ADVERTISEMENT

ಮಾಡು ಒಲ್ಲದ ವೀರಭದ್ರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ಕೆಲವೊಂದು ವಿಶಿಷ್ಟ ಕಾರಣಗಳಿಂದ ಪ್ರಸಿದ್ಧಿಯಾಗಿದೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮಡಾಮಕ್ಕಿಯ ಮಹತೋಬಾರ ಶ್ರೀ ವೀರಭದ್ರ ದೇವಸ್ಥಾನ. ಈ ದೇವರನ್ನು `ಮಾಡು ಒಲ್ಲದ ವೀರಭದ್ರ~ ಎಂದೇ ಕರೆಯುತ್ತಾರೆ. ಏಕೆಂದರೆ ಇಲ್ಲಿ ದೇವರಿಗೆ ಗರ್ಭಗುಡಿಯೇ ಇಲ್ಲ.

ಸಾವಿರಕ್ಕೂ ಹೆಚ್ಚು ವರ್ಷ ಹಳೆಯದಾದ ದೇವಳ ಮುಂಚೆ ಬಾರ್ಕೂರು ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಇದು ಮೂಲತಃ ನೇಪಾಳಿ ಶೈಲಿಯಲ್ಲಿದೆ.  ವೀರಭದ್ರ ಮಾತ್ರವಲ್ಲದೆ ಕೋಟೆರಾಯ, ಬನಶಂಕರಿ, ಪರಿವಾರ ಅಸಂಖ್ಯ ದೇವತೆಗಳು ಇಲ್ಲಿದ್ದು 2005ರಲ್ಲಿ ಉಡುಪಿ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥರ ನೇತೃತ್ವದಲ್ಲಿ ಜೀರ್ಣೋದ್ಧಾರ ನಡೆದಿತ್ತು.

ಹಿಂದೆ ಕರಾವಳಿ ಭಾಗದಲ್ಲಿ ರಕ್ಕಸರ ಅಟ್ಟಹಾಸ ಹೆಚ್ಚಿದಾಗ ವೃಷಭಯೋಗೇಶ್ವರ ಎಂಬ ಮುನಿಯ ತಪಸ್ಸಿಗೆ ಒಲಿದು ಶಿವನ ಪುತ್ರನಾದ ವೀರಭದ್ರ ಪ್ರತ್ಯಕ್ಷನಾಗುತ್ತಾನೆ. ರಕ್ಕಸರ ಅಟ್ಟಹಾಸ ಕಂಡು ಕೋಪೋದ್ರಿಕ್ತನಾಗಿ ತನ್ನ ತಲೆಯನ್ನು ಸಮೀಪದ ಶಿಲೆಗೆ ಬಡಿಯುತ್ತಾನೆ.

ಆಗ ಚೂರಾಗುವ ಶಿಲೆಯ ಅರ್ಧಚಂದ್ರಾಕೃತಿಯ ಭಾಗವನ್ನು ಮುನಿ ಇಲ್ಲಿ ಮಣ್ಣಿನ ಕಟ್ಟೆಯ ಮೇಲೆ ಪ್ರತಿಷ್ಠೆ ಮಾಡಿದ ಎಂಬ ಪ್ರತೀತಿ. ಮಡಾ (ಸಂಸ್ಕೃತದಲ್ಲಿ ಮಡಾ ಎಂದರೆ ಮೊಣಕಾಲು) ಊರಿ ವೀರಭದ್ರ ನೆಲೆಯಾಗಿದ್ದಾನೆ ಎಂಬ ಕಾರಣದಿಂದ ಊರಿಗೆ ಮಡಾಮಕ್ಕಿ ಎಂಬ ಹೆಸರು ಬಂದಿದೆ. ಅರ್ಧಚಂದ್ರಾಕೃತಿಯ ಶಿಲೆಯೇ ವೀರಭದ್ರನ ಸಾನ್ನಿಧ್ಯ. ಮಣ್ಣಿನ ಕಟ್ಟೆಯ ಮಣ್ಣನ್ನು (ಮೃತ್ತಿಕೆ) ಪ್ರಸಾದ ರೂಪವಾಗಿ ಭಕ್ತರಿಗೆ ಹಂಚಲಾಗುತ್ತದೆ.

ಪ್ರತೀ ವರ್ಷದ ಉತ್ಸವದಂದು (ಈ ಸಲ ಫೆ. 8) ಹಾಲನ್ನು ಅಗ್ನಿಗೆ ಸುರಿಯುವ ಕ್ಷೀರ ಹೋಮವನ್ನು ಅನಾದಿ ಕಾಲದಿಂದ ನಡೆಸಿಕೊಂಡು ಬರಲಾಗುತ್ತಿದೆ. ಅಂದು ವೀರಭದ್ರನ ಪಾತ್ರಿ ಚೂಪಾದ ಮುಳ್ಳಿನ ಪಾದುಕೆ ಧರಿಸಿ ವೀರಭದ್ರನ ಕಟ್ಟೆಯ (ಸನ್ನಿಧಾನ) ಪ್ರದಕ್ಷಿಣೆ ಬರುವುದು ವಿಶೇಷ. ಈ ಭಾಗದ ಪ್ರತಿ ಮನೆಯಲ್ಲಿಯೂ ದನಗಳು ಕರು ಹಾಕಿದರೆ ವೀರಭದ್ರನಿಗೆ ಹಾಲಿನ ಅಭಿಷೇಕ ಮಾಡಿ ನಂತರ ಉಪಯೋಗಿಸುವ ಪರಂಪರೆಯಿದೆ.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಿಯುವ ಮಡಾಮಕ್ಕಿ ನದಿಯ ತಟದ ಈ ದೇಗುಲವು ಕೊಲ್ಲೂರು ಶೃಂಗೇರಿ ಹೆದ್ದಾರಿಯಿಂದ ಕೇವಲ 1 ಕಿಮೀ ದೂರದಲ್ಲಿದೆ.

ಸೇವಾ ವಿವರ
* ಶತರುದ್ರಾಭಿಷೇಕ 4000 ರೂ
* ತುಲಾಭಾರ ಸೇವೆ 1350
* ಪಂಚಾಮೃತ 30
* ಕರ್ಪೂರಾರತಿ 5
* ಹರಿವಾಣ ನೈವೇದ್ಯ 100
* ಹಾಲು ಪರಮಾನ್ನ ಕಾಣಿಕೆ 100
ಸಂಕ್ಷಿಪ್ತ ಹೂವಿನ ಪೂಜೆ 30

ಬುಧವಾರ ಮಡಾಮಕ್ಕಿಯ ಮಾಡು ಇಲ್ಲದ ವೀರಭದ್ರನ ಉತ್ಸವ ನಡೆಯಲಿದೆ.


ಮಾಹಿತಿಗೆ ಅರ್ಚಕ ಚಂದ್ರಶೇಖರ ಮಂಜ (948057 4514), www.shrikshetramadamakki.com.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.