ADVERTISEMENT

ನಡೀರಿ ಚಂದ್ರಗುತ್ತಿ ಕೋಟೆಗೆ...

ಸುನೀಲ್ ಬಾರ್ಕೂರ್
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ನಡೀರಿ ಚಂದ್ರಗುತ್ತಿ ಕೋಟೆಗೆ...
ನಡೀರಿ ಚಂದ್ರಗುತ್ತಿ ಕೋಟೆಗೆ...   

ನೋಡಿದಷ್ಟು ದೂರಕ್ಕೂ ಹಸಿರನ್ನು ಹೊದ್ದು ಮಲಗಿರುವ ಬೆಟ್ಟ ಗುಡ್ಡಗಳು, ಸುಂಯ್ಯನೆ ಬೀಸುತ್ತ ಮೈಮನಕ್ಕೆ ಕಚಗುಳಿಯನ್ನಿಡುತ್ತಿರುವ ತಂಗಾಳಿ, ಪೂರ್ತಿ ಆಕಾಶಕ್ಕೇ ಸುವರ್ಣವನ್ನು ಲೇಪಿಸಿ ಆ ನಶೆಯಲ್ಲಿ ಮುಳುಗುತ್ತಿರುವ ಸೂರ್ಯ.

ಮತ್ತೇನು ಬೇಕು ಸ್ವರ್ಗದ ಅನುಭವವನ್ನು ಭೂಮಿಯಲ್ಲೇ ನಿಮಗೆ ನೀಡಲು? ಆದರೆ, ಈ ಅನುಭವ ಸವಿಯೋದಕ್ಕೆ ಒಂದಿಷ್ಟು ಚಾರಣ, ಮತ್ತೊಂದಿಷ್ಟು ಸಾಹಸ ಮಾಡಲು ನೀವು ತಯಾರಿದ್ದಲ್ಲಿ ನಡೀರಿ ಚಂದ್ರಗುತ್ತಿಗೆ.

ಪುರಾಣದ ಪರಶುರಾಮನ ಮಾತೆ ಶ್ರೀ ರೇಣುಕಾಂಬೆಯ ದೇವಸ್ಥಾನದಿಂದ ನಾಡಿನೆಲ್ಲೆಡೆ ಪ್ರಸಿದ್ಧಿಯಾಗಿರುವ ಚಂದ್ರಗುತ್ತಿಯು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿದೆ. ಇದೇ ದೇವಸ್ಥಾನದ ಪಕ್ಕದಲ್ಲಿರುವ ದಾರಿಯಿಂದ ಮುನ್ನಡೆದು ಒಂದಿಷ್ಟು ಚಾರಣ ಮಾಡಿದರೆ ಸಿಗುವುದೇ ಈ ಚಂದ್ರಗುತ್ತಿಯ ಕೋಟೆ.

ADVERTISEMENT

ಮೊದಲು ಚಂದ್ರಗುಪ್ತಪುರವೆಂಬ ಹೆಸರಿನಿಂದ ಪ್ರಸಿದ್ಧವಾಗಿದ್ದ ಚಂದ್ರಗುತ್ತಿಯ ಈ ಕೋಟೆಯನ್ನು ಕದಂಬರು ಮೂರನೆಯ ಶತಮಾನದಲ್ಲಿ ಕಟ್ಟಿದರು. ನಂತರ 13ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಬಚ್ಚಣ್ಣನೆಂಬ ಸ್ಥಳೀಯ ನಾಯಕ ಇಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಆತನ ಆಳ್ವಿಕೆಯಲ್ಲಿ ಅಭಿವೃದ್ಧಿಗೊಂಡ ಈ ಪ್ರದೇಶವು ಮುಂದೆ ಕೆಳದಿ ನಾಯಕರ ಆಳ್ವಿಕೆಗೆ ಒಳಪಟ್ಟಿತೆಂದೂ ಅಲ್ಲಿರುವ ಫಲಕಗಳು ಹೇಳುತ್ತವೆ. ಸಮುದ್ರ ಮಟ್ಟದಿಂದ ಸುಮಾರು 850 ಅಡಿ ಎತ್ತರದಲ್ಲಿರುವ ಈ ಕೋಟೆಗೆ ತಲುಪುವ ಕಲ್ಲಿನ ಮೆಟ್ಟಿಲುಗಳುಳ್ಳ ಹಾದಿ ದಟ್ಟ ಅರಣ್ಯದಿಂದ ಸಾಗಿ ಹೋಗುತ್ತದೆ.

ಮೊದಲ ಪ್ರವೇಶದ್ವಾರವು ಕಾಲದ ಏಟಿಗೆ ತತ್ತರಿಸಿ ಈಗಾಗಲೇ ಸುಸ್ತಾಗಿದ್ದು ಜೀರ್ಣಾವಸ್ಥೆಯನ್ನು ತಲುಪಿದೆ. ಇನ್ನಷ್ಟು ಮುಂದೆ ಸಾಗಿ ಹೋದರೆ ಸಿಗುವ ಎರಡನೆಯ ದ್ವಾರವು ಆಗಿನ ಕಾಲದ ರಕ್ಷಣಾ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುವಂತಿದ್ದು ಮುನ್ನುಗ್ಗುತ್ತಿರುವ ಶತ್ರುಗಳನ್ನು ಹಿಮ್ಮೆಟ್ಟಿಸುವಲ್ಲಿ ಪೂರಕವಾಗುವಂತೆ ರಚಿಸಲಾಗಿದೆ. ಮೆಟ್ಟಿಲುಗಳನ್ನು ಹತ್ತುತ್ತಾ ಮುಂದೆ ಸಾಗುತ್ತಿದ್ದಂತೆಯೆ ಅಕ್ಕಪಕ್ಕದಲ್ಲಿ ಗಮನಿಸಿದರೆ ಕಾಣಬರುವ ಅವಶೇಷಗಳು ಅಲ್ಲಿ ಸೈನ್ಯದ ಮುಖ್ಯಸ್ಥರು ಉಳಿದುಕೊಳ್ಳುತ್ತಿದ್ದರೆಂಬ ಸುಳಿವನ್ನು ನೀಡುತ್ತವೆ.

ಕೋಟೆ ಪ್ರವೇಶಿಸುತ್ತಿದ್ದಂತೆಯೇ ಕಾಣಬರುವ ಐದು ಹಳ್ಳಗಳು ಅಲ್ಲಿನವರಿಗಾಗಿ ಆಗಿನ ನೀರಿನ ವ್ಯವಸ್ಥೆಯ ಕುರುಹುಗಳನ್ನು ನೀಡುತ್ತವೆ. ಅಲ್ಲೇ ಕುದುರೆಗಳಿಗೆ ಕುಡಿಯುವ ನೀರಿಗಾಗಿ ದೊಡ್ಡ ಹಳ್ಳವನ್ನು ನಿರ್ಮಿಸಿರುವುದನ್ನು ನೀವು ಕಾಣಬಹುದು. ದೀಪದ ಎಣ್ಣೆಯನ್ನು ಕೂಡಿಡಲು ಒಂದು ಎಣ್ಣೆ ಬಾವಿ, ಮದ್ದುಗುಂಡುಗಳ ಶೇಖರಣೆಗಾಗಿಯೇ ಒಂದು ಮದ್ದಿನ ಪಟ್ಟಣ ಇದ್ದ ಕುರುಹುಗಳಿವೆ.


 

ಅಷ್ಟೆತ್ತರದಲ್ಲಿ ಇನ್ನೂ ಶುದ್ಧನೀರನ್ನು ಉಣಿಸುವ ಕೋಟೆಬಾವಿ ಗಮನಸೆಳೆಯುತ್ತದೆ. ಇಳಿಜಾರಿನಲ್ಲೂ ತಮ್ಮನ್ನು ಸಂಭಾಳಿಸಿಕೊಂಡು ಇಲ್ಲಿಯವರೆಗೂ ಊರ ವ್ಯಾಪ್ತಿಯನ್ನು ರಕ್ಷಿಸುವ ಕಾಯಕವನ್ನು ಮಾಡುತ್ತಿರುವ, ಮೇಲೆ ಹತ್ತಿ ನಿಂತರೆ ಸುತ್ತಮುತ್ತಲ ಪ್ರಕೃತಿ ಸೌಂದರ್ಯದ ವಿರಾಟದರ್ಶನವನ್ನು ಮಾಡಿಸುವ ದುರ್ಗಿ ದಿಬ್ಬ, ಈ ಕೋಟೆಯ ನಿರ್ಮಾಣದ ಹಿಂದಿರುವ ಯೋಜನೆ ಮತ್ತು ಪರಿಶ್ರಮದ ಪರಿಚಯವನ್ನು ನಿಮಗೆ ನೀಡುತ್ತದೆ.

ಕಾಡಿನಿಂದ ಸಾಗಿ ಹೋಗುವ ದಾರಿ, ಪೂರ್ತಿದಾರಿಯುದ್ದಕ್ಕೂ ಆವರಿಸಿ ಸೆಕೆಯ ಸುಳಿವನ್ನೂ ಬಿಡದ ದಟ್ಟಕಾಡು, ಆಗಾಗ ದಾರಿಹೋಕರತ್ತ ಇಣುಕಿ ಮಾಯವಾಗುವ ಪಕ್ಷಿಸಂಕುಲ, ಕೋಟೆ ತಲುಪಿದ ನಂತರ ನಿಮ್ಮನ್ನು ಸ್ವಾಗತಿಸುವ ತಂಗಾಳಿ, ವಾಪಸ್ಸು ಬಂದನಂತರವೂ ಮತ್ತೆ ಮತ್ತೆ ಕಾಡುವ ನಿಸರ್ಗ ಸೌಂದರ್ಯ – ಈ ಎಲ್ಲ ಕಾರಣಗಳಿಂದ ಈ ಬೆಟ್ಟ ಚಾರಣಿಗರಿಗೆ ಹೇಳಿ ಮಾಡಿಸಿದಂತಹ ಪ್ರದೇಶ. ಸಾಗುವ ದಾರಿಯು ಅಡವಿಯಲ್ಲಿ ಹಾದು ಹೋಗುವುದರಿಂದ ಇಲ್ಲಿಗೆ ಹೋಗುವಾಗ ಗುಂಪಿನಲ್ಲಿ ಪಯಣಿಸುವುದು ಉತ್ತಮ. ಚಂದ್ರಗುತ್ತಿಯು ಒಂದು ಪುಟ್ಟ ಊರಾಗಿದ್ದು, ಅಲ್ಲಿರುವ ಸೌಲಭ್ಯಗಳೂ ನಿಯಮಿತವಾಗಿದ್ದು, ನಿಮ್ಮ ತಂಡದಲ್ಲಿ ಹೆಚ್ಚು ಜನರಿದ್ದರೆ ಆಹಾರದ ವ್ಯವಸ್ಥೆ ಮೊದಲೇ ಮಾಡಿಕೊಂಡು ಹೋಗುವುದು ಅಪೇಕ್ಷಣೀಯ. ಉತ್ತರ ಕರ್ನಾಟಕದ ಭಾಗದವರು ಶಿರಸಿ ಅಥವಾ ಹಾನಗಲ್‌ ಮೂಲಕ ಹಾಗೂ ದಕ್ಷಿಣ ಕರ್ನಾಟಕದವರು ಶಿವಮೊಗ್ಗೆಯ ಮೂಲಕ ಸಿದ್ದಾಪುರಕ್ಕೆ ಬಂದು ಚಂದ್ರಗುತ್ತಿಯನ್ನು ತಲುಪಬಹುದು. ಬೇಸಿಗೆಯ ರಜೆಗೆ ಕುಟುಂಬದ ಸಮೇತ ಹೋಗಿ ಆನಂದಿಸಲು ಒಂದು ಉತ್ತಮ ತಾಣ.
**
ಈ ತಾಣಕ್ಕೆ ಹೀಗೆ ಬನ್ನಿ...
ಚಂದ್ರಗುತ್ತಿಯು ಸೊರಬ (18 ಕಿ.ಮೀ. ದೂರ), ಸಾಗರ (50 ಕಿ.ಮೀ), ಸಿದ್ದಾಪುರ (20 ಕಿ.ಮೀ.), ಶಿರಸಿ (38 ಕಿ.ಮೀ) ಮತ್ತು ಬನವಾಸಿಗೆ (14 ಕಿ.ಮೀ) ಹತ್ತಿರದಲ್ಲಿದೆ. ಸೊರಬ ಹಾಗೂ ಸಿದ್ದಾಪುರಗಳಿಂದ ಈ ತಾಣಕ್ಕೆ ಸಾಕಷ್ಟು ಬಸ್‌ಗಳಿವೆ. ಖಾಸಗಿ ವಾಹನದಲ್ಲಿ ಹೋದರೆ ಬೆಟ್ಟದ ಬುಡದವರೆಗೂ ಹೋಗಬಹುದು. ಹುಣ್ಣಿಮೆ ಮತ್ತು ಜಾತ್ರೆಯ ಸಮಯದಲ್ಲಿ ತುಸು ದೂರದಿಂದ ನಡೆದುಕೊಂಡು ಹೋಗುವುದು ಅನಿವಾರ್ಯ.
**
ಚಿತ್ರಗಳು : ಗೋಪಾಲ ಬಾರ್ಕೂರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.