ADVERTISEMENT

ಹುಬ್ಬಳ್ಳಿ ಹಸುಗಳಿಗೆ ಹರಕೆಯ ಮೇವು

ಅನಿಲ್ ಕಾಜಗಾರ
Published 2 ಜುಲೈ 2012, 19:30 IST
Last Updated 2 ಜುಲೈ 2012, 19:30 IST

ಹೊಸ ಹುಬ್ಬಳ್ಳಿ ಮ್ಯಾದಾರ ಓಣಿಯ ಪ್ರಮುಖ ವೃತ್ತಕ್ಕೆ ಬಂದರೆ ಒಂದಿಷ್ಟು ದನಕರುಗಳು ಮತ್ತು ಭಕ್ತಿಭಾವದಿಂದ ಜನ ಅವಕ್ಕೆ ಹುಲ್ಲು ತಿನ್ನಿಸುವ ದೃಶ್ಯ ನಿಮ್ಮ ಕಣ್ಣಿಗೆ ಬೀಳುತ್ತದೆ. ಈ ಜನ ಹುಬ್ಬಳ್ಳಿಯ ವಿವಿಧ ಭಾಗದವರು, ಸುತ್ತಮುತ್ತಲ ಗ್ರಾಮದಿಂದ ಬಂದವರು.

ಹಸುಗಳೂ ಅಷ್ಟೇ. ಜನರ ಪಾಲಿಗೆ `ಇಷ್ಟಾರ್ಥ ಪೂರೈಸುವ ದೇವತಾ ಸ್ವರೂಪಿಗಳು~.
ಇವಕ್ಕೆ ಹುಲ್ಲು ತಿನ್ನಿಸುವುದರಿಂದ ಕುಟುಂಬಕ್ಕೆ ಒಳ್ಳೆಯದಾಗುತ್ತದೆ, ಮನಸ್ಸಿನ ಕೋರಿಕೆ ಈಡೇರುತ್ತದೆ ಎಂಬುದು ಜನರ ನಂಬಿಕೆ. ಹೀಗಾಗಿ ಇದೇ ಒಂದು ಹರಕೆಯಾಗಿದೆ. ಪ್ರಥ್ವಿರಾಜ ಬಾಷಾ ಎಂಬುವವರು 15 ವರ್ಷದಿಂದ ಹುಲ್ಲು ತಿನ್ನಿಸುತ್ತ ಬಂದಿದ್ದಾರೆ. `ನನಗಂತೂ ಒಳ್ಳೆಯದಾಗಿದೆ~ ಎನ್ನುತ್ತಾರೆ.

ಈ ಆಕಳುಗಳು ಬೆಳಿಗ್ಗೆಯೆಲ್ಲ ನಗರದಲ್ಲಿ ಸುತ್ತಾಡಿ ಮೂರು ಗಂಟೆ ಹೊತ್ತಿಗೆ ಮ್ಯಾದಾರ ಓಣಿಗೆ ಮರಳುತ್ತವೆ. ರಾತ್ರಿಯೆಲ್ಲ ಅಲ್ಲಿಯೇ ಮಲಗಿ ಮತ್ತೆ ಬೆಳಿಗ್ಗೆ ಸುತ್ತಾಡಲು ಹೋಗುತ್ತವೆ. ಸಂಜೆ ವೇಳೆಗೆ ರಸ್ತೆ ಮೇಲೆ ಗುಂಪು ಗುಂಪಾಗಿ ನಿಲ್ಲುವುದರಿಂದ ಎಷ್ಟೋ ಸಲ ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ.

ಆದರೂ ಯಾರೂ ಅವುಗಳನ್ನು ಮುಟ್ಟುವುದಿಲ್ಲ. ಅವು ಯಾವಾಗ ರಸ್ತೆಯಿಂದ ಸರಿಯುತ್ತವೆಯೋ ಆಗ ಸಂಚಾರ ಆರಂಭವಾಗುತ್ತದೆ. `ಅವನ್ನು ಹೊಡೆದರೆ ಪಾಪ ತಟ್ಟುತ್ತದೆ. ಹೀಗಾಗಿ ಯಾರೂ ಅವುಗಳ ತಂಟೆಗೆ ಹೋಗುವುದಿಲ್ಲ~ ಎನ್ನುತ್ತಾರೆ ಸಮೀಪದ ನಿವಾಸಿ ರಾಮಕೃಷ್ಣ ಪವಾರ.

ಜನ ತಮ್ಮ ಕಷ್ಟ ಪರಿಹಾರಕ್ಕೆ ಕಂಡುಕೊಂಡ ಈ ಪದ್ಧತಿ 15ಕ್ಕೂ ಹೆಚ್ಚು ಕುಟುಂಬಗಳ ಜೀವನ ಬಂಡಿ ಸಾಗಲು ಸಹಾಯ ಮಾಡುತ್ತಿದೆ ಎನ್ನುವುದೊಂದು ವಿಶೇಷ. ಏಕೆಂದರೆ ಇವರೆಲ್ಲ ಸುತ್ತಲಿನ ಗ್ರಾಮಗಳಿಂದ ಕರಕಿ, ಗುಗರಿ ಬಳ್ಳಿ, ದಾಗಡಿಬಳ್ಳಿ ಹಾಗೂ ಹಸಿ ಹುಲ್ಲನ್ನು ತಂದು ಮಾರುತ್ತಾರೆ. ಒಂದು ಸಿವುಡು ಹಸಿರು ಹುಲ್ಲಿಗೆ 10 ರೂಪಾಯಿ. ಇದರಿಂದ ಪ್ರತಿ ಕುಟುಂಬದವರು ದಿನಕ್ಕೆ ಸರಾಸರಿ 500 ರೂಪಾಯಿಯಷ್ಟು ದುಡಿಯುತ್ತಾರೆ.

`10 ವರ್ಷದಿಂದ ಇದೇ ಉದ್ಯೋಗ. ಹೆಬ್ಬಳ್ಳಿ, ಛಬ್ಬಿ, ಬ್ಯಾಹಟ್ಟಿ, ಕುಸುಗಲ್, ಕುಂದಗೋಳ, ಕಟ್ನೂರ, ನರಗುಂದ, ನವಲಗುಂದ ಹೀಗೆ ಅನೇಕ ಕಡೆ ಕಡೆ ಹೋಗಿ ಹಸಿರು ಹುಲ್ಲು, ಕರಕಿ ತರುತ್ತೇನೆ. ಭಕ್ತರು ಬಂದು ಕೊಳ್ಳುತ್ತಾರೆ. ಇದರಿಂದಲೇ ಕುಟುಂಬ ಸಾಗಿಸುತ್ತಿದ್ದೇನೆ~ ಎನ್ನುತ್ತಾರೆ ಹುಲ್ಲು ಮಾರುವ ಯಲ್ಲಮ್ಮ. `ಹಬ್ಬ ಹರಿದಿನದಂದು ಜನ ಬಹಳ ಬರುತ್ತಾರೆ.
 
ಬೇರೆ ದಿನಕ್ಕಿಂತ ಅಂದು ಹೆಚ್ಚು ಲಾಭ~ ಎನ್ನುವ ಹೊನ್ನಮ್ಮನ ಮುಖದಲ್ಲಿ ಖುಷಿಯೋ ಖುಷಿ. ಇದೇನೆ ಇರಲಿ. ಬರದಿಂದ ಕಂಗೆಟ್ಟಿರುವ ಜಿಲ್ಲೆಯ ಕೆಲ ಭಾಗದ ಜಾನುವಾರುಗಳು ಕುಡಿಯಲು ನೀರು, ತಿನ್ನಲು ಹ್ಲ್ಲುಲ್ಲು ಸಮರ್ಪಕವಾಗಿ ಸಿಗದೇ ಒದ್ದಾಡುತ್ತಿರುವ ದಿನಗಳಲ್ಲಿ ಮ್ಯಾದಾರ ಓಣಿ ಆಕಳುಗಳಿಗೆ ಮಾತ್ರ ವರ್ಷವಿಡೀ ಹಸಿರು ಹ್ಲ್ಲುಲಿನ ಭಾಗ್ಯ, ರಾಜವೈಭೋಗ.
 ಚಿತ್ರ: ತಾಜುದ್ದೀನ್ ಆಜಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.