ADVERTISEMENT

ಕತ್ತಲ ಕೋಟೆ; ವಿಸ್ಮಯ ನೋಟ

ತೀರ್ಥಕುಮಾರ
Published 4 ಫೆಬ್ರುವರಿ 2013, 19:59 IST
Last Updated 4 ಫೆಬ್ರುವರಿ 2013, 19:59 IST
ಕೋಟೆಯ ಪ್ರವೇಶದ್ವಾರ
ಕೋಟೆಯ ಪ್ರವೇಶದ್ವಾರ   

ಎತ್ತರದ ದಿಬ್ಬದ ಮೇಲೆ ಸುಮಾರು ಏಳು ಎಕರೆ ಪ್ರದೇಶದಲ್ಲಿ ಗತಕಾಲದ ವೈಭವ ತೋರುವ ಹೊಳಕುಂದಾ ಗ್ರಾಮದ ಗಗನಚುಂಬಿ ಗುಂಬಜ್‌ಗಳು ದೂರದಿಂದಲೇ ಗೋಚರಿಸಲಾರಂಭಿಸುತ್ತವೆ. ಇದರೊಳಗೆ ಹೋದರೆ `ಸ್ಮಶಾನ ಮೌನ'... ಹೆಜ್ಜೆ ಹೆಜ್ಜೆಗೂ ಗತಕಾಲದ ವಿಸ್ಮಯದ ನೋಟ!

ಗುಲ್ಬರ್ಗದಿಂದ ಉತ್ತರಕ್ಕೆ ಸುಮಾರು 28 ಕಿ.ಮೀ. ದೂರದಲ್ಲಿ ಹುಮನಾಬಾದ್ ಮಾರ್ಗದಲ್ಲಿ ಈ ಗ್ರಾಮವಿದೆ. ಗುಲ್ಬರ್ಗದ ಹಫ್ತ್‌ಗುಂಬಜ್ ಮಾದರಿಯಲ್ಲಿನ ಏಳು ಗುಮ್ಮಟಗಳ ಸಮುಚ್ಚಯ ಇಲ್ಲಿದೆ. ಬಹುಶಃ ಬಹಮನಿ ಸಾಮ್ರಾಜ್ಯದ ಪ್ರಮುಖ ವ್ಯಕ್ತಿಗಳಿಗೆ ಸಂಬಂಧಿಸಿದ ಗುಮ್ಮಟಗಳಾಗಿರುವ ಸಾಧ್ಯತೆ ಇದ್ದು, ನೋಡಲು ಬಹಳ ಸುಂದರವಾಗಿವೆ. ಇಲ್ಲೊಂದು ವಿಶಿಷ್ಟ, ವಿಸ್ಮಯದ ಬಾವಿ ಇದೆ. ಗುಮ್ಮಟದ ಸುತ್ತಲೂ ಕೋಟೆಗೋಡೆ ಇದ್ದು ಮೂರು ಪ್ರವೇಶ ದ್ವಾರಗಳಿವೆ.

ಮುಖ್ಯದ್ವಾರದ ಎರಡೂ ಬದಿಯಲ್ಲಿ ನೀರಿನ ಪುರಾತನ ಶೈಲಿಯ ಬಾನಿ(ಹೌಜ್)ಗಳಿವೆ. ಒಳಬರುವವರಿಗೆ ಕಾಲು ತೊಳೆದುಕೊಳ್ಳಲು ಈ ವ್ಯವಸ್ಥೆ ಇರಬಹುದು. ಐದು ಗುಂಬಜ್‌ಗಳು ಒಂದು ಆವರಣದಲ್ಲಿ, ಇನ್ನೆರಡು ಆಚೆಗಿನ ಹೊಲದಲ್ಲಿವೆ.

ADVERTISEMENT

ಹಲವು ಗೋರಿಗಳು

ಇಲ್ಲಿಯ ಎಲ್ಲ ಗುಂಬಜ್‌ಗಳಲ್ಲಿ ಗೋರಿಗಳೇ (ಸಮಾಧಿ) ಕಂಡುಬರುತ್ತವೆ. ಮೊದಲಿನದು ಅಜಮಖಾನ್ ಗುಂಬಜ್. ಇದರಲ್ಲಿ ಮೂರು ಸಮಾಧಿಗಳಿವೆ. ಎರಡನೆಯದು ಜಲಾಲೋದ್ದಿನ್ ಗುಂಬಜ್- ಇದು ಅಷ್ಟಾಕೃತಿಯ ಸುಂದರ ಕಟ್ಟಡ. ಗ್ರಾಮಸ್ಥರು ಇದನ್ನು `ಅಷ್ಟಪೈಲಿ ಗುಂಬಜ್' ಎನ್ನುತ್ತಾರೆ. ಇದರಲ್ಲಿ ಒಂದು ಚಿಕ್ಕದು, ಇನ್ನೆರಡು ದೊಡ್ಡ ಗೋರಿಗಳಿವೆ. ಮೂರನೆಯದು ಮಹಮ್ಮದ್ ಮಶಾಕ್ ರೆಹಮತ್ ಅಲೈ ದರ್ಗಾ ಗುಂಬಜ್. ಇದರಲ್ಲಿ ಒಂದು ಗೋರಿ ಇದೆ. ಇದು ಇವರೆಲ್ಲರ ಗುರುಗಳದ್ದಾಗಿದೆ. ಇದೊಂದನ್ನು ಮಾತ್ರ ಸ್ವಚ್ಛವಾಗಿರಿಸಲಾಗಿದೆ.

ಈ ದರ್ಗಾ ಗ್ರಾಮಸ್ಥರ ದೈವವಾಗಿದೆ. ಜನವರಿ 24ರ ರಾತ್ರಿ ಗಂಧ, 25ರಂದು ಜಾತ್ರೆ ನಡೆಯುತ್ತದೆ. ನಾಲ್ಕನೆಯದು ಖೈರಂ ಖಾನ್ ಗುಂಬಜ್. ಇದರಲ್ಲಿ ಗಂಡ, ಹೆಂಡತಿ ಹಾಗೂ ಮಗನ ಗೋರಿಗಳಿವೆ. ಐದನೆಯದು ದಿಲೋರ್ ಖಾನ್ ಗುಂಬಜ್. ಇದರಲ್ಲಿ ಮಾತ್ರ ಆರು ಗೋರಿಗಳಿವೆ. ಈಗ ಇದು ಬಾವಲಿಗಳ ಆವಾಸಸ್ಥಾನವಾಗಿ ಬಿಟ್ಟಿದೆ.

ಎದುರು - ಬದುರು

ಈ ಐದು ಗುಂಬಜ್‌ಗಳು ಒಂದೆಡೆ ಇದ್ದರೆ, ಆರನೇ `ಅಲುಮಲುಖಾನ್ ಗುಂಬಜ್' ಹಾಗೂ ಏಳನೆಯ `ಬಿಲಕ್ಷರಬಿ ಗುಂಬಜ್' ಎದುರು ಬದಿರಾಗಿವೆ. ಇವು ಗಂಡ-ಹೆಂಡತಿಯ ಗೋರಿಗಳು ಎಂದು ಇವುಗಳ ನಿರ್ವಹಣೆ ಮಾಡುತ್ತಿರುವ ಮಹಮ್ಮದ್ ಜಲಾಲುದ್ದಿನ್ ಹೇಳುತ್ತಾರೆ. ಬಿಲಕ್ಷರಬಿ ಗೋರಿ ವಿಶಿಷ್ಟವಾಗಿದೆ.

ಸುಮಾರು ಏಳು ಎಕರೆಯಷ್ಟಿರುವ ಈ ಪ್ರದೇಶದಲ್ಲಿ ಎಲ್ಲಿ ನೋಡಿದರಲ್ಲಿ ಗೋರಿಗಳೇ ಕಂಡುಬರುತ್ತವೆ. ಕೆಲವು ಗೋರಿಗಳ ಪಕ್ಕದಲ್ಲಿ ಉದ್ದನೆಯ ಒನಕೆಯಾಕಾರದ ಕಲ್ಲಿನ ಕಂಬಗಳನ್ನು ನೆಡಲಾಗಿದೆ. ವೀರ ಮರಣ (ಶಹೀದ) ಅಪ್ಪಿದವರ ಸಮಾಧಿಗಳಿಗೆ ಮಾತ್ರ ಇವುಗಳನ್ನು ನೆಡಲಾಗುತ್ತದೆ ಎಂದು ಮಹಮ್ಮದ್ ಜಲಾಲೋದ್ದಿನ ತಿಳಿಸುತ್ತಾರೆ.

ಏಕ ಶಿಲೆಯ ಗೋರಿಯೊಂದಿದ್ದು, ಅದರ ಮೇಲೆ ಅರೆಬಿಕ್ ಬರಹವಿದೆ. ಇದನ್ನು ಓದಿದವರು ಕೋಟ್ಯಧಿಪತಿ ಆಗುತ್ತಾರೆಂಬುದು ಗ್ರಾಮಸ್ಥರ ನಂಬಿಕೆ. ಇದರ ಮೇಲೆ ಜನ ಎಣ್ಣೆ ಸುರುವಿದ್ದು, ಅಕ್ಷರಗಳು ಸ್ಪಷ್ಟವಾಗಿ ಕಾಣುತ್ತಿಲ್ಲ.

ಎದುರಿಗೊಂದು ಸಣ್ಣ ಕೆರೆಯಿದೆ. ಮಧ್ಯೆ ಪುಷ್ಕರಣಿಯ ಹಾಗೆ ಕಟ್ಟೆ ಇದ್ದು ಇದರ ಪಕ್ಕದಲ್ಲಿಯೂ ಒಂದು ಗುಂಬಜ್ ಇದೆ. ಎಂಟು ಕಂಬಗಳನ್ನು ಹೊಂದಿದ್ದು, ಕಂಬಗಳಲ್ಲಿ ಚಾಲುಕ್ಯರ ಕಾಲದ ಸೂಕ್ಷ್ಮ ಕೆತ್ತನೆಯನ್ನು ನಾವು ಇಲ್ಲಿ ಕಾಣಬಹುದು.ಇಷ್ಟೆಲ್ಲ ಕುರುಹುಗಳಿರುವ ಇಲ್ಲಿ ಪ್ರತಿ ಹೆಜ್ಜೆಗೂ ಅಂತೆ-ಕಂತೆಗಳೇ ತುಂಬಿವೆ. ಏನಾಗಿರಬಹುದೆಂಬ ನಿಜಕತೆಗಳೆಲ್ಲ  ನಿಗೂಢ.

ಏಳು ನುಲುಕಿನ ಬಾವಿ

ಈ ಎಲ್ಲ ಸ್ಮಾರಕಗಳಲ್ಲಿ ಇಲ್ಲಿನ ಬಾವಿ ಮಾತ್ರ ವಿಶಿಷ್ಟವಾಗಿದೆ. ಸಪ್ತಾಕೃತಿಯ ಆಳ ಬಾವಿಯೊಳಗೆ ಮೂರು ಕೋಣೆಗಳುಳ್ಳ ಮನೆಯೊಂದಿದೆ. ಇದು ರಾಜ ನರ್ತಕಿಯ ನಿವಾಸವಾಗಿತ್ತು. ಈ ಬಾವಿ ಏಳು ಹೊರಸಿನ ಎಳೆ (ನುಲಕಿ)ಗಳಷ್ಟು (ಸುಮಾರು 35,000 ಅಡಿ) ಆಳವಾಗಿರುವುದರಿಂದ ಇದನ್ನು `ಏಳು ನುಲಕಿನ ಬಾವಿ' ಎಂದೇ ಕರೆಯುವುದಾಗಿ ಸ್ಥಳೀಯರು ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.