ADVERTISEMENT

ಭೂಮಿಕಾಗೆ ಸಡಗರದ ಸೀಮಂತ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 19:30 IST
Last Updated 20 ಆಗಸ್ಟ್ 2012, 19:30 IST
ಭೂಮಿಕಾಗೆ ಸಡಗರದ ಸೀಮಂತ
ಭೂಮಿಕಾಗೆ ಸಡಗರದ ಸೀಮಂತ   

ಜಾನುವಾರುಗಳಿಗೆ ಕಾಮಧೇನು, ಗೋಮಾತೆ ಎಂದೆಲ್ಲಾ ಕರೆಯೋದಿದೆ. ಆದರೆ ಕಾಮಧೇನುವಿಗೆ ನೀಡಿದ ಸ್ಥಾನವನ್ನು ಈಗಿನ ಗೋವುಗಳಿಗೆ ನೀಡುತ್ತಿದ್ದೇವೆಯೇ? ಇತ್ತೀಚಿನ ವರ್ಷಗಳಲ್ಲಿ ಜಾನುವಾರುಗಳ ಸಂಖ್ಯೆಯೇ ಕಡಿಮೆಯಾಗುತ್ತಿದ್ದು ಇದ್ದ ಒಂದೆರಡು ಹಸುಗಳನ್ನೂ ಮಾರಿ ಖಾಲಿ ಕೊಟ್ಟಿಗೆ ಇಟ್ಟಿರುವ ಮನೆಗಳೇ ಹೆಚ್ಚು. ಆದರೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಹಾಂದಿ ಗ್ರಾಮದ ಪರ್ವತೇಗೌಡರು ಗೋಮಾತೆಗೆ ನೀಡುವ ಗೌರವವೇ ಬೇರೆ.

ಅಂದು ಹಾಂದಿ ಎಂಬ ಪುಟ್ಟ ಗ್ರಾಮದಲ್ಲಿ ಸಡಗರ ಸಂಭ್ರಮ. ಪರ್ವತೇಗೌಡರ ಮನೆ ಅಂಗಳದ ತುಂಬೆಲ್ಲಾ ಹಸಿರು ಚಪ್ಪರ ಮಾವಿನ ತೋರಣ. ಡೋಲು ಡಂಬಾರದ ಸದ್ದು ಮುಗಿಲು ಮುಟ್ಟಿತ್ತು. ಊರವರು, ಬಂಧು ಬಳಗದವರು ಗೌಡರ ಮನೆಯಡೆಗೆ ಧಾವಿಸುತ್ತಿದ್ದರು. ಅಲ್ಲಿ ನಡೆಯುತ್ತಿತ್ತು ಅದ್ದೂರಿಯ ಸೀಮಂತ ಕಾರ್ಯಕ್ರಮ.

ಅದೂ ಮನೆಮಗಳಂತೆ ಸಾಕಿದ್ದ ದೇಶೀಯ ಗೋವು `ಭೂಮಿಕಾ~ಗೆ. ರೇಷ್ಮೆ ಸೀರೆ ಉಡಿಸಿ ನಾಲ್ಕೂ ಕಾಲುಗಳಿಗೆ ಬೆಳ್ಳಿಯ ಕಡಗಗಳನ್ನು ತೊಡಿಸಿ ಅರಿಶಿಣ ಕುಂಕುಮ ಇಡಿಸಿ ಸುಮಂಗಲಿಯಂತೆ ಸಿಂಗರಿಸಲಾಗಿತ್ತು.

ಏಕೆಂದರೆ ಭೂಮಿಕಾ ಏಳು ತಿಂಗಳ ಗರ್ಭವತಿ. ಮನೆಮಗಳ ಸೀಮಂತದಂತೆ ಅಲ್ಲಿ ಪ್ರೀತಿ ತುಂಬಿದ ಭಾವನೆ ಇತ್ತು. ಮಂಗಳವಾದ್ಯದ ಮಧ್ಯೆ ಆಹ್ವಾನಿತರೆಲ್ಲ ಆಕೆಗೆ ಆರತಿ ಬೆಳಗಿ ಹರಸಿ ಮುನ್ನಡೆಯುತ್ತಿದ್ದರು.

ಪರ್ವತೇಗೌಡರು ಅಪ್ಪಟ ಗೋ ಪ್ರೇಮಿ. ಮನೆಯಲ್ಲಿ ಒಂದಿಷ್ಟು ಗೋವುಗಳನ್ನು ಪ್ರೀತಿಯಿಂದ ಸಾಕಿ ಸಲಹುತ್ತಿರುವ ಅವರಿಗೆ ಮೂವರು ಹೆಣ್ಣುಮಕ್ಕಳು. ಕೊಟ್ಟಿಗೆಯಲ್ಲಿನ ಹಸು ಭೂಮಿಕಾ ಮೇಲೂ ಅವರಿಗೆ ಮಗಳಂದಿರಷ್ಟೇ ಪ್ರೀತಿ.

ಭೂಮಿಕಾ ಪ್ರೌಢಾವಸ್ಥೆಗೆ ಬಂದಾಗ ದಾರದಹಳ್ಳಿಯ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಕ.ದಾ. ಕೃಷ್ಣರಾಜುರವರ ಮಾರ್ಗದರ್ಶನದಲ್ಲಿ ಕೃತಕ ಗರ್ಭಧಾರಣೆ ಮಾಡಿಸಲಾಯಿತು. ಒಂದೆರಡು ತಿಂಗಳ ನಂತರ ಇದ್ದಕ್ಕಿದ್ದಂತೆ ಗರ್ಭಪಾತವಾಗಿತ್ತು. ಅನೇಕ ಚಿಕಿತ್ಸೆ ನೀಡಿದರೂ ಗರ್ಭಪಾತ ಮೂರ‌್ನಾಲ್ಕು ಬಾರಿ ಮುಂದುವರಿಯಿತು.

ಈ ಸಲ ಗರ್ಭ ನಿಂತರೆ ಏಳನೇ ತಿಂಗಳಿಗೆ ಸೀಮಂತ ಮಾಡುವುದಾಗಿ ಹರಕೆ ಹೊತ್ತರು. `ಪವಾಡ ಎಂಬಂತೆ ಭೂಮಿಕಾ ಗರ್ಭವತಿಯಾದಳು~ ಅನ್ನುತ್ತಾರೆ ಪರ್ವತೇಗೌಡ.

ಆ ಹರಕೆ ತೀರಿಸಲು ಕಿನ್ನಿಗೋಳಿ ಶ್ರೀ ಲಕ್ಷ್ಮಿನಾರಾಯಣ ದೇವಾಲಯದ ಪ್ರಧಾನ ಅರ್ಚಕ ಶಶಿಧರ್ ಭಟ್ ನೇತೃತ್ವದಲ್ಲಿ ವಿಶಿಷ್ಟ ಸೀಮಂತ ನೆರವೇರಿತು. `ಮನೆ ಹೆಣ್ಣುಮಗಳ ಸೀಮಂತದಲ್ಲಿ ಮೊದಲು ಗೋವಿಗೆ ಪೂಜೆ ಮಾಡಿ ನಂತರ ಕಾರ್ಯಕ್ರಮ ಮುಂದುವರಿಸುವುದು ವಾಡಿಕೆ. ಇಲ್ಲಿ ಗೋವಿಗೆ ಸೀಮಂತ ಮಾಡುತ್ತಿರುವುದು ಅನೇಕ ಜನ್ಮದ ಪುಣ್ಯ~ ಎಂಬ ಖುಷಿ ಭಟ್ಟರಲ್ಲೂ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.