ADVERTISEMENT

ನಲುಗುವ ನಗು

ಕಬ್ಬಿನ ನೆಲೆಯಲಿ

ಶಿವಾನಂದ ಕಳವೆ
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST

ಸಕ್ಕರೆ ಸೀಮೆಯ ಸ್ವರ್ಗದ ಒಡೆಯರೆಲ್ಲ  ಸೌಧದಲ್ಲಿ ಸುಖವಾಗಿರುವಂತಿದೆ. ಕಬ್ಬು ಬೆಳೆಗಾರರು ಹೋರಾಡಿ ಬೆಲೆ ನಿಗದಿಗೆ ಬಸವಳಿದಿದ್ದಾರೆ.

ಹಲವು ಸುತ್ತಿನ ಹಗ್ಗ ಜಗ್ಗಾಟದ ಬಳಿಕವೂ ಸಮಸ್ಯೆ ಜಡವಾಗಿದೆ. ಕಬ್ಬಿನ ಹೋರಾಟದ ಗದ್ದಲದಲ್ಲಿ ಇಷ್ಟು ಕಾಲ ಮರೆಯಲ್ಲಿದ್ದ ಕೂಲಿ ಮಕ್ಕಳ ಮುಗ್ಧ ಮುಖ ಈಗ ಎದ್ದು ಕಾಣುತ್ತಿದೆ. ನೆರೆ ರಾಜ್ಯದ ಮರಾಠಿಗರು, ಇಲ್ಲವೇ ಕೂಲಿಕಷ್ಟಕ್ಕೆ ಒಗ್ಗಿದ ವಿಜಾಪುರ, ಗುಲ್ಬರ್ಗಾದ ಲಮಾಣಿಗರು ಕಬ್ಬಿನ ಹೊಲದಲ್ಲಿ, ಕಾರ್ಖಾನೆ ಮಗ್ಗುಲಲ್ಲಿ ಕೆಲಸಕ್ಕೆ ನಿಂತಿದ್ದಾರೆ. ಇವರೆಲ್ಲರ ಕರುಳ ಕುಡಿಗಳು ಜೊತೆಗಿವೆ.

ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಕಬ್ಬಿನ ನೆಲೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮುದ್ದು ಕಂದಮ್ಮಗಳಿದ್ದಾರೆ. ಶಿಕ್ಷಣದ ಗಂಧವಿಲ್ಲ, ಆರೋಗ್ಯದ ಸೌಲಭ್ಯವಿಲ್ಲ, ಪೌಷ್ಟಿಕ ಆಹಾರದ ಅವಕಾಶವಿಲ್ಲ. ಆಳುವ ವ್ಯವಸ್ಥೆ ಕಣ್ಣುಮುಚ್ಚಿ ಕುಳಿತ ಪರಿಣಾಮ ಬೆಳೆಯುವ ಶಿಶುಗಳೆದುರು ದಾರುಣ ಬದುಕಿನ ನರಕಲೋಕ ಅನಾವರಣವಾಗಿದೆ.

ರಾಜ್ಯದಲ್ಲಿ ಕಬ್ಬು ಕಟಾವು ಆರಂಭವಾಗಿ ಮೂರು ತಿಂಗಳು ಭರ್ತಿಯಾಗುತ್ತಿದೆ. ಕೂಲಿಗಳ ಸೈನ್ಯ ಶ್ರಮಿಸುತ್ತಿದೆ. ಮಹಾರಾಷ್ಟ್ರದ ಬೀಡ, ನಾಂದೇಡ್, ತಲಕಣಿ, ಉಸ್ಮನಾಬಾದ್, ಜತ್, ಯವತ್ತನಾಳ್ ಮುಂತಾದ ಪ್ರದೇಶಗಳಿಂದ ಪ್ರತಿ ವರ್ಷ ಕೂಲಿಗಳು ಬರುತ್ತಾರೆ. ಈ ವರ್ಷ ಸುಮಾರು ೭೫ ಸಾವಿರ ಕಾರ್ಮಿಕರು ಆಗಮಿಸಿದ್ದಾರೆ. ಕಬ್ಬಿನ ಕಾರ್ಖಾನೆ ಸುತ್ತಲಿನ ೧೦-–೧೫ ಕಿಲೋ ಮೀಟರ್ ಸನಿಹದ ಪ್ರದೇಶದಿಂದ ಚಕ್ಕಡಿಯಲ್ಲಿ ಕಬ್ಬು ಸಾಗಿಸುತ್ತಾರೆ. ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ಸಾಗಿಸಲು ದೂರದ ಹೊಲದಲ್ಲಿ ಕಬ್ಬು ಕಟಾವು ಕಾರ್ಯದಲ್ಲಿ ನಿರತರಾಗಿದ್ದಾರೆ.

ಕಬ್ಬಿನ ಗರಿಗಳ ಪುಟ್ಟ ಗುಡಿಸಲು ಇವರದು. ಸಂಸಾರ ಸಹಿತ ವರ್ಷದ ಎಂಟು ತಿಂಗಳು ರಾಜ್ಯದ ಸಕ್ಕರೆ ಸೀಮೆಯಲ್ಲಿ ಇವರೆಲ್ಲರ ಠಿಕಾಣಿ. ಪ್ರತಿ ದಂಪತಿಗಳ ಜೊತೆ ಎರಡು ಮೂರು ಮಕ್ಕಳಿವೆ. ಮೂರು ವರ್ಷದಿಂದ ಎಂಟು ವರ್ಷದ ಹರೆಯದ ಪುಟಾಣಿಗಳಿವೆ. ಕಾರ್ಮಿಕರಲ್ಲಿ ಹೆಚ್ಚಿನವರು ೨೦-–೪೫ರ ಹರೆಯದವರು, ದುಡಿಯುವ ಹಂಬಲದವರು. ಹತ್ತು ದಿನದ ಬಾಣಂತಿಯರು,ತುಂಬು ಗರ್ಭಿಣಿಯರಿಗೂ ಇಲ್ಲಿ ವಿಶ್ರಾಂತಿಯಿಲ್ಲ. ನೂರಾರು ಚಕ್ಕಡಿಗಳ ಸಾಲು ರಸ್ತೆಯಲ್ಲಿ ಸಾಗುವಾಗ ಕಬ್ಬಿನ ಹೊರೆಗಳ ಮೇಲೆ ಎಳೆ ಶಿಶುಗಳ ಜೊತೆ ಕುಳಿತು ಸಾಗುವ ದೃಶ್ಯ  ನೋಡಬಹುದು. ಮೈಕೊರೆಯುವ ಕಬ್ಬಿನ ಚುಂಗಿನ ನಡುವೆ ಎಲ್ಲರ ಬಾಳ್ವೆ ಸಾಗಿದೆ. ಮುಂಜಾನೆ ಮೂರು ಗಂಟೆಗೆ ಚಕ್ಕಡಿ ಏರಿ ಅಪ್ಪ ಅಮ್ಮ ಕಬ್ಬು ಕಟಾವಿಗೆ ಹೋಗುತ್ತಾರೆ, ಬಳಿಕ ಗುಡಿಸಲಲ್ಲಿ ಮಕ್ಕಳ ಸಾಮ್ರಾಜ್ಯ. ಹಸುವಿನ ಆರೈಕೆ ಮಾಡುತ್ತ, ಸೆಗಣಿ ಬಾಚುತ್ತ, ಎಳೆ ಮಕ್ಕಳನ್ನು ಸಂತೈಸುತ್ತ ದಿನ ಕಳೆಯುತ್ತಾರೆ. 

ಇಲ್ಲಿ ಶೌಚ ನಿಷೇಧ!
ಕಾರ್ಮಿಕ ಮಕ್ಕಳ ಪರಿಸ್ಥಿತಿ ಹೇಗಿದೆ? ಇದಕ್ಕೆ ಮುಧೋಳದ ಉತ್ತೂರು ಸಕ್ಕರೆ ಕಾರ್ಖಾನೆ ಪರಿಸರ ಒಂದು ಉದಾಹರಣೆ. ಇದರ ಸುತ್ತ ಕಾರ್ಮಿಕರ ಸಾವಿರಾರು ಗುಡಿಸಲುಗಳಿವೆ. ಇಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಶೌಚಬಾಧೆ ತೀರಿಸಲು ಕೂಲಿಗಳು, ಅವರ ಮಕ್ಕಳು ನೆರೆಯ ಜೋಳದ ಹೊಲಕ್ಕೆ ಹೋಗುತ್ತಾರೆ. ಅಕ್ಕಪಕ್ಕದ ರೈತರು ಹಾಗೂ ಕಾರ್ಖಾನೆ ನಡುವೆ ಶೌಚದ ವಿಷಯಕ್ಕೆ ಸಂಘರ್ಷ ನಡೆದಿದೆ.
  ಹೊಲಕ್ಕೆ ಕಾಲಿಡದಷ್ಟು ಮಾಲಿನ್ಯ ರೈತರನ್ನು ಕಾಡಿದೆ. ಕಾರ್ಮಿಕರು, ಮಕ್ಕಳು ಹೊಲಕ್ಕೆ ಹೋಗಿ ಹೊಲಸೆಬ್ಬಿಸದಂತೆ ಹೊಲ ಕಾಯಲು ಎರಡು ಸೆಕ್ಯುರಿಟಿ ಗಾರ್ಡ್‌ಗಳನ್ನು ಕಾರ್ಖಾನೆ ನೇಮಿಸಿದೆ. ದಿನವಿಡೀ ಗುಡಿಸಲು ಸುತ್ತ ಇವರು ಕಾವಲು ನಿಲ್ಲುತ್ತಾರೆ, ತಂಬಿಗೆ ಹಿಡಿದು ಹೊಲಕ್ಕೆ ಹೊರಟವರನ್ನು ಬೆದರಿಸಿ ಓಡಿಸುತ್ತಾರೆ. ಇಲ್ಲಿ ಯಾರೂ ಹೊಲಕ್ಕೆ ಮಲವಿಸರ್ಜನೆಗೆ ಬರದಂತೆ ಗಮನಹರಿಸುತ್ತಾರೆ. ಕಾರ್ಮಿಕರಿಗಾಗಿ ಶೌಚಾಲಯಗಳಿಲ್ಲ, ಸ್ನಾನದ ವ್ಯವಸ್ಥೆಗಳಿಲ್ಲ. ಹೀಗಾಗಿ ವಾಸದ ಪರಿಸರವನ್ನು ಮಲವಿಸರ್ಜನೆಗೆ ಬಳಸುವ ದಾರುಣ ಸ್ಥಿತಿಯಿದೆ. ಗುಡಿಸಲಿನ ಪಕ್ಕದಲ್ಲಿಯೇ ಸೀರೆಯ ಮರೆಕಟ್ಟಿಕೊಂಡು ಮಹಿಳೆಯರು ಮಲವಿಸರ್ಜನೆಗೆ ಹೋಗುವ ದುಃಸ್ಥಿತಿ. ಇಲ್ಲಿನ ಎಲ್ಲ ಗುಡಿಸಲುಗಳಿಂದ ಸುಮಾರು ಸಾವಿರಾರು ಮಕ್ಕಳಿದ್ದಾರೆ. ರಾಜ್ಯದ ಈ ಪ್ರದೇಶದಲ್ಲಿ ಸುಮಾರು ೫೦ ಕಾರ್ಖಾನೆಗಳಿವೆ.  ಬೀಳಗಿ, ಜಮಖಂಡಿ, ಮುಧೋಳ, ರಾಯಬಾಗ, ಚಿಕ್ಕೋಡಿ, ಬೀದರ್ ಮುಂತಾದ ಯಾವ ಪ್ರದೇಶಕ್ಕೆ ಭೇಟಿ ನೀಡಿದರೂ ಕಾರ್ಮಿ­ಕರ ಮಕ್ಕಳ ಪರಿಸ್ಥಿತಿ ಹೀಗೇ ಇದೆ.

ಬಯಲು ಸೀಮೆಯ ನೀರಾವರಿ ಪ್ರದೇಶ ವಿಪರೀತ ಸೊಳ್ಳೆ ಹಾವಳಿಗೆ ಹೆಸರಾಗಿದೆ. ಕೃಷಿಕರು ದನಕರುಗಳನ್ನು ಬಯಲಲ್ಲಿ ಕಟ್ಟುವುದನ್ನು ನಿಲ್ಲಿಸಿದ್ದಾರೆ. ಸೊಳ್ಳೆ ಕಡಿತದಿಂದ ಸಾವನ್ನಪ್ಪುವ ಸ್ಥಿತಿಯಿದೆ. ಹೀಗಾಗಿ ದನಕರುಗಳನ್ನು ಸೊಳ್ಳೆ ಪರದೆಯಲ್ಲಿ ಕಟ್ಟಲಾಗುತ್ತದೆ. ಆದರೆ ಕೂಲಿಗಳ ಮಕ್ಕಳು ಸೊಳ್ಳೆ ಕಡಿತ, ನೊಣಗಳ ಹಾವಳಿ, ಜಲ ಮಾಲಿನ್ಯದ ಮಧ್ಯೆ ಬದುಕಬೇಕಾಗಿದೆ.

ಸಾಂಕ್ರಾಮಿಕ ಕಾಯಿಲೆಗಳಿಂದ ಬಳಲುವ ಸಂದರ್ಭವಿದೆ. ದಪ್ಪನೆಯ ಸಜ್ಜೆ ರೊಟ್ಟಿ ಮಕ್ಕಳು, ಹಿರಿಯರೆಲ್ಲರ ಏಕೈಕ ಆಹಾರ. ತಂದೆತಾಯಿ ಮುಂಜಾನೆ ಮೂರು ಗಂಟೆಗೆ ಕಬ್ಬು ಕಟಾವಿಗೆ ಚಕ್ಕಡಿ ಹೊಡೆದು ಸಾಗುತ್ತಾರೆ. ಮತ್ತೆ ಮರಳುವುದು ಸಾಯಂಕಾಲ. ಅಲ್ಲಿಯವರೆಗೆ ಆರೆಂಟು ವರ್ಷದ ಮಕ್ಕಳು ಇನ್ನುಳಿದ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುತ್ತಾರೆ.

ಕಬ್ಬಿನ ಹಸಿರೆಲೆಗಳನ್ನು ಮೇವಾಗಿ ಬಳಸುತ್ತ ದನಕರು ಸಾಕುವುದು ಕುಟುಂಬದ ಉಪಕಸುಬು. ಮಕ್ಕಳು ಜಾನುವಾರು ಸಾಕಣೆಯಲ್ಲಿ ಕಾಲ ಕಳೆಯುತ್ತವೆ. ಸೆಗಣಿಗಳನ್ನು ಎತ್ತಿ ಪುಟ್ಟ ಪುಟ್ಟ ರಾಶಿ ಹಾಕುತ್ತಾರೆ. ೫೦-–೬೦ ರೂಪಾಯಿಗೆ ಒಂದು ರಾಶಿಯಂತೆ ರೈತರಿಗೆ ಮಾರುತ್ತಾರೆ. ಸೆಗಣಿ ಗೊಬ್ಬರ ಮಾರಾಟ ಎಳೆಯರನ್ನು ದುಡಿಮೆಯತ್ತ ಸೆಳೆದಿದೆ. ಮೂರು ನಾಲ್ಕು ವರ್ಷದ ಬಾಲೆಯರು ಗುಡಿಸಲು ಸುತ್ತ ಸೆಗಣಿ ಸಂಗ್ರಹದಲ್ಲಿ ನಿರತರಾಗಿದ್ದಾರೆ. ಸ್ನಾನ ಸ್ವಚ್ಛತೆಯ ಸಮಸ್ಯೆಯಿಂದಾಗಿ ಚರ್ಮದ ಕಾಯಿಲೆಗಳು ಕಾಡುತ್ತಿವೆ.  

ವ್ಯವಸ್ಥೆಯೇ ಇಲ್ಲದ ಬದುಕು
ಒಂದು ಸಕ್ಕರೆ ಕಾರ್ಖಾನೆಗೆ ೩೦೦–-೫೦೦ ಎತ್ತಿನ ಗಾಡಿಗಳು ಕಬ್ಬು ಸಾಗಿಸುತ್ತವೆ. ಒಂದು ಟನ್ ಕಬ್ಬು ಕಟಾವು ಮಾಡಿ ಚಕ್ಕಡಿಯಲ್ಲಿ ಕಾರ್ಖಾನೆಗೆ ಒಯ್ದರೆ ೩೦೦-–೩೭೫ರೂಪಾಯಿ ಕೂಲಿ ದೊರೆಯುತ್ತದೆ. ಒಂದು ಚಕ್ಕಡಿಯಲ್ಲಿ ಒಮ್ಮೆಗೆ ಮೂರು ಟನ್ ಸಾಗಿಸುವರು. ಒಂದು ಜೋಡಿ (ಗಂಡ ಹೆಂಡತಿ) ದಿನಕ್ಕೆ ೮೦೦-–೧೦೦೦ರೂಪಾಯಿ ಗಳಿಸುತ್ತದೆ. ಇದಲ್ಲದೇ ಪ್ರತಿ ಕಾರ್ಖಾನೆಗೆ ದಿನಕ್ಕೆ ೫೦೦–-೬೦೦ಟ್ರ್ಯಾಕ್ಟರ್‌ಗಳು ಕಬ್ಬು ಸಾಗಿಸುತ್ತವೆ. ಒಂದು ಟ್ರ್ಯಾಕ್ಟರ್  ಲೋಡ್ ಕಬ್ಬು ಕಡಿಯಲು ಸುಮಾರು ೮ ಜನ ಕಾರ್ಮಿಕರು ದುಡಿಯುತ್ತಾರೆ. ಅಂದರೆ ಒಂದು ಕಾರ್ಖಾನೆ ಅವಲಂಬಿಸಿ ಏಳೆಂಟು ಸಾವಿರ ಕಾರ್ಮಿಕರು ಬದುಕುತ್ತಾರೆ. ಪ್ರತಿ ಕಾರ್ಖಾನೆಯ ಸೀಮೆಯಲ್ಲಿ ೧೦-–೧೨ಸಾವಿರ ಕಾರ್ಮಿಕ ಮಕ್ಕಳಿರುತ್ತಾರೆ.

ಕಬ್ಬಿನ ಹೊಲದಲ್ಲಿಯೂ ಕಾರ್ಮಿಕರ ಗುಡಿಸಲುಗಳಿರುತ್ತವೆ. ವಿಶೇಷವಾಗಿ ಕೆರೆ, ನೀರು ಕಾಲುವೆ ಸನಿಹಗಳಲ್ಲಿ ವಸತಿಯಿದೆ. ಕಟಾವು ಕಾಲಕ್ಕೆ ಸರಿಯಾಗಿ ಕಬ್ಬಿನ ಗ್ಯಾಂಗ್ (ಗಬಾಳಿಗರು/ಕಬ್ಬು ಕಡಿಯುವ ಕಾರ್ಮಿ­­ಕರು) ಕರ್ನಾಟಕದ ಸಕ್ಕರೆ ಸೀಮೆ ತಲುಪುತ್ತದೆ. ಮಕದ್ದಮ್ (ಕಾರ್ಮಿಕರ ಮುಖಂಡ) ಇವರನ್ನು ಕಾರ್ಖಾನೆಯ ಸೂಚನೆಯಂತೆ ನೆರೆ ರಾಜ್ಯದಿಂದ ಕರೆತರುತ್ತಾರೆ.

ಮರಾಠಿ ಮಾತನಾಡುವ ಕೂಲಿಗಳಿಗೆ ಸ್ಥಳೀಯರ ಜೊತೆ ಒಡನಾಟ ಕಟಾವು ಕೆಲಸಕ್ಕೆ ಸೀಮಿತವಾಗಿದೆ! ಪುಟಾಣಿಗಳಿಗೆ ಸ್ಥಳೀಯ ಕನ್ನಡ ಗೊತ್ತಿಲ್ಲ, ಇಲ್ಲಿನ ಜನರ ಜೊತೆ  ಬೆರೆಯುವ ಅವಕಾಶದಿಂದ ವಂಚಿತರಾಗಿದ್ದಾರೆ. ಅಸಂಘಟಿತ ಕಾರ್ಮಿಕರಾದರಿಂದ ಮಕ್ಕಳ ಆರೋಗ್ಯ ಸಮಸ್ಯೆ ಯಾರ ಗಮನಕ್ಕೂ ಬರುವುದಿಲ್ಲ. ಜನಪ್ರತಿನಿಧಿಗಳ ದೃಷ್ಟಿಯಲ್ಲಿ ಇವರು ಮತದಾರರಲ್ಲ. ಸಾವಿರಾರು ಮಕ್ಕಳು ಶಿಕ್ಷಣ ವಂಚಿತರಾಗಿದ್ದರೂ ಸೂಕ್ತ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ನಡೆಯುತ್ತಿಲ್ಲ.

ನಿದ್ದೆಯಲ್ಲಿ ಕಾನೂನು
ಸಕ್ಕರೆ ಕಾರ್ಖಾನೆಯ ಮಗ್ಗುಲಲ್ಲಿ ಮಕ್ಕಳನ್ನು ಹುಳುಗಳಂತೆ ಬದುಕಲು ಬಿಟ್ಟಿದ್ದಕ್ಕೆ ನಾಡು ತಲೆತಗ್ಗಿಸುವಂತಾಗಿದೆ. ದೀನದಲಿತರ ಏಳ್ಗೆಯ ಮಾತಾಡುವ ರಾಜಕಾರಣಿಗಳು ಕಾರ್ಖಾನೆಯ ಮಾಲೀಕರಾಗಿದ್ದಾರೆ! ಒಂದು ಮಗು ಹಸಿವಿನಿಂದ ಸತ್ತರೂ ನಮ್ಮ ಮಾಧ್ಯಮಗಳು ಜಗತ್ತಿನ ಗಮನ ಸೆಳೆಯುವ ಕಾಲವಿದು. ಕಡ್ಡಾಯ ಶಿಕ್ಷಣ, ಮಾನವಹಕ್ಕು ಕಾಯ್ದೆಗಳಿವೆ. ಕಬ್ಬಿನ ಕೂಲಿಗಳ ಗುಡಿಸಲಲ್ಲಿ ಕಾನೂನು, ಮಾನವೀಯತೆಗಳು ನಿದ್ದೆ ಹೋಗಿವೆ! ಅಲ್ಲೊಂದು ಇಲ್ಲೊಂದು ಟೆಂಟ್ ಶಾಲೆಗಳು ನೆಪಕ್ಕೆ ಆರಂಭವಾಗುತ್ತವೆ, ಆದರೆ ಮಕ್ಕಳು ಗುಡಿಸಲಲ್ಲಿ ನರಳುವುದು ತಪ್ಪಿಸಲು ಪರಿಣಾಮಕಾರಿ ಪ್ರಯತ್ನ ನಡೆಯುತ್ತಿಲ್ಲ.

ADVERTISEMENT

ರಾಜ್ಯದಲ್ಲಿಯೇ ವರ್ಷದ ಎಂಟು ತಿಂಗಳು ಲಕ್ಷಾಂತರ ಮಕ್ಕಳು ವಾಸವಾಗಿರುತ್ತಾರೆ. ಹೆಸರಿಗೆ ನೆರೆ ರಾಜ್ಯದ ಮರಾಠಿ ಮಕ್ಕಳಾದರೂ ನಮ್ಮ ರಾಜ್ಯ ಗಮನಹರಿಸಬೇಕಾದ ಅಗತ್ಯವಿದೆ.  ಇವರಿಗೆ ಅಂಗನವಾಡಿ, ಪ್ರಾಥಮಿಕ ಶಿಕ್ಷಣ ಕಲ್ಪಿಸಬೇಕಾಗಿದೆ. ಕಾಲಕಾಲಕ್ಕೆ ಮಕ್ಕಳ ಆರೋಗ್ಯ ಸ್ಥಿತಿ ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಕೂಲಿಗಳ ವಾಸದ ಪರಿಸರದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಬೇಕು. ಪೌಷ್ಟಿಕ ಆಹಾರ ಪೂರೈಕೆಯಾಗಬೇಕು. ಕಾರ್ಖಾನೆ ಮಾಲೀಕರು, ಸರ್ಕಾರ ಒಂದಾಗಿ ಈ ಕಾರ್ಯಕ್ಕೆ ತಕ್ಷಣ ಮುಂದಾಗಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.