ADVERTISEMENT

ವಲಸೆ ಗಣೇಶ; ವಿವಿಧ ವೇಷ

ಕಿಲಾರ್ಲಹಳ್ಳಿ ನವೀನ್ ಕುಮಾರ್ ಬಿ.
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ದೊಡ್ಡಗಣೇಶ, ಸಣ್ಣಗಣೇಶ, ಕಿರುಗಣೇಶ, ಮರಿಗಣೇಶ, ಹಸುವಿನ ಮೇಲೆ ಕುಳಿತಿರುವ ಗಣೇಶ, ನವಿಲಿನ ಗಣೇಶ, ಸರ್ಪದ ಗಣೇಶ, ಸಿಂಹದಗಣೇಶ, ಜಿಂಕೆ, ಆನೆ, ಹುಲಿಯ ಮೇಲೆ ಕುಳಿತಿರುವ ಗಣೇಶ, ರಥದ ಮೇಲಿರುವ ಗಣೇಶ, ಕಮಲದ ಗಣೇಶ... ಅಬ್ಬಬ್ಬಾ! ಎಷ್ಟೊಂದು ಗಣಪತಿಗಳು! ನೋಡಲು ನಿಮ್ಮ ಕಣ್ಣುಗಳು ಸಾಲವು.

ಅರೆ! ಎಲ್ಲಿ ಇಂತಹ ಚೇತೋಹಾರಿ ದೃಶ್ಯ ಎಂದು ಚಕಿತಗೊಂಡಿರಾ? ನಿಮ್ಮ ಕುತೂಹಲ ತಣಿಯಬೇಕಾದರೆ ನೀವು ತುಮಕೂರಿಗೆ ಬರಬೇಕು. ನಗರವನ್ನು ಸೀಳಿಕೊಂಡು ಸಾಗುವ ಬಿ.ಎಚ್. ರಸ್ತೆಯ ಬದಿಗಿರುವ ದೊಡ್ಮನೆ ನರ್ಸಿಂಗ್ ಹೋಂ ಪಕ್ಕದಲ್ಲಿ ಈ ಗಣಾಧಿಪರು ಟೆಂಟ್ ಹೂಡಿದ್ದಾರೆ!

ವಿಶೇಷವೆಂದರೆ ಇವರ ನಿರ್ಮಾತೃಗಳು ವಲಸೆ ಬಂದವರು. ದೂರದ ಕೋಲ್ಕತ್ತಾದಿಂದ ಬಂದು ತುಮಕೂರಿನಲ್ಲಿ ಬೀಡುಬಿಟ್ಟ ವಲಸಿಗರ ತಂಡ ಗಣೇಶಂದಿರಿಗೆ ಜೀವ ತುಂಬುವ ಕಾಯಕದಲ್ಲಿ ಅನೇಕ ವಾರಗಳಿಂದ ತೊಡಗಿಸಿಕೊಂಡಿವೆ. ಇವರಿಗೆ ಇದೇ ಹಬ್ಬ, ಇದೇ ಪೂಜೆ.

ರಾಜ್ಯದ ಜನರು ಹಬ್ಬದ ಸಡಗರ ಸಂಭ್ರಮದಿಂದಿದ್ದರೆ, ಈ ವಲಸೆ ಕಲಾವಿದರು ಮುಂಬೈ ಶೈಲಿಯ ಗಣೇಶ ವಿಗ್ರಹ ತಯಾರಿಸುವ ತರಾತುರಿಯಲ್ಲಿದ್ದಾರೆ. ಕೋಲ್ಕತ್ತಾಗೆ ಹೋದರೆ ಇವರದ್ದು ಸಂಪೂರ್ಣ ದಿನದ ಕೆಲಸ. ದೇವಿಮಾತಾ, ದುರ್ಗಾಮಾತಾ, ಕಾಳಿಮಾತಾ, ಶಿವ ಹೀಗೆ ವಿವಿಧ ಸಂದರ್ಭಗಳಲ್ಲಿ ವಿಧವಿಧದ ವಿಗ್ರಹಗಳನ್ನು ತಯಾರಿಸುತ್ತಾ ವರ್ಷಪೂರ್ತಿ ಕರ್ತವ್ಯ ನಿರತರಾಗಿರುತ್ತಾರೆ. ಭಕ್ತರ ಭಾವನೆಗಳಿಗೆ ವಿಗ್ರಹಗಳ ಮೂಲಕ ಜೀವತುಂಬುವುದು ಇವರ ಪಾರಂಪರಿಕ ವೃತ್ತಿ.

ಆದರೆ ಗಣೇಶ ಹಬ್ಬ ಬರುತ್ತಿದ್ದಂತೆ, ಇವರು ಕರ್ನಾಟಕದ ಕಡೆ ವಲಸೆ ಬಂದುಬಿಡುತ್ತಾರೆ. `ಹಿಂದಿನ ವರ್ಷಗಳಲ್ಲಿ ಬೆಂಗಳೂರು ಮತ್ತು ದೊಡ್ಡಬಳ್ಳಾಪುರದಲ್ಲಿ ಬೀಡುಬಿಟ್ಟಿದ್ವಿ, ಈಗ ನಿಮ್ಮೂರಿನಲ್ಲಿ ಟೆಂಟ್ ಹಾಕಿದ್ದೀವಿ ನೋಡಿ' ಎನ್ನುತ್ತಾರೆ ಕಲಾವಿದ ದೇವಾಶಿಶ್.  

ನಗರದ ಹೊರವಲಯದ ಗೂಳೂರು ಕೆರೆಯಿಂದ ಆವೆಮಣ್ಣು ತಂದು ಸೆಣಬಿನ ದಾರ, ವಾಟರ್ ಪೇಯಿಂಟ್ ಪೌಡರ್ ಇತ್ಯಾದಿಗಳನ್ನು ಸೇರಿಸಿಕೊಂಡು ತಮ್ಮ ಕೆಲಸ ಶುರುಮಾಡುತ್ತಾರೆ ಈ ಕಲಾವಿದರು. ಸ್ಥಳೀಯ ಟ್ರ್ಯಾಕ್ಟರುಗಳಲ್ಲಿ ಅವಶ್ಯಕ ನೀರನ್ನೂ ತರಿಸಿಕೊಳ್ಳುತ್ತಾರೆ.

ಒಂದು ಅಡಿಯಿಂದ ಹದಿಮೂರು ಅಡಿಯವರೆಗೂ ವಿಗ್ರಹಗಳನ್ನು ಇವರು ತಯಾರುಮಾಡುತ್ತಾರೆ. ಮೂರ್ತಿಗಳ ಆಕಾರಕ್ಕನುಗುಣವಾಗಿ ಒಂದು ಸಾವಿರದಿಂದ ಹತ್ತು-ಹನ್ನೆರಡು ಸಾವಿರದವರೆಗೂ ದರ ನಿಗದಿಪಡಿಸುತ್ತಾರೆ.

ಲಕ್ಷ ರೂಪಾಯಿ ಹಣ
`ಒಟ್ಟಾರೆ ಗಣೇಶ ಮೂರ್ತಿಗಳನ್ನು ತಯಾರು ಮಾಡಲು ಸುಮಾರು ಎರಡು ಲಕ್ಷ ಹಣವನ್ನು ವ್ಯಯ ಮಾಡಿದ್ದೇವೆ. ಹೆಚ್ಚು ಕಮ್ಮಿ ಅಷ್ಟೇ ಹಣ ವಾಪಸ್ ಬರುತ್ತದೆ. ಕೆಲವೊಮ್ಮೆ ಗಳಿಕೆ ಅಷ್ಟಕ್ಕಷ್ಟೆ. ಹಬ್ಬಕ್ಕೆ ಒಂದು ತಿಂಗಳು ಇರುವಾಗಲೇ ಗಿರಾಕಿಗಳು ಆರ್ಡರ್ ಕೊಟ್ಟು ಸ್ವಲ್ಪ ಮೊತ್ತ ಕೊಟ್ಟು ಹೋಗ್ತಾರೆ, ಇನ್ನು ಹಬ್ಬಕ್ಕೆ ನಾಲ್ಕೈದು ದಿನ ಇರುವಾಗ ಗಣೇಶನನ್ನು ಕೊಂಡೊಯ್ಯುತ್ತಾರೆ. ಯಾರಾದರೂ ಕೆಲ್ಸ ಚೆನ್ನಾಗಿದೆ ಎಂದರೆ ನಮಗೆ ತುಂಬಾ ಖುಷಿಯಾಗುತ್ತದೆ' ಎನ್ನುತ್ತಾರೆ ಮತ್ತೊಬ್ಬ ಮೂರ್ತಿ ತಯಾರಕ ವಿಕಾಸ್.

`ಒಂದು ದೊಡ್ಡ ಗಾತ್ರದ ಮೂರ್ತಿ ಮಾಡಲು ನಾಲ್ಕೈದು ದಿನ ಬೇಕಾಗುತ್ತದೆ. ಜೇಡಿಮಣ್ಣು ಮತ್ತು ನುಣ್ಣನೆಯ ಮಣ್ಣು, ಗೋಣಿದಾರ, ಒಣಹುಲ್ಲು ಬಳಸಿ ಯಾವುದೇ ಉಪಕರಣದ ಸಹಾಯ ಇಲ್ಲದೆ ಕೈಯಲ್ಲೇ ವಿಗ್ರಹ ತಯಾರಿಸುವುದು ಇವರ ಹೆಚ್ಚುಗಾರಿಕೆ. ಮೂರ್ತಿಗಳು ಬಿಸಿಲಿಗೆ ಆರಿದ ಮೇಲೆ ಯಾವುದೇ ರಾಸಾಯನಿಕ ಬಳಸದೆ ವಾಟರ್ ಪೇಯಿಂಟ್ ಮಾಡುತ್ತಾರೆ. ಒಂದು ವಿಶೇಷವೆಂದರೆ ಮುಂಬೈ ಶೈಲಿಯ ಈ ಮೂರ್ತಿಗಳನ್ನು ಕೊಳ್ಳಲು ಸ್ಥಳೀಯರಲ್ಲದೇ, ದೂರದೂರಿನಿಂದಲೂ ಜನ ಬರುತ್ತಾರೆ. ಪಾವಗಡ, ಅಮರಾಪುರ, ಮಧುಗಿರಿ, ಕೊರಟಗೆರೆ, ಗುಬ್ಬಿ, ಕುಣಿಗಲ್‌ನಿಂದಲೂ ಬರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.