ರಾಮು ತನ್ನ ಹೊಲದಿಂದ ಮನೆಗೆ ಬಂದಾಗ ಅವನಿಗಿದ್ದ ಜ್ವರ ಮತ್ತು ಮೈಮೇಲಿದ್ದ ಗುಳ್ಳೆಗಳ ಬಗ್ಗೆ ತನ್ನ ಹೆಂಡತಿಗೆ ಹೇಳುತ್ತಾನೆ. ಅವನ ಹೆಂಡತಿ ಅನಿತಾ ಅದನ್ನು ನೋಡಿ ಗಾಬರಿಯಾಗಿ ಗ್ರಾಮದೇವತೆ ತನ್ನ ಗಂಡನ ಮೇಲೆ ಕೋಪಿಸಿಕೊಂಡಿದ್ದಾಳೆ; ನಿಮಗೆ ‘ಅಮ್ಮ’ ಬಂದಿದೆ ಎಂದು ಹೇಳುತ್ತಾಳೆ. ಅಷ್ಟರಲ್ಲೇ ಗ್ರಾಮದ ವೈದ್ಯರು ಅಲ್ಲಿಗೆ ಬರುತ್ತಾರೆ, ಅನಿತಾಳ ಗಾಬರಿಯನ್ನು ಕಂಡು ವೈದ್ಯರು ಕೇಳಿದಾಗ ಅನಿತಾ ತನ್ನ ಗಂಡನಿಗೆ ‘ಅಮ್ಮ’ ಬಂದಿರುವುದನ್ನು ಹೇಳುತ್ತಾಳೆ, ವೈದ್ಯರು ಮನೆಯ ಒಳಗೆ ಹೋಗಿ ರಾಮುನನ್ನು ಪರೀಕ್ಷಿಸಿ ಇದು ‘ಸಿಡುಬು’ ರೋಗ (ಚಿಕನ್ ಪಾಕ್ಸ್) ಎಂದು ಹೇಳುತ್ತಾರೆ.
ಬೇಸಿಗೆ ಆರಂಭವಾದ ಕೂಡಲೇ ಸಾಂಕ್ರಾಮಿಕ ರೋಗವಾದ ಸಿಡುಬು ಅಥವಾ ಚಿಕನ್‌ಪಾಕ್ಸ್ ಹರಡುವ ಕಾಲ. ‘ವೆರಿಸೆಲ್ಲಾ ಜೋಸ್ಟರ್’ ಎಂಬ ವೈರಾಣುವಿನಿಂದ ಬರುವ ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಬಹಳ ಸುಲಭವಾಗಿ ಹರಡುತ್ತದೆ. ಇದರಲ್ಲಿ ಶರೀರದ ಮೇಲೆ ಚುಕ್ಕೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಚಿಕನ್ ಪಾಕ್ಸ್ ಸೋಂಕಾಗಿರುವ ವ್ಯಕ್ತಿಯ ಗಾಯದ ಸ್ಪರ್ಶದಿಂದ ಅಥವಾ ಅವರು ಬಳಸಿದ ವಸ್ತುಗಳನ್ನು ಉಪಯೋಗಿಸುವುದರಿಂದ ಈ ರೋಗವು ಹರಡುತ್ತದೆ. ರೋಗಿಯು ಕೆಮ್ಮುವುದರಿಂದ, ಸೀನುವುದರಿಂದ ವೈರಾಣುಗಳು ಗಾಳಿಯಲ್ಲಿ ಸೇರಿ ಬೇರೆಯವರಿಗೆ ಉಸಿರಾಟದ ಮುಖಾಂತರ ಹರಡುತ್ತದೆ. ಸಿಡುಬು ಚುಚ್ಚುಮದ್ದು ಈ ರೋಗವನ್ನು ತಡೆಯಲು ಸಹಾಯ ಮಾಡಿದರೂ ಸಂಪೂರ್ಣವಾಗಿ ಗುಣವಾಗಲಾರದು. ಅಲ್ಲದೆ ಮತ್ತೆ ಕೆಲವರಿಗೆ ಮರಕಳಿಸುವ ಸಾಧ್ಯತೆಯೂ ಇದೆ. ಇದು ಸೌಮ್ಯವಾಗಿದ್ದರೆ ಅಪಾಯವಿಲ್ಲ. ಆದರೆ ಕೆಲವರಿಗೆ ಗಂಭೀರ ಸ್ವರೂಪ ಪಡೆದರೆ ತಕ್ಷಣ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ಹಾಗೇ ಬಿಟ್ಟರೆ ರೋಗಿಯ ಪ್ರಾಣಕ್ಕೂ ಸಂಚಕಾರವಾಗುವ ಅಪಾಯವೂ ಇದೆ.
ಚಿಕನ್‌ಪಾಕ್ಸ್ ಸಾಮಾನ್ಯವಾಗಿ 10 ರಿಂದ 12 ವರ್ಷದ ಮಕ್ಕಳಲ್ಲಿ ಹೆಚ್ಚಾಗಿ ಕಾಣುವ ಕಾಯಿಲೆ, 2 ವರ್ಷದ ಒಳಗಿನ ಮಕ್ಕಳು ಹಾಗೂ 12 ವರ್ಷದ ಮೇಲ್ಪಟ್ಟವರಲ್ಲಿಯೂ ಇದು ತೀವ್ರತರವಾಗಿ ಕಾಣಿಸಿಕೊಳ್ಳಬಹುದು. ಗರ್ಭಿಣಿ ಸ್ತ್ರೀಯರಿಗೆ, ಹದಿಹರೆಯದವರಿಗೆ, ವಯಸ್ಕರಿಗೆ ಮತ್ತು ಕಡಿಮೆ ರೋಗ ನಿರೋಧಕ ಶಕ್ತಿ ಇರುವವರಿಗೆ ಅಂದರೆ ಎಚ್‌ಐವಿ, ಕ್ಯಾನ್ಸರ್, ಕೀಮೋಥೆರಪಿ ಮತ್ತು ಸ್ಟೀರಾಯ್ಡ್ ತೆಗೆದುಕೊಳ್ಳುವವರಿಗೆ ಬೇಗನೆ ತಗಲುವ ಸಾಧ್ಯತೆ ಹೆಚ್ಚು. ಜತೆಗೆ ಇವರಲ್ಲಿ ಕಾಯಿಲೆ ಗಂಭೀರ ಸ್ವರೂಪದಲ್ಲಿರುತ್ತದೆ. ಜೀವನದಲ್ಲಿ ಒಮ್ಮೆ ಚಿಕನ್ ಪಾಕ್ಸ್ ಬಂದು ಹೋಗಿದ್ದರೆ ಸಾಮಾನ್ಯವಾಗಿ ವೈರಸ್ ಇನ್ನೊಮ್ಮೆ ಕಾಣಿಸಿಕೊಳ್ಳುವ ಉದಾಹರಣೆ ಬಹಳ ಕಡಿಮೆ.
ಆದರೆ ಸೆಕೆಂಡರಿ ಇನ್‌ಫೆಕ್ಷನ್ ಆಗಬಹುದು. ಅಂದರೆ ತ್ವಚೆಯಲ್ಲಿ ಬ್ಯಾಕ್ಟೀರಿಯಾದ ಸೋಂಕು ಶ್ವಾಸಕೋಶಕ್ಕೆ ಸೋಂಕಾಗಿ ನ್ಯೂಮೋನಿಯ ಹಾಗೂ ಮೆದುಳಿಗೆ ಸೋಂಕಾಗಿ ಕಾಯಿಲೆ ವಿಭಿನ್ನ ಸ್ವರೂಪ ಪಡೆಯುವ ಸಾಧ್ಯತೆ ಇದೆ.
ಆಯುರ್ವೇದದಲ್ಲಿ ಸಿಡುಬಿಗೆ ಉತ್ತಮ ಔಷಧಿ ಇದೆ. ಇದಕ್ಕೆ ಆಯುರ್ವೇದದಲ್ಲಿ ‘ಲಘು ಮಸುರಿಕಾ’ ಎಂದು ಕರೆಯುತ್ತಾರೆ. ಇದು ಪಿತ್ತ ದೋಷ ಪ್ರಧಾನವಾದ ರೋಗವಾಗಿದ್ದು ಪ್ರತಿ ಹಂತದಲ್ಲೂ ಚಿಕಿತ್ಸೆ ನೀಡಬಹುದಾಗಿದೆ.
ಕಾರಣಗಳು
ವೈರಾಣುವಿನಿಂದ ಬರುವ ಕಾಯಿಲೆಯಾದರೂ ಸಿಡುಬು ಗುಳ್ಳೆಗಳ ದ್ರವವನ್ನು ಮುಟ್ಟುವುದರಿಂದ, ರೋಗಿಯು ನಿಮ್ಮ ಸನಿಹದಲ್ಲಿ ಸೀನಿದಾಗ ಅಥವಾ ಕೆಮ್ಮಿದಾಗ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇದೆ, ಹಿಂದೆ ಬಂದಿರದಿದ್ದರೆ ಅಂಥವರಿಗೆ ಸುಲಭವಾಗಿ ಬರಬಹುದು.
ಪಥ್ಯ ಹಾಗೂ ಚಿಕಿತ್ಸೆ
* ಮೊದಲು ಇದು ಸೊಳ್ಳೆ ಅಥವಾ ಕೀಟದ ಕಡಿತವಲ್ಲ, ಚಿಕನ್ ಪಾಕ್ಸ್ ಕಾಯಿಲೆಯೇ ಎಂಬುದನ್ನು ಹತ್ತಿರದ ವೈದ್ಯರಿಂದ ಖಚಿತಪಡಿಸಿಕೊಳ್ಳಬೇಕು.
* ನಿಮ್ಮ ಮಗುವಿಗೆ ಸೋಂಕಾಗಿದೆ ಎಂದು ಗೊತ್ತಾದ ತಕ್ಷಣ ಶಾಲೆಯಲ್ಲಿ ಸೂಚಿಸುವುದು ಹಾಗೂ ಮಗುವನ್ನು ಹೊರಗಡೆ ಎಲ್ಲಿಯೂ ಕಳಿಸದೆ ಎಲ್ಲ ಗುಳ್ಳೆಗಳು ಒಣಗುವವರೆಗೂ ಮನೆಯಲ್ಲಿಯೇ ಇರಿಸಬೇಕು.
* ಮನೆಯಲ್ಲಿಯೂ ಬೇರೆ ಮಕ್ಕಳ ಅಥವಾ ದೊಡ್ಡವರಿಂದ ದೂರ ಇರಿಸಬೇಕು.
* ಸೋಂಕಾದ ವ್ಯಕ್ತಿಯು ಕೆಮ್ಮುವಾಗ, ಸೀನುವಾಗ ಮುಖ ಹಾಗೂ ಮೂಗನ್ನು ಮುಚ್ಚಿಕೊಳ್ಳಬೇಕು.
* ಊಟದ ತಟ್ಟೆ, ನೀರಿನ ಲೋಟ, ಹಾಸಿಗೆ, ಬಟ್ಟೆಗಳನ್ನು ಯಾರ ಜೊತೆಯು ಹಂಚಿಕೊಳ್ಳಬಾರದು, ಕೈಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
* ಮಿತ ಆಹಾರ ಸೇವಿಸಬೇಕು, ಉಪ್ಪು, ಹುಳಿ, ಖಾರವಿಲ್ಲದ ಆಹಾರ ಸಪ್ಪೆ ಆಹಾರವನ್ನು ಕೊಡಬೇಕು, ಮನೆಯಲ್ಲಿನ ಆಹಾರವೇ ಉತ್ತಮ.
* ಮೊದಲು 4 ದಿನಗಳವರೆಗೂ ತಣ್ಣಗಿನ ನೀರಿನಿಂದ 4 ಗಂಟೆಗೊಮ್ಮೆ ಸ್ನಾನ ಮಾಡಬೇಕು.
* ಬೇವಿನ ಎಲೆಗಳನ್ನು ಮತ್ತು ಅರಿಶಿಣವನ್ನು ಸ್ನಾನ ಮಾಡುವ ನೀರಿನಲ್ಲಿ ಹಾಕಿಕೊಂಡರೆ ತುರಿಕೆ ಕಡಿಮೆ ಮಾಡುತ್ತದೆ ಮತ್ತು ಸ್ನಾನದ ಮೊದಲು ಬೇವಿನ ಎಣ್ಣೆಯನ್ನು ಮೈಯೆಲ್ಲಾ ಹಚ್ಚಬೇಕು. ನಂತರ ಮೆತ್ತನೆಯ ಹತ್ತಿ ಬಟ್ಟೆಯಿಂದ ಮೈಯೆಲ್ಲ ಒರೆಸಿಕೊಂಡು ಚಂದನ, ಮಂಜಿಷ್ಠ, ಉಶಿರ ಮುಂತಾದ ಆಯುರ್ವೇದ ಲೇಪಗಳನ್ನು ಹಚ್ಚಿಕೊಂಡರೆ ಗುಳ್ಳೆಗಳ ಉರಿ, ತುರಿಕೆ ಸಾಕಷ್ಟು ಕಡಿಮೆ ಆಗುತ್ತದೆ.
* ಸಾಕಷ್ಟು ನೀರು, ಎಳನೀರು, ಬಾರ್ಲಿ, ಧನಿಯಾ, ಕ್ಯಾರೆಟ್ ನೀರು ಅಥವಾ ಯಾವುದೇ ತಂಪಾದ ಪಾನೀಯಗಳನ್ನು ಕುಡಿಯಬೇಕು.
* ಕಾಯಿಲೆ ಬಂದು ಮೂರನೇ ದಿನದಿಂದ ಬೇವಿನ ಕಷಾಯ ಕುಡಿಯಬೇಕು. 2 ಲೋಟ ನೀರಿಗೆ ಬೇವಿನ ಚೂರ್ಣವನ್ನು ಹಾಕಿ ಚೆನ್ನಾಗಿ ಕುದಿಸಿ ಅರ್ಧ ಲೋಟಕ್ಕೆ ಇಳಿಸಿ ದಿನದಲ್ಲಿ ಎರಡು ಸಲ ಕುಡಿಯಬೇಕು. ಇದನ್ನು ಒಂದು ತಿಂಗಳವರೆಗೆ ತಪ್ಪದೆ ಕುಡಿಯಬೇಕು. ನಂತರ ಎರಡು ತಿಂಗಳಿಗೊಮ್ಮೆ ಒಂದು ವರ್ಷದವರೆಗೆ ಬೇವಿನ ಕಷಾಯ ಕುಡಿಯುತ್ತಿದ್ದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ ರಕ್ತ ಶುದ್ದಿಯಾಗಲೂ ಸಹಾಯ ಮಾಡುತ್ತದೆ.
* ತಿಂಗಳ ಒಳಗಿನ ಮಗು ಹಾಗೂ ಗರ್ಭಿಣಿಯ ಸುತ್ತಮುತ್ತ ಅಥವಾ ಮನೆಯಲ್ಲಿ ಸೋಂಕಾದವರಿದ್ದರೆ ತಕ್ಷಣ ವೈದ್ಯರನ್ನು ಕಾಣಬೇಕು.
ಯಾವುದು ಅಪಥ್ಯ?
* ಗುಳ್ಳೆಗಳನ್ನು ಕೆರೆಯುದನ್ನು ತಪ್ಪಿಸಿ, ಇದು ಗಾಯಗಳಿಗೆ ಕಾರಣವಾಗಬಹುದು.
* ಬೇರೆಯವರ ಸಂಪರ್ಕದಿಂದ ದೂರವಿರಿ, ಏಕೆಂದರೆ ಅವರಿಗೂ ತಗಲುವ ಸಾಧ್ಯತೆ ಇರುತ್ತದೆ.
* ಎಲ್ಲ ಗುಳ್ಳೆಗಳು ಒಣಗುವವರೆಗೂ ಮನೆಯೆಲ್ಲಿಯೇ ಇರಬೇಕು. ಯಾವುದೇ ರೀತೀಯ ಪ್ರಯಾಣವನ್ನು ಮಾಡಬಾರದು.
* ನಂಜಿನ ಆಹಾರಗಳಾದ ಬದನೆಕಾಯಿ, ಅಲೂಗಡ್ಡೆ , ಉದ್ದು, ಅವಲಕ್ಕಿ, ಹಲಸಿನ ಹಣ್ಣು ಮುಂತಾದವುಗಳನ್ನು ತಿನ್ನಲೇಬಾರದು.
* ಮೊಸರು ವರ್ಜ್ಯ. ಹುಳಿ, ಖಾರ, ಉಪ್ಪು ಸೇವನೆ ಮಾಡಬಾರದು.
ಆಯುರ್ವೇದ ಚಿಕಿತ್ಸೆ
ಸುದರ್ಶನ ಚೂರ್ಣ, ಸ್ವರ್ಣ ಮಾಕ್ಷೀಕ ಭಸ್ಮ, ಪ್ರವಾಳ ಪಂಚಾಮೃತ, ತುಳಸಿ, ಹರಿದ್ರಾ, ಕಾಮದುದಾ ರಸ, ಕುಮಾರಿ ಮುಂತಾದ ಆಯುರ್ವೇದ ಔಷಧಿಗಳನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬೇಕು, ತುಳಸಿ ಕಷಾಯವನ್ನು ಮೊದಲ ದಿನದಿಂದಲೇ ತೆಗೆದುಕೊಂಡರೆ ಉತ್ತಮ. ಎಲ್ಲಕ್ಕಿಂತ ಮುಖ್ಯವಾಗಿ ವಿಶ್ರಾಂತಿಯೇ ಉತ್ತಮ ಮದ್ದು.
ಲೇಖಕಿ ಬೆಂಗಳೂರಿನಲ್ಲಿ ಆಯುರ್ವೇದ ತಜ್ಞೆ. ಸಂಪರ್ಕ: 9916491041
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.