ಈ ಮುರುಕು ಗೋಡೆ ನೋಡಿ ಇದೇನು ಮಹಾ ಎನ್ನಬೇಡಿ. ಒಂದು ರೀತಿ ಇದು ಮುರುಕು ಮಹಾಗೋಡೆಯೇ ಸರಿ. ಏಕೆಂದರೆ ಇದು 19ನೇ ಶತಮಾನದ ಸಕ್ಕರೆ ಕಾರ್ಖಾನೆಯ ಕುರುಹಾಗಿ ಉಳಿದುಕೊಂಡಿದೆ.
ಸಕ್ಕರೆ ಕಾರ್ಖಾನೆ ಎಂದೊಡನೆ ಮೊದಲು ನೆನಪಿಗೆ ಬರುವುದು ಮಂಡ್ಯ ಜಿಲ್ಲೆ.`ಮೈಸೂರು ಸಕ್ಕರೆ ಕಾರ್ಖಾನೆ~ ಇಲ್ಲಿ ಆರಂಭವಾಗಿದ್ದು 1933ರಲ್ಲಿ. ಆದರೆ ಅದಕ್ಕೂ ಮೊದಲೆ ಹೆಸರಾಂತ ಸಕ್ಕರೆ ಕಾರ್ಖಾನೆಯೊಂದು ಈ ಪ್ರದೇಶದಲ್ಲೆ ಇತ್ತು ಎಂಬುದು ಬಹುತೇಕರಿಗೆ ತಿಳಿದಿಲ್ಲ.
ಇತಿಹಾಸ ಪ್ರಸಿದ್ಧ ಶ್ರೀರಂಗಪಟ್ಟಣ ಸಮೀಪವೇ 1847ರಲ್ಲಿ `ಅಷ್ಟ್ರಗ್ರಾಮ ಶುಗರ್ ವರ್ಕ್ಸ್~ ಎಂಬ ಹೆಸರಿನ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಿತ್ತು. ಅದಕ್ಕಿಂತ ಮೊದಲೇ ಬೆಳಗೊಳದ ಸಮೀಪ ಬಲಮುರಿ ಹತ್ತಿರ ಕಾವೇರಿ ನದಿಗೆ ಅಣೆಕಟ್ಟೆ ಕಟ್ಟಿ ವಿರಿಜಾ ನಾಲೆ ನಿರ್ಮಿಸಲಾಗಿತ್ತು.
ಇದರಿಂದ ಆ ಭಾಗದಲ್ಲಿ ಕಬ್ಬು ಬೆಳೆಯಲು ಅನುಕೂಲವಾಯಿತು. `ಅಷ್ಟ್ರಗ್ರಾಮ ಶುಗರ್ ವರ್ಕ್ಸ್~ ಅಸ್ತಿತ್ವಕ್ಕೆ ಬಂದದ್ದು ವಿರಿಜಾ ನಾಲೆ ಮೇಲ್ಭಾಗದಲ್ಲೇ. ಈ ಕಾರ್ಖಾನೆಗೆ ನೀರು ಪೂರೈಸಲು ವಿರಿಜಾ ನಾಲೆಯಿಂದ ಕವಲು ನಾಲೆ ನಿರ್ಮಿಸಲಾಗಿತು. ಹೆಚ್ಚುವರಿ ನೀರು ಕಿರು ಕಾಲುವೆ ಮೂಲಕ ಮತ್ತೆ ವಿರಿಜಾ ನಾಲೆಗೆ ಸೇರುವಂತೆ ಮಾಡಲಾಗಿತ್ತು.
ಕಾರ್ಖಾನೆಗೆ ಹೋಗಲು ವಿರಿಜಾ ನಾಲೆಗೆ ಸೇತುವೆ ಹಾಗೂ ಕವಲು ನಾಲೆಗೆ ನೀರು ಹೋಗುವಂತೆ ಮಾಡಲು ಕಬ್ಬಿಣದ ತೂಬುಗಳನ್ನು ಅಳವಡಿಸಲಾಗಿತ್ತು. ಆ ಸೇತುವೆ ಈಗಲೂ ಸುಸ್ಥಿತಿಯಲ್ಲಿದೆ. ತಡೆ ತೂಬುಗಳನ್ನು ಅಳವಡಿಸಿದ ಕಬ್ಬಿಣದ ಕುರುಹುಗಳನ್ನು ನಾಲೆಯಲ್ಲಿ ಈಗಲೂ ಕಾಣಬಹುದು.
ಕಾರ್ಖಾನೆ ಇದ್ದ ಸ್ಥಳದಲ್ಲಿ ವೃತ್ತಾಕಾರವಾಗಿ ನಿರ್ಮಿಸಲಾಗಿದ್ದ ಇಟ್ಟಿಗೆ ಗೋಡೆಯ ಒಂದು ಭಾಗ ಮಾತ್ರ ಉಳಿದುಕೊಂಡಿದೆ. ಅಲ್ಲಿನ ಜಮೀನಿನಲ್ಲಿ ಇಂದು ರೈತರು ವ್ಯವಸಾಯ ಮಾಡುತ್ತಿದ್ದಾರೆ. ಈ ಜಮೀನುಗಳಲ್ಲಿ ಶೋಧಿಸಿದರೆ ಕಾರ್ಮಿಕರ ವಾಸದ ಮನೆಗಳ ಕುರುಹುಗಳು ಸಿಗುತ್ತವೆ.
ಈ ಕಾರ್ಖಾನೆಯಲ್ಲಿ ಉತ್ತಮ ಗುಣಮಟ್ಟದ ಹರಳು ಸಕ್ಕರೆ ತಯಾರಿಸಲಾಗುತ್ತಿತ್ತು. ಜೊತೆಗೆ ಮದ್ಯಸಾರವನ್ನು ಉತ್ಪತ್ತಿ ಮಾಡಲಾಗುತ್ತಿತ್ತು. ಇಲ್ಲಿ ತಯಾರಾದ ಸಕ್ಕರೆಗೆ ಲಂಡನ್‌ನಲ್ಲಿ 1851 ಮತ್ತು 1861ರಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ, 1867ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಅಂತರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ಪ್ರಶಸ್ತಿ ಬಂದಿತ್ತು.
ಇಷ್ಟೊಂದು ಮಹತ್ವದ, ಇತಿಹಾಸ ಪ್ರಸಿದ್ಧ ಕಾರ್ಖಾನೆ ಕಾರಣಾಂತರದಿಂದ 1894ರಲ್ಲಿ ನಿಂತುಹೋಯಿತು.ನಿರ್ಲಕ್ಷ್ಯಕ್ಕೆ ಒಳಗಾದ ಈ ಕಾರ್ಖಾನೆ ಇಂದು ಕಾಣೆಯಾಗಿದೆ. ಮೂಕ ರೋದನದಂತೆ ಅದರ ಆ ಮುರುಕು ಗೋಡೆ ಅನಾಥವಾಗಿ ನಿಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.