ADVERTISEMENT

ಶಿವನಾರದಮುನಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST
ಶಿವನಾರದಮುನಿ ಸ್ವಾಮಿ
ಶಿವನಾರದಮುನಿ ಸ್ವಾಮಿ   

`ಚಿಗಟೇರಿ ಎಂಬ ಊರಿಲ್ಲ, ನಾರಪ್ಪನೆಂಬ ದೇವರಿಲ್ಲ' ಎಂಬ ಗಾದೆ ಪ್ರಚಲಿತ. ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನಲ್ಲಿರುವ ಈ ಪ್ರಸಿದ್ಧ ಚಿಗಟೇರಿ ಪುರಾಧೀಶ ಶಿವನಾರದಮುನಿಯ ರಥೋತ್ಸವ ಇದೇ 29ರಂದು ಹಾಗೂ ಓಕುಳಿ ಉತ್ಸವ 30ರಂದು ನಡೆಯಲಿದೆ.

11ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರಿಂದ ನಿರ್ಮಾಣಗೊಂಡಿದೆ ಶಿವನಾರದಮುನಿ ದೇವಸ್ಥಾನ. ಶಿವನಾರದಮುನಿ ಸ್ವಾಮಿಯ ಮೂಲ ವಿಗ್ರಹ ನಯನಮನೋಹರ. ಶಿಲ್ಪಕಲಾ ದೃಷ್ಟಿಯಿಂದಲೂ ಈ ದೇಗುಲ ಅಪರೂಪ. ಸುಮಾರು ಒಂದು ಸಾವಿರ ವರ್ಷಗಳ ನಂತರವೂ ಇಲ್ಲಿಯ ಕೆಲವು ಶಿಲ್ಪಕಲೆ ಹಾಗೆಯೇ ಉಳಿದುಕೊಂಡಿದೆ. ಶಿಥಿಲಗೊಂಡ ದೇವಸ್ಥಾನದ ಜೀರ್ಣೋದ್ಧಾರ ಕೈಗೊಂಡು ಅದಕ್ಕೆ ಹೊಸ ರೂಪು ನೀಡಿದವರು ಅಣಬೇರು ರಾಜಣ್ಣ.

ಈ ಪ್ರಸಿದ್ಧ ಶ್ರೀಕ್ಷೇತ್ರಕ್ಕೂ ಒಂದು ಹಿನ್ನೆಲೆ ಇದೆ. ಹುಲ್ಲೂರಿನ ನಾಡಗೌಡ ಮನೆತನದ ಮೂಲ ಪುರುಷ ಈ ಭೈರೇಶ. ಈತ ಸನ್ಯಾಸಿ. ನಂತರ ತಪಸ್ವಿಯಾದ ಈತ ಬಯಲು ಸೀಮೆಗೆ ಬಂದು ಚಿಗಟೇರಿಯಲ್ಲಿ ಘೋರ ತಪಸ್ಸುಗೈದ. ಈತನ ಸುತ್ತಲೂ ಹುತ್ತ ಬೆಳೆಯಿತು. ನಾರುಹುಣ್ಣು ವ್ಯಾಧಿಯಿಂದ ಬಳಲುತ್ತಿದ್ದ ಒಬ್ಬ ಶಿವ ಭಕ್ತ ಹುತ್ತವನ್ನು ಸುತ್ತುವರಿದ. ಅಲ್ಲಿ ಬೆಳೆದ ಒಂದು ಬಳ್ಳಿಯ ರಸವು ಆತನಿಗೆ ತಗುಲಿದೆ. ಆತನ ಹುಣ್ಣು ಮಾಯವಾದವು. ಅಂದಿನಿಂದ ಭೈರೇಶನ ಭಕ್ತರ ಸಂಖ್ಯೆ ಹೆಚ್ಚಾಯಿತು. `ನಾರನ್ನು' ತೇರಿನ ಸಮಯದಲ್ಲಿ ಶಿಖರಕ್ಕೆ ಎಸೆದರೆ `ನಾರುಹುಳಿ' ಸಮಸ್ಯೆ ಇನ್ನಿಲ್ಲವಾಗುತ್ತವೆ ಎನ್ನುವ ನಂಬಿಕೆ ಇದೆ.
ಆನಂದ್ ಬಣಕಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.