ADVERTISEMENT

ಹೊಳೆ ಆಂಜನೇಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST
ಹೊಳೆ ಆಂಜನೇಯಸ್ವಾಮಿ
ಹೊಳೆ ಆಂಜನೇಯಸ್ವಾಮಿ   

ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾ ನದಿ ದಂಡೆಯ ಮೇಲಿರುವ ಆಂಜನೇಯ ಸ್ವಾಮಿ ದೇವಸ್ಥಾನ ಮಂಡ್ಯ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರ `ಹೊಳೆ ಆಂಜನೇಯ~ ಎಂದೇ ಪ್ರಸಿದ್ಧಿ ಪಡೆದಿದೆ.

ಶ್ರಿಪಾದರಾಜರು ಮತ್ತು ವ್ಯಾಸರಾಜರು ಇಲ್ಲಿ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರೆಂದು ಎನ್ನಲಾಗಿದ್ದು, ಈ ಕಾರಣದಿಂದಾಗಿ ಈ ಕ್ಷೇತ್ರ ಪ್ರಾಮುಖ್ಯತೆ ಪಡೆದಿದೆ.

ವ್ಯಾಸರಾಜರು ಮತ್ತು ಅವರ ವಿದ್ಯಾಗುರುಗಳಾದ ಶ್ರಿಪಾದರಾಜರು ದೇಶದ ಉದ್ದಗಲದಲ್ಲಿ 732 ಆಂಜನೇಯ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದರು ಎಂದು ಹೇಳಲಾಗಿದೆ. ಪ್ರತಿ ದಿನ ನೂರಾರು ಜನ ಭಕ್ತರು ಹೊಳೆ ಆಂಜನೇಯನ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ.
 
ಭಕ್ತರ ಅಭೀಷ್ಟಗಳನ್ನು ಹೊಳೆ ಆಂಜನೇಯ ನೆರವೇರಿಸುತ್ತಾನೆ ಎಂಬ ನಂಬಿಕೆ ಜನರಲ್ಲಿದೆ.
ಈ ದೇವಸ್ಥಾನ ಸುಮಾರು 550 ವರ್ಷಗಳ ಹಿಂದೆ (ವಿಜಯನಗರದ ಅರಸರ ಕಾಲದಲ್ಲಿ) ನಿರ್ಮಾಣವಾಯಿತು ಎನ್ನಲಾಗಿದೆ. ಈ ಕ್ಷೇತ್ರದಲ್ಲಿ ಪ್ರಾಣ (ಆಂಜನೇಯ) ದೇವರು ಜಾಗೃತನಾಗಿ ನೆಲೆಸಿದ್ದಾನೆ ಎಂಬ ನಂಬಿಕೆ ಭಕ್ತರಲ್ಲಿದೆ.

ಇಲ್ಲಿನ ಆಂಜನೇಯನ ಮೂರ್ತಿ ಆಕರ್ಷಣೀಯವಾಗಿದೆ. ಆಂಜನೇಯನು ರಾಮಾಯಣ ಕಾಲದಲ್ಲಿ ಹನುಮನಾಗಿ, ಮಹಾಭರತ ಕಾಲದಲ್ಲಿ ಭೀಮನಾಗಿ ಮತ್ತು ಕಲಿಯುಗದಲ್ಲಿ ಮದ್ವಾಚಾರ್ಯರಾಗಿ ಅವತಾರ ಎತ್ತಿದನೆಂದು ಹೇಳಲಾಗಿದೆ. ಇಲ್ಲಿರುವ ಹನುಮನ ಮೂರ್ತಿಯ ಎರಡು ಬೆರಳು ಉದ್ದ ಇವೆ.

ಇವು ಮಧ್ವಚಾರ್ಯರು ಪ್ರತಿಪಾದಿಸಿರುವ ದ್ವೈತ ಸಿದ್ಧಾಂತವನ್ನು ಸಂಕೇತಿಸುತ್ತವೆ. ಆಂಜನೇಯ ತನ್ನ ಕೈಯಲ್ಲಿ ಸೌಗಂಧಿಕಾ ಪುಷ್ಪ ಹಿಡಿದುಕೊಂಡಿರುವುದು ಭೀಮನ ಅವತಾರವನ್ನು ಪ್ರತಿನಿಧಿಸುತ್ತದೆ. ಬಾಲದಲ್ಲಿ ಗಂಟೆ ಇದೆ. ಆಂಜನೇಯನ ಹನುಮನ ತಲೆಯ ಭಾಗದಲ್ಲಿ ಸೂರ್ಯ, ಚಂದ್ರರಿದ್ದಾರೆ. ಇಲ್ಲಿನ ಆಂಜನೇಯನಿಗೆ ಜುಟ್ಟು ಇದೆ.

ಆಂಜನೇಯನ ಶಿಲಾ ಮೂರ್ತಿ ಪ್ರತಿ ವರ್ಷ 6 ರಿಂದ 7 ಇಂಚು ಬೆಳೆಯುತ್ತದೆ ಎಂದು ಜನರು ನಂಬಿದ್ದಾರೆ. ದೇವಸ್ಥಾನದ ಅರ್ಚಕ ಪ್ರದೀಪ್ ಹೇಳುವಂತೆ 2004ರಲ್ಲಿ ರಾಮನವಮಿಯ ದಿನದಂದು ದೇವಸ್ಥಾನ ಬಾಗಿಲು ಹಾಕಿದ್ದರೂ ಒಳಗಿನಿಂದ ಶಂಖ, ಜಾಗಟೆ, ನಗಾರಿಯ ಶಬ್ಧ ಕೇಳಿದ ಅನುಭವ ಅನೇಕರಿಗೆ ಆಗಿದೆ. ಈ ವರ್ಷದ ಚಂದ್ರಗ್ರಹಣ ಸಮಯದಲ್ಲಿ ದೇವಸ್ಥಾನ ಬಾಗಿಲು ಮುಚ್ಚಿದ್ದ ಸಂದರ್ಭದಲ್ಲೂ ಒಳಗಿನಿಂದ ಶಂಖ ಹಾಗೂ ಜಾಗಟೆ ಬಾರಿಸಿದ ಶಬ್ಧ ಬಂದಿತ್ತು ಎಂದು ಹೇಳುತ್ತಾರೆ.

ಈ ಕ್ಷೇತ್ರದಲ್ಲಿ ನಡೆಯುವ ಪೂಜೆಯೂ ವಿಶಿಷ್ಟವಾದದು. ಇಲ್ಲಿ ಪೂಜೆಗೆ ಬರುವ ಭಕ್ತರಿಗೆ ಅರ್ಚಕರು 1.25 ರೂಪಾಯಿ ಕೊಡುತ್ತಾರೆ. ಅದನ್ನು ಭಕ್ತಿಯಿಂದ  ಸ್ವೀಕರಿಸಿ ಸಂಕಲ್ಪ ಮಾಡಿಕೊಂಡು ಪೂಜೆ ಮಾಡಿದರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ. ಇಲ್ಲಿನ ಆಂಜನೇಯನಿಗೆ ಪೂಜೆ ಸಲ್ಲಿಸಿದರೆ ಮದುವೆಗೆ ಇರುವ ಅಡ್ಡಿಗಳು ನಿವಾರಣೆ ಆಗುತ್ತವೆ.

ಮಕ್ಕಳಿಲ್ಲದವರಿಗೆ ಸಂತಾನ ಫಲ ಸಿಗುತ್ತದೆ. ಹಣಕಾಸಿನ ವ್ಯಾಜ್ಯಗಳು ಬಗೆಹರಿಯುತ್ತವೆ. ಹೀಗಾಗಿ ಹೆಚ್ಚಿನ ಜನರು ಇಲ್ಲಿಗೆ ಬಂದು ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸುವ ಪರಿಪಾಠವಿದೆ.

ವಿಶೇಷ ಪೂಜೆ ಮತ್ತು ಸೇವಾ ವಿವರಗಳಿಗೆ ಎಚ್.ಎನ್.ಕೃಷ್ಣಾಚಾರ್ ಅವರನ್ನು ಸಂಪರ್ಕಿಸಬಹುದು. ಅವರ ದೂರವಾಣಿ : 98441 41014. ಇಲ್ಲಿ ಉಳಿದುಕೊಳ್ಳಲು ಬಯಸುವವರಿಗೆ ಮದ್ದೂರಿನಲ್ಲಿ ಸಾಕಷ್ಟು ವಸತಿ ಸೌಕರ್ಯ ಇದೆ. ಹನ್ನೆರಡು ಕಿ.ಮೀ. ದೂರದಲ್ಲಿರುವ ಮಂಡ್ಯದಲ್ಲಿ ಖಾಸಗಿ ಲಾಡ್ಜ್ ಮತ್ತು ಹೊಟೇಲ್‌ಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT