ADVERTISEMENT

ಏನಾದ್ರೂ ಕೇಳ್ಬೋದು: ಯಾವಾಗಲೂ ಲೈಂಗಿಕ ಯೋಚನೆ, ಪರಿಹಾರವೇನು?

ನಡಹಳ್ಳಿ ವಂಸತ್‌
Published 22 ಜುಲೈ 2022, 22:30 IST
Last Updated 22 ಜುಲೈ 2022, 22:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

26ರ ಯುವಕ. ನನಗೆ ನಿಮಿರುವಿಕೆಯ ಸಮಸ್ಯೆಯಿದೆ. ಒಂದೇ ನಿಮಿಷದಲ್ಲಿ ಸ್ಖಲನವಾಗುತ್ತದೆ. ಉದ್ರೇಕವಾದಾಗ ಶಿಶ್ನದಲ್ಲಿ ಉರಿಯಾಗುತ್ತದೆ. ಪರಿಹಾರ ತಿಳಿಸಿ.

ಹೆಸರು ಊರು ತಿಳಿಸಿಲ್ಲ.

ನಿಮಗೆ ವಿವಾಹವಾಗಿದೆಯೇ ಎಂಬುದನ್ನು ತಿಳಿಸಿಲ್ಲ. ಶೀಘ್ರಸ್ಖಲನಕ್ಕೆ ಪ್ರಮುಖ ಕಾರಣ ಆತಂಕ, ಹಿಂಜರಿಕೆ ಮತ್ತು ಲೈಂಗಿಕತೆಯ ಬಗೆಗಿನ ತಪ್ಪು ತಿಳಿವಳಿಕೆಗಳು. ಮದುವೆಯಂತಹ ಒಂದು ಸುರಕ್ಷಿತ ಸಂಬಂಧದಲ್ಲಿ ಇವುಗಳನ್ನು ಪರಿಹರಿಸುವುದು ಸುಲಭ. ಮದುವೆಗೆ ಮೊದಲಿನ ತಾತ್ಕಾಲಿಕ ಸಂಬಂಧಗಳಲ್ಲಿ ಅಥವಾ ವಿವಾಹಬಾಹಿರ ಸಂಬಂಧಗಳಲ್ಲಿ ಅಂತಹ ಸುರಕ್ಷತೆ ಇರುವುದಿಲ್ಲ. ಹಾಗಾಗಿ ಆತಂಕ ಹಿಂಜರಿಕೆಗಳು ಸಹಜ. ಹಸ್ತಮೈಥುನದಲ್ಲಿ ನೀವೊಬ್ಬರೇ ಸುಖಿಸುವಾಗಲೂ ಲೈಂಗಿಕತೆಯ ತಪ್ಪುಕಲ್ಪನೆಗಳು ಶೀಘ್ರಸ್ಖಲನಕ್ಕೆ ಕಾರಣವಾಗುತ್ತದೆ. ಹಾಗಾಗಿ ಇದಕ್ಕೆ ಸರಳವಾಗಿ ಎಲ್ಲರಿಗೂ ಹೊಂದುವಂತಹ ಪರಿಹಾರಗಳನ್ನು ಹೇಳುವುದು ಸಾಧ್ಯವಿಲ್ಲ. ನಿಮಗೀಗಾಗಲೇ ವಿವಾಹವಾಗಿದ್ದು ಪತ್ನಿಯ ಜೊತೆ ಇರುವಾಗ ತೊಂದರೆಯಾಗುತ್ತಿದ್ದರೆ ತಜ್ಞ ಲೈಂಗಿಕ ಮನೋಚಿಕಿತ್ಸಕರನ್ನು ಭೇಟಿಯಾಗಿ. ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಔಷಧದ ಹೆಸರಿನ ವಸ್ತುಗಳನ್ನು ಸೇವಿಸಿ ಅಪಾಯ ಆಹ್ವಾನಿಸಿಕೊಳ್ಳಬೇಡಿ. ನಿಮಗೆ ಬೇಕಾಗಿ ರುವುದು ಯಾವುದೇ ಔಷಧಿಯಲ್ಲ, ಸರಿಯಾದ ಮಾರ್ಗದರ್ಶನ ಮಾತ್ರ. ಶಿಶ್ನದಲ್ಲಿ ಉರಿಯಾಗುತ್ತಿರುವುದು ಘರ್ಷಣೆಯ ಕಾರಣಕ್ಕಾಗಿರಬಹುದು. ವೈದ್ಯರಲ್ಲಿ ಒಮ್ಮೆ ಪರೀಕ್ಷಿಸಿಕೊಳ್ಳಿ.‌

ADVERTISEMENT

l 24ರ ಯುವಕ. ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ಯಾವಾಗಲೂ ಲೈಂಗಿಕತೆಯ ಯೋಚನೆಗಳು ಬರುತ್ತಿದ್ದು ಸರಿಯಾಗಿ ಓದಲು ಸಾಧ್ಯವಾಗುತ್ತಿಲ್ಲ. ಪರಿಹಾರವೇನು?

ಹೆಸರು ಊರು ತಿಳಿಸಿಲ್ಲ.

ಈ ರೀತಿಯ ಪ್ರಶ್ನೆಗಳಿಗೆ ಹಲವಾರು ಬಾರಿ ಉತ್ತರಿಸಲಾಗಿದೆ. ಲೈಂಗಿಕತೆ ಎನ್ನುವುದು ನಮ್ಮೊಳಗೆ ಅಡಕವಾಗಿರುವ ಪ್ರಕೃತಿ ಸಹಜ. ಅವಿಭಾಜ್ಯ ಅಂಗ. ಆದ್ದರಿಂದ ಲೈಂಗಿಕತೆಯ ಕುರಿತಾದ ಯೋಚನೆಗಳನ್ನು ತಪ್ಪಿಸುವುದು ಸಾಧ್ಯವಿಲ್ಲ. ಇಂತಹ ಯೋಚನೆ ಕನಸುಗಳೂ ಕೂಡ ಆನಂದವನ್ನು ನೀಡುತ್ತದೆ. ನಿಮ್ಮೊಳಗೆ ಇರುವ ಬೇರಾವುದೋ ಹಿಂಜರಿಕೆ, ಬೇಸರ, ಕೀಳರಿಮೆಗಳನ್ನು ಮರೆಯಲು ಲೈಂಗಿಕತೆಯ ಕನಸುಗಳು ನೀಡುವ ಆನಂದವನ್ನು ಬಳಸಿದಾಗ ಅದು ನಶೆಯಾಗಿ ಅಂಟಿಕೊಂಡು ಪದೇಪದೇ ಕಾಡುತ್ತದೆ. ಮೊದಲನೆಯದಾಗಿ ಯೋಚನೆಗಳು ಬಂದ ಕೂಡಲೇ ಅವುಗಳನ್ನು ತಿರಸ್ಕರಿಸದೆ ಸಹಜವೆಂದು ಒಪ್ಪಿಕೊಂಡು ದೀರ್ಘವಾಗಿ ಉಸಿರಾಡುತ್ತಾ ದೇಹವನ್ನು ಸಡಿಲಬಿಡಿ. ಎರಡನೆಯದು ಓದುತ್ತಿರುವ ವಿಷಯಗಳನ್ನು ಹೆಚ್ಚು ಆಸಕ್ತಿದಾಯ ಕವಾಗಿ ಬದಲಾಯಿಸಿಕೊಳ್ಳಬೇಕು. ಕೇವಲ ಪರೀಕ್ಷೆಯೊಂದೇ ಗುರಿಯಾದಾಗ ವಿಷಯಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸುವುದು ಕಷ್ಟ. ಆಗ ಲೈಂಗಿಕ ಯೋಚನೆಗಳು ಮತ್ತೆಮತ್ತೆ ಕಾಡುತ್ತವೆ. ಮೂರನೆಯದಾಗಿ ನನ್ನ ಬಗೆಗೆ ನನ್ನೊಳಗಿರುವ ಬೇಸರ, ಹಿಂಜರಿಕೆಗಳೇನಿರಬಹುದು ಎಂದು ಯೋಚಿಸಿ. ಅವುಗಳಿಗೆ ಸಮಾಧಾನ ಹುಡುಕಿಕೊಂಡಾಗ ಲೈಂಗಿಕತೆಯ ಯೋಚನೆಗಳನ್ನು ಆನಂದಿಸಬಹುದೇ ಹೊರತು ಅವು ಪದೇಪದೇ ಕಾಡಲಾರವು.

ಟಿಂಟಿನಾಸ್‌ ಕಾಯಿಲೆಗೆ ಮದ್ದು ಇದೆಯೇ?

ಹೆಸರು ಊರು ತಿಳಿಸಿಲ್ಲ.

ಈ ಅಂಕಣ ಮಾನಸಿಕ ಸಮಸ್ಯೆಗಳ ಕುರಿತಾದದ್ದು. ದೈಹಿಕ ಕಾಯಿಲೆಗಳಿಗೆ ವೈದ್ಯರನ್ನು ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.