ADVERTISEMENT

ಚಿನ್ನದ ಗಣೆಯ ಕೆನ್ನೆ ಮೇಲಿಕ್ಕೊಂಡು!

ಡಿ.ಎಂ.ಕುರ್ಕೆ ಪ್ರಶಾಂತ
Published 7 ಮೇ 2018, 19:30 IST
Last Updated 7 ಮೇ 2018, 19:30 IST
ರಾಮಣ್ಣನ ಗಣೆ ವಾದನ
ರಾಮಣ್ಣನ ಗಣೆ ವಾದನ   

ಕಾಡುಗೊಲ್ಲರದು ಇಂದಿಗೂ ಹೇರಳವಾಗಿ ಹಾಡು, ಹಸೆ, ಕುಣಿತ ಸೇರಿದಂತೆ ಜನಪದ ಕಾವ್ಯಗಳನ್ನು ಪೋಷಿಸಿಕೊಂಡು ಬರುತ್ತಿರುವ ಸಮುದಾಯ. ಇವರ ಹಟ್ಟಿಗಳು ಜನಪದ ಕಲೆಗಳ ಕಣಜಗಳು. ಇಂತಿಪ್ಪ ಕಾಡುಗೊಲ್ಲ ಸಮುದಾಯ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಕೊಟ್ಟ ಅನನ್ಯವಾದ ವಾದ್ಯ ಪರಿಕರ ಗಣೆ. ಇದಕ್ಕೆ ಸಮುದಾಯದಲ್ಲಿ ಧಾರ್ಮಿಕವಾಗಿಯೂ ಪ್ರಮುಖ ಸ್ಥಾನ.

ಏನಿದು ಗಣೆ: ಗಣೆ ಕೊಳಲಿನ ರೀತಿ ನುಡಿಸುವ ವಾದ್ಯ ಪರಿಕರ, ಆದರೆ ಕೊಳಲಲ್ಲ. ಕಾಡುಗೊಲ್ಲ ಸಮುದಾಯದಲ್ಲಿ ಗಣೆಗೆ ದೈವೀಕ ಸ್ಥಾನ ಇದೆ. ಕೊಳಲು ಸರಾಸರಿ ಒಂದು ಅಡಿ ಇದ್ದರೆ, ಗಣೆ ನಾಲ್ಕರಿಂದ ಐದು ಅಡಿ ಇರುತ್ತದೆ. ಕಾಡುಗೊಲ್ಲರ ಸಾಂಸ್ಕೃತಿಕ ನಾಯಕ ಜುಂಜಪ್ಪನ ಕಾವ್ಯ ಹಾಗೂ ವೀರಗಾರರ ಕಾವ್ಯಗಳನ್ನು ಹಾಡುವಾಗ ಗಣೆ ಬಳಕೆ ಕಡ್ಡಾಯ.

ಜುಂಜಪ್ಪನಿಂದಲೇ ಗಣೆ ತಮಗೆ ದೊರೆಯಿತು ಎನ್ನುವುದು ಈ ಸಮುದಾಯದ ನಂಬಿಕೆ. ಇದಕ್ಕೆ ಸಾಕ್ಷಿ ಎನ್ನುವಂತೆ ಚಿನ್ನದ ಗಣೆಯ ಕೆನ್ನೆ ಮೇಲಿಕ್ಕೊಂಡು
ಹತ್ತಿದನೊ ಮದುಗುದು ಗುಡ್ಡಾವ ಜುಂಜಪ್ಪ
ಗಣೆ ಊದಿ ದನವ ಕರೆದಾನು... 
ಎಂದು ಜುಂಜಪ್ಪನ ಕಾವ್ಯದಲ್ಲಿ ಪ್ರಸ್ತಾಪವಾಗುತ್ತದೆ.

ADVERTISEMENT

ಬಹಳ ಕಟ್ಟುನಿಟ್ಟಿನಿಂದ ಗಣೆ ರೂಪಿಸಲಾಗುತ್ತದೆ. ಹುತ್ತದ ಮೇಲೆ ಬೆಳೆದಿರುವ ಹದವಾದ ಬಿದಿರು ಗುರುತಿಸಿ ಕೋರುಮಗ (ಮದುವೆಯಾಗದ ಹುಡುಗ) ಸ್ನಾನ ಮಾಡಿ ಮಡಿಯಲ್ಲಿ ಬಿದಿರು ಕತ್ತರಿಸಬೇಕು. ಆ ಬಿದಿರು, ಕೊಳಲಿಗಿಂತ ಸ್ವಲ್ಪ ದಪ್ಪವಾಗಿರುತ್ತದೆ. ಕಾಯಿಸಿದ ಕಬ್ಬಿಣದ ಸಲಾಕೆಯಿಂದ ಊದಲು ಮತ್ತು ನಾದ ಹೊರ ಹುಮ್ಮಲು ರಂಧ್ರ ಮಾಡುವರು. ಬಿದಿರಿನ ಮತ್ತೊಂದು ಬದಿಯನ್ನು ಮೇಣದಿಂದ ಮುಚ್ಚಲಾಗುತ್ತದೆ. ಗಣೆ ಸಿದ್ಧವಾದ ಮೇಲೆ ಪಶುಪಾಲನಾ ವೃತ್ತಿಯ ಕಾಡುಗೊಲ್ಲರು ಹಾಲು ಮತ್ತು ಗಂಜಲಿನಿಂದ ಅದನ್ನು ತೊಳೆಯುವರು. 
 


ಗಣೆ ರಾಮಣ್ಣ

‘ಕಾಡುಗೊಲ್ಲರಿಗೆ ಮಾತ್ರ ಗಣೆ ನುಡಿಸುವುದು ಗೊತ್ತು. ಊದುವವನಿಗೆ ಜುಂಜಪ್ಪ ಹಾಗೂ ವೀರಗಾರರ ಕಾವ್ಯ ಗೊತ್ತಿರಬೇಕು. ಪದ ಹಾಡುವವನ ಧ್ವನಿ ಏರಿಳಿತಕ್ಕೆ ತಕ್ಕಂತೆ ನುಡಿಸಬೇಕು. ನಿರಂತರವಾಗಿ ಪದ ಹಾಡುವುದು ಕಷ್ಟ. ಇದನ್ನು ಅರಿತು ಗಣೆ ನುಡಿಸಬೇಕು’ ಎನ್ನುವರು ಸಮುದಾಯದವರೇ ಆದ ತುಮಕೂರು ವಿಶ್ವವಿದ್ಯಾಲಯದ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಹೊನ್ನಗಾನಹಳ್ಳಿ ಕರಿಯಣ್ಣ.

ಗಣೆಯಲ್ಲಿ ದೇವರ ಗಣೆ, ಹವ್ಯಾಸಿ ಗಣೆ ಮತ್ತು ಊರಾಡೊ ಗಣೆ ಎನ್ನುವ ವಿಧಗಳು ಇವೆ. ದೇವರ ಗಣೆ ದೇವಾಲಯಗಳಲ್ಲಿ ಇರುತ್ತದೆ. ಇದನ್ನು ಜುಂಜಪ್ಪನ ಪ್ರತಿನಿಧಿಯಾಗಿ ಪೂಜಿಸಲಾಗುತ್ತದೆ. ಭವಿಷ್ಯ ಕೇಳುವವರು ಮತ್ತು ಕಷ್ಟ ಪರಿಹಾರಕ್ಕೆ ಭಕ್ತರು ಇದರ ಮೊರೆ ಹೋಗುವರು. ದೇವಾಲಯದ ಪೂಜಾರಿ ಕರಿಯ ಕಂಬಳಿಯ ಮೇಲೆ ಗಣೆ ಹಿಡಿದು ಕುಳಿತು ಜುಂಜಪ್ಪನನ್ನು ಆಹ್ವಾನಿಸಿಕೊಳ್ಳುವರು. ಗಣೆ ಊದುತ್ತ ಕಷ್ಟ ಎಂದು ಬಂದವರಿಗೆ ಪರಿಹಾರಗಳನ್ನು ಹೇಳುವರು. ಅಂತಿಮವಾಗಿ ಗಣೆ ಊದಿ ನಿನ್ನ ಕೆಲಸ ಆಗುತ್ತದೆ ಹೋಗು ಎಂದು ಕಳುಹಿಸುವರು.

ಜುಂಜಪ್ಪನ ಕಾವ್ಯವನ್ನು ಒಬ್ಬರು ಹಾಡುತ್ತಿದ್ದರೆ ಮತ್ತೊಬ್ಬರು ಆ ಕಾವ್ಯಕ್ಕೆ ತಕ್ಕಂತೆ ಗಣೆ ನುಡಿಸುವರು. ಹೀಗೆ ನುಡಿಸುವುದನ್ನು ಹವ್ಯಾಸಿ ಗಣೆ ಎನ್ನುವರು. ಕೇಳುಗರನ್ನು ಸೆಳೆಯುವಂತೆ ಹವ್ಯಾಸಿಗಳು ನುಡಿಸುವರು. ಇಲ್ಲಿ ಕೋಲಾಟದ ದಾಟಿ, ಸಂಭಾಷಣೆ ದಾಟಿ, ಮಂಗಳಾರತಿ ಹಾಡುಗಳ ದಾಟಿ, ಸೋಬಾನೆ ದಾಟಿಯಲ್ಲಿ ನುಡಿಸಲಾಗುತ್ತದೆ.

ಮಲೆಮಹದೇಶ್ವರ ಸ್ವಾಮಿಗೆ ಕಂಸಾಳೆಯವರು, ಮೈಲಾರ ದೇವರಿಗೆ ಗೊರವರು ಇದ್ದಂತೆ ಕಾಡುಗೊಲ್ಲರಿಗೆ ಕಥೋಪಜೀವಿಗಳು ಇದ್ದಾರೆ. ಇವರು ಜುಂಜಪ್ಪನ ಮಹಿಮೆ ಹೇಳುತ್ತಾ ಗಣೆ ಊದುತ್ತ ಜನರ ಮನೆಗಳಿಗೆ ಹಾಗೂ ಒಕ್ಕಲಿನವರು ಇರುವಲ್ಲಿ ಹೋಗುವರು. ಇವರ ಊದುವ ಗಣೆಯನ್ನು ಊರಾಡೊ ಗಣೆ ಎಂದು ಕರೆಯಲಾಗುತ್ತದೆ. ಈ ಗಣೆಗೆ ಬೆಳ್ಳಿಯ ನಾಗಾಭರಣ ತೊಡಿಸಿ, ನವಿಲುಗರಿಗಳನ್ನು ಸಿಕ್ಕಿಸಿ ಸಿಂಗಾರ ಮಾಡಿರುವರು. ಹೀಗೆ ಮೂರು ವಿಧದ ಗಣೆಗಳ ಬಗ್ಗೆಯೂ ಪೂಜ್ಯ ಭಾವ ಸಮುದಾಯದಲ್ಲಿ ಇದೆ.

‘ನಮ್ಮ ಹಟ್ಟಿಯಲ್ಲಿ ನಮ್ಮ ಅಣ್ಣ ಗಣೆ ಊದುತ್ತಿದ್ದ. ಜುಂಜಪ್ಪನ ನೆಲೆ ಕಳುವರಹಳ್ಳಿಯಾದ ಕಾರಣ ಬಹುಶಃ ಗಣೆಯ ಮೂಲ ಶಿರಾ ತಾಲ್ಲೂಕು ಎನಿಸುತ್ತದೆ. ಕಾಡುಗೊಲ್ಲರ ಹಿರೀಕರಾದ ಪಾಲಹಳ್ಳಿ ಚಿತ್ರದೇವರು, ಹಿರಿಯೂರು ಕಾಟುಂಲಿಂಗೇಶ್ವರ, ಹೆತ್ತಪ್ಪನ ದೇವಸ್ಥಾನಗಳಲ್ಲಿ ಗಣೆ ಇರುತ್ತದೆ. ವೀರಗಾರರು, ಸಮುದಾಯಕ್ಕೆ ಹೋರಾಡಿ ಮಡಿದವರ ಗುಡ್ಡೆಗಳಲ್ಲಿ, ಹಿರಿಯೂರು, ಚಳ್ಳಕೆರೆ, ಗುಬ್ಬಿ ತಾಲ್ಲೂಕು ಚೇಳೂರು, ಹಾಗಲವಾಡಿ, ಆಂಧ್ರಪ್ರದೇಶದ ಮಡಕಶಿರಾ ಸೇರಿ‌ದಂತೆ ಜುಂಜಪ್ಪ ಎಲ್ಲಿ ಎಲ್ಲಿ ದನಗಳನ್ನು ಕಾದಿದ್ದಾನೋ ಅಲ್ಲೆಲ್ಲಾ ಗಣೆ ನುಡಿಸುವರು ಇದ್ದಾರೆ’ ಎಂದು ಮಾಹಿತಿ ನೀಡುವರು ಕರಿಯಣ್ಣ.

ಜಂಜುಪ್ಪನಿಗಿಂತ ಹಿರಿಯರಾದ ಮಾರುಮುತ್ತಪ್ಪ, ಹೆತ್ತಪ್ಪ ಅವರ ಸಮಯದಲ್ಲಿ ಗಣೆ ಪ್ರಸ್ತಾಪವಾಗುವುದಿಲ್ಲ. ಚೇಳೂರು ಪಾಳೇಗಾರ ರಂಗಪ್ಪನಾಯಕ, ಜುಂಜಪ್ಪನ ಬಳಿ ಇದ್ದ ಬಲಶಾಲಿ ಹೋರಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿರುತ್ತಾನೆ. ಇದು ಜುಂಜಪ್ಪನಿಗೆ ಕನಸಿನಲ್ಲಿ ಗೊತ್ತಾಗುತ್ತದೆ. ಜುಂಜಪ್ಪ ಕಳುವರಹಳ್ಳಿಯಿಂದ, ಗುಬ್ಬಿ ತಾಲ್ಲೂಕಿನ ಮದಗದ ಗುಡ್ಡಕ್ಕೆ ಬಂದು ಗಣೆ ನುಡಿಸುವನು. ಆ ಗಣೆ ಸದ್ದು ಕೇಳಿದ ಹೋರಿ, ‘ನನ್ನ ಒಡೆಯ ಜುಂಜಪ್ಪ ಬಂದಿದ್ದಾನೆ’ ಎಂದು ಸರಪಳಿ ಹರಿದು, ಕಂಬ ಮುರಿದು ಮದಗದ ಗುಡ್ಡಕ್ಕೆ ಬರುತ್ತದೆ. ಇದು ಕಾವ್ಯದಲ್ಲಿ ಇದೆ. ಗಣೆಗೆ ಎಷ್ಟು ಶಕ್ತಿ ಇತ್ತು ಎನ್ನುವುದನ್ನು ಇದು ಒಂದು ನಿದರ್ಶನ ಎಂದು ವಿಶ್ಲೇಷಿಸುವರು.


ಗಣೆ

‘ಕೊಳಲು ಊದಲು ಕನಿಷ್ಠ ಉಸಿರು ಸಾಕು. ಆದರೆ ಮಾರುದ್ದದ ಗಣೆ ಊದಬೇಕು ಎಂದರ ಉಸಿರು ಕಟ್ಟಲೇಬೇಕು. ಧ್ಯಾನಸ್ಥರು ಮಾತ್ರ ಕಲಿಯಲು ಸಾಧ್ಯ. ಬೇವಿನಹಳ್ಳಿ ಕೊರಲೆ ತಿಮ್ಮಯ್ಯ, ವಿಭೂತಿ ನಾಗಣ್ಣ, ಗಣೆ ತಿಮ್ಮಣ್ಣ, ಬಂದಕುಂಟೆ ದೊಡ್ಡ ತಿಮ್ಮಯ್ಯ ಗಣೆ ನುಡಿಸುವುದರಲ್ಲಿ ಪ್ರಸಿದ್ಧರು. ಆದರೆ ಇಂದಿನ ತಲೆಮಾರಿಗೆ ಗಣೆ ದೂರವಾಗಿಯೇ ಇದೆ.‌ ಉಸಿರುಕಟ್ಟಿ ಗಣೆ ನುಡಿಸುವ ಸಮುದಾಯದ ಹಿರಿಯರು ಇಳಿಪ್ರಾಯದಲ್ಲಿ ಇದ್ದಾರೆ.

ಮುಟ್ಟು ಚಟ್ಟಾಗುತ್ತದೆ ಎಂದು ಗಣೆಯನ್ನು ಈ ಹಿಂದೆ ಬೇರೆಯವರಿಂದ ಮುಟ್ಟಿಸುತ್ತಿರಲಿಲ್ಲ. ಅಧ್ಯಯನಕಾರರರು ಬಂದ ತರುವಾಯ ಈ ನಿಯಮ ಸಡಿಲವಾಯಿತು. ಮಧ್ಯಕರ್ನಾಟಕ ಶಿಶುಪಾಲನೆ ಬಿಂಬಿಸುವ ಏಕೈಕ ಕಾವ್ಯ ಎಂದರೆ ಜುಂಜಪ್ಪನ ಕಾವ್ಯ ಎಂದು ಹೇಳುವರು ಕರಿಯಣ್ಣ.

ನಿದ್ದೆಯಿಂದ ಎಚ್ಚರಿಸುವ ಗಣೆ: ಒಂದು ಅವಧಿಯಲ್ಲಿ ಕುರಿಗಳ ರಕ್ಷಣೆಗೂ ಗಣೆ ಬಳಸಲಾಗುತ್ತಿತ್ತು. ರಾತ್ರಿ ಮಂದೆಯಲ್ಲಿದ್ದ ಕುರಿಗಳನ್ನು ಕಾಡು ಪ್ರಾಣಿಗಳು ಇಲ್ಲವೆ ಕಳ್ಳರು ಹೊತ್ತೊಯ್ಯುತ್ತಿದ್ದರು. ಜನನಿಬಿಡ ಪ್ರದೇಶದಿಂದ ದೂರದಲ್ಲಿ ಕುರಿ ಮಂದೆ ಹಾಕಬೇಕಾಗುತ್ತಿತ್ತು. ಆಗ ಮಂದೆ ಕಾಯುತ್ತಿರುವವರು ಎಚ್ಚರವಾಗಿದ್ದಾರೆ ಎನ್ನುವುದನ್ನು ಹೇಳಲು ಕುರಿಗಾರರು ರಾತ್ರಿ ಪೂರ್ತಿ ಗಣೆ ಊದುತ್ತಿದ್ದರು. 

ಗಣೆ ಗೌರವ: ‌ಕಳುವರಹಳ್ಳಿಯಲ್ಲಿ ಪ್ರತಿ ವರ್ಷದ ಶಿವರಾತ್ರಿಯಂದು ನಡೆಯುವ ಶಿವೋತ್ಸವದಲ್ಲಿ ‘ಗಣೆ ಗೌರವ’ ನೀಡಲಾಗುತ್ತಿದೆ. ಇದು ಗಣೆಯ ಬಗ್ಗೆ ಇರುವ ಗೌರವ ಮತ್ತು ಮಹತ್ವವನ್ನು ಸಾರುತ್ತದೆ. ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ, ರಂಗಕರ್ಮಿ ಪ್ರಸನ್ನ ಹಾಗೂ ರೈತ ಮುಖಂಡ ಕಡಿದಾಳ್ ಶಾಮಣ್ಣ ಅವರನ್ನು ಈ ಹಿಂದಿನ ವರ್ಷಗಳಲ್ಲಿ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಕರಿಯ ಕಂಬಳಿಯ ಮೇಲೆ ಕೂರಿಸಿ, ಗಣೆ ನೀಡಿ ಮುತ್ತುಗದ ಹೂಗಳ ಸಿಂಚನ ಮಾಡಿ ಗೌರವ ಸಲ್ಲಿಸಲಾಗುತ್ತದೆ. ಇಡೀ ರಾತ್ರಿ ತತ್ವಪದಗಳನ್ನು ಹಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.