

ಏನಿದು ಜಲಪ್ರಸವ?

ADVERTISEMENT

ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯನ್ನು ಬೆಚ್ಚಗಿನ ನೀರಿನಲ್ಲಿಯೇ ಇರುವಂತೆ ನೋಡಿಕೊಳ್ಳಲಾಗುತ್ತದೆ. ಬೆಚ್ಚಗಿನ ನೀರು ಗರ್ಭಿಣಿಯ ನರಗಳನ್ನು ಶಾಂತಗೊಳಿಸಿ, ಹೆರಿಗೆ ನೋವಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ದೇಹ ವಿಶ್ರಾಂತಿ ಪಡೆಯಲು ಸಹಾಯ ಮಾಡುವುದಲ್ಲದೇ. ಪ್ರಸವವೇದನೆ ಗಣನೀಯವಾಗಿ ಕಡಿಮೆಯಾಗಿ ಹೆರಿಗೆ ಸುಸೂತ್ರವಾಗುತ್ತದೆ. ಇಂಥ ಸಂದರ್ಭದಲ್ಲಿ ಹೆಚ್ಚುವರಿಯಾಗಿ ನೋವುನಿವಾರಕಗಳನ್ನು ಬಳಸುವ ಅಗತ್ಯವಿರುವುದಿಲ್ಲ.

ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರಿನ ಹೆಬ್ಬಾಳದ ಮದರ್‌ಹುಡ್‌ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ. ಸಿರೀಷಾ ರೆಡ್ಡಿ, ‘ಸಾಮಾನ್ಯವಾಗಿ 100 ಗರ್ಭಿಣಿಯರಲ್ಲಿ 80 ಮಂದಿ ಸಮರ್ಪಕ ತಯಾರಿ ಮಾಡಿಕೊಂಡರೆ ಸಹಜ ಹೆರಿಯಾಗುತ್ತದೆ. 20ರಷ್ಟು ಮಂದಿಗೆ ಮಾತ್ರ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಸಹಜ ಪ್ರಸವವಾದರೆ ತಾಯಿ ಮತ್ತು ಮಗು ಬೇಗನೇ ಚೇತರಿಸಿಕೊಳ್ಳಬಹುದು. ಸ್ತನ್ಯಪಾನಕ್ಕ ತೊಂದರೆಯಾಗದು. ತಾಯಿ–ಮಗುವಿನ ಬಾಂಧವ್ಯ ಗಟ್ಟಿಯಾಗಿರುತ್ತದೆ. ಸದ್ಯಕ್ಕೆ ಹಲವು ಆಸ್ಪತ್ರೆಗಳಲ್ಲಿ ಈ ವಿಧಾನವು ಲಭ್ಯವಿದೆ’ ಎಂದು ಹೇಳಿದರು.

ಗರ್ಭದಲ್ಲಿರುವ ಮಗುವಿನ ಸುರಕ್ಷತೆಯ ಬಗ್ಗೆ ಅರಿಯಲು ಅಂಡರ್‌ ವಾಟರ್‌ ಫೀಟಲ್‌ ಡಾಪ್ಲರ್‌, ವೈರ್‌ಲೆಸ್‌ ಎನ್‌ಎಸ್‌ಟಿಯಂಥ ಆಧುನಿಕ ಪರಿಕರಗಳನ್ನು ಬಳಸಲಾಗುತ್ತದೆ. ಇವುಗಳಿಂದ ಹೆರಿಗೆ ಸಮಯದಲ್ಲಿ ಮಗುವಿನ ಹೃದಯದ ಬಡಿತದ ಮೇಲೆ ನಿಗಾ ವಹಿಸಲಾಗುತ್ತದೆ. ಜಲಪ್ರಸವದ ಸಂದರ್ಭದಲ್ಲಿ ಆರೋಮಾಥೆರಪಿ, ಸಂಗೀತ ಥೆರಪಿಯಂಥ ಕ್ರಮಗಳನ್ನು ಬಳಸಲಾಗುತ್ತದೆ. ಲಮಾಜ್ ಸೆಷನ್‌ಗಳು ಮತ್ತು ಹಿಪ್ನೋಥೆರಪಿಯನ್ನು ಬಳಸುತ್ತಾರೆ. ಇದೇ ಸಂದರ್ಭದಲ್ಲಿ ಸಂಗಾತಿ ಹೇಗೆ ನಡೆದುಕೊಳ್ಳಬೇಕು ಎಂದು ತರಬೇತಿ ನೀಡಲಾಗುತ್ತದೆ. ಗರ್ಭಿಣಿಯರಿಗೆ ನೋವನ್ನು ನಿಭಾಯಿಸುವ ಕಲೆಯನ್ನು ಹೇಳಿಕೊಡಲಾಗುತ್ತದೆ.

‘ಅತಿಯಾದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಇರುವವರು ಜಲಪ್ರಸವ ವಿಧಾನವನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಜತೆಗೆ ಹೃದ್ರೋಗ ಸಮಸ್ಯೆ ಇರುವವರಿಗೆ ಜಲಪ್ರಸವ ಉತ್ತಮ ಆಯ್ಕೆಯಲ್ಲ. ಜಲಪ್ರಸವ ಆಯ್ಕೆ ಮಾಡಿಕೊಳ್ಳುವವರು ಕಾಲ ಕಾಲಕ್ಕೆ ಸೂಕ್ತ ರೀತಿಯ ವ್ಯಾಯಾಮಗಳನ್ನು ಮಾಡಿಕೊಳ್ಳಬೇಕು. ಸಮತೋಲಿತ ಆಹಾರ ಸೇವಿಸಬೇಕು. ವಿಶೇಷವಾಗಿ ತೂಕವನ್ನು ನಿರ್ವಹಣೆ ಮಾಡಿಕೊಳ್ಳಬೇಕು.

ಎಲ್ಲ ಆರೋಗ್ಯವಂತ ಗರ್ಭಿಣಿಯರು ಜಲಪ್ರಸವವನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ತಾಯಿ ಮತ್ತು ಮಗುವಿನ ಸುರಕ್ಷತೆಗಾಗಿ ವೈದ್ಯರ ಜತೆ ಮಾತುಕತೆ ನಡೆಸುವುದು ಮುಖ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.