ADVERTISEMENT

ಆಡೋಣ ಬಾ... ಆಡೋಣ ಬಾ...

ನಾಮದೇವ ಕಾಗದಗಾರ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST
ಆಡೋಣ ಬಾ... ಆಡೋಣ ಬಾ...
ಆಡೋಣ ಬಾ... ಆಡೋಣ ಬಾ...   

ಪುಸ್ತಕಗಳಲ್ಲಿ ಹಾವಿನ ಚಿತ್ರ ಕಂಡರೇನೇ ಎಷ್ಟೋ ಪುಟಾಣಿಗಳು ಬೆಚ್ಚಿ ಬೀಳುತ್ತಾರೆ. ನಿಜವಾಗಿ ಏನಾದರೂ ಹಾವು ಬಂದು `ಬುಸ್' ಎಂದರೆ...? ಮಕ್ಕಳು ಮಾತ್ರವಲ್ಲ, ದೊಡ್ಡವರೂ ಬೆಚ್ಚಿ ಬೀಳುತ್ತಾರೆ. ಆದರೆ ಬಳ್ಳಾರಿಯ ಇಬ್ಬರು ಪುಟ್ಟ ಮಕ್ಕಳಿಗೆ ಹಾವೆಂದರೆ ಅಚ್ಚುಮೆಚ್ಚು. ಹಾವಿನ ಜೊತೆ ಇವರ ಸರಸ ಚೆಲ್ಲಾಟ!

ನಂಬುವುದು ಕಷ್ಟವೆಂಬ ಸಾಧನೆ ಮಾಡುತ್ತಿರುವುದು ಬಳ್ಳಾರಿ ಅಣ್ಣ-ತಂಗಿ. ಇಲ್ಲಿಯ ದಂಡುಪ್ರದೇಶದಲ್ಲಿರುವ ಸೇಂಟ್ ಮೇರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿ ನಿಜಗುಣಸ್ವಾಮಿ ನೆಗಳೂರಮಠ ಮತ್ತು 3ನೇ ತರಗತಿ ವಿದ್ಯಾರ್ಥಿನಿ ಮಹೇಶ್ವರಿ ಅವರೇ ಈ ಅಪರೂಪದ ಹವ್ಯಾಸವುಳ್ಳ ಮಕ್ಕಳು.

ಇವರ ತಂದೆ ಕಾಶೀನಾಥ್ ನೆಗಳೂರುಮಠ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಂಗರಚನಾ ಶಾಸ್ತ್ರ ವಿಭಾಗದ ಕಲಾ ಮತ್ತು ಛಾಯಾಗ್ರಹಣ ಘಟಕದಲ್ಲಿ ಮಾಡ್ಯುಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಿಂದ ಉರಗ ತಜ್ಞ ಹಾಗೂ  ವನ್ಯ ಜೀವಿ ಛಾಯಾಗ್ರಾಹಕ ಕೂಡಾ ಹೌದು. ಈ ಮಕ್ಕಳ ತಾಯಿ ಶಶಿಕಲಾ ಕೂಡಾ ಸುಮಾರು ಐದು ವರ್ಷಗಳಿಂದಲೂ ಹಾವುಗಳ ಒಡನಾಟ ಬೆಳೆಸಿಕೊಂಡಿದ್ದಾರೆ. ಒಟ್ಟಿನಲ್ಲಿ ಇವರದ್ದು ಉರುಗ ಪ್ರೇಮಿ ಕುಟುಂಬ.

ಬಳ್ಳಾರಿ ಸುತ್ತಮುತ್ತ ಎಲ್ಲೇ ಹಾವುಗಳು ಕಂಡುಬಂದರೂ, ಅವುಗಳನ್ನು ಹಿಡಿಯಲು ಕಾಶೀನಾಥ್ ಅವರಿಗೆ ಮೊದಲ ಕರೆಹೋಗುತ್ತದೆ. ತಂದೆಗೆ ಈಗ ಮಕ್ಕಳ ನೆರವು. ಈ ಉರಗಪ್ರೇಮಿ ಕುಟುಂಬಕ್ಕೆ ಪುತ್ತೂರಿನ ಪ್ರಸಿದ್ಧ ಉರಗ ತಜ್ಞ ರವೀಂದ್ರ ಐತಾಳ ತರಬೇತಿ ನೀಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ನೆಗಳೂರಮಠ ಕುಟುಂಬ ಹಾವುಗಳ ಬಗ್ಗೆ ವಿಶೇಷ ಜ್ಞಾನ ಸಂಪಾದಿಸಿಕೊಂಡಿದೆ. ಜೊತೆಗೆ ಹಾವು ಹಿಡಿಯುವ ಕಲೆಯನ್ನೂ ಕರಗತ ಮಾಡಿಕೊಂಡಿದೆ.

ಸಾವಿರಕ್ಕೂ ಅಧಿಕ ಹಾವು
ತಮ್ಮ ತಂದೆಗಿಂತ ನಾವೇನೂ ಕಡಿಮೆ ಎಂಬಂತೆ ನಿಜಗುಣ ಮತ್ತು ಮಹೇಶ್ವರಿ ಇದುವರೆಗೂ ಸಾವಿರಾರು ಹಾವುಗಳನ್ನು ಹಿಡಿದು ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. `ನಾಗರಹಾವು, ವೈಪರ್, ಕೆರೆಹಾವು, ಸ್ಯಾಂಡಬೋವಾ, ನೀರುಹಾವು, ಹಾರುಹಾವು, ಸೇರಿದಂತೆ ಅನೇಕ ಬಗೆಯ  ಹಾವುಗಳನ್ನು ಹಿಡಿದು ಸುಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದೇವೆ. ಹಾವು ಹಿಡಿದ ತಕ್ಷಣ ಆ ಹಾವಿನ ಅದರ ಅಳತೆ, ಬಣ್ಣ , ಜಾತಿ ಸೇರಿದಂತೆ ಅದರ  ಜೀವನ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅವುಗಳ ಟಿಪ್ಪಣಿ ಸಿದ್ಧಪಡಿಸಿಕೊಳ್ಳುತ್ತೇವೆ' ಎನ್ನುತ್ತಾರೆ ಅಣ್ಣ-ತಂಗಿ.

ಮೆಚ್ಚಿನ ವಿದ್ಯಾರ್ಥಿಗಳು
ನಿಜಗುಣ ಮತ್ತು ಮಹೇಶ್ವರಿ ಓದಿನಲ್ಲೂ ಮುಂದಿದ್ದಾರೆ. ಕೈಗೆ ಕುಂಚಗಳು ಸಿಕ್ಕರೆ ಸುಂದರವಾದ ಚಿತ್ತಾರ ಮೂಡಿಸುವ ಕಲೆಯೂ ಈ ಅಣ್ಣ-ತಂಗಿಯರಲ್ಲಿದೆ. ಕ್ಯಾಮೆರಾ ಹಿಡಿದು ಉತ್ತಮ ಚಿತ್ರಗಳನ್ನು ಸೆರೆಹಿಡಿವ ಕಲೆಯೂ ಇವರಿಗೆ  ಗೊತ್ತಿದೆ.

 ಶಾಲೆಯಲ್ಲಿ ಶಿಸ್ತಿನ ವರ್ತನೆ ಮತ್ತು ಒಳ್ಳೆಯ ಸಾಧನೆಯಿಂದಾಗಿ ನಿಜಗುಣ ಮತ್ತು ಮಹೇಶ್ವರಿ ತಮ್ಮ ಶಾಲೆಯ ಶಿಕ್ಷಕ ವೃಂದದ ಅಚ್ಚುಮೆಚ್ಚಿನ ವಿದ್ಯಾರ್ಥಿಗಳೆನಿಸಿದ್ದಾರೆ. ಸಹಪಾಠಿಗಳ ಪಾಲಿಗೆ ಹೆಮ್ಮೆಯ ಸ್ನೇಹಿತರಾಗಿದ್ದಾರೆ. ಇವರಿಗೆ ಅಭಿನಂದಿಸಬೇಕೆ, ಹಾಗಿದ್ದಲ್ಲಿ ಸಂಪರ್ಕಿಸಿ- 98442 27806.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.