ADVERTISEMENT

ಕಲ್ಲೂಡಿಯ ಹಪ್ಪಳ ಮಾಡಿತಲ್ಲ ಸಪ್ಪಳ!

ಈರಪ್ಪ ಹಳಕಟ್ಟಿ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST
ಕಲ್ಲೂಡಿಯ ಹಪ್ಪಳ ಮಾಡಿತಲ್ಲ ಸಪ್ಪಳ!
ಕಲ್ಲೂಡಿಯ ಹಪ್ಪಳ ಮಾಡಿತಲ್ಲ ಸಪ್ಪಳ!   

ನೀವು ಚಿಕ್ಕಬಳ್ಳಾಪುರ ಜಿಲ್ಲೆಯ ಕಲ್ಲೂಡಿ ಗ್ರಾಮಕ್ಕೆ ಒಮ್ಮೆ ಬನ್ನಿ. ಈ ಪುಟ್ಟ ಊರಿನ ಯಾವುದೇ ಓಣಿ, ಬೀದಿಯಲ್ಲಿ ಸುತ್ತಾಡಿ ನೋಡಿ. ಅಥವಾ ಯಾವುದೇ ಮಾಳಿಗೆ ಇಣುಕಿದರೂ ಆದೀತು. ಎಲ್ಲಿ ಹೋದರೂ ಹಪ್ಪಳ, ಸಂಡಿಗೆ, ಚಕ್ಕುಲಿ, ಫೇಣಿಯದೇ ಘಮಲು.

ಸುತ್ತಲಿನ ಊರುಗಳೆಲ್ಲ ಸವಿ ನಿದ್ದೆಯಲ್ಲಿರುವಾಗ ಈ ಹಳ್ಳಿಯ ಗಲ್ಲಿ ಗಲ್ಲಿಗಳಲ್ಲಿ ಹೊತ್ತಿ ಉರಿಯುವ ಒಲೆಗಳ ಮೇಲಿನ ದೊಡ್ಡ, ದೊಡ್ಡ ತಪ್ಪಲೆಗಳಲ್ಲಿ ಅಕ್ಕಿ ಹಿಟ್ಟನ್ನು ಹದವಾಗಿ ಬೇಯಿಸುವ ಗಡಿಬಿಡಿ. ಬೆಳಕು ಹರಿವ ಹೊತ್ತಿಗೆಲ್ಲ ಈ ಊರಿನ ತುಂಬಾ ಬೆಂದ ಅಕ್ಕಿ ಹಿಟ್ಟಿನ ವಾಸನೆ!

ನೆರೆ ಊರಿನವರು ಅಂಗಳ ಗುಡಿಸುವ ಹೊತ್ತಿಗೆ ಈ ಹಳ್ಳಿಯ ಪ್ರತಿ ಮನೆಯ ಮುಂದೆಯೂ ಕುಟುಂಬದ ಸದಸ್ಯರೆಲ್ಲ ಕೂಡಿ ರಂಗೋಲಿ ಹಾಕುತ್ತಿರುವಂತೆ ಭಾಸವಾಗುವ ನೋಟಗಳು. ಆದರೆ, ಅವರು ಹಾಕುವುದು ರಂಗೋಲಿಯನ್ನಲ್ಲ. ತೊಳೆದು ಹಾಕಿದ ಸೀರೆಗಳ ಮೇಲೆ ಹಪ್ಪಳ, ಸಂಡಿಗೆ, ಚಕ್ಕುಲಿ, ಫೇಣಿ ಆಕಾರ ಪಡೆಯುತ್ತಿರುತ್ತವೆ.

ADVERTISEMENT

ಒಂದು ಕಾಲದಲ್ಲಿ ರೇಷ್ಮೆ ಕೃಷಿಯಲ್ಲಿ ಬದುಕು ಕಟ್ಟಿಕೊಂಡಿದ್ದ ಕಲ್ಲೂಡಿ ಜನ, 20 ವರ್ಷಗಳಲ್ಲಿ ಬದಲಾದ ಸನ್ನಿವೇಶಗಳಿಗೆ ತಕ್ಕಂತೆ ಗೃಹ ಕೈಗಾರಿಕೆಯನ್ನು ಅಪ್ಪಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಸದ್ದಿಲ್ಲದಂತೆ ಸಣ್ಣ ಹಳ್ಳಿಯಲ್ಲಿ ನಡೆದ ‘ಅರ್ಥಕ್ರಾಂತಿ’ಯೊಂದು ಇವತ್ತು ತಿಂಗಳಿಗೆ ಸುಮಾರು ₹1 ಕೋಟಿ ವಹಿವಾಟಿಗೆ ತಲುಪಿದೆ.

ಸುಮಾರು 2000 ಜನಸಂಖ್ಯೆ, 720 ಮನೆಗಳನ್ನು ಹೊಂದಿ ರುವ ಕಲ್ಲೂಡಿಯಲ್ಲಿ ಸದ್ಯ ಐನೂರಕ್ಕೂ ಅಧಿಕ ಕುಟುಂಬಗಳಿಗೆ ಹಪ್ಪಳ, ಸಂಡಿಗೆಯೇ ಜೀವನಾಧಾರ. ಊರಿನಲ್ಲಿ ಐದು ಹಿಟ್ಟಿನ ಗಿರಣಿಗಳಿದ್ದು, ಅವು ನಿತ್ಯ ತಲಾ ನಾಲ್ಕು ಕ್ವಿಂಟಲ್‌ ಅಕ್ಕಿನುಚ್ಚು ಅರೆದು ಹಿಟ್ಟು ಮಾಡುತ್ತವೆ. ಈ ಚಿಕ್ಕ ಹಳ್ಳಿಯಲ್ಲಿ ದಿನಕ್ಕೆ 20 ಕ್ವಿಂಟಲ್‌ ಅಕ್ಕಿಹಿಟ್ಟಿನಿಂದ ಬಗೆ ಬಗೆ ಕುರುಕಲು ಪದಾರ್ಥಗಳು ಸಿದ್ಧವಾಗುತ್ತವೆ.

ಧೋ ಎಂದು ಮಳೆ ಹಿಡಿವ ದಿನ ಹೊರತುಪಡಿಸಿದಂತೆ ವರ್ಷವಿಡೀ ಈ ಹಳ್ಳಿಯ ಚಿತ್ರಣ ಬದಲಾಗುವುದೇ ಇಲ್ಲ. ಇಲ್ಲಿ ಅಕ್ಕಿ, ರಾಗಿ, ಗೋಧಿ ಹಿಟ್ಟು ಬಳಸಿ ಹಪ್ಪಳ ತಯಾರಿಸಲಾಗುತ್ತದೆ. ಪುದೀನಾ, ಸಬ್ಬಕ್ಕಿ, ಜೀರಿಗೆ, ಉಪ್ಪು, ಖಾರ, ಮೆಣಸು, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಟೊಮೆಟೊ... ಹೀಗೆ ಬಗೆ ಬಗೆಯ ಸ್ವಾದದ ಹಪ್ಪಳ ಸಿಗುತ್ತವೆ.

ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿ ಇರುವ ದೊಡ್ಡ ದೊಡ್ಡ ಹೋಟೆಲ್‌ಗಳು, ದಾಬಾ, ರೆಸ್ಟೊರೆಂಟ್, ವಸತಿ ಗೃಹಗಳು, ಕ್ಯಾಂಟೀನ್‌ಗಳು ಹಾಗೂ ಕುರುಕಲು ತಿಂಡಿ ಮಾರಾಟದ ಮಳಿಗೆಗಳಿಗೆ ಇಲ್ಲಿಂದ ಹಪ್ಪಳ, ಸಂಡಿಗೆ ಪೂರೈಕೆಯಾಗುತ್ತವೆ.

ಕಲ್ಲೂಡಿಯಲ್ಲಿ ಸದ್ಯ 18 ಬಗೆಯ ಗೃಹ ಕೈಗಾರಿಕೆ ಉತ್ಪನ್ನಗಳು ಸಿದ್ಧವಾಗುತ್ತಿವೆ. ಆದರೂ ಈ ಪೈಕಿ ಹಪ್ಪಳ, ಸಂಡಿಗೆ, ಚಕ್ಕುಲಿ, ಫೇಣಿ ಯದ್ದೇ ಸಿಂಹಪಾಲು. ಇಲ್ಲಿನ ಹಪ್ಪಳ ದಲ್ಲಾಳಿಗಳ ಮೂಲಕ ರಾಜ್ಯದ ಮೂಲೆ ಮೂಲೆಗೂ ಪೂರೈಕೆಯಾಗುವ ಜತೆಗೆ ಆಂಧ್ರ ಪ್ರದೇಶ, ತಮಿಳುನಾಡು, ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಲಕ್ಕೆ ಸಹ ಪೂರೈಕೆ ಆಗುತ್ತದೆ. ಅಮೆರಿಕಕ್ಕೆ ಕೂಡ ರಫ್ತು ಆಗಿದ್ದುಂಟು.

ಇವತ್ತು ಈ ಗ್ರಾಮದ ತುಂಬಾ ಸುತ್ತಾಡಿ ಹೆಂಚಿನ ಮನೆ ಪತ್ತೆ ಮಾಡಿದರೆ ಅದು ‘ಐತಿಹಾಸಿಕ ಸ್ಮಾರಕ’ದಂತೆ ಭಾಸವಾಗುತ್ತದೆ. ಏಕೆಂದರೆ ಈ ಹಳ್ಳಿಯಲ್ಲಿ ‘ಹಪ್ಪಳ ಕ್ರಾಂತಿ’ ಯಿಂದ ನಿರುದ್ಯೋಗ, ಬಡತನ ತೊಡೆದು ಹೋಗಿವೆ.

ಪ್ರತಿಯೊಬ್ಬರೂ ಸ್ಥಿತಿವಂತ ರಾಗಿ ಅಚ್ಚುಕಟ್ಟಾಗಿ ಆರ್‌ಸಿಸಿ ಮನೆ ಕಟ್ಟಿಸಿಕೊಂಡಿದ್ದಾರೆ. ಇಲ್ಲಿನ ಜನ ಪರಸ್ಥಳಕ್ಕೆ ಕೂಲಿ ಕೆಲಸಕ್ಕೆ ಹೋಗುವುದನ್ನು ಮರೆತು ಅದೆಷ್ಟೋ ವರ್ಷಗಳಾಗಿವೆ. ಈ ಊರಿನ ಒಬ್ಬ ಮಹಿಳೆ ಮನೆಗೆಲಸ, ಮಕ್ಕಳ ಚಾಕರಿ ಎಲ್ಲಾ ಪೂರೈಸಿಕೊಳ್ಳುವ ನಡುವೆಯೂ ದಿನಕ್ಕೆ ಖರ್ಚು ಕಳೆದು ಕನಿಷ್ಠ ₹200 ಸಂಪಾದಿಸುತ್ತಾಳೆ. ನಿತ್ಯ ಕನಿಷ್ಠ 10 ಕೆ.ಜಿ.ಯಿಂದ ಗರಿಷ್ಠ 50ಕೆ.ಜಿ. ಯಷ್ಟು ಹಿಟ್ಟಿನ ಹಪ್ಪಳ ಮಾಡುವ ಮನೆಗಳು ಇಲ್ಲಿವೆ.

ಒತ್ತೆ ಮನೆ ವಾಪಸ್‌: ಇದೆಲ್ಲದರ ಪರಿಣಾಮ ಈ ಊರಿನ ಮಹಿಳೆ ಯನ್ನು ಅವಳಿಗೆ ಅರಿವಿಲ್ಲದೆಯೇ ಆಂತರ್ಯದಲ್ಲಿ ಗಟ್ಟಿಗೊಳಿಸುತ್ತ ಬಂದಿದೆ. ‘ನಾನೂ ಈಗ ದುಡಿಯುತ್ತಿದ್ದೇನೆ. ನೀನಿಲ್ಲದೆಯೂ ನಾ ಬದುಕ ಬಲ್ಲೆ’ ಎಂಬ ವಾತಾವರಣ ಪ್ರತಿ ಮನೆಯಲ್ಲೂ ಹರಳು ಗಟ್ಟುತ್ತಿದ್ದಂತೆ ಮೊದಲೆಲ್ಲ ಊರಿನಲ್ಲಿ ಜೋರಾಗಿ ಕೇಳಿಬರುತ್ತಿದ್ದ ಕುಡಿತ, ಗಲಾಟೆ ಸದ್ದು ಈಗ ಅಡಗಿದೆ.

ಸೋಮಾರಿ, ನಿರುದ್ಯೋಗಿ ಗಂಡಂದಿರು ಹೆಂಡತಿಯರ ನಿಯಂತ್ರಣಕ್ಕೆ ಬಂದು ‘ಸಹಕಾರ ತತ್ವ’ದ ಜೀವನ ಕಂಡು ಕೊಂಡಿದ್ದಾರೆ. ಅದಕ್ಕೆ ಪ್ರತಿಯಾಗಿ ಮಹಿಳೆಯರು ಗಂಡ ಮಾಡಿದ ಸಾಲ ತೀರಿಸಿದ್ದಾರೆ. ಒತ್ತೆ ಹಾಕಿದ ಮನೆ ಬಿಡಿಸಿಕೊಂಡಿದ್ದಾರೆ. ಚೀಟಿ ಹಾಕುವುದನ್ನು ರೂಢಿಸಿಕೊಂಡಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಈ ಊರಿನ ಜನ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಆರಂಭಿಸಿದ್ದಾರೆ. ಹೆಣ್ಣು ಮಕ್ಕಳೇ ದುಡಿದು ಸುಸಜ್ಜಿತವಾದ ಮಹಡಿ ಮನೆಗಳನ್ನು ಕಟ್ಟಿಸಿಕೊಳ್ಳುತ್ತಿದ್ದಾರೆ. ಹಪ್ಪಳ, ಸಂಡಿಗೆ ತಯಾರಿಸಲು ಮನೆ ಮಂದಿ ಎಲ್ಲ ಕೈಜೋಡಿಸಿದವರು ದಿನಕ್ಕೆ ಸಾವಿರಾರು ರೂಪಾಯಿಯಂತೆ ಉಳಿತಾಯ ಮಾಡುತ್ತಿದ್ದಾರೆ.

ಕೆಲ ವರ್ಷಗಳ ಹಿಂದೆ ಕಲ್ಲೂಡಿಯಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್‌ ಶಾಖೆ ತೆರೆಯಲು ಮುಂದಾದಾಗ ಅನೇಕರು ಆಕ್ಷೇಪವೆತ್ತಿದ್ದರು. ಇವತ್ತು ಶೇ 80ರಷ್ಟು ಮಹಿಳಾ ಗ್ರಾಹಕರನ್ನೇ ಹೊಂದಿರುವ ಆ ಶಾಖೆ ಕೋಟಿಗಟ್ಟಲೆ ವಹಿವಾಟಿನಿಂದಾಗಿ ತಾಲ್ಲೂಕಿ ನಲ್ಲಿಯೇ ಮೊದಲ ಸ್ಥಾನದಲ್ಲಿದೆ. ಸದ್ಯ ಈ ಊರಿನಲ್ಲಿ ಸುಮಾರು ಹತ್ತು ಮಹಿಳಾ ಸ್ವಸಹಾಯ ಸಂಘಗಳಿವೆ. ಪ್ರತಿ ಸಂಘದವರು ಸರ್ಕಾರದ ಸಾಲ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವ ಜತೆಗೆ ಪ್ರಾಮಾಣಿಕ ವಾಗಿ ಸಾಲ ಮರುಪಾವತಿ ಮಾಡುತ್ತ ಬರುತ್ತಿದ್ದಾರೆ.

ಚಿಕ್ಕ ಹಳ್ಳಿಯಲ್ಲಿ ಸದ್ದಿಲ್ಲದೆ ಬೀಸಿದ ಈ ಬದಲಾವಣೆಯ ಗಾಳಿ ನೆರೆಯ ಗಂಗಸಂದ್ರ, ಪೋತೇನಹಳ್ಳಿ, ಮಾದನಹಳ್ಳಿ, ಗೊಟಗನಾಪುರ ಹಳ್ಳಿಗಳಿಗೂ ಪಸರಿಸಿದೆ. ಕಲ್ಲೂಡಿಯ ಹೆಣ್ಣು ಮಕ್ಕಳನ್ನು ತಂದುಕೊಂಡವರು, ಈ ಊರಿಗೆ ಹೆಣ್ಣುಮಕ್ಕಳನ್ನು ಕೊಟ್ಟ ಪರಸ್ಥಳದ ನೆಂಟರ ಮನೆಯಲ್ಲೂ ಹಪ್ಪಳದ ಹಿಟ್ಟು ಬೇಯಿಸುವ ಒಲೆಗಳು ಕಾಣಿಸಿಕೊಳ್ಳಲು ಆರಂಭಿಸಿವೆ.

ಕುರುಕಲು ತಿಂಡಿಗಳ ಉದ್ಯಾನ ಎಕ್ಸ್‌ಪ್ರೆಸ್‌

ಕಲ್ಲೂಡಿಯ ಜನರಿಗೆ ಬೆಂಗಳೂರಿಗೆ ಹಪ್ಪಳ ತೆಗೆದುಕೊಂಡು ಹೋಗಲು ಸುಲಭ ಮತ್ತು ಕಡಿಮೆ ಖರ್ಚಿನ ಮಾರ್ಗವೆಂದರೆ ಅದು ರೈಲು. ಗೌರಿಬಿದನೂರಿನ ರೈಲು ನಿಲ್ದಾಣದ ಮೂಲಕ ಬೆಳಿಗ್ಗೆ 5.30 ರಿಂದ 9.30ರ ಅವಧಿಯಲ್ಲಿ ನಾಲ್ಕು ರೈಲು ಸಂಚರಿಸುತ್ತವೆ. ಈ ಎಲ್ಲ ರೈಲುಗಳು ಗೌರಿಬಿದನೂರಿನಿಂದ ನಿತ್ಯ ಹಪ್ಪಳ, ಸಂಡಿಗೆ ಹೊತ್ತೇ ಓಡಬೇಕು. ಅದರಲ್ಲೂ ಉದ್ಯಾನ ಎಕ್ಸ್‌ಪ್ರೆಸ್‌ ಮತ್ತು ಹಿಂದೂಪುರ–ಬೆಂಗಳೂರು ಪ್ಯಾಸೆಂಜರ್‌ ರೈಲಿನ ಯಾವ ಬೋಗಿ ಇಣುಕಿದರೂ ಹಪ್ಪಳದ ದರ್ಶನವಾಗುತ್ತದೆ. ದಿನಾಲೂ ಸುಮಾರು 150 ಜನ ರೈಲುಗಳ ಮೂಲಕ ಬೆಂಗಳೂರಿಗೆ ಹಪ್ಪಳ ತೆಗೆದುಕೊಂಡು ಹೋಗುತ್ತಾರೆ. ಬೋಗಿಗಳೆಲ್ಲ ಹಪ್ಪಳ ಚೀಲಗಳಿಂದಲೇ ತುಂಬಿ ಪ್ರಯಾಣಿಕರಿಗೆ ಜಾಗವಿಲ್ಲದಂತಾಗಿ ಗಲಾಟೆಗಳಾದ ಉದಾಹರಣೆಗಳೂ ಉಂಟು.

ಸೌಹಾರ್ದತೆ ಮೂಡಿಸಿದ ಹಪ್ಪಳ: ಗೃಹ ಕೈಗಾರಿಕೆ ಈ ಊರಿನ ಆರ್ಥಿಕ ಜೀವನದಲ್ಲಿ ಬದಲಾವಣೆ ತಂದಷ್ಟೇ ಸಾಮಾಜಿಕ ಬದುಕಿನಲ್ಲಿ ಸಹ ಪರಿವರ್ತನೆ ಮೂಡಿಸಿದೆ. ಹಪ್ಪಳ ಮಾಡುವುದನ್ನು ಕಲಿಯುವ ಮುನ್ನ ಈ ಊರಿನ ಮಹಿಳೆಯರಲ್ಲಿದ್ದ ಸ್ವಭಾವ ಇದೀಗ ಸಂಪೂರ್ಣ ಬದಲಾಗಿದೆ. ಈ ಹಿಂದೆ ಸಣ್ಣಪುಟ್ಟದ್ದಕ್ಕೂ ನೆರೆಮನೆಯವರೊಂದಿಗೆ ಕಾಲು ಕೆದರಿ ಜಗಳ ಮಾಡುತ್ತಿದ್ದವರೆಲ್ಲ ಇಂದು ಸಹಿಷ್ಣುತೆ ಗುಣ ಬೆಳೆಸಿಕೊಂಡಿದ್ದಾರೆ. ಪರಸ್ಪರರಲ್ಲಿ ಸೌಹಾರ್ದ, ವಿಶ್ವಾಸ ಹೆಚ್ಚಿದೆ.

ಜಗಳ ಮಾಡಿಕೊಂಡರೆ ಎಲ್ಲಿ ನೆರೆಮನೆಯ ಅಂಗಳ, ಮಾಳಿಗೆಯಲ್ಲಿ ತನ್ನ ಹಪ್ಪಳ ಒಣಗಿಸಲು ಜಾಗ ಸಿಗುವುದಿಲ್ಲವೋ ಎನ್ನುವ ಚಿಂತೆಯೇ ಇದಕ್ಕೆ ಮುಖ್ಯ ಕಾರಣ ಎಂಬುದು ಸ್ವಾರಸ್ಯದ ಸಂಗತಿ.

ಸೀರೆ ಲೆಕ್ಕದಲ್ಲಿ ಕೂಲಿ: ಇಲ್ಲಿನ ಜನರು ಕೆಲಸ ಅರಸಿ ಪರವೂರಿಗೆ ಹೋಗುವುದಿಲ್ಲವಾದರೂ ಬೆಳಿಗ್ಗೆ ಸ್ವಲ್ಪ ಬಿಡುವು ಮಾಡಿಕೊಂಡು ಪಕ್ಕದ ಮನೆಯವರಿಗೆ ಹಪ್ಪಳ ಇಟ್ಟು ಕೊಡಲು ಹೋಗುತ್ತಾರೆ. ಒಂದು ಸೀರೆ ತುಂಬ ಹಪ್ಪಳ ಇಟ್ಟು ಕೊಟ್ಟರೆ ₹15 ಕೂಲಿ. ಚೆನ್ನಾಗಿ ಇಡುವವರಿಗೆ ₹20 ಸಿಗುವುದು ಉಂಟು. ಒಬ್ಬ ಮಹಿಳೆ ಬೆಳಗಿನ ಎರಡ್ಮೂರು ಗಂಟೆಗಳಲ್ಲಿ ಸುಮಾರು ಐದು ಸೀರೆಗಳಷ್ಟು ಹಪ್ಪಳ ಇಡುತ್ತಾರೆ. ಉಳಿದ ಸಮಯದಲ್ಲಿ ಮನೆಗೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೀಗಾಗಿ ಈ ಊರಿನಲ್ಲಿ ಯಾರಿಗೂ ಪುರುಸೊತ್ತಿಲ್ಲ.

ರೇಷ್ಮೆ ಬಿಟ್ಟು ಹಪ್ಪಳಕ್ಕೆ ನಿಂತೆ: ‘ಮೊದಲು ರೇಷ್ಮೆ ಹುಳು ಸಾಕಾಣೆ ಮಾಡುತ್ತಿದ್ದೆ. ಮಳೆ ಕೈಕೊಟ್ಟಿತು. ಕೆರೆ ಕಟ್ಟೆಗಳು ಒಣಗಿದವು. ಮುಂದೇನು ಮಾಡುವುದು ಎಂದು ಚಿಂತಿಸುವ ಹೊತ್ತಿಗೆ ಊರಿನಲ್ಲಿ ಹಪ್ಪಳ ತಯಾರಿಕೆ ತರಬೇತಿ ನಡೆಯಿತು. ಮನೆಯಾಕೆ ಹಪ್ಪಳ ಮಾಡಲು ಕಲಿತಳು. ಅವಳಿಂದ ನಾನೂ ಕಲಿತೆ. ಏಳೆಂಟು ವರ್ಷಗಳಿಂದ ಹಪ್ಪಳದಿಂದಲೇ ಬದುಕು ನಡೆಸುತ್ತಿದ್ದೇವೆ. ಮನೆಯಲ್ಲೇ ನೂರು ಹಪ್ಪಳಕ್ಕೆ ₹30ರಂತೆ ಸಗಟು ಮಾರಾಟ ಮಾಡುತ್ತೇನೆ’ ಎಂದು ಕೋಳಿ ನರಸಿಂಹಮೂರ್ತಿ ತಿಳಿಸಿದರು.

‘ಒಂದೂವರೆ ಎಕರೆ ಜಮೀನಿದೆ. ಕೆಲ ವರ್ಷಗಳಿಂದ ಚೆನ್ನಾಗಿ ಮಳೆ, ಬೆಳೆ ಎರಡೂ ಇಲ್ಲ. ನಮಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹೀಗಾಗಿ ವ್ಯವಸಾಯ ನಂಬಿಕೊಂಡರೆ ಹೊಟ್ಟೆ ತುಂಬುವುದಿಲ್ಲ ಎಂದು ಅರಿತು ನಾನು ಹಪ್ಪಳ, ಚಕ್ಕುಲಿ, ಫೇಣಿ, ಸಂಡಿಗೆ ಮಾಡುವುದು ಕಲಿತೆ. ಇವತ್ತು ಹೊರಗಡೆ ಬಿಸಿಲಿಗೆ ಹೋಗಿ ದುಡಿಯುವ ಬದಲು ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದೇವೆ. ಮಾರಾಟಗಾರರೇ ಮನೆಗೆ ಬಂದು ಖರೀದಿಸುತ್ತಾರೆ. ಅವರೇ ಪದಾರ್ಥಗಳಿಗೆ ಬೇಕಾದ ಅಕ್ಕಿ ನುಚ್ಚಿನ ಮೂಟೆ ತಂದು ಕೊಡುತ್ತಾರೆ’ ಎಂದು ಗೌರಮ್ಮ ಹೇಳಿದರು.

ಐಟಿಐನಲ್ಲಿ ಚಿನ್ನದ ಪದಕ ಪಡೆದ ಕಲ್ಲೂಡಿಯ ನರಸಿಂಹಮೂರ್ತಿ ಅವರಿಗೆ ತಾಂತ್ರಿಕ ಶಿಕ್ಷಣ ಪಡೆದದ್ದನ್ನು ಏನಾದರೂ ಮಾಡಿ ಸಾರ್ಥಕ ಮಾಡಿಕೊಳ್ಳುವ ಬಯಕೆ. ಆ ನಿಟ್ಟಿನಲ್ಲಿ ಯೋಚಿಸುತ್ತಿದ್ದವರ ಕಣ್ಣೆದುರು ಬಂದದ್ದು ತನ್ನ ಊರಿನ ಜನ ಹಪ್ಪಳ ಮಾಡಲು ಪಡುವ ಕಷ್ಟ.

ಅನೇಕ ಪದಾರ್ಥಗಳನ್ನು ಮಾಡಲು ಯಂತ್ರಗಳಿರುವಾಗ ಹಪ್ಪಳದ ಯಂತ್ರ ಏಕಿಲ್ಲ ಎಂದು ತಲೆಕೆಡಿಸಿಕೊಂಡು, ಆ ಬಗ್ಗೆ ದೀರ್ಘ ಅಧ್ಯಯನವನ್ನೇ ನಡೆಸಿದರು. ಅಂತಿಮವಾಗಿ ತನ್ನ ಕನಸಿನ ಯಂತ್ರದ ಪರಿಕಲ್ಪನೆ ಸ್ಪಷ್ಟವಾಗುತ್ತಿದ್ದಂತೆ ಕೊಯಮತ್ತೂರಿಗೆ ಹೋಗಿ ಸಲಕರಣೆಗಳನ್ನು ಖರೀದಿಸಿ ಕನಸಿನ ಯಂತ್ರಕ್ಕೆ ಮೂರ್ತರೂಪ ನೀಡಿದರು. ಸಾಮಾನ್ಯವಾಗಿ ಕೈಯಿಂದ 50 ಕೆ.ಜಿ ಹಿಟ್ಟಿನ ಹಪ್ಪಳ ತಯಾರಿಸಬೇಕಾದರೆ ಸುಮಾರು ಏಳೆಂಟು ಜನ ಬೇಕಾಗುತ್ತದೆ. ಆದರೆ ಈ ಯಂತ್ರದ ಸಹಾಯದಿಂದ ಒಬ್ಬರೇ ದಿನಕ್ಕೆ 50 ಕೆ.ಜಿಗೂ ಹೆಚ್ಚು ಹಪ್ಪಳ ತಯಾರಿಸಬಹುದು.

ಬದಲಾವಣೆ ರೂವಾರಿ

ಪುಟ್ಟ ಊರಿನಲ್ಲಿ ನಡೆದ ಈ ಅಗಾಧ ಬದಲಾವಣೆಯ ಹಿಂದಿನ ರೂವಾರಿ ಯಾರು ಎಂದು ಗ್ರಾಮಸ್ಥರನ್ನೆಲ್ಲ ಕೇಳಿದರೆ ಅವರೆಲ್ಲ ಹೇಳುವ ಹೆಸರು ಒಂದೇ. ಅದು ಗಂಗಲಕ್ಷ್ಮಮ್ಮ ಅವರದು. ಕಲ್ಲೂಡಿಯ ಸ್ಥಿತಿವಂತ ಕೃಷಿ ಕುಟುಂಬದ ಛೇರ್ಮನ್‌ ಜಯರಾಮೇಗೌಡರ ಮನೆ ಸೊಸೆ ಗಂಗಲಕ್ಷ್ಮಮ್ಮ ಅವರೇ ಊರಿನ ಮಹಿಳೆಯರನ್ನೆಲ್ಲ ಒಗ್ಗೂಡಿಸಿ ಅವರಲ್ಲಿ ಮೊದಲಿಗರಾಗಿ ಸ್ವಾವಲಂಬನೆಯ ಕನಸು ಬಿತ್ತಿದವರು.


ಗಂಗಲಕ್ಷ್ಮಮ್ಮ

1989ರಲ್ಲಿ ಕಲ್ಲೂಡಿ ಮಂಡಲ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾದ ಗಂಗಲಕ್ಷ್ಮಮ್ಮ ಅವರು, ರಾಜ್ಯ ಸರ್ಕಾರದ ‘ವಿದ್ಯಾ ವಿಕಾಸ’ ಯೋಜನೆಯಡಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹೊಲಿದು ಪೂರೈಸುವ ಕೆಲಸದಲ್ಲಿ ಮಹಿಳೆಯರನ್ನು ತೊಡಗಿಸಿಕೊಂಡರು. 1993ರಲ್ಲಿ ಆ ಯೋಜನೆ ಸ್ಥಗಿತಗೊಂಡಿತು.

ಪರ್ಯಾಯ ಹುಡುಕಾಟ ದಲ್ಲಿದ್ದವರು 1994ರಲ್ಲಿ ‘ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ’ದ (ಐಆರ್‌ಡಿಪಿ) ಭಾಗವಾದ ‘ಡ್ವಾಕ್ರಾ’ (ಗ್ರಾಮೀಣ ಪ್ರದೇಶದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ) ಯೋಜನೆಯಡಿ ಮಹಿಳೆಯರಿಗೆ ಗೃಹೋಪಯೋಗಿ ಆಹಾರ ಪದಾರ್ಥಗಳನ್ನು ತಯಾರಿಸುವ ತರಬೇತಿ ಕೊಡಿಸಲು ನಿರ್ಧರಿಸಿದರು.

ಅದಕ್ಕಾಗಿ ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಶಿಕ್ಷಕಿಯರನ್ನು ಊರಿಗೆ ಕರೆಸಿ ತಮ್ಮ ಮನೆಯ ಆವರಣದಲ್ಲಿಯೇ ಊರಿನ ಮಹಿಳೆಯರಿಗೆಲ್ಲ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಮಸಾಲೆ ಮತ್ತು ಚಟ್ನಿ ಪುಡಿಗಳನ್ನು ತಯಾರಿಸುವ ತರಬೇತಿ ಕೊಡಿಸಿದರು.

ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಪ್ರಶ್ನೆ ಎದುರಾದಾಗ ತಾಲ್ಲೂಕು ಮಹಿಳಾ ಮಂಡಳಿಗಳ ಒಕ್ಕೂಟ ಸ್ಥಾಪಿಸಲಾಯಿತು. ಅದಕ್ಕೆ ಮಾಜಿ ಶಾಸಕಿ ಜ್ಯೋತಿರೆಡ್ಡಿ ಅಧ್ಯಕ್ಷರಾದರೆ, ಗಂಗಲಕ್ಷ್ಮಮ್ಮ ಕಾರ್ಯದರ್ಶಿಯಾಗಿದ್ದರು.

ಈ ಒಕ್ಕೂಟ ಪ್ರಮುಖವಾಗಿ ಕಲ್ಲೂಡಿ ಸೇರಿದಂತೆ ಅಲ್ಲಲ್ಲಿ ಕೆಲವರು ತಯಾರಿಸುತ್ತಿದ್ದ ಗೃಹೋಪಯೊಗಿ ಪದಾರ್ಥಗಳನ್ನು ಒಂದೆಡೆ ಶೇಖರಿಸಿ, ರಾಜ್ಯದಾದ್ಯಂತ ಇದ್ದ ಎಲ್ಲಾ ಜನತಾ ಬಜಾರ್‌ಗಳಿಗೆ ಪೂರೈಕೆ ಮಾಡಲು ಆರಂಭಿಸಿತು. ಜತೆಗೆ ಬೆಂಗಳೂರಿನ ಶಾಸಕರ ಭವನದ ಕ್ಯಾಂಟೀನ್‌ಗೂ ಒಯ್ದಿತು. ಹೀಗೆ ಮಾರುಕಟ್ಟೆ ಹಾದಿ ತೆರೆದುಕೊಂಡಿತು.

ಸದ್ಯ ಕಲ್ಲೂಡಿಯಲ್ಲಿ ಕೆಲವರು ತಮ್ಮದೇ ಆದ ಕಾಯಂ ಗ್ರಾಹಕರನ್ನು ಹುಡುಕಿಕೊಳ್ಳುವ ಜತೆಗೆ ನೇರ ಮಾರುಕಟ್ಟೆ ಕಂಡುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಉಳಿದಂತೆ ಬಹುಪಾಲು ಜನರು ಮನೆ ಬಾಗಿಲಿಗೆ ಬರುವ ಮಧ್ಯವರ್ತಿಗಳಿಗೆ ಉತ್ಪನ್ನಗಳನ್ನು ಮಾರಿ ನಿಶ್ಚಿಂತೆಯಿಂದ ಬದುಕುತ್ತಿದ್ದಾರೆ. ಇನ್ನೊಂದೆಡೆ ಗೌರಿಬಿದನೂರಿನಲ್ಲಿ ಗಂಗಲಕ್ಷ್ಮಮ್ಮ ಅವರು ಮಹಿಳೆಯರು ಸಿದ್ಧಪಡಿಸಿದ ವಸ್ತುಗಳ ಮಾರಾಟಕ್ಕೂ ವ್ಯವಸ್ಥೆ ಮಾಡಿದ್ದಾರೆ.

ಅನೇಕ ಮಹಿಳಾ ಸ್ವಸಹಾಯ ಸಂಘಗಳ ಸ್ಥಾಪನೆಗೆ ಕಾರಣೀಭೂತರಾದ ಗಂಗಲಕ್ಷ್ಮಮ್ಮ ಅವರು 2009ರಲ್ಲಿ ಸಮೃದ್ಧಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ಹುಟ್ಟು ಹಾಕಿ ಸದ್ಯ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಯಲ್ಲಿ ಪ್ರಥಮ ಮಹಿಳಾ ಸಹಕಾರಿ ಬ್ಯಾಂಕ್‌ ಪ್ರಾರಂಭಿಸಿದ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ.
***
ಕಲ್ಲೂಡಿ ಪದಾರ್ಥ, ಪರಸ್ಥಳ ಬ್ರ್ಯಾಂಡ್‌!

ಇವತ್ತು ಕಲ್ಲೂಡಿಯಲ್ಲಿ ಶೇ 10ರಷ್ಟು ಜನ ತಮ್ಮ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಂಡುಕೊಂಡು ಒಳ್ಳೆಯ ಲಾಭ ಪಡೆಯುತ್ತಿದ್ದಾರೆ. ಆದರೆ ಶೇ 90ರಷ್ಟು ಜನರು ಮಧ್ಯವರ್ತಿಗಳನ್ನೇ ಆಶ್ರಯಿಸಿದ್ದಾರೆ. ಅವರ ಬೇಡಿಕೆಗೆ ತಕ್ಕಂತೆ ಉತ್ಪನ್ನಗಳನ್ನು ಪೂರೈಕೆ ಮಾಡುವುದರಾಚೆ ಅವರು ಯೋಚಿಸಲು ಹೋಗುತ್ತಿಲ್ಲ. ಹೀಗಾಗಿಯೇ ಹಪ್ಪಳ ತಯಾರಿಸುವವರಿಗೆ ಸ್ವಲ್ಪ ಲಾಭ ಸಿಕ್ಕರೆ, ಮಧ್ಯವರ್ತಿಗಳು ಬಹುಪಾಲು ಆದಾಯ ಬಾಚಿಕೊಳ್ಳುತ್ತಿದ್ದಾರೆ.

ಈ ಊರಿನ ಹಪ್ಪಳ, ಚಕ್ಕುಲಿ, ಫೇಣಿ, ಸಂಡಿಗೆ ಖರೀದಿಸುವ ಮಧ್ಯವರ್ತಿಗಳು ಅವುಗಳನ್ನು ಬೇರೆ ಬೇರೆ ಬ್ರ್ಯಾಂ‌ಡ್‌ಗಳಲ್ಲಿ ಪ್ಯಾಕಿಂಗ್‌ ಮಾಡಿ ಮಾರಾಟ ಮಾಡುತ್ತಾರೆ. ಕಲ್ಲೂಡಿ ಗೌರಮ್ಮನ ಅಕ್ಕಿ ಹಿಟ್ಟಿನ 200 ಗ್ರಾಂ ಚಕ್ಕುಲಿ ₹12ಕ್ಕೆ ಮಾರಾಟವಾಗುತ್ತದೆ. ಅದೇ ಮಧ್ಯವರ್ತಿಗಳ ಕೈಗೆ ಸಿಕ್ಕು ಬೆಂಗಳೂರಿನ ‘ಹೋಮ್‌ ಮೇಡ್‌ ಪ್ರಾಡಕ್ಟ್‌’ ಆಗಿ ₹53ಕ್ಕೆ ಮಾರಾಟವಾಗುತ್ತದೆ.

‘ನಮ್ಮ ಹೆಣ್ಣು ಮಕ್ಕಳು ನಸುಕಿನಲ್ಲೇ ಎದ್ದು ಮೈಕೈ ನೋಯಿಸಿಕೊಂಡು ಕಷ್ಟ ಬಿದ್ದರೆ, ಅನ್ಯರು ಅದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಇವರ ಕಷ್ಟಕ್ಕೆ ತಕ್ಕ ಫಲ ಸಿಗುತ್ತಿಲ್ಲವಲ್ಲ ಎನ್ನುವ ನೋವು ನನ್ನದಾದರೆ, ಅಲ್ಪತೃಪ್ತರಾದ ನಮ್ಮ ಹೆಣ್ಣು ಮಕ್ಕಳು ಸಿಕ್ಕಷ್ಟರಲ್ಲೇ ಸುಖವಾಗಿ ಬದುಕುತ್ತಿದ್ದಾರೆ. ಗ್ರಾಮದಲ್ಲಿ ದೊಡ್ಡ ಕಟ್ಟಡವೊಂದನ್ನು ಕಟ್ಟಿ, ಸೊಸೈಟಿ ತೆರೆದು ನಮ್ಮದೇ ಆದ ಬ್ರ್ಯಾಂ‌ಡ್‌ನಡಿ ಪ್ಯಾಕಿಂಗ್‌ ಮಾಡಿ ಮಾರಾಟ ಮಾಡಿದರೆ ನಮ್ಮಲ್ಲಿ ಮತ್ತಷ್ಟು ಆರ್ಥಿಕ ಚೈತನ್ಯ ಬರುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕಿದೆ’ ಎನ್ನುವುದು ಗಂಗಲಕ್ಷ್ಮಮ್ಮನವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.