ADVERTISEMENT

ನೊಂದವರ ಆರೈಕೆಗೆ `ವಿವೇಕ'

ಜಿ.ಬಿ.ನಾಗರಾಜ್
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ಮಲ್ಲಪ್ಪ, ಸರ್ಕಾರಿ ಇಲಾಖೆಯಲ್ಲಿ `ಡಿ' ದರ್ಜೆಯ ನೌಕರ. ಮಧುಮೇಹಕ್ಕೆ ತುತ್ತಾದ ಪತ್ನಿಯ ಆರೈಕೆಯಲ್ಲಿ ನಿವೃತ್ತಿಯ ಜೀವನ ಸವೆಸುತ್ತಿದ್ದರು. ಎಂಟು ತಿಂಗಳಿಂದ ಮಲ್ಲಪ್ಪನಿಗೂ ಕ್ಯಾನ್ಸರ್ ಮಾರಿ ಅಂಟಿದೆ. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನಿಲ್ಲಿಸಿದ್ದಾರೆ. ಹೊಟ್ಟೆ ನೋವು ಕಾಣಿಸಿಕೊಂಡ ಭಾಗಕ್ಕೆ ದೇವರ ಭಾವಚಿತ್ರವಿಟ್ಟು ಹಗಲು- ರಾತ್ರಿ ಪ್ರಾರ್ಥಿಸುತ್ತಿದ್ದಾರೆ. ಇದ್ದೊಬ್ಬ ಮಗ ಪೋಷಕರ ನೆರವಿಗೆ ಧಾವಿಸದಷ್ಟು ದೂರದಲ್ಲಿ ಉದ್ಯೋಗಸ್ಥ!

ಮೈಸೂರು ತಾಲ್ಲೂಕಿನ ಬೊಮ್ಮನಕಟ್ಟೆಯ ನಿವಾಸಿ ಮಂಜುನಾಥ್ ಏಪ್ ಆಟೊ ಚಾಲಕ. ಐದು ಸದಸ್ಯರ ಕುಟುಂಬ ಇವರ ದುಡಿಮೆಯನ್ನೇ ಆಶ್ರಯಿಸಿದೆ. ಕಳೆದ ವರ್ಷ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆನ್ನು ಮೂಳೆ ಮುರಿದಿದೆ. ಅಂದಿನಿಂದ ಅವರಿಗೆ ಹಾಸಿಗೆಯ ನಂಟು. ಕುಟುಂಬ ನಿರ್ವಹಣೆಗೆ ಪತ್ನಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ತಂದೆ, ತಾಯಿ ವೃದ್ಧಾಪ್ಯ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಮರಣ ಶಯ್ಯೆಯಲ್ಲಿ ಮಲಗಿರುವ ಮೈಸೂರು ಜಿಲ್ಲೆಯ ಇಂಥ 65 ರೋಗಿಗಳಿಗೆ `ವಿವೇಕ ಆರೈಕೆ ಕೇಂದ್ರ'ವೇ ಆಸರೆ. ಗಿರಿಜನರ ಆರೋಗ್ಯ ಸುಧಾರಿಸಲು ಎರಡು ದಶಕಗಳ ಹಿಂದೆ ಎಚ್.ಡಿ.ಕೋಟೆ ತಾಲ್ಲೂಕಿನ ಹಾಡಿಯಲ್ಲಿ ಆಸ್ಪತ್ರೆ ತೆರೆದಿದ್ದ `ವಿವೇಕಾನಂದ ಯೂತ್ ಮೂವ್‌ಮೆಂಟ್' ಈಗ ನಗರ ಹಾಗೂ ಗ್ರಾಮೀಣ ಪ್ರದೇಶದ ಬಡವರತ್ತ ಮುಖ ಮಾಡಿದೆ. ಹಾಸಿಗೆ ಹಿಡಿದ ರೋಗಿಗಳಿಗೆ ಚಿಕಿತ್ಸೆ ನೀಡಲು ಸಂಚಾರ ಆಸ್ಪತ್ರೆ ಹಳ್ಳಿಗಳನ್ನು ಸುತ್ತುತ್ತಿದೆ.

ತೀವ್ರ ಸ್ವರೂಪದ ಕಾಯಿಲೆಗಳಿಂದ ಬಳಲುವ ಬಡ ರೋಗಿಗಳಿಗೆ ಹೆಚ್ಚು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಶಕ್ತಿ ಇಲ್ಲ. ಸಾವು ಖಚಿತವಾದ ನಂತರವಂತೂ ಅವರ ಬದುಕು ಇನ್ನೂ ದುರ್ಬರ. ಇಂಥ ರೋಗಿಗಳಿಗೆ ಶುಶ್ರೂಷೆ ನೀಡಲು 2011ರ ನವೆಂಬರ್‌ನಲ್ಲಿ `ಸಂಚಾರ ಆಸ್ಪತ್ರೆ' ಆರಂಭವಾಗಿದೆ. ಕ್ಯಾನ್ಸರ್, ಏಡ್ಸ್, ಲಕ್ವ, ಕಿಡ್ನಿ, ವೃದ್ಧಾಪ್ಯ, ಮೂಳೆ ಸಂಬಂಧಿ ಕಾಯಿಲೆ, ಅಪಘಾತದಿಂದ ನರಳುತ್ತಿರುವ ರೋಗಿಗಳ ಬದುಕಿನಲ್ಲಿ `ವಿವೇಕದ ಆರೈಕೆ' ಆಶಾಕಿರಣ ಮೂಡಿಸಿದೆ.

ಸಂಪರ್ಕ ಹೀಗೆ
ಗಂಭೀರ ಕಾಯಿಲೆಗಳಿಂದ ನರಳುತ್ತಿರುವ ಬಡವರು ವಿವೇಕ ಆರೈಕೆ ಕೇಂದ್ರವನ್ನು ಸಂಪರ್ಕಿಸುತ್ತಾರೆ. ಮಾಹಿತಿಯ ಜಾಡು ಹಿಡಿದು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಕಾರ್ಯಕರ್ತರು ರೋಗಿಗಳ ಬಳಿ ಧಾವಿಸುತ್ತಾರೆ. ಮನೆಯ ಪರಿಸ್ಥಿತಿ, ಕಾಯಿಲೆಯ ಸ್ವರೂಪ ಅರಿಯುತ್ತಾರೆ. ಯೂತ್ ಮೂವ್‌ಮೆಂಟ್‌ನ ಅಂಗ ಸಂಸ್ಥೆಯಾದ `ವಿ-ಲೀಡ್'ಗೆ ಸೂಚಿಸುತ್ತಾರೆ. ಕಾರ್ಯಕರ್ತರ ಮಾಹಿತಿ ಆಧರಿಸಿ ಸಂಚಾರ ಆಸ್ಪತ್ರೆಯು ರೋಗಿಯ ಮನೆಬಾಗಿಲಿಗೆ ತೆರಳುತ್ತದೆ. ಒಬ್ಬ ವೈದ್ಯ, ಮೂರು ಜನ ಶುಶ್ರೂಷಕಿಯರ ತಂಡ, ಡ್ರೆಸ್ಸಿಂಗ್ ಸೇರಿದಂತೆ ವಿವಿಧ ಸೇವೆಗಳನ್ನು ಮನೆಯಲ್ಲಿಯೇ ನೀಡುತ್ತದೆ. 500 ರೂಪಾಯಿವರೆಗೆ ಮಾತ್ರೆ, ಔಷಧವನ್ನು ಉಚಿತವಾಗಿ ನೀಡುತ್ತಾರೆ. ಪುನಃ 10 ದಿನಗಳ ಬಳಿಕ ಬರುವ ತನ್ನ ಸರದಿಗೆ ರೋಗಿ ಕಾಯಬೇಕು.

ಮೈಸೂರಿನ ಕೆ.ಆರ್. ಆಸ್ಪತ್ರೆ, ಪ್ರೀತಿ ಕ್ಯಾನ್ಸರ್ ಸೆಂಟರ್, ಭಾರತ್ ಕ್ಯಾನ್ಸರ್ ಆಸ್ಪತ್ರೆ, ಜೆಎಸ್‌ಎಸ್ ಆಸ್ಪತ್ರೆ, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ವೈದ್ಯರು ಕೆಲವೊಮ್ಮೆ ಕೇಂದ್ರಕ್ಕೆ ಶಿಫಾರಸು ಮಾಡುತ್ತಾರೆ. ಚಿಕಿತ್ಸೆ ಫಲ ನೀಡುವುದಿಲ್ಲ ಎಂಬುದು ದೃಢವಾದ ಬಳಿಕ `ವಿವೇಕ ಆರೈಕೆ ಕೇಂದ್ರ'ವನ್ನು ಸಂಪರ್ಕಿಸುವಂತೆ  ಸೂಚಿಸುತ್ತಾರೆ. ಇಂಥ ಹಲವು ರೋಗಿಗಳನ್ನು ಸಂಚಾರ ಆಸ್ಪತ್ರೆ ಉಪಚರಿಸುತ್ತಿದೆ.

ಮನೆ ಆರೈಕೆ ತರಬೇತಿ
ರೋಗಿಯನ್ನು ಮನೆಯಲ್ಲಿಯೇ ಆರೈಕೆ ಮಾಡುವ ಕುರಿತು ಸಂಸ್ಥೆಯ ಆರೋಗ್ಯ ಕಾರ್ಯಕರ್ತರು ತರಬೇತಿ ನೀಡುತ್ತಾರೆ. ಡ್ರೆಸ್ಸಿಂಗ್ ಮಾಡುವುದು, ಹಾಸಿಗೆ ಸ್ವಚ್ಛಗೊಳಿಸುವುದು, ಸಮಯಕ್ಕೆ ಸರಿಯಾಗಿ ಮಾತ್ರೆ- ಔಷಧ ನೀಡುವುದು, ಆರೋಗ್ಯ ಪರೀಕ್ಷಿಸುವುದು, ಕೇಂದ್ರಕ್ಕೆ ಮಾಹಿತಿ ನೀಡುವ ಕ್ರಮಗಳನ್ನು ತಿಳಿಸುತ್ತಾರೆ. ಚುಚ್ಚುಮದ್ದು ನೀಡುವ ಕೌಶಲವನ್ನೂ ಕೆಲ ಅಕ್ಷರಸ್ಥರಿಗೆ ಕಲಿಸುತ್ತಾರೆ.

`ಶೇ 60 ರಷ್ಟು ರೋಗಿಗಳ ಕೊರಗಿಗೆ ಕೌಟುಂಬಿಕ ಕಲಹಗಳೇ ಕಾರಣ. ಆಸ್ತಿಯ ವಿಚಾರಕ್ಕೆ ಕುಟುಂಬದ ಸದಸ್ಯರೇ ರೋಗಿಯನ್ನು ತಿರಸ್ಕಾರದಿಂದ ಕಾಣುತ್ತಾರೆ. ಪ್ರೀತಿ, ವಿಶ್ವಾಸ, ಮಾನವೀಯತೆ ತೋರಿದರೆ ಸಾಕು. ಎಷ್ಟೋ ರೋಗಗಳ ಆಯುಷ್ಯ ಹೆಚ್ಚಾಗುತ್ತದೆ. ಅದಕ್ಕೆ ಕೇವಲ ವೈದ್ಯಕೀಯ ಸೌಲಭ್ಯಗಳಿದ್ದರೆ ಸಾಲದು. ಅಂಥ ಕಾಳಜಿ ರೋಗಿಗಳ ಸಂಬಂಧಿಕರಲ್ಲಿ ಬೆಳೆಯಬೇಕು. ಹಾಗಾಗಿ ಅಗತ್ಯ ಎನಿಸಿದರೆ ಕೌನ್ಸೆಲಿಂಗ್ ಕೂಡ ಮಾಡುತ್ತೇವೆ' ಎನ್ನುತ್ತಾರೆ ವೈದ್ಯೆ ಡಾ.ಶ್ರುತಿ.

ಎಲ್ಲವೂ ಉಚಿತ
ವಿವೇಕ ಆರೈಕೆ ಕೇಂದ್ರ ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡುವುದಕ್ಕೂ ಕಾರಣವಿದೆ. ವೈದ್ಯರು, ಶುಶ್ರೂಷಕಿಯರ ಸೇವೆ, ಔಷಧ, ವಾಹನ ಸೇರಿದಂತೆ ಎಲ್ಲವೂ ಉಚಿತವಾಗಿ ಲಭ್ಯವಾಗುತ್ತಿದೆ. ಅದನ್ನು ಸಂಘಟಿಸುವ ಕೆಲಸವನ್ನು ಮಾತ್ರ ಸಂಸ್ಥೆ ಮಾಡುತ್ತಿದೆ.
ಮೈಸೂರು ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು, ಕೆ.ಆರ್.ಆಸ್ಪತ್ರೆ, ಖಾಸಗಿ ಆಸ್ಪತ್ರೆಯ ಕೆಲ ವೈದ್ಯರು ಈ ಸೇವೆಗೆ ಮುಂದಾಗಿದ್ದಾರೆ. ಅದರಲ್ಲಿ ಡಾ.ರೇಖಾ, ಡಾ.ಶ್ರುತಿ, ಡಾ.ಮಂಜುನಾಥ್, ಡಾ.ಮಲ್ಲಿಕಾರ್ಜುನ, ಡಾ.ಚೈತ್ರಾ ನಿರಂತರವಾಗಿ ಈ ಸೇವೆಯಲ್ಲೆ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಪ್ರತಿ ಶನಿವಾರ ಹಾಗೂ ಭಾನುವಾರ ಸಂಚಾರ ಆಸ್ಪತ್ರೆ ರೋಗಿಗಳ ಬಳಿ ಧಾವಿಸುತ್ತದೆ.

ಉದ್ಯೋಗ ತರಬೇತಿ
ಅಪಘಾತದಲ್ಲಿ ಗಾಯಗೊಂಡು ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಅಸಹಾಯಕರಿಗೆ ಕೇಂದ್ರದ ವತಿಯಿಂದ ಸ್ವ ಉದ್ಯೋಗಕ್ಕೆ ಪ್ರೇರೇಪಿಸಲಾಗುತ್ತಿದೆ. ಛತ್ರಿ, ಹೂ ಕುಂಡಗಳು ಸೇರಿದಂತೆ ಮನೆಯಲ್ಲಿಯೇ ಮಾಡಬಹುದಾದ ಕೆಲಸಗಳ ಕುರಿತು ತರಬೇತಿ ನೀಡಲಾಗುತ್ತದೆ. ಮೂಳೆ ಸಮಸ್ಯೆಯಿಂದ ಬಳಲುತ್ತಿರುವವರು, ವೃದ್ಧರು, ವಿಧವೆಯರು ಸ್ವ ಉದ್ಯೋಗ ಆರಂಭಿಸಲು ಉತ್ಸುಕರಾಗಿದ್ದಾರೆ.

ಇಷ್ಟಕ್ಕೆಲ್ಲ ಪ್ರೇರಣೆ ನೀಡಿರುವುದು ಕೇರಳದ `ಪ್ಯಾಲಿಟಿವ್ ಕೇರ್ ಸೆಂಟರ್'. ಮೂಳೆ ರೋಗಿಗಳಿಗೆ ದಶಕದ ಹಿಂದೆ ಡಾ.ಸುರೇಶ್ ಅವರು ಆರಂಭಿಸಿದ ಈ ಕೇಂದ್ರ ಇಡೀ ಕೇರಳದಲ್ಲಿ ಪ್ರಖ್ಯಾತಿ ಪಡೆದಿದೆ. ಇದೇ ಮಾದರಿಯಲ್ಲಿ ಶುರುವಾಗಿರುವ `ವಿವೇಕ ಆರೈಕೆ ಕೇಂದ್ರ' ಎಂಬ ಸಂಚಾರ ಆಸ್ಪತ್ರೆ ಉಚಿತ ವೈದ್ಯಕೀಯ ಸೌಲಭ್ಯ, ಸ್ವಯಂ ಸೇವಕರನ್ನು ನಿರೀಕ್ಷಿಸುತ್ತಿದೆ. ನೀವು ರೋಗಿಗಳನ್ನು ಆರೈಕೆ ಮಾಡಲು ತಯಾರಿದ್ದರೆ ಸಂಸ್ಥೆಯ ಸಂಘಟಕ ಮನೋಜ್ - 9972528007 ಸಂಪರ್ಕಿಸಿ.  ವಿವೇಕ ಆರೈಕೆ ಕೇಂದ್ರದ ಸಂಖ್ಯೆ: 0821- 2431245
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.