ADVERTISEMENT

ಹಳೆಯ ವಸ್ತು: ಫಳಫಳ ಹೊಳಪು!

ನಾ.ಮಂಜುನಾಥ ಸ್ವಾಮಿ
Published 28 ಜನವರಿ 2013, 19:59 IST
Last Updated 28 ಜನವರಿ 2013, 19:59 IST
ಕಲಾಕೃತಿ ತಯಾರಿಕೆ ನಿರತ ಪುಟಾಣಿಗಳು
ಕಲಾಕೃತಿ ತಯಾರಿಕೆ ನಿರತ ಪುಟಾಣಿಗಳು   

ಹಳೆಯ ಪಾದರಕ್ಷೆ, ಪ್ಲಾಸ್ಟಿಕ್ ಬಾಟಲಿ, ಲೋಟ, ತೆಂಗಿನ ಗರಿ, ಕರಟ, ಹಳೆಬಟ್ಟೆಗಳು ಇಲ್ಲಿ ಜೀವಂತಿಕೆ ಪಡೆದಿವೆ. ಮುಖವಾಡ, ಜೇಡ, ಹಾವು, ನವಿಲು, ರೋಬೋಟ್ ಕಲಾಕೃತಿಗಳು ಇವುಗಳಿಂದ ನಿರ್ಮಾಣಗೊಂಡಿವೆ. ಒಮ್ಮೆ ನೋಡಿದರೆ ವಾವ್ ಎನ್ನುವಷ್ಟು ಸುಂದರ ವಿನ್ಯಾಸ, ಆಕಾರ!

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಗುಂಬಳ್ಳಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳ ಕೈಯಲ್ಲಿ ಇಂಥ ಒಂದು ಸುಂದರ `ಸೃಷ್ಟಿ'ಗೆ ಕಾರಣವಾದದ್ದು `ಇಂಡಿಯನ್ ಫೌಂಡೇಶನ್ ಆಫ್ ಆರ್ಟ್ಸ್' (ಐಎಫ್‌ಎ) ಸಂಸ್ಥೆ. ಕಥನ ವಿಧಾನದಿಂದ ಪರಿಸರದ ಉಳಿವಿನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವೇ ಈ ಸಂಸ್ಥೆಯದ್ದು. ಭಾರತದಲ್ಲಿ ಪ್ರತಿ ವರ್ಷ 40 ದಶಲಕ್ಷ ಟನ್ ತ್ಯಾಜ್ಯ ಹೊರ ಬೀಳುತ್ತದೆ. ಇದು ಸುಂದರ ನಿಸರ್ಗ ಕಲುಷಿತಗೊಳ್ಳಲೂ ಕಾರಣ. ಇಂತಹ ಕಸಕಡ್ಡಿಗಳನ್ನು ಪ್ರತ್ಯೇಕಿಸಿ ಶತ್ರುಕಸ ಹಾಗೂ ಮಿತ್ರಕಸಗಳಾಗಿ ವಿಂಗಡಿಸಿ ಇವುಗಳಿಂದಲೇ ಸುಂದರ ಮಾದರಿಗಳನ್ನು ತಯಾರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೈಂಕರ್ಯವನ್ನು ಮಾಡುತ್ತಿದೆ.

ಹುಬ್ಬಳ್ಳಿ, ಧಾರವಾಡ, ಹಾವೇರಿ, ಕುಂದಾಪುರ, ಕೊಪ್ಪಳ ಜಿಲ್ಲೆಯ ಶಾಲೆಗಳು ಐಎಫ್‌ಐ ಸಂಸ್ಥೆ ನೀಡುವ ನಾಟಕ ಫೆಲೋಶಿಪ್ ಅಡಿಯಲ್ಲಿ ಆಯ್ಕೆಯಾಗಿವೆ. ಈ ಪೈಕಿ ಗುಂಬಳ್ಳಿ ಶಾಲೆಯೂ ಒಂದು. 6 ತಿಂಗಳ ಕಾರ್ಯಗಾರಕ್ಕೆ 75 ಸಾವಿರ ರೂಪಾಯಿ ನೀಡಲಾಗುತ್ತದೆ. ಇದನ್ನು ಬಳಸಿ `ಕಲಿ-ಕಲಿಸು' ಯೋಜನೆಯಡಿ ಅನುಪಯುಕ್ತ ವಸ್ತುಗಳನ್ನು ಬಳಸಿ ಕಲಾಕೃತಿಗಳನ್ನು ರಚಿಸಬಹುದು. ಅತ್ಯುತ್ತಮ ರಚನೆಗೆ ಬಹುಮಾನವನ್ನು ನೀಡುತ್ತದೆ. ಇತ್ತೀಚೆಗೆ ಇಲ್ಲಿ `ಇದು ಎಲೆ ಗೊಂಚಲಿನ ಹಕ್ಕಿಗಳಾ' ಹಾಡು-ಪಾಡು ಎಂಬ ಕಾರ್ಯಕ್ರಮ ಆಯೋಜಿಸಿ ಮಕ್ಕಳ ಸೃಜಶೀಲತೆಗೆ ಅವಕಾಶ ನೀಡಿದ್ದು ವಿಶೇಷವಾಗಿತ್ತು.

ಈ ಯೋಜನೆಗೆ ಭಾರಿ ಬೇಡಿಕೆ ಇದ್ದು, ಬೆಂಗಳೂರಿನ ಶಾಲೆಗಳಿಂದಲೂ ಕರೆ ಬಂದಿವೆ' ಎನ್ನುತ್ತಾರೆ ಶಿಬಿರದ ನಿರ್ದೇಶಕ ಎಂ.ಎಲ್. ಮಧುಕರ್.ಬೀದಿ ಬದಿಯಲ್ಲಿ ಬಿದ್ದಿರುವ ಕಸ ಸಂಗ್ರಹಿಸಲೂ ಮುಜುಗರ ಆಗುತ್ತಿತ್ತು. ಹಳೆಯ ಚಪ್ಪಲಿ, ಟೈರ್, ಟ್ಯೂಬ್, ಪ್ಲಾಸ್ಟಿಕ್‌ಗಳಿಂದ ಸುಂದರ ಮುಖವಾಡ ಅರಳಿದ ಮೇಲೆ ನಿಸರ್ಗದ ಮೇಲೆ ಪ್ರೀತಿ ಹೆಚ್ಚಾಯಿತು. ಮೈಸೂರ್ ಮೋಹನ್, ಭಾಸ್ಕರ್ ತರಬೇತಿ ನೀಡಿ ಪ್ರೋತ್ಸಾಹಿಸಿದರು. ಹಳೆ ವಸ್ತುಗಳಿಂದ ನವೀನ ವಿನ್ಯಾಸಗಳನ್ನು ರಚಿಸುವುದು ಹೇಗೆಂದು ತಿಳಿಯಿತು' ಎನ್ನುತ್ತಾರೆ ಶಾಲಾ ವಿದ್ಯಾರ್ಥಿಗಳಾದ ಪ್ರೇಮ್‌ಸಾಗರ್, ಸಿಂಧೂ, ಚಂದನ, ಮೇಘ, ಜವೇರಿಯಾ ಅವರು.

ಕಲಿಕಾ ನಿಲ್ದಾಣಗಳಲ್ಲಿ ಸಗಣಿ, ಬತ್ತದ ಹೊಟ್ಟು, ತೆಂಗಿನ ಮಟ್ಟೆ ಬಳಸಿ ಕಸದಿಂದ ರಸ ಪಡೆಯಬಹುದು. ತಕ್ಷಣವೇ ಹಿಮ್ಮಾಹಿತಿ ಲಭಿಸುವುದರಿಂದ ಸ್ವಅವಲೋಕನದಿಂದ ಮಗು ಕಲಿಯುತ್ತದೆ. ಇದು ನೈಜ ಬದುಕಿಗೆ ಹತ್ತಿರ. ಇಲ್ಲಿ ಎಷ್ಟು ಕಲಿಯಿತು ಎಂಬುದಕ್ಕಿಂತ ಹೇಗೆ ಕಲಿಯಿತು ಎಂಬುದು ಮುಖ್ಯ. ನೈರ್ಮಲಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಪರಿಸರ ಸಂರಕ್ಷಣೆ ಇಂದಿನ ಅಗತ್ಯತೆ. ಮಗು ತನ್ನ ಬದುಕು ಕಟ್ಟಿಕೊಳ್ಳಲು ಕಲಿಸುವುದೇ ಶಿಕ್ಷಣದ ಉದ್ದೇಶ ಎಂದು ಮುಖ್ಯ ಶಿಕ್ಷಕ ಎ. ಶಿವರುದ್ರಯ್ಯರ ಅನುಭವದ ಮಾತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.