ADVERTISEMENT

ಶ್ರೀರಂಗಪಟ್ಟಣದ ಶ್ರೀರಂಗನಾಥ

ಗಣಂಗೂರು ನಂಜೇಗೌಡ
Published 9 ನವೆಂಬರ್ 2011, 19:30 IST
Last Updated 9 ನವೆಂಬರ್ 2011, 19:30 IST
ಶ್ರೀರಂಗಪಟ್ಟಣದ ಶ್ರೀರಂಗನಾಥ
ಶ್ರೀರಂಗಪಟ್ಟಣದ ಶ್ರೀರಂಗನಾಥ   

ಕಾವೇರಿ ನದಿ ದಂಡೆಯ ಮೇಲಿರುವ ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಚಾರಿತ್ರಿಕ ಮಹತ್ವವಿದೆ. ಈ ದೇವಸ್ಥಾನ ಗಂಗರ ಕಾಲದಲ್ಲಿ ನಿರ್ಮಾಣವಾಯಿತು.

 ಈ ಕ್ಷೇತ್ರದಲ್ಲಿ ಪುರಾಣ ಕಾಲದಲ್ಲಿ ಗೌತಮ ಮಹರ್ಷಿಗಳು ತಪಸ್ಸು ಮಾಡಿದ್ದರು. ಅದಕ್ಕೆ ಮೆಚ್ಚಿದ ಶ್ರೀ ವಿಷ್ಣು ಇಲ್ಲಿ ಶ್ರೀ ರಂಗನಾಥನ ಹೆಸರಿನಲ್ಲಿ ನೆಲೆಸಿದ್ದಾನೆ ಎಂದು ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖವಾಗಿದೆ. ಗಂಗರ ದೊರೆ  ತಿರುಮಲಯ್ಯನವರ ಕಾಲದಲ್ಲಿ (ಕ್ರಿ.ಶ.894ರಲ್ಲಿ) ಮೂಲ ದೇವಸ್ಥಾನ ನಿರ್ಮಾಣವಾಯಿತು.

ವಿಜಯನಗರ ಅರಸರ ಕಾಲದಲ್ಲಿ ನವರಂಗ, ಮುಖಮಂಟಪ ಹಾಗೂ ರಾಜ ಗೋಪುರಗಳು ನಿರ್ಮಾಣಗೊಂಡವು. ಹೊಯ್ಸಳರ ಮುಮ್ಮಡಿ ಬಲ್ಲಾಳನ ಕಾಲದಲ್ಲಿ ಒಳಾವರಣದ ಕುಸುರಿ ಕೆತ್ತನೆಗಳುಳ್ಳ ಕಂಬಗಳ ಹಜಾರ ನಿರ್ಮಾಣವಾಯಿತು.

ಪಾತಾಳಾಂಕಣದ ಮುಂದಿನ ಭಾಗವನ್ನು ಜನಾಬ್ ಹೈದರ್ ಅಲಿ ಮತ್ತು ಮಂಟಪಗಳನ್ನು ಮೈಸೂರು ಒಡೆಯುರ್ ವಂಶಸ್ಥರು ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ.

  ಗರ್ಭಗುಡಿಯ ಸುತ್ತ ವಿಷ್ಣುವಿನ ದಶಾವತಾರ ವಿಗ್ರಹಗಳು, ರಾಮಾನುಜಾಚಾರ್ಯರು, ವೇದಾಂತ ದೇಶಿಕರು, ಜೀಯರ್ ಮತ್ತು ಆಳ್ವಾರ್‌ಗಳ ಗುಡಿಗಳಿವೆ. ತಲೆಗೆ ಕೈಕೊಟ್ಟು ಪವಡಿಸಿರುವ ಶ್ರೀರಂಗನ ಪದತಲದಲ್ಲಿ ಕಾವೇರಿ ಮಾತೆ ಹಾಗೂ ಎಡ ಬದಿಯಲ್ಲಿ `ಶ್ರೀರಂಗನಾಯಕಿ~ ಅಮ್ಮನ ಗುಡಿ ಇದೆ. ಹೊರ ಪ್ರಾಕಾರದಲ್ಲಿ ಪ್ರಸನ್ನ ವೆಂಕರಮಣ ಸ್ವಾಮಿ ಹಾಗೂ ಹನುಮಂತನ ಗುಡಿಗಳಿವೆ.

 ಪ್ರತಿ ವರ್ಷ ಮಾಘ ಮಾಸದ ಶುಕ್ಲ ಸಪ್ತಮಿಯಂದು ಶ್ರೀರಂಗನಾಥ ಸ್ವಾಮಿಯ ದೊಡ್ಡ ರಥೋತ್ಸವ ಜರುಗುತ್ತದೆ. ಬ್ರಹ್ಮೋತ್ಸವದ ಅಂಗವಾಗಿ ಪ್ರಹ್ಲಾದೋತ್ಸವ, ಗಜೇಂದ್ರ ಮೋಕ್ಷ, ಸೂರ್ಯ ಮಂಡಲ ವಾಹನೋತ್ಸವ, ಮಂಟಪೋತ್ಸವ ಹಾಗೂ ಶ್ರೀರಂಗನಾಥ ಮತ್ತು ಅಮ್ಮನವರ ರಥಾರೋಹಣ ಉತ್ಸವಗಳು ಜರುಗುತ್ತವೆ.

ಶ್ರೀರಂಗನಾಥ ದೇವಸ್ಥಾನದಲ್ಲಿ ಉತ್ತರಾಯಣ ಪುಣ್ಯಕಾಲದ ಅಂಗವಾಗಿ ವೈಕುಂಠ ದ್ವಾರವನ್ನು ತೆರೆಯಲಾಗುತ್ತದೆ. ಅಂದು ಸಂಜೆ ಲಕ್ಷ ದೀಪೋತ್ಸವ ನಡೆಯುತ್ತದೆ. ಮಾರನೇ ದಿನ ಶ್ರೀರಂಗನಾಥನ ಚಿಕ್ಕ ರಥೋತ್ಸವ ನಡೆಯುತ್ತದೆ. ವೈಶಾಖ ಶುದ್ಧ ಸಪ್ತಮಿಯಂದು `ಶ್ರೀರಂಗ ಜಯಂತಿ~ ಉತ್ಸವ ನಡೆಯುತ್ತದೆ. ಅಂದು ರಾತ್ರಿ ರಂಗನಾಥಸ್ವಾಮಿಗೆ ವಜ್ರ ಖಚಿತ `ಶ್ರೀರಂಗ ಮುಡಿ~ ಕಿರೀಟವನ್ನು ತೊಡಿಸಿ ಪೂಜಿಸಲಾಗುತ್ತದೆ.

ವರ್ಷದ ಉದ್ದಕ್ಕೂ ದೇವಸ್ಥಾನದಲ್ಲಿ ನಿತ್ಯ ಪೂಜೆ, ಅಭಿಷೇಕಗಳು ನಡೆಯುತ್ತವೆ. ಶ್ರಾವಣ, ಕಾರ್ತೀಕ ಮಾಸಗಳಲ್ಲಿ ವಿಶೇಷ ಪೂಜೆ, ಉತ್ಸವಗಳು ನಡೆಯುತ್ತವೆ. ಶ್ರೀರಂಗಪಟ್ಟಣ ಐತಿಹಾಸ ಸ್ಥಳ. ಇಲ್ಲಿಗೆ ಬರುವ ಪ್ರವಾಸಿಗಳು ಶ್ರೀರಂಗನಾಥನ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ.  

ದೇವಸ್ಥಾನದಲ್ಲಿ ಪ್ರತಿ ದಿನ ಬೆಳಗಿನ ಐದು ಗಂಟೆಗೆ ತೆರೆಯುತ್ತದೆ. ಸುಪ್ರಭಾತ ಸೇವೆಯ ನಂತರ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 1.30ರ ವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8 ಗಂಟೆವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿದೆ.

ಶ್ರೀರಂಗಪಟ್ಟಣ ಮಂಡ್ಯದಿಂದ 28 ಕಿ.ಮೀ, ಮೈಸೂರಿನಿಂದ 16 ಕಿ.ಮೀ ಹಾಗೂ ಬೆಂಗಳೂರಿನಿಂದ 125 ಕಿ.ಮೀ ದೂರದಲ್ಲಿದೆ. ಸಾರಿಗೆ ಸಂಸ್ಥೆ ಬಸ್ ಹಾಗೂ ರೈಲು ವ್ಯವಸ್ಥೆ ಇದೆ. ಅರ್ಚನೆ, ಅಭಿಷೇಕ ಮಾಡಿಸುವವರು ಮುಂಚಿತವಾಗಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯನ್ನು ಸಂಪರ್ಕಿಸಬಹುದು. ದೇವಸ್ಥಾನದ ಫೋನ್ ನಂಬರ್ 08236- 252273.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT