ADVERTISEMENT

ವಿರಾಸತ್: ಸಂಸ್ಕೃತಿ, ಪರಂಪರೆಯ ಜುಗಲ್‌ಬಂದಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST
ವಿರಾಸತ್: ಸಂಸ್ಕೃತಿ, ಪರಂಪರೆಯ ಜುಗಲ್‌ಬಂದಿ
ವಿರಾಸತ್: ಸಂಸ್ಕೃತಿ, ಪರಂಪರೆಯ ಜುಗಲ್‌ಬಂದಿ   

ಹಲವು ಪಂಥ- ಜಾತಿಗಳ, ಬಿದಿರ ನಾಡು, ಜೈನಕಾಶಿ ಎಂದೇ ಗುರುತಿಸಿಕೊಂಡ ಬೀಡು ಮೂಡುಬಿದಿರೆ ಈಗ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ತವರೂರು. ಕಳೆದ ಒಂದು ದಶಕದಿಂದ ಪರಂಪರೆಯ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಇಲ್ಲಿ ಸಂಭ್ರಮದಿಂದ ನಡೆಯುತ್ತಿದೆ.

`ಏಕವ್ಯಕ್ತಿ~ಯಾಗಿ ಕಲೆಯ ಹೊರಗೆ ಮತ್ತು ಒಳಗೆ ಆಳವಾಗಿ ಹೊಕ್ಕು, ಸಮಗ್ರವಾಗಿ ಸ್ಪಂದಿಸಿ ಕಲಾಸಕ್ತರ ಮೆಚ್ಚುಗೆಗೆ ಪಾತ್ರರಾಗಿರುವ ಮೂಡುಬಿದಿರೆಯ ಡಾ. ಮೋಹನ ಆಳ್ವ ಅವರ ಪರಂಪರೆ, ಕಲಾಸೇವೆ, ಸಾಂಸ್ಕೃತಿಕ ಪ್ರೀತಿ ಅನನ್ಯ. `ಆಳ್ವಾಸ್ ವಿರಾಸತ್~ನಂತಹ ಕಲಾಮೇಳವನ್ನು ಸಂಘಟಿಸುವ ಮೂಲಕ ಜನಮನವನ್ನು ಆರೋಗ್ಯ ಪೂರ್ಣವಾಗಿಟ್ಟು, ಇತರ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಮಾಡುವ ಮಾಂತ್ರಿಕ ಶಕ್ತಿ ಕಲಾವಿದರಲ್ಲಿ ಇದೆ ಎಂಬುದನ್ನು ಇಲ್ಲಿ ಆಳ್ವ ತೋರಿಸಿಕೊಟ್ಟಿದ್ದಾರೆ.

ಸಂಗೀತ, ಕಥಕ್ ನೃತ್ಯ ವೈಭವಗಳ ಸಂಗಮದೊಂದಿಗೆ ಜ. 5ರಿಂದ 8ರ ವರೆಗೆ ನಡೆಯುವ `ಆಳ್ವಾಸ್ ವಿರಾಸತ್~ ರಾಷ್ಟ್ರೀಯ ಉತ್ಸವ ಅದ್ಭುತ ಲೋಕವೊಂದನ್ನು ತೆರೆದಿಡಲಿದೆ.

ಮಿಜಾರಿನ ಶೋಭಾವನದ ಸುತ್ತಮುತ್ತ ಹಸಿರು ಐಸಿರಿಯ ತಾಣದಲ್ಲಿ ದಾರಿಯುದ್ದಕ್ಕೂ ಬಣ್ಣ ಬಣ್ಣದ ಸಾಂಪ್ರದಾಯಿಕ ಬೆಳಕಿನ ಆಕಾಶ ಬುಟ್ಟಿಗಳ ಚೆಲುವು, ವಿರಾಸತ್ ಮುಖ್ಯ ವೇದಿಕೆಗೆ ಮುಕುಟ ಮಣಿಯಂತೆ ಶೋಭೀಸುವ ಕರಾವಳಿಯ ಹೆಮ್ಮೆಯ ಕಲೆ `ಯಕ್ಷಗಾನ~ದ ಕಿರೀಟ. ಜಾನಪದ ಸೊಗಡನ್ನು ಬಿಂಬಿಸುವ ಕಲಾ ಕುಸುರಿಗಳು ಕಣ್ಮನಗಳಿಗೆ ಮುದ ನೀಡಲಿವೆ.

ರಾಜ್ಯದ ಮೂಲೆಮೂಲೆಗಳ ಸಾವಿರಾರು ಕಲಾಪ್ರೇಮಿಗಳಲ್ಲದೆ ವಿದೇಶದಿಂದಲೂ ಬಂದ ಅತಿಥಿಗಳಿಗೂ ಕಲೆಗಳ, ನಾದ, ನಿನಾದಗಳ ಮಾಧುರ್ಯವನ್ನು ಇದು ಉಣಬಡಿಸಲಿದೆ.

ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಉದ್ಘಾಟನೆ ಮಾಡಲಿದ್ದಾರೆ. ಕೋಲ್ಕತ್ತದ ಪ್ರಸಿದ್ಧ ಹಿಂದುಸ್ತಾನಿ ಗಾಯಕ ಪದ್ಮಶ್ರೀ ಪಂಡಿತ್ ಅಜೊಯ್ ಚಕ್ರವರ್ತಿ ಅವರು ಈ ಸಲದ `ವಿರಾಸತ್ ಪ್ರಶಸ್ತಿ~ಗೆ ಭಾಜನರಾಗಿದ್ದಾರೆ.

ಗ್ರಾಮಿ ಪ್ರಶಸ್ತಿ ಪುರಸ್ಕೃತ ಪಂಡಿತ್ ವಿಶ್ವಮೋಹನ್ ಭಟ್ ಅವರ ಮೋಹನ ವೀಣೆ ಹಾಗೂ ಪಂಡಿತ್ ಪ್ರವೀಣ್ ಗೋಡ್ಖಿಂಡಿ ಕೊಳಲು ವಾದನದ ಅಪೂರ್ವ ಜುಗಲ್‌ಬಂದಿ, ಒಡಿಸ್ಸಿ ನೃತ್ಯ ವೈಭವ, ನಿಶಾನ್ ಇ ಖಾಲ್ಸಾ ತಾರನ್ ಅವರಿಂದ ಪಂಜಾಬಿನ ರೋಮಾಂಚಕ ಭಾಂಗ್ರಾ ಮತ್ತು ಜಾನಪದ ನೃತ್ಯ, ಮಲೇಷ್ಯದ ರಾಮ್‌ಲಿ ಇಬ್ರಾಹಿಂ ಮತ್ತು ತಂಡವರಿಂದ ಸ್ಟೆಲ್‌ಬೌಂಡ್ ಸಮೂಹ ನೃತ್ಯ ಮನಸ್ಸಿಗೆ ಮುದ ನೀಡಲಿದೆ.

ಹೆಜ್ಜೆ-ಗೆಜ್ಜೆಗಳ ನಾದಕ್ಕೆ ಹಸಿರು ವನಸಿರಿಯ ಶೋಭಾವನದ ಗಿಡ ಮರ ಬಳ್ಳಿಗಳೂ ತಲೆತೂಗಲಿವೆ. 4 ದಿನಗಳ ಕಾರ್ಯಕ್ರಮ ಕಲಾ ಆಸಕ್ತರ ಮನ ತಣಿಸಲಿದೆ.
ಒಟ್ಟಿನಲ್ಲಿ ಕಲೆಯ ಪರಂಪರೆಯ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಕಲೆಯ ಸಿರಿತನ ಉಳಿಸಿಕೊಂಡು ಬಂದಿರುವ `ಆಳ್ವಾಸ್ ವಿರಾಸತ್~ ತನ್ನದೇ ಛಾಪು ಮೂಡಿಸಿ ಸುಮಾರು 20 ವರ್ಷಗಳಿಂದ ಯಶಸ್ವಿ ಹೆಜ್ಜೆ ಇಡುತ್ತ ಬಂದಿದೆ. ಈ ಮೂಲಕ ದೇಶದ ವಿವಿಧ ಕಲಾ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ಕಲೆ ಹಾಕುವ ಮೋಹನ ಆಳ್ವ ಅವರ ಪ್ರಯತ್ನಕ್ಕೆ ಎಲ್ಲೆಡೆ ಶ್ಲಾಘನೆಯೂ ದೊರೆಯುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.