ADVERTISEMENT

ಪಡು ತಿರುಪತಿಯಲ್ಲಿ ವಿಶ್ವರೂಪ ದರ್ಶನ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2010, 18:30 IST
Last Updated 17 ನವೆಂಬರ್ 2010, 18:30 IST


ಉಡುಪಿ ಜಿಲ್ಲೆಯ ಕಾರ್ಕಳ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಕೇಂದ್ರ. ಇಲ್ಲಿನ ವೆಂಕಟರಮಣ ದೇವಸ್ಥಾನವನ್ನು ‘ಪಡು ತಿರುಪತಿ’ ದೇವಸ್ಥಾನವೆಂದೂ ಕರೆಯುತ್ತಾರೆ. 15ನೇ ಶತಮಾನದ ಆರಂಭದಲ್ಲಿ ತಿರುಪತಿ ದೇವಸ್ಥಾನದಿಂದ ತಂದ ವೆಂಕಟರಮಣನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಿದ್ದು, ತಿರುಪತಿಯಲ್ಲಿ ನಡೆಯುವ ಎಲ್ಲ ಸೇವೆಗಳನ್ನು ನಡೆಸುವುದು ಪಡು ತಿರುಪತಿಯ ವೈಶಿಷ್ಟ್ಯ.
ಈ ದೇವಸ್ಥಾನದಲ್ಲಿ ನಿತ್ಯ ದ್ವಾರಪೂಜೆ, ಸುಪ್ರಭಾತ ಪಠಣ, ರಾತ್ರಿ ಏಕಾಂತ ಸೇವೆ, ನವರಾತ್ರಿ ಪರ್ವಕಾಲದ ಚಕ್ರೋತ್ಸವ ಮುಂತಾದ ಆಚರಣೆಗಳು ಅತ್ಯಂತ ತಂತ್ರಸಾರೋಕ್ತ ಮತ್ತು ವೈಖಾನಸ ಪದ್ಧತಿಯಂತೆ ನಡೆಯುತ್ತವೆ. ಈ ದೇವಸ್ಥಾನದಲ್ಲಿ ಭಾನುವಾರ (ನ. 14ರಂದು) ಬೆಳಗಿನ ಜಾವ 3ಗಂಟೆ ಸಮಯದಲ್ಲಿ ‘ವಿಶ್ವರೂಪ ದರ್ಶನ’ ಆಚರಣೆ ನಡೆಯಿತು.

 ಆಶ್ವೀಜ ಮತ್ತು ಕಾರ್ತಿಕ ಮಾಸಗಳು ಚಾತುರ್ಮಾಸ ಕಾಲ ಎನಿಸಿವೆ. ಆಧ್ಯಾತ್ಮಿಕ ಪರಿಭಾಷೆಯಲ್ಲಿ ಈ ಸಮಯ ದೇವರ ‘ಯೋಗ ನಿದ್ದೆ’ಯ ಕಾಲ. ಈ ಸಂದರ್ಭದಲ್ಲಿ ಜನರು ದೀಪ ಪ್ರಜ್ವಲನ, ದೀಪದಾನ, ದೀಪ ನಮನ, ಲಕ್ಷ ಪ್ರದಕ್ಷಿಣೆ, ಲಕ್ಷ ದೀಪಾರಾಧನೆಗಳನ್ನು ನಡೆಸಿದರೆ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ವರಾಹ ಪುರಾಣದಲ್ಲಿ ಉಲ್ಲೇಖವಿದೆ. ಹೀಗಾಗಿ ಆಶ್ವೀಜ ಮಾಸದ ಪ್ರಾತಃಕಾಲದಲ್ಲಿ ದೇವರಿಗೆ ದೀಪಾರತಿಗಳನ್ನು ಬೆಳಗಿಸಿ ಕೀರ್ತನೆಗಳನ್ನು ಹಾಡುವ ಸಂಪ್ರದಾಯವಿದೆ. ಇದನ್ನು ‘ಜಾಗರ ಪೂಜೆ’ ಅಥವಾ ಪಶ್ಚಿಮ ಜಾಗರ ಪೂಜೆ’ ಎಂದು ಕರೆಯುತ್ತಾರೆ. ಆಷಾಢ ಮಾಸದ ಮಾಸದ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕ ಮಾಸದ ಹುಣ್ಣಿಮೆಯವರೆಗೆ ವೆಂಕಟರಮಣ ಸ್ವಾಮಿಯ ಯೋಗ ನಿದ್ದೆಯ ಕಾಲ. ಯೋಗ ನಿದ್ದೆಯಲ್ಲಿರುವ ದೇವರನ್ನು ಭಕ್ತಿ ಪುರಸ್ಸರವಾಗಿ ಸ್ತೋತ್ರ, ಸಂಕೀರ್ತನೆಗಳ ಮೂಲಕ ಸಂತೋಷಪಡಿಸಿ ಯೋಗ ನಿದ್ದೆಯಿಂದ ಎಚ್ಚರಿಸುವುದನ್ನು ಜಾಗರ ಪೂಜೆ ಎನ್ನುತ್ತಾರೆ.

ತಂತ್ರಸಾರೋಕ್ತ ಪದ್ಧತಿಯ ಪ್ರಕಾರ ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯು ‘ಉತ್ಥಾನ ದ್ವಾದಶಿ’ಯಾಗಿದ್ದು ಅಂದು ದೇವರು ತನ್ನ ಯೋಗ ನಿದ್ದೆಯಿಂದ ಎಚ್ಚರಗೊಂಡು ಮುಂದೆ ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಾನೆ ಎಂಬ ನಂಬಿಕೆ ಭಕ್ತರದು.

ಜಾಗರ ಪೂಜೆ ಸಂದರ್ಭದಲ್ಲಿ ಅಸಂಖ್ಯ ದೀಪಗಳನ್ನು ಬೆಳಗಿಸುವುದರಿಂದ ಭಕ್ತರಿಗೆ ದಿವ್ಯ ಅನುಭೂತಿ ಉಂಟಾಗುತ್ತದೆ. ಸಾಮಾನ್ಯವಾಗಿ ಶರದೃತುವಿನಲ್ಲೇ ದೀಪಾರಾಧನೆಗಳು ನಡೆಯುತ್ತವೆ. ದೀಪಾವಳಿ ಬರುವುದು ಈ ಶರದೃತುವಿನಲ್ಲೇ. ಲಕ್ಷ ದೀಪೋತ್ಸವಗಳು, ಕಾರ್ತಿಕ ಸ್ನಾನಗಳು ನಡೆಯುವುದು ಇದೇ ಸಮಯದಲ್ಲಿ. ಜಾಗರ ಪೂಜೆಯಲ್ಲಿ ದೀಪಗಳನ್ನು ಬೆಳಗಿಸುವುದಲ್ಲದೆ ಸಣ್ಣ ಸಣ್ಣ ನೀಲಾಂಜನಗಳನ್ನು ತುಂಬಿದ ಆರತಿ ತಟ್ಟೆಗಳಿಂದ ದೇವರಿಗೆ ಮಂಗಳಾರತಿ ಮಾಡುವ ಸೊಬಗನ್ನು ನೋಡಿಯೇ ಆನಂದಿಸಬೇಕು.

ಜಾಗರ ಪೂಜೆ ನೋಡಲು ಸಾವಿರಾರು ಜನರು ಅಂದು ದೇವಸ್ಥಾನಕ್ಕೆ ಬರುತ್ತಾರೆ. ಕಾರ್ತಿಕ ಮಾಸದ ಒಂದು ತಿಂಗಳ ಕಾಲ ಕಾರ್ಕಳದ ವೆಂಕಟರಮಣ ದೇವಸ್ಥಾನದಲ್ಲಿ ‘ವಿಶ್ವರೂಪ ದರ್ಶನ’ ಹೆಸರಿನ ದೀಪಾರಾಧನೆ ನಡೆಯುತ್ತದೆ. ಕಾರ್ತೀಕ ಮಾಸದಲ್ಲಿ ರಾತ್ರಿ ದೊಡ್ಡದು. ಹೀಗಾಗಿ ಈ ಮಾಸವನ್ನು ‘ದೀಪೋತ್ಸವ ಮಾಸ’ ಎಂದೂ ಕರೆಯುವ ಪರಿಪಾಠವಿದೆ.

ವಿಶ್ವರೂಪ ದರ್ಶನದಂದು ಬೆಳಗಿನ ಜಾವದ ಮೂರುವರೆಯಿಂದ ದೇವಸ್ಥಾನದ ಸುತ್ತಮುತ್ತ, ಮಹಡಿ, ಪ್ರಾಂಗಣದ ಪೌಳಿಗಳಲ್ಲಿ ಭಕ್ತರು ಹಣತೆಯ ದೀಪಗಳನ್ನು ಬೆಳಗಿಸುತ್ತಾರೆ. ಸಹಸ್ರಾರು ದೀಪಗಳ ಬೆಳಕಿನಲ್ಲಿ ದೇವಸ್ಥಾನ ನೋಡಿ ದೇವರ ದರ್ಶನ ಪಡೆಯುತ್ತಾರೆ.

ವೆಂಕಟರಮಣ ಸ್ವಾಮಿಯ ನಾನಾ ರೂಪಗಳನ್ನು ಈ ಹಣತೆಗಳ ಬೆಳಕಿನಲ್ಲಿ ಬಿಂಬಿಸಲಾಗುತ್ತದೆ. ಹೂ, ಧಾನ್ಯಗಳಿಂದ ರಚಿಸಿದ ನಾನಾ ಬಗೆಯ ವರ್ಣರಂಜಿತ ರಂಗವಲ್ಲಿಗಳು, ದೇವತಾ ತಾಂತ್ರಿಕ ಮಂಡಲಗಳು, ಸ್ತಬ್ಧ ಚಿತ್ರಗಳು, ಪೌರಾಣಿಕ ಪ್ರಸಂಗಗಳನ್ನು ಬಿಂಬಿಸುವ ವರ್ಣ ಚಿತ್ರಗಳು, ಬೊಂಬೆಗಳು, ದೇವತೆಗಳ ವೇಷ ತೊಟ್ಟ ಸಣ್ಣ ಮಕ್ಕಳು, ವರ್ಣರಂಜಿತ ದೇವತಾ ಪ್ರತೀಕಗಳು ಹಣತೆಗಳ ಬೆಳಕಿನಲ್ಲಿ ಕಂಗೊಳಿಸುತ್ತವೆ. ಇವುಗಳಿಗೆ ಹಿನ್ನೆಲೆಯಾಗಿ ಭಕ್ತರಿಂದ ಗಾಯನ, ಸ್ತೋತ್ರ ಪಠಣಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ದೇವಸ್ಥಾನದ ಪರಿಸರ ಭಕ್ತಿ, ಭಾವುಕತೆಯಿಂದ ತುಂಬಿ ಅನನ್ಯ ಅನುಭವ ನೀಡುತ್ತದೆ.  

 ಈ ಸಂದರ್ಭಕ್ಕೆ ಸಾಕ್ಷಿಯಾಗಲು ಬೇರೆ ಬೇರೆ ಊರುಗಳಿಂದ ಅಸಂಖ್ಯಾತ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ವಿಶ್ವರೂಪ ದರ್ಶನದಲ್ಲಿ ಭಾಗವಹಿಸಲು ರಾತ್ರಿ ಎರಡು ಗಂಟೆಯಿಂದಲೇ ಜನರು ಸಾಲುಗಟ್ಟಿ ನಿಂತಿರುತ್ತಾರೆ. 80 ವರ್ಷಗಳಿಂದ ‘ವಿಶ್ವರೂಪ ದರ್ಶನ’ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸ್ವಯಂಸೇವಕರ ನಿಸ್ವಾರ್ಥ ಸೇವೆ ಗಮನ ಸೆಳೆಯುತ್ತದೆ! ಅವರು ದೇವಸ್ಥಾನದಲ್ಲಿ ದೀಪಗಳನ್ನು ಹತ್ತಿಸಿ ಬೆಳಗಿಸುವುದಲ್ಲದೆ, ಆಗಾಗ ಎಣ್ಣೆ ಹೊಯ್ಯುವ ಕೆಲಸವನ್ನು ಇಡೀ ರಾತ್ರಿ ಮಾಡುತ್ತಾರೆ. ದೇವಸ್ಥಾನದ ಗೋಪುರದಲ್ಲೂ ದೀಪ ಬೆಳಗಿಸುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.