ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ಪಟ್ಟಣದ ಆಚಾರ್ಯ ಕಾಲೇಜಿನ ಆವರಣದ ಮೂಲೆಯಲ್ಲಿರುವ ಸುಮಾರು 600 ವರ್ಷಗಳ ಹಿಂದಿನ ಶಾಸನದ ಕಥೆ ಇದು. ನಮ್ಮ ನೆಲದಡಿಯ ಜಲಕುಹರಗಳಲ್ಲಿನ ನೀರನ್ನು ಆಧುನಿಕತೆಯ ನೆಪವೊಡ್ಡಿ ಬೇಕಾಬಿಟ್ಟಿ ಹೀರಿ ಖಾಲಿ ಮಾಡಿ ಈಗ ಬಾಯಾರಿ ಬಳಲುತ್ತಿರುವ ಜನಸಮೂಹ ಕಲಿಯಬೇಕಿರುವ ಪಾಠವಿದು.
ಸುಮಾರು 650 ವರ್ಷಗಳ ಹಿಂದೆ ಇಂದಿನ ಆಂಧ್ರಪ್ರದೇಶದ ಪೆನುಕೊಂಡ ಪಟ್ಟಣಕ್ಕೆ ಉತ್ತರ ಪಿನಾಕಿನಿ (ಪೆನ್ನಾ) ನದಿ ನೀರನ್ನು ಕೊಂಡೊಯ್ದ ಸಾಹಸದ ಕಥೆಯನ್ನು ಸಾರುವ ಶಾಸನವೊಂದು ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ಪಟ್ಟಣದ ಆಚಾರ್ಯ ಕಾಲೇಜಿನ ಆವರಣದಲ್ಲಿ ಸದ್ದಿಲ್ಲದೇ ಕುಳಿತಿದೆ.
ಕಾಲಗರ್ಭದಲ್ಲಿ ಹೂತುಹೋಗಬಹುದಾಗಿದ್ದ ಇತಿಹಾಸದ ಒಂದು ಕೊಂಡಿಯನ್ನು ಹುಡುಕಿ ಕಾಪಾಡಿರುವ ಹಾಗೂ ಇಂದಿನ ಕಾಲಘಟ್ಟಕ್ಕೆ ಬೆಳಕು ತೋರುವ ಇಂಥ ಒಂದು ಶಾಸನವೊಂದನ್ನು ಜತನ ಮಾಡಿರುವ ಶ್ರೇಯಸ್ಸು ಆಚಾರ್ಯ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ ಅಯ್ಯಂಗಾರ ಅವರಿಗೆ ಸಲ್ಲುತ್ತದೆ.
ಇತಿಹಾಸದ ಪುಟಗಳಲ್ಲಿ...
ಈ ಶಾಸನದ ಮೇಲೆ ಬೆಳಕು ಚೆಲ್ಲಿದಾಗ ಕುತೂಹಲ ಕಥನವೊಂದು ಬಿಡಿಸಿಕೊಳ್ಳುತ್ತದೆ. ಅದೇನೆಂದರೆ: ಪೆನುಕೊಂಡದ ಪಶ್ಚಿಮಕ್ಕೆ ಸುಮಾರು 17ಕಿ.ಮೀ ದೂರದಲ್ಲಿ ಸಾಗುವ ಪಿನಾಕಿನಿ ನದಿಯ ನೀರನ್ನು ಪೆನುಕೊಂಡಕ್ಕೆ ತರಲು ಅಲ್ಲಿನ ಭೌಗೋಳಿಕ ಸನ್ನಿವೇಶವೇ ಪ್ರಮುಖ ಅಡಚಣೆಯಾಗಿತ್ತು. ಪೆನುಕೊಂಡ ಈ ನದಿ ಪಾತ್ರಕ್ಕಿಂತ ಸುಮಾರು 100 ಮೀಟರುಗಳಷ್ಟು ಎತ್ತರದಲ್ಲಿದೆ. ಆಗಿನ ಕಾಲಕ್ಕಿನ್ನೂ ಯಂತ್ರ ನಾಗರೀಕತೆ ಕಣ್ಣರಳಿಸಿರಲಿಲ್ಲ. ನದಿಪಾತ್ರ ಎಲ್ಲಿ ಈ ಪಟ್ಟಣಕ್ಕಿಂತ ಎತ್ತರದಲ್ಲಿದೆಯೋ ಅಲ್ಲಿಂದಲೇ ನೀರನ್ನು ತಿರುಗಿಸಿ ತರುವುದೊಂದೇ ಇದ್ದ ಮಾರ್ಗ.
ಬಹುಶಃ ಸಿಂಗಾಯಭಟ್ಟ ಆಗಿನ ಕಾಲದ ಮೇಧಾವಿ ‘ನೀರಾವರಿ ಎಂಜಿನಿಯರ್’ ಆಗಿದ್ದಿರಬೇಕು. ಈಗ ಪೆನುಕೊಂಡದಿಂದ ಪಿನಾಕಿನಿ ನದಿಯ ಉಗಮಸ್ಥಾನವಾದ ನಂದಿ ಬೆಟ್ಟದ ತಪ್ಪಲಿನವರೆಗೂ ಓಡಾಡಿ ಸಮೀಕ್ಷೆ ಮಾಡಿದ್ದನೋ ಏನೋ, ಒಟ್ಟಿನಲ್ಲಿ ನೀರು ಸಹಜವಾಗಿಯೇ ಪೆನುಕೊಂಡಕ್ಕೆ ಹರಿಯುವ ಹಾದಿಯೊಂದನ್ನು ಕಂಡುಹಿಡಿದ.
ಪಿನಾಕಿನಿ ನದಿ ಗೌರಿಬಿದನೂರು ಪಟ್ಟಣದ ಈಶಾನ್ಯ ದಿಕ್ಕಿನಲ್ಲಿ ತುಸು ಪಶ್ಚಿಮಕ್ಕೆ ತಿರುಗುವ ಸ್ಥಳದಲ್ಲಿ ನದಿತಳದ ಸ್ವಲ್ಪ ಎತ್ತರದಿಂದ ಸಿರುವೆರದ ಕೆರೆಯವರೆಗೂ, ನಂತರ ಅಲ್ಲಿಂದ ಪೆನುಕೊಂಡದವರೆಗೂ ಕಾಲುವೆಯೊಂದನ್ನು ನಿರ್ಮಿಸಿದ. ಪಿನಾಕಿನಿ ತುಂಬಿ ಹರಿಯುತ್ತಿದ್ದ ಕಾಲವಷ್ಟೂ ನೀರು ಸರಾಗವಾಗಿ ಈ ಕಾಲುವೆಯ ಮೂಲಕ ಹರಿದು ಸಿರುವೆರದ ಕೆರೆ ತುಂಬುತ್ತಿತ್ತು. ಪೆನುಕೊಂಡಕ್ಕೆ ವರ್ಷಪೂರ್ತಿ ನೀರು ದೊರೆಯುತ್ತಿತ್ತು. ಹೀಗೆ ಸಿಂಗಾಯಭಟ್ಟ ಪೆನುಕೊಂಡಕ್ಕೆ ನೀರು ಸದಾ ಕಾಲ ದೊರೆಯುವಂತೆ ಮಾಡುವಲ್ಲಿ ಯಶಸ್ವಿಯಾದ.
ಅಂದರೆ ಇಂದು ನೀರಿಗಾಗಿ ಪಶ್ಚಿಮಘಟ್ಟಗಳತ್ತ ಮುಖ ಮಾಡಿರುವ ಪ್ರದೇಶ ಹಿಂದೊಮ್ಮೆ ದೂರದೂರದ ಪ್ರದೇಶಗಳಿಗೂ ನೀರುಣಿಸುವಷ್ಟು ಜಲಸಮೃದ್ಧಿಯಿಂದ ಕೂಡಿತ್ತು ಎಂದಾಯಿತಲ್ಲವೆ? ಹಾಗಾದರೆ ಈ ಸಂಪತ್ತು ಇಂದೇನಾಗಿದೆ ಎಂಬ ಕುತೂಹಲದ ಪ್ರಶ್ನೆಯೊಂದು ಮೂಡುವುದು ಸಹಜ. ಅಂದು ಬೀಳುತ್ತಿದ್ದ ಮಳೆಯ ಪ್ರಮಾಣಕ್ಕೂ ಇಂದಿನದಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂಬ ಉತ್ತರ ಥಟ್ಟನೆ ಹೇಳಿಬಿಡುತ್ತೇವೆ. ಆದರೆ 1901ರಿಂದ ಇಂದಿನವರೆಗೂ ಈ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯ ಪ್ರಮಾಣದ ಅಂಕಿಅಂಶಗಳನ್ನು ನೋಡಿದಾಗ ಮೇಲಿನ ಹೇಳಿಕೆ ಬಗ್ಗೆ ಅನುಮಾನ ಮೂಡುತ್ತದೆ.
ಈ ಪ್ರದೇಶದ ಮಳೆಯ ಪ್ರಮಾಣ ಏಳೆಂಟು ವರ್ಷಗಳ ಅವಧಿಯೊಳಗೆ ಒಂದೇ ನಿಗಧಿತ ಪ್ರಮಾಣದಲ್ಲೇ ಪುನರಾವರ್ತನೆಯಾಗುತ್ತಿದೆ. ಕೆಲ ವರ್ಷಗಳಲ್ಲಿ ಈ ಪ್ರಮಾಣ ವಾಡಿಕೆಗಿಂತ ಕಡಿಮೆಯಾದರೂ ಮತ್ತೆ ಕೆಲ ವರ್ಷಗಳಲ್ಲಿ ಹೆಚ್ಚಾಗುತ್ತದೆ. ಇದು ಸಾವಿರಾರು ವರುಷಗಳಿಂದ ನಿಸರ್ಗ ನಡೆಸಿಕೊಂಡು ಬಂದಿರುವ ಪದ್ಧತಿ.
ಅದರಲ್ಲೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಸುಮಾರು 400 ಚದಕ ಕಿ.ಮೀ ವಿಸ್ತೀರ್ಣದ ನರಸಿಂಹದೇವರ ಬೆಟ್ಟ ರಕ್ಷಿತ ಅರಣ್ಯವಂತೂ ಇಂದಿನ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ಭಾಗಗಳಿಗೆ ನೀರಿನ ಮೂಲವಾಗಿತ್ತು. 9500ಕ್ಕೂ ಮಿಕ್ಕಿ ಕೆರೆಗಳಿಗೆ ನೀರು ದೊರೆಯುತ್ತಿದ್ದದು ಇದೇ ಅರಣ್ಯ ಪ್ರದೇಶದಿಂದ ಎಂಬುದನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ‘ಕರ್ನಾಟಕದಲ್ಲಿ ಕೆರೆ ನೀರಾವರಿ’ ಎಂಬ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಸರಿಸುಮಾರು 400ಚದರ ಕಿ.ಮೀ ವಿಸ್ತೀರ್ಣದ ಈ ಅರಣ್ಯ ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣದಲ್ಲಿ (ಸರಾಸರಿ 800 ಮಿ.ಮೀ ಪ್ರಮಾಣದಲ್ಲಿ) ಅಂತರ್ಜಲ ಭಂಡಾರಕ್ಕೆ ಇಂಗುತ್ತಿದ್ದ ನೀರು ಸುಮಾರು 13 ಟಿ.ಎಂ.ಸಿಯಷ್ಟು ಎಂದು ಕೆಲ ಅಧ್ಯಯನಗಳು ತೋರಿಸಿಕೊಟ್ಟಿವೆ. ಇಲ್ಲಿದ್ದ ಅರಣ್ಯವೇ ಇದಕ್ಕೆ ಕಾರಣ. ಸುಮಾರು ಅರವತ್ತು ವರ್ಷಗಳ ಹಿಂದೆ ಸರ್ಕಾರವೇ ಈ ಕಾಡಿನ ಮರಗಳನ್ನು ಕಡಿದು ಇದ್ದಿಲು ಮಾಡಲು ಪರವಾನಿಗೆ ಕೊಟ್ಟಿತ್ತು. ಅಂದು ಯಾರೂ ಇದರ ದುಷ್ಪರಿಣಾಮಗಳನ್ನು ಮುಂಗಾಣಲಿಲ್ಲ. ಕಾಡು ಮಾಯವಾಯಿತು. ಸೂರ್ಯನ ಬಿಸಿಲಿಗೆ ತೆರೆದುಕೊಂಡ ನೆಲ, ಬಿದ್ದ ಮಳೆಯ ನೀರನ್ನು ಇಂಗಿಸುವುದಕ್ಕೆ ಅವಕಾಶವೇ ಇಲ್ಲದಂತೆ ಆವಿಯಾಗಿಸತೊಡಗಿತು.
ಇನ್ನೊಂದೆಡೆ ಬಾವಿಗಳು ಕೊಳವೆ ಬಾವಿಗಳಾದವು. ಅವುಗಳ ಸಂಖ್ಯೆಯೂ ನೂರರಿಂದ ಸಾವಿರಕ್ಕೆ, ಸಾವಿರಗಳಿಂದ ಲಕ್ಷಕ್ಕೆ ಜಿಗಿಯಿತು. ವ್ಯವಸಾಯ ವ್ಯಾಪಾರವಾಯಿತು. ಹೆಚ್ಚು ಹೆಚ್ಚು ನೀರು ಕುಡಿಯುವ ಬೆಳೆಗಳನ್ನು ಬೆಳೆಯಲು ವ್ಯವಸ್ಥಿತ ಪ್ರಚಾರ, ಪ್ರೋತ್ಸಾಹ ಸಿಕ್ಕಿತು. ನಮ್ಮ ಆಹಾರ ಪದ್ಧತಿಯಲ್ಲಿಲ್ಲದ ಇಂತಹ ಬೆಳೆಯಿಂದ ಬಂದ ಉತ್ಪನ್ನಗಳನ್ನು ನಾವೂ ಬಳಸುವಂತೆ ಅಭ್ಯಾಸ ಮಾಡಿಸಲಾಯಿತು. ಪೈಪೋಟಿಗೆ ಬಿದ್ದಂತೆ ರೈತರು ಈ ಬೆಳೆಗಳನ್ನು ಯಥೇಚ್ಛವಾಗಿ ಬೆಳೆಯಲು ಪ್ರಾರಂಭಿಸಿದರು. ಸಹಸ್ರಾರು ವರ್ಷಗಳಿಂದ ಸಂಗ್ರಹವಾಗಿದ್ದ ಅಂತರ್ಜಲ ನಿಕ್ಷೇಪ ಖಾಲಿಯಾಗತೊಡಗಿತು. ಪಿನಾಕಿನಿ ನದಿಯ ಹುಟ್ಟೂ ಇದೇ ಅರಣ್ಯ ಪ್ರದೇಶದ ಬೆಟ್ಟಗಳಲ್ಲೇ ಇರುವುದು.
ಅಂತರ್ಜಲ ಭಂಡಾರ ಅಕ್ಷಯವೇನಲ್ಲ. ನೆಲದ ಮೇಲಿಂದ ಇಂಗುವ ನೀರು ನೆಲದಾಳದ ಬಂಡೆಗಳ ನಡುವಿನ ಖಾಲಿ ಸ್ಥಳಗಳಲ್ಲಿ ಸಂಗ್ರಹವಾಗಿರುತ್ತದೆ. ಹೀಗೆ ಸಂಗ್ರಹವಾಗುವ ನೀರು ಒಂದು ಮಟ್ಟವನ್ನು ಮೀರಿದ ನಂತರ ತಾನೇ ತಾನಾಗಿ ಸಿಗುವ ಸಣ್ಣ ಸಣ್ಣ ಬಿರುಕುಗಳ ಮೂಲಕ ಮೇಲೆ ಬಂದು ಹೊರಗೆ ಜಿನುಗತೊಡಗುತ್ತದೆ.
ಬೆಟ್ಟಗಳ ಇಳಿಜಾರಿನಲ್ಲಿ ಇಂಗುವ ಮಳೆನೀರು ಗುರುತ್ವಾಕರ್ಷಣೆಯ ಕಾರಣದಿಂದ ಕಣಿವೆಗಳ ನಡುವಿನ ಹಳ್ಳಗಳಿಗೆ ಜಿನುಗಿ ನದಿಯಾಗಿ ಹರಿಯುವುದು ಒಂದು ಕಾರಣವಾದರೆ, ಮೇಲೆ ಜಿನುಗುವ ಅಂತರ್ಜಲವೂ ನದಿಗಳ ಅನವರತ ಹರಿವಿಗೆ ಇನ್ನೊಂದು ಕಾರಣವಾಗಿರುತ್ತದೆ. ಅಂತರ್ಜಲ ಭಂಡಾರಕ್ಕೆ ನೀರು ಇಂಗುವ ಒಂದು ಕೊಂಡಿಯನ್ನು ಕತ್ತರಿಸಿ ಲಕ್ಷಾಂತರ ವರ್ಷಗಳಿಂದ ಸಂಗ್ರಹವಾಗಿರುವ ಅಮೂಲ್ಯ ಜಲನಿಧಿಯನ್ನು ವಿವೇಚನೆಯಿಲ್ಲದೆ ಬಳಸಿದ್ದು ಇಂದಿನ ದುಸ್ಥಿತಿಗೆ, ಮುಂದೆ ಎರಗಲಿರುವ ಜಲಕ್ಷಾಮಕ್ಕೆ ಪ್ರಮುಖ ಕಾರಣ. ಒಂದು ಹೊರೆ ಕಟ್ಟಿಗೆಗಾಗಿ ಕೊಂಬೆಯ ತುದಿಯಲ್ಲಿ ನಿಂತು ತಾನು ನಿಂತ ಕೊಂಬೆಯ ಬುಡ ಕತ್ತರಿಸಿದ ಕಥೆ ಇದು.
‘ಆಗಸದಲ್ಲಿನ ಎರಡು ಹಕ್ಕಿಗಳಿಗಿಂತ ಕೈಯಲ್ಲಿರುವ ಒಂದು ಹಕ್ಕಿಯೇ ಮೇಲು’ ಎಂಬುದು ಹಿರಿಯರ ಅನುಭವದ ನುಡಿ. ನಮ್ಮ ನೆಲದಡಿಯ ಜಲಕುಹರಗಳಲ್ಲಿನ ನೀರನ್ನು ಆಧುನಿಕತೆಯ ನೆಪವೊಡ್ಡಿ ಬೇಕಾಬಿಟ್ಟಿ ಹೀರಿ ಖಾಲಿ ಮಾಡಿ... ಈಗ ಬಾಯಾರಿ ಬಳಲುತ್ತಿರುವ ಜನಸಮೂಹದ ಮತ್ತಷ್ಟು ದುಂದಿಗಾಗಿ ಎಲ್ಲೆಲ್ಲಿಂದಲೋ ನೀರು ಹರಿಸುವ ಯೋಜನೆಗಳೇ ಶಾಶ್ವತ ಎಂದುಕೊಳ್ಳುವುದು ಮೂರ್ಖತನ.
ಪ್ರಪಂಚದಾದ್ಯಂತ ಈಗಾಗಲೇ ಜಾರಿಯಾದ ಹಲವು ಯೋಜನೆಗಳು ತಲೆಕೆಳಗಾಗಿ ಮಖಾಡೆ ಮಲಗಿಬಿಟ್ಟಿವೆ. 1977ರಲ್ಲಿ ಚೆನ್ನೈ ನಗರಕ್ಕೆ ಅವಶ್ಯವಿದ್ದ ವಾರ್ಷಿಕ 15 ಟಿ.ಎಂ.ಸಿ ನೀರು ತರಲು ಕೈಗೊಂಡ ‘ತೆಲುಗುಗಂಗಾ’ ಯೋಜನೆ 2002ರಲ್ಲಿ ಮುಗಿದಾಗ ತಂದದ್ದು ಅರ್ಧ ಟಿ.ಎಂ.ಸಿಯಷ್ಟು ನೀರನ್ನು ಮಾತ್ರ! ಹಲವಾರು ಬೃಹತ್ ಸುಧಾರಣೆಗಳ ಹೊರತಾಗಿಯೂ ಈಗ ಸಿಗುತ್ತಿರುವ ನೀರು ಕೇವಲ 3.5 ಟಿ.ಎಂ.ಸಿ.
ಇಂತಹ ಅಪಯಶಸ್ಸಿನ ಉದಾಹರಣೆಗಳೇ ನಮ್ಮ ಮುಂದಿರುವಾಗ ನಮಗೆ ಬೇಕಿರುವುದು ನೀರಿನ ಮಿತಬಳಕೆಯ ಪಾಠಗಳು ಮತ್ತು ವ್ಯರ್ಥ ಹರಿದು ಹಾಗೂ ಆವಿಯಾಗಿ ಹೋಗುತ್ತಿರುವ ನೀರನ್ನು ನೆಲದಾಳಕ್ಕೆ ಇಂಗಿಸುವ ಉಪಾಯಗಳಲ್ಲದೆ, ನಿಬಿಡ ಕಾಡನ್ನು ಸವರಿ (ಖಂಡಿತವಾಗಿಯೂ ಕಳಪೆಯಾಗಿ) ನಿರ್ಮಿಸುವ ಕಾಂಕ್ರೀಟ್ ಕಾಲುವೆಗಳಲ್ಲ ಅಲ್ಲವೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.