ADVERTISEMENT

ಸೆಗಣಿಯಿಂದ ಬೆಳಕು...

ಸವಿತಾ ಎಸ್.
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST
ಸೆಗಣಿಯಿಂದ ಬೆಳಕು...
ಸೆಗಣಿಯಿಂದ ಬೆಳಕು...   

ಕೊಟ್ಟಿಗೆ ತುಂಬ ದನಗಳಿವೆ. ಅವುಗಳ ಸೆಗಣಿಯಿಂದ ಆ ಮನೆಯ ದೀಪಗಳು ಉರಿಯುತ್ತವೆ. ಅಲ್ಲಿನ ಹಸುಗಳು ಕೇವಲ ಹಾಲು ಕರೆಯಲು ಅಥವಾ ತೋಟಕ್ಕೆ ಗೊಬ್ಬರಕ್ಕ ಕೊಡಲಿಕ್ಕಷ್ಟೇ ಸೀಮಿತವಾಗಿಲ್ಲ. ಮನೆಯ ಕತ್ತಲು ನಿವಾರಿಸಿ ಬೆಳಕಿನ ಹಣತೆ ಬೆಳಗಲು ಕಾರಣವಾಗಿವೆ.

ಸೆಗಣಿ ಸಹಾಯದಿಂದ ಉತ್ಪಾದನೆಯಾಗುವ ವಿದ್ಯುತ್‌ನಿಂದಲೇ ನಿತ್ಯ ಅಲ್ಲಿ ಅಡುಗೆ ತಯಾರಾಗುತ್ತದೆ. ಅಂಗಳದ ಹೂದೋಟಕ್ಕೆ ನೀರು ಸಿಗುತ್ತದೆ. ಅಷ್ಟೇ ಏಕೆ? ಆಧುನಿಕ ತಂತ್ರಜ್ಞಾನದ ಕೊಡುಗೆಗಳಾದ ಟಿವಿ, ಫ್ರಿಜ್, ವಾಷಿಂಗ್ ಮೆಷಿನ್‌ಗಳು ದಿನಪೂರ್ತಿ ಕಾರ್ಯನಿರ್ವಹಿಸುತ್ತವೆ.
 
ಗಂಟೆಗೊಮ್ಮೆ ಕಡಿತಗೊಳ್ಳುವ ಸರ್ಕಾರಿ ವಿದ್ಯುತ್‌ಗೆ ಆ ಮನೆಯಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ ಎಂದರೆ ಅಚ್ಚರಿಯ ಸಂಗತಿಯಲ್ಲವೇ...?
ಇದನ್ನೆಲ್ಲಾ ಕಣ್ಣಾರೆ ನೋಡಬೇಕೆಂದರೆ ಬೆಳ್ತಂಗಡಿ ಸಮೀಪದ ಕೊಯ್ಯೂರು ಗ್ರಾಮದ ಪಾಂಬೇಲು ಪ್ರಚಂಡಭಾನು ಭಟ್ಟರ ಮನೆಗೆ ಭೇಟಿ ನೀಡಬೇಕು.
 
ಹಿರಿಯರಿಂದ ಬಳುವಳಿಯಾಗಿ ಬಂದ ಹತ್ತಾರು ಎಕರೆ ಜಾಗವನ್ನುಹೊನ್ನಾಗಿಸಬೇಕೆಂಬ ಇವರ ಕನಸಿಗೆ ಸಹಕಾರಿಯಾಗಿದ್ದು ಬೃಹತ್ ಗೋಬರ್ ಗ್ಯಾಸ್ ಯೋಜನೆ.

`ಆರಂಭದಲ್ಲಿ ದೊಡ್ಡ ಮೊತ್ತದ ಹೂಡಿಕೆ ಅನಿವಾರ್ಯ ಎಂದು ತಿಳಿದಿದ್ದರೂ ಹಲವು ಕೃಷಿಕರ ಮನೆಗೆ ಭೇಟಿ ನೀಡಿ ಯೋಜನೆ ರೂಪಿಸಿದೆ. 2004ರಲ್ಲಿ ರೂಪ ಪಡೆದ ಯೋಜನೆಗೆ ಸುಮಾರು 10 ಲಕ್ಷ ರೂಪಾಯಿ ಖರ್ಚಾಗಿದೆ.
 
ಗೋಬರ್ ಗ್ಯಾಸ್ ಚಾಲಿತ ಕಿರು ವಿದ್ಯುತ್ ಜನರೇಟರ್ ತಯಾರಿ ಕಾರ್ಯದಲ್ಲಿ ಎಂಜಿನಿಯರ್ ಸಹಾಯ ಪಡೆದರೂ ಕಲ್ಪನೆಯೆಲ್ಲಾ ನನ್ನದೇ ಆಗಿತ್ತು~ ಎನ್ನುವ ಅವರ ಮಾತಿನಲ್ಲಿ ಆತ್ಮವಿಶ್ವಾಸವೂ ಅಡಗಿದೆ.

ಕಳೆದ 8 ವರ್ಷಗಳಿಂದ ಕೇವಲ ಮನೆಯ ಉಪಯೋಗಕ್ಕಾಗಿಯೇ ಗೋಬರ್ ಗ್ಯಾಸ್ ಉತ್ಪಾದನೆ ಮಾಡುತ್ತ್ದ್ದಿದಾರೆ. ಮೊದಲಿಗೆ ಸೆಗಣಿಯನ್ನು ಸಮಪ್ರಮಾಣದ ನೀರಿನೊಂದಿಗೆ ಕಲಕಿ ಸಣ್ಣ ಟ್ಯಾಂಕ್‌ಗೆ ಬಿಡಲಾಗುತ್ತದೆ. ಅಲ್ಲಿಂದ ಪೈಪ್ ಮೂಲಕ ಡ್ರಮ್‌ಗೆ ಹರಿಸಲಾಗುತ್ತದೆ.
 
16 ಅಡಿ ಆಳದ ಗುಂಡಿ ನಿರ್ಮಿಸಲಾಗಿದ್ದು ಪ್ಲಾಸ್ಟಿಕ್-ಫೈಬರ್ ಬದಲಿಗೆ ಕಬ್ಬಿಣದ ಡ್ರಮ್ ಅಳವಡಿಸಲಾಗಿದೆ. ಆಯಿಲ್ ಪದ್ಧತಿಯನ್ನು ಬಳಸಿಕೊಂಡಿದ್ದರಿಂದ ಕಬ್ಬಿಣ ತುಕ್ಕು ಹಿಡಿಯುವ ಭೀತಿಯೂ ಇಲ್ಲ.

ಸುಮಾರು 15 ದಿನ ಸೆಗಣಿ ಅಲ್ಲಿ ಕಳೆತು ನಂತರ ಸಮೀಪದ ಇನ್ನೊಂದು ಡ್ರಮ್‌ಗೆ ವರ್ಗಾವಣೆಯಾಗುತ್ತದೆ. ಅಲ್ಲೂ ಮಿಥೇನ್ ಗ್ಯಾಸ್ ಉತ್ಪತ್ತಿ ಪ್ರಕ್ರಿಯೆ ಮೊದಲಿನಂತೆ 15 ದಿನಗಳ ಕಾಲ ನಡೆಯುತ್ತದೆ. ಸಗಣಿಯಲ್ಲಿನ ನೀರಿನ ಅಂಶವನ್ನೆಲ್ಲಾ ಸ್ಲರಿ ಟ್ಯಾಂಕ್‌ಗೆ ಬಿಡಲಾಗುತ್ತದೆ.

ಅಲ್ಲಿ ನೀರನ್ನು ಸಂಸ್ಕರಿಸಿ ಪಂಪ್ ಮೂಲಕ ಎತ್ತರದ ಗುಡ್ಡದ ಮೇಲೆ ನಿರ್ಮಿಸಲಾದ ಟ್ಯಾಂಕ್‌ಗೆ ಹರಿಸಲಾಗುತ್ತದೆ. ಅಲ್ಲಿಂದ ಸ್ಪಿಂಕ್ಲರ್ ಅಥವಾ ಹನಿ ನೀರಾವರಿ ಪದ್ಧತಿ ಪ್ರಕಾರ ನಿಯಮಿತವಾಗಿ ತೋಟಕ್ಕೆ ಸಿಂಪಡಿಸಲಾಗುತ್ತದೆ. ಇಲ್ಲೂ ನೀರಿನ ಮರುಬಳಕೆಯಾಗುತ್ತದೆ.

`ಇತ್ತ ದೊರೆತ ಹಟ್ಟಿಯ ಕಸವನ್ನೆಲ್ಲಾ ರಸಸಾರ ತೊಟ್ಟಿಯಲ್ಲಿ ಸಂಗ್ರಹಿಸಿ ಅದನ್ನು ಕೊಳೆಯಿಸಿ, ಬಳಿಕ ನೀರನ್ನು ಮಾತ್ರ ಸ್ಲರಿ ಟ್ಯಾಂಕ್‌ಗೆ ಹರಿಸಲಾಗುತ್ತದೆ. ಉಳಿದ ಗಟ್ಟಿ ಸೆಗಣಿಯನ್ನು ಎರೆಹುಳುಗಳಿಗೆ ಆಹಾರವಾಗಿ ನೀಡಲಾಗುತ್ತದೆ. ಸಾರರಹಿತವಾಗಿರುವ ಅದೇ ಸೆಗಣಿ ತಿಂಗಳೊಳಗೆ ಉತ್ತಮ ಎರೆಹುಳ ಗೊಬ್ಬರವಾಗಿ ದೊರೆಯುತ್ತದೆ ~ ಎನ್ನುವಾಗ ಅವರ ಮುಖದಲ್ಲಿ ಸಂತಸ ಮೂಡುತ್ತದೆ.

`ಎಂಟು ವರ್ಷಗಳಿಂದ ಮನೆಯ ದೀಪ ಉರಿಸಲು 11ಎಚ್‌ಪಿ ಪಂಪ್ಬಳಸಿಕೊಂಡಿದ್ದೇನೆ. ಇದಕ್ಕೆ ಶೇ 70 ಗೋಬರ್ ಗ್ಯಾಸ್ ಹಾಗೂ ಶೇ 30 ಡಿಸೇಲ್ ಅಗತ್ಯ. ಸತತ ಎಂಟು ಗಂಟೆ ಮನೆ ಬಳಕೆಗೆ ಅಗತ್ಯವಿರುವಷ್ಟು ವಿದ್ಯುತ್ ಇದರಿಂದ ಉತ್ಪಾದನೆಯಾಗುತ್ತದೆ. ಬೇಸಿಗೆಯಲ್ಲಿ ಪದೇ ಪದೇ ಮೆಸ್ಕಾಂನ ಕಣ್ಣಾಮಚ್ಚಾಲೆ ಆಟ ನಡೆಯುತ್ತಿದ್ದಾಗ ಕತ್ತಲಲ್ಲಿ ಕೂರುವ ಅನಿವಾರ್ಯತೆ ಇಲ್ಲ ನೋಡಿ~ ಎನ್ನುತ್ತಾ ನಗೆಸೂಸುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.