ADVERTISEMENT

ಕಡಲ ತೀರದಲಿ ಓಸಿಪೊಡಾ...

ಫಾಲ್ಗುಣ ಗೌಡ, ಅಚವೆ
Published 19 ಮೇ 2014, 19:30 IST
Last Updated 19 ಮೇ 2014, 19:30 IST

ಇಲ್ಲಿನ ಚಿತ್ರಗಳನ್ನು ನೋಡಿದಾಕ್ಷಣ ಇದು ಯಾವುದೋ ದೇಶದ ನಕ್ಷೆಗಳೋ ಅಥವಾ ಚಿತ್ರಕಾರನೊಬ್ಬ ಬಿಡಿಸಿದ ಚಿತ್ರಗಳೋ ಎಂದು ತಿಳಿದುಕೊಂಡ್ರಾ...? ಅಲ್ಲವೇ ಅಲ್ಲ. ಇವು ಕಾರವಾರದ ಕಡಲ ದಂಡೆಯಲ್ಲಿ ಸಂಜೆಯ ಇಳಿಹೊತ್ತಿಗೆ ‘ಓಸಿಪೊಡಾ’ (ಚಿಕ್ಕ ಏಡಿ) ಬಿಡಿಸಿದ ಚಿತ್ತಾರಗಳು.

ಕಾರವಾರದ ಸಮುದ್ರ ನಗರಕ್ಕೆ ಅತೀ ಕಡಿಮೆ ಅಂತರದಲ್ಲಿದೆ. ಸಂಜೆಯಾಯಿ ತೆಂದರೆ ಇಲ್ಲಿ ದೂರದೂರದವರೆಗೆ ಜನಸಾಗರ. ನಾಲ್ಕೈದು ಕಿ.ಮಿ  ವಿಸ್ತಾರವಿರುವ ದಂಡೆಯಲ್ಲಿ ಸಂಜೆ ನಡೆಯುವುದೆಂದರೆ ಎಲ್ಲರಿಗೂ ಎಲ್ಲಿಲ್ಲದ ಖುಷಿ. ಸೂರ್ಯಾಸ್ತದ ಆ ಕ್ಷಣ... ಕೆಂಬಣ್ಣವಾಗಿರುವ ಸಮುದ್ರ... ಯಾರೋ ಬಿಡಿಸಿಹೋದ ಚಿತ್ರಗಳಂತೆ ಕಾಣುವ ಹಳದಿ, ಕೆಂಪು ಬಣ್ಣದ ಮೋಡದ ಗೆರೆಗಳು... ಆಹಾ! ಚೆಂದವೋ ಚೆಂದ. ಮನಸ್ಸು ಪ್ರಫುಲ್ಲಗೊಳ್ಳುತ್ತದೆ, ಅದೃಶ್ಯ ಲೋಕದಲ್ಲಿ ವಿಹರಿಸುತ್ತದೆ.

ಅತ್ತ ಸೂರ್ಯ ಮುಳುಗುತ್ತಿದ್ದಂತೆ ಇತ್ತ ದೃಷ್ಟಿ ಹಾಯಿಸಿದರೆ ದಂಡೆಯುದ್ದಕ್ಕೂ ಸತ್ತ ಮೀನುಗಳು, ಕಸಕಡ್ಡಿ ಮೊದಲಾದ ತ್ಯಾಜ್ಯ ವಸ್ತುಗಳನ್ನು ತಿನ್ನಲು ಅಲೆ ಅಪ್ಪಳಿಸುವ ಜಾಗದಲ್ಲಿಯೂ ಸಣ್ಣ ಏಡಿಗಳು ಬಿಲಗಳನ್ನು ತೋಡಿ ಮನೆ ಮಾಡಿಕೊಂಡು ಸತ್ತ ಮೀನುಗಳನ್ನು ಕಚ್ಚಿ ತಮ್ಮ ಬಿಲದಲ್ಲಿ ತುಂಬುವ ದೃಶ್ಯ, ದಂಡೆಗೆ ಬಂದ ನಾಯಿಗಳು ಬಿಲ ಅಗೆದು ಹಿಡಿದು ತಿನ್ನುವ ದೃಶ್ಯ ಕಣ್ಣಿಗೆ ಬೀಳುತ್ತದೆ.

ಇವೆಲ್ಲ ನೋಡಿ ವಾಪಸು ಬಂದುಬಿಟ್ಟರೆ ನೀವು ಇನ್ನೇನೋ ಕಳೆದುಕೊಳ್ಳುತ್ತೀರಿ. ಆ ತೀರದಲ್ಲಿ ಇನ್ನೂ ಅಚ್ಚರಿ ಉಣಿಸುವ ಸಂಗತಿಯೊಂದಿದೆ. ಅದೇ ‘ಓಸಿಪೊಡಾ’ ಚಿತ್ತಾರ. ಚಿಕ್ಕ ಏಡಿಯ ವೈಜ್ಞಾನಿಕ ಹೆಸರು ‘ಓಸಿಪೊಡಾ’. ಇದು ಉಸುಕನ್ನು ಕೊರೆದು ಆಳಕ್ಕಿಳಿದು ತನ್ನ ಬಾಯಿಯ ತೇವಾಂಶವನ್ನು ಬಳಸಿಕೊಂಡು ಚಿಕ್ಕ ಕಾಲುಗಳಲ್ಲಿ ಅದನ್ನು ಸಣ್ಣ ಉಂಡೆಯ ನ್ನಾಗಿ ಮಾಡಿ ಹೊರಗೆ ತಂದಿಡುತ್ತದೆ. ಒಳಗಡೆ ತನಗೊಂದು ಮನೆ ಮಾಡಲು ಹರಸಾಹಸ ಪಡುವ ಪರಿ ಇದು ಎನ್ನುತ್ತಾರೆ ಕಡಲ ಜೀವಶಾಸ್ತ್ರ ವಿಭಾಗದ ಡಾ. ಉಲ್ಲಾಸ ನಾಯ್ಕ.

ಜನರು ಪ್ರತಿದಿನ ಸಂಜೆ ವಿಹಾರ ಹೊರಟಾಗ ಕಾಲ ಅಡಿ ಸಿಕ್ಕದೇ ತಪ್ಪಿಸಿಕೊಂಡು ತನ್ನ ಬಿಲ ಸೇರುವ ಈ ಏಡಿ ಒಂದೆರಡು ಅಡಿ ಆಳದಲ್ಲಿ ಹುದುಗಿರುತ್ತದೆ. ಇದು ಬಿಡಿಸುವ ಚಿತ್ತಾರಗಳು ಬೇರೆ ಬೇರೆ ರಾಜ್ಯಗಳ ನಕಾಶೆಯ ಚಿತ್ರಗಳಂತೆ ಗೋಚರಿಸುತ್ತದೆ. ಯಾವುದಾದರೂ ಸಮುದ್ರ ತೀರದಲ್ಲಿ ನಡೆಯುತ್ತಿದ್ದರೆ ಇಂತಹ ಚಿತ್ತಾರಗಳು ನಿಮ್ಮ ಕಣ್ಣಿಗೂ ಬೀಳಬಹುದು, ಇಂಥ ಅಪೂರ್ವ ನೋಟ ಮಿಸ್‌ ಮಾಡಿಕೊಳ್ಳಬೇಡಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.