ADVERTISEMENT

ಚಳ್ಳಕೆರೆಯಮ್ಮನಿಗೆ ಬಳೆ ಹರಕೆ

ಜಡೇಕುಂಟೆ ಮಂಜುನಾಥ್
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST
ಚಳ್ಳಕೆರೆಯಮ್ಮನಿಗೆ ಬಳೆ ಹರಕೆ
ಚಳ್ಳಕೆರೆಯಮ್ಮನಿಗೆ ಬಳೆ ಹರಕೆ   

ಚಿತ್ರದುರ್ಗ ಜಿಲ್ಲೆ ವಾಣಿಜ್ಯ ನಗರಿ ಚಳ್ಳಕೆರೆ ಪಟ್ಟಣದ ಆರಾಧ್ಯ ದೇವಿ (ನಗರ ದೇವತೆ) ಚಳ್ಳಕೆರೆಯಮ್ಮ ಅಪಾರ ಭಕ್ತ ಸಮೂಹವನ್ನು ಹೊಂದಿದ್ದಾಳೆ. ಹೀಗಾಗಿ ವರ್ಷಕ್ಕೊಮ್ಮೆ ನಡೆಯುವ ದೇವಿ ಜಾತ್ರೆ, ಉತ್ಸವ ಈ ಭಾಗದಲ್ಲಿ ಪ್ರಸಿದ್ಧ ಹಬ್ಬವಾಗಿ ಪರಿವರ್ತನೆಗೊಂಡಿದೆ.

ಈ ಹಿಂದೆ ತಾಲ್ಲೂಕು ಕೇಂದ್ರವಾಗಿದ್ದ ದೊಡ್ಡೇರಿಯಲ್ಲಿ ನೆಲೆಸಿದ್ದ ದೇವಿ ಚಳ್ಳಕೆರೆಯಮ್ಮ ಆ ಕಾಲದಲ್ಲಿ `ಓರಗಲ್ಲು~ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದ ಚಳ್ಳಕೆರೆಗೆ ಬಂದು ಬಳ್ಳಾರಿ ರಸ್ತೆಯಲ್ಲಿರುವ ಮತ್ತೊಬ್ಬ ದೇವಿ ಬಿಡಾರದಮ್ಮನ ಪಕ್ಕದಲ್ಲಿ ನೆಲೆಗೊಂಡಳು ಎಂಬ ಐತಿಹ್ಯವಿದೆ. ಈಕೆ ಹೆಂಗಳೆಯರ ಇಷ್ಟಾರ್ಥಗಳನ್ನು ಈಡೇರಿಸುವ ಮಾಹಾಮಾತೆಯಾಗಿದ್ದಾಳೆ.

ಮೂಲತಃ ಚಳ್ಳಕೆರೆಯಮ್ಮ ಪೆಟ್ಟಿಗೆ ದೇವರು. ಭಕ್ತಾದಿಗಳು ದೇವರನ್ನು ಪೆಟ್ಟಿಗೆ ಮೂಲಕ ಕೊಂಡೊಯ್ಯುತ್ತಿದ್ದರು. ಅದಕ್ಕಾಗಿ ಈ ಹೆಸರು.ಹೆಚ್ಚಾಗಿ ಮಹಿಳೆಯರು ತಮ್ಮ ಇಷ್ಟಾರ್ಥನೆರವೇರಿಸಿಕೊಳ್ಳಲು ಹಲವು ಹರಕೆಗಳನ್ನು ಮಾಡಿಕೊಳ್ಳುತ್ತಾರೆ.
 

ಸಂತಾನ ಭಾಗ್ಯ, ಹುಟ್ಟಿದ ಮಕ್ಕಳಿಗೆ ತಾಯಿ ಎದೆಹಾಲು ಕಡಿಮೆ ಆದಾಗ ದೇವಿಗೆ ಹರಕೆ ಮಾಡಿಕೊಳ್ಳುವುದು, ಮಕ್ಕಳಿಗೆ ದಡಾರ, ಸಿಡುಬು ಕಾಣಿಸಿಕೊಂಡರೆ ಧರ್ಮಭೇದ ಇಲ್ಲದೆ ದೇವಿಯ ಮೊರೆ ಹೋಗುವ ಪರಂಪರೆ ಇಲ್ಲಿನದು. ವರ್ಷಕ್ಕೊಮ್ಮೆ ನಡೆಯುವ ದೇವಿಯ ಜಾತ್ರೆಗೆ ಊರಿನ ಹೆಣ್ಣುಮಕ್ಕಳು ಹಾಗೂ ಸೊಸೆಯಂದಿರು ದೂರದ ಊರುಗಳಲ್ಲಿದ್ದರೂ ಬಂದು ಪೂಜೆ ಸಲ್ಲಿಸುವುದುಂಟು.
 
5 ವರ್ಷಗಳಿಗೊಮ್ಮೆ ದೇವಿಯ ದೊಡ್ಡ ಜಾತ್ರೆ ನಡೆಯುವ ಪ್ರತೀತಿ ಇರುವುದರಿಂದ ಇದೇ ಫೆಬ್ರವರಿ 27ರಿಂದ ಮಾರ್ಚ್3ರವರೆಗೆ ಒಂದು ವಾರಗಳ ಕಾಲ ದೊಡ್ಡ ಜಾತ್ರೆ ಮಹೋತ್ಸವ ನಡೆಯಲಿದೆ. ದೇಗುಲದ ಮುಂಭಾಗದಲ್ಲಿ ಮಹಿಳೆಯರು ಹರಕೆ ತೀರಿಸಲು ಅರ್ಪಿಸಿದ ಹಸಿರು ಬಳೆಗಳನ್ನು ಕಂಬಕ್ಕೆ ಹಾಕಲಾಗಿದೆ.

ಇನ್ನು ದೇಗುಲದ ವಾಸ್ತು ಶಿಲ್ಪವನ್ನು ಗಮನಿಸಿದರೆ ವಿಜಯನಗರ ಕಾಲದ ಶೈಲಿಗೆ ಹೋಲುವುದರಿಂದ ಸುಮಾರು 1800ರ ಆಸುಪಾಸಿನಲ್ಲಿ ನಿರ್ಮಾಣವಾಗಿರಬಹುದು ಎನ್ನಲಾಗಿದೆ. ಇಲ್ಲಿನ ಕಂಬಗಳ ನಾಲ್ಕು ಬದಿಗಳಲ್ಲಿ ಭೈರಾಣಿ, ಗಿಣಿ, ಕೋತಿ, ಸಿಂಹನಂದಿ, ಹೂಜಿ, ಕೃಷ್ಣ, ಹುಲಿ, ಮನುಷ್ಯ ಮುಖದ ಪಶು, ಗಣಪತಿ, ಹನುಮಂತನ ಚಿತ್ರಗಳಿವೆ.

ದೇಗುಲದ ಹೊರ ಕವಚದಲ್ಲಿ ಸರ್ಪವನ್ನು ನುಂಗುತ್ತಿರುವ ಸಿಂಹ, ಹುಲಿ ಸವಾರಿ ಮಾಡುತ್ತಿರುವ ನರಸಿಂಹ, ಎರಡು ದೇಹ ಒಂದು ತಲೆಯ ಸಿಂಹ, ಚತುರ್ಮುಖ ನಂದಿ, ಮೃದಂಗ ನುಡಿಸುತ್ತಿರುವ ಕಲಾವಿದನೊಬ್ಬನ ಅಪರೂಪದ ಕಲಾಚಿತ್ರಗಳು ಕಾಣಸಿಗುತ್ತವೆ.


ಹೆಚ್ಚಿನ ಮಾಹಿತಿಗೆ ದೇಗುಲದ ಗುರುಸಿದ್ದಪ್ಪ ಗೌಡ್ರ (8105273789) ಹಾಗೂ ಅರ್ಚಕ ಬಸವರಾಜ (9880130542).

ಉಚಿತ ಸೇವೆ
ಇಲ್ಲಿ ನಿತ್ಯ ಬೆಳಿಗ್ಗೆ 8ರಿಂದ ರಾತ್ರಿ 8ರ ವರೆಗೆ ವಿವಿಧ ಪೂಜಾ ಕಾರ್ಯಗಳು ನಡೆಯುತ್ತವೆ. ದೇವತೆಗೆ ಹಾಲು, ತುಪ್ಪದ ಅಭಿಷೇಕ, ಎಲೆಪೂಜೆ, ಕಾರ್ತಿಕ ಮಾಸದಲ್ಲಿ ಕುಂಕುಮಾರ್ಚನೆ, ಆಸಕ್ತ ಭಕ್ತಾದಿಗಳ ಇಚ್ಛೆ ಮೇರೆಗೆ ಪ್ರತೀ ಮಂಗಳವಾರ ಹಾಗೂ ಶುಕ್ರವಾರ ಅರಿಶಿಣ ಮತ್ತು ಕುಂಕುಮಾರ್ಚನೆ ಇರುತ್ತದೆ.  ಈ ಪೂಜೆಗಳಿಗೆ ಸೇವಾ ಶುಲ್ಕ ಇರುವುದಿಲ್ಲ.
                                                                                         

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.