ಬೆಂಗಳೂರು: ಕೋವಿಡ್-19 ರೋಗ ಬಾಧಿತಮಕ್ಕಳಲ್ಲಿ ಸಾವಿನ ಪ್ರಮಾಣವು ಇತರ ವಯೋಮಾನದವರಿಗಿಂತ ಕಡಿಮೆಯಾಗಿದೆ. ಇಲ್ಲಿಯವರೆಗೆ ಕರ್ನಾಟಕದಲ್ಲಿ 0-10 ವಯಸ್ಸಿನ ಏಳು ಮಕ್ಕಳು ಮತ್ತು 10-20 ನಡುವೆ ವಯಸ್ಸಿನ 15 ರೋಗಿಗಳುಕೋವಿಡ್‌ನಿಂದ ಮೃತಪಟ್ಟಿದ್ದಾರೆ.
ವಯಸ್ಕರ ಜೀವಕೋಶದಲ್ಲಿ ಕಂಡುಬರುವ ಕಡಿಮೆಮಟ್ಟದ ಪ್ರೊಟೀನ್ ಎಸಿಇ-2 SARS-CoV-2 ಗ್ರಾಹಿಯಂತೆ ಕಾರ್ಯನಿರ್ವಹಿಸುತ್ತಿದ್ದು ಇದು ಜೀವಕೋಶಕ್ಕೆ ವೈರಸ್ ಸೋಂಕು ತಗಲುವಂತೆ ಮಾಡುತ್ತದೆ ಎಂದು ಮಕ್ಕಳ ವೈದ್ಯರು ಹೇಳುತ್ತಾರೆ.
'ಮಕ್ಕಳಲ್ಲಿ ವೈರಸ್ ಹೊರೆ ಕಡಿಮೆ' ಅಂತಾರೆ ಡಾ. ಭಾಸ್ಕರ್ ಶೆಣೈ. 32 ವರ್ಷಗಳಿಂದ ಮಕ್ಕಳ ತಜ್ಞರಾಗಿರುವ ಅವರು ಬೆಂಗಳೂರಿನ ಹಳೇ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ ಆಸ್ಪತ್ರೆಯಲ್ಲಿ 20 ಮಂದಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಇವರು ಚಿಕಿತ್ಸೆ ನೀಡಿದ ರೋಗಿಗಳ ಪೈಕಿ ಸಚಿವ ಡಾ.ಕೆ. ಸುಧಾಕರ್ ಅವರ ಮಗಳೂ ಇದ್ದಾಳೆ.
ವೈರಸ್ ದೇಹದೊಳಗೆ ಪ್ರವೇಶಿಸಿದಾಗ ಅದು ಎಸಿಇ-2 ಗ್ರಾಹಿಗೆ ಅಂಟಿಕೊಳ್ಳುತ್ತದೆ. ಇದು ಮಕ್ಕಳಲ್ಲಿ ಕಡಿಮೆ ಆಗಿರುತ್ತದೆ. ಹಾಗಾಗಿ ಮಕ್ಕಳ ಮರಣ ಸಂಖ್ಯೆ ಕಡಿಮೆ.
6 ತಿಂಗಳಿನ ಮಗುವಿನಿಂದ ಹಿಡಿದು 15 ವರ್ಷದ ಕೋವಿಡ್ ರೋಗಿಗಳಿಗೆ ನಾವು ಚಿಕಿತ್ಸೆ ನೀಡಿದ್ದೇವೆ. ಈ ವಯೋಮಾನದವರು ಬೇಗ ಗುಣಮುಖರಾಗುತ್ತಾರೆ. ರೋಗ ಲಕ್ಷಣಗಳಲ್ಲೊಂದಾದ ಜ್ವರ ಮೂರು ನಾಲ್ಕು ದಿನಗಳಲ್ಲಿ ಕಡಿಮೆಯಾಗುತ್ತದೆ ಮತ್ತು ನೆಗೆಟಿವ್ ಫಲಿತಾಂಶ ಬರುತ್ತದೆ. ಇವರು ರೋಗಲಕ್ಷಣರಹಿತ ವಾಹಕರಾಗಿರುತ್ತಾರೆ.
ಮಕ್ಕಳಲ್ಲಿ ಅಧಿಕ ರೋಗ ಪ್ರತಿರೋಧ ಶಕ್ತಿ ಇರುತ್ತದೆ ಎಂದು ಮಲ್ಲೇಶ್ವರ ಕೆಸಿ ಜನರಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ರಘುನಂದನ್ ಬಿ.ಜಿ ಹೇಳಿದ್ದಾರೆ.
ಪ್ರಬಲ ರೋಗ ಪ್ರತಿರೋಧ ಶಕ್ತಿ
5 ವರ್ಷದ ವರೆಗೆ ಥೈಮಸ್ ಗ್ರಂಥಿ ಇರುತ್ತದೆ. ಇದು ಟಿ ಲಿಂಫೋಸೈಟ್ಸ್ ಉತ್ಪಾದಿಸುತ್ತಿದ್ದು, ವೈರಸ್ ವಿರುದ್ಧ ಹೋರಾಡಲು ಸಹಕರಿಸುತ್ತದೆ. 15 ವರ್ಷದ ವರೆಗೆ ಟಿ ಲಿಂಪೊಸೈಟ್ಸ್ ಉತ್ಪಾದಿಸಲ್ಪಡುತ್ತದೆ.
ಕೋವಿಡ್ -19 ರೋಗ ವ್ಯಾಪಿಸುತ್ತಿದ್ದಂತೆ ಮಕ್ಕಳು ಶಾಲೆ, ಟ್ಯೂಷನ್ ಸೆಂಟರ್ ಅಥವಾ ಆಟದ ಮೈದಾನಗಳಲ್ಲಿ ಗುಂಪು ಸೇರದಂತೆ ಎಚ್ಚರ ವಹಿಸಲು ವೈದ್ಯರು ನಿರ್ದೇಶಿಸಿದ್ದರು.
ಜಾಗತಿಕ ಮಟ್ಟದಲ್ಲಿ ಒಂದು ವರ್ಷದಿಂದ ಹೆಚ್ಚು ವಯಸ್ಸಿನ ಮಕ್ಕಳಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಒಂದು ವೇಳೆ ಅವರಿಗೆ ಬೇರೆ ರೋಗಗಳಿದ್ದರೆ ಮಾತ್ರ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ರೈನ್‌ಬೋ ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ರಜತ್ ಆತ್ರೇಯ ಹೇಳಿದ್ದಾರೆ.
ಬಿಜಿಜಿ (ಕ್ಷಯ) ಮತ್ತು ಎಂಎಂಆರ್ (ಮೀಸಲ್ಸ್- ಮಂಪ್ಸ್-ರುಬೆಲ್ಲಾ) ಬಾರದಂತೆ ತಡೆಯುವ ಲಸಿಕೆಗಳು ಕೂಡಾ ರೋಗ ಪ್ರತಿರೋಧವಾಗಿ ವರ್ತಿಸುತ್ತವೆ ಎಂಬ ವಾದವೂ ಇದೆ. ಹಳದಿ ಜ್ವರದಲ್ಲಿ ಇದು ಪರಿಣಾಮಕಾರಿಯಾಗಿರುವುದನ್ನು ನಾವು ನೋಡಿದ್ದೇವೆ. ಹೊಸದಾದ ವೈರಸ್ ಜತೆ ನಮ್ಮ ಪ್ರತಿರೋಧ ವ್ಯವಸ್ಥೆ ಹೋರಾಡುತ್ತಿರುವ ಹೊತ್ತಿನಲ್ಲಿಯೇ ಈ ಲಸಿಕೆಗಳು SARS-CoV-2 ವಿರುದ್ಧ ಯಾವ ರೀತಿ ಪರಿಣಾಮಕಾರಿಯಾಗಬಲ್ಲದು ಎಂಬುದರ ಬಗ್ಗೆ ಅಧ್ಯಯನ ನಡೆದು ಬರುತ್ತಿದೆ ಎಂದು ಡಾ.ಆತ್ರೇಯ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.