ADVERTISEMENT

ಈ ಬಾರಿ ಕೃಷಿ ಜಾಗೃತಿ ಹುತ್ತರಿ!

ಡಿ.11ರಂದು ಹುತ್ತರಿ ಹಬ್ಬ

ಅದಿತ್ಯ ಕೆ.ಎ.
Published 9 ಡಿಸೆಂಬರ್ 2019, 19:30 IST
Last Updated 9 ಡಿಸೆಂಬರ್ 2019, 19:30 IST
ಹುತ್ತರಿ
ಹುತ್ತರಿ   

ನಾಳೆ ಕಾವೇರಿ ನಾಡು ಕೊಡಗಿನಾದ್ಯಂತ ಹುತ್ತರಿ ಹಬ್ಬ. ಎರಡು ವರ್ಷಗಳ ನಿರಂತರ ಪ್ರಕೃತಿ ವಿಕೋಪದಿಂದಾಗಿ ಭತ್ತದ ಗದ್ದೆಗಳೇ ನಾಶವಾಗಿರುವ ಸಂದರ್ಭದಲ್ಲಿ ಈ ಹಬ್ಬವನ್ನು ‘ಭತ್ತದ ಕೃಷಿ ಜಾಗೃತಿ’ ಹಬ್ಬವಾಗಿ ಆಚರಿಸುತ್ತಿದ್ದಾರೆ.

ಸತತ ಎರಡನೇ ವರ್ಷವೂ ಮಹಾಮಳೆ, ಪ್ರವಾಹ, ಭೂಕುಸಿತದ ನೋವಿನ ಬಳಿಕ ಚೇತರಿಕೆ ಹಾದಿಯಲ್ಲಿರುವ ಕಾವೇರಿ ನಾಡು ಕೊಡಗು ಜಿಲ್ಲೆಯಲ್ಲೀಗ ಸುಗ್ಗಿಯ ಸಂಭ್ರಮ. ಜೀವನದಿ ತವರಿನಲ್ಲಿ ಈಗ ಮೈಕೊರೆಯುವ ಚಳಿ. ಚಳಿ ನಡುವೆ ಹುತ್ತರಿ ಹಬ್ಬದ ಸಂಭ್ರಮವೂ ಮೇಳೈಸಿದೆ.

ಕೊಡಗಿನ ಧಾರ್ಮಿಕ ಹಬ್ಬಗಳಲ್ಲಿ ‘ಹುತ್ತರಿಗೆ’ ಪ್ರಧಾನ ಸ್ಥಾನ. ಆದರೆ, ಅತಿವೃಷ್ಟಿಯಿಂದಾಗಿ ಈ ಬಾರಿಯೂ ಭತ್ತದ ಕೃಷಿ ನೆಲಕಚ್ಚಿದೆ. ಆದರೂ, ‘ಸಂಪ್ರದಾಯ, ಧಾರ್ಮಿಕ ಆಚರಣೆಯಲ್ಲಿ ಒಂದಾದ ಹುತ್ತರಿಯನ್ನು ಬಿಡಲು ಮನಸ್ಸು ಒಪ್ಪುತ್ತಿಲ್ಲ’ ಎನ್ನುವ ರೈತರು, ನೋವಿನ ನಡುವೆಯೂ ಹಬ್ಬಕ್ಕೆ ಸಜ್ಜಾಗಿದ್ದಾರೆ. ಅಷ್ಟೇ ಅಲ್ಲ. ಈ ಬಾರಿಯ ಹುತ್ತರಿಯನ್ನು ‘ಕೃಷಿ ಜಾಗೃತಿ’ ಹಬ್ಬವನ್ನಾಗಿ ಆಚರಿಸುತ್ತಿದ್ದಾರೆ.

ADVERTISEMENT

ಕೊಡವ ಭಾಷೆಯಲ್ಲಿ ಹುತ್ತರಿ ಹಬ್ಬವನ್ನು ‘ಪುತ್ತರಿ ಹಬ್ಬ’ ಎಂದೂ ಕರೆಯಲಾಗುತ್ತದೆ. ಪುತ್ತರಿಯೆಂದರೆ ಹೊಸ ಅಕ್ಕಿ ಎಂದರ್ಥ. ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳುವ ಸಂಕೇತವಾಗಿ ಹುತ್ತರಿ ಆಚರಿಸಲಾಗುತ್ತದೆ. ಕಾಫಿ, ಶುಂಠಿ ಕೃಷಿಯ ನಡುವೆ ಭತ್ತ ಬೆಳೆಯುವ ರೈತರ ಸಂಖ್ಯೆ ಇತ್ತೀಚೆಗೆ ಕ್ಷೀಣಿಸಿದೆ. ಆದರೂ, ಭತ್ತದ ಕೃಷಿ ಅವಲಂಬಿಸುವ ಎಲ್ಲ ವರ್ಗದ ರೈತರೂ ಹುತ್ತರಿ ಹಬ್ಬವನ್ನು ಆಚರಿಸುತ್ತಾರೆ.

ರಾತ್ರಿಯೇ ಭತ್ತದ ಗದ್ದೆಗಳಲ್ಲಿ ಪೂಜೆ

ನಾಪೋಕ್ಲು ಪಾಡಿ ಇಗ್ಗುತಪ್ಪ ದೇಗುಲದಲ್ಲಿ ಭತ್ತದ ಕದಿರು ತೆಗೆದ ಬಳಿಕ ಜಿಲ್ಲೆಯಾದ್ಯಂತ ರಾತ್ರಿಯೇ ಕೃಷಿಕರು ದುಡಿಕೊಟ್‌, ಪಾಟ್‌ ವಾದ್ಯದೊಂದಿಗೆ ಗದ್ದೆಗಳಿಗೆ ತೆರಳುತ್ತಾರೆ. ಅಲ್ಲಿ ಭತ್ತದ ತೆನೆಗೆ ಪೂಜೆ ಸಲ್ಲಿಸಿ ಗಾಳಿಯಲ್ಲಿ ಕುಶಾಲತೋಪು ಹಾರಿಸಿ ಕದಿರು ಕೊಯ್ಲು ನಡೆಸುವುದು ಸಂಪ್ರದಾಯ. ಹಬ್ಬದ ಸಂಕೇತವಾಗಿ ಪಟಾಕಿಯನ್ನೂ ಸಿಡಿಸಿ ಸಂಭ್ರಮಿಸಲಾಗುತ್ತದೆ. ಬಳಿಕ ಕೊಯ್ಲಮಾಡಿದ ಭತ್ತದ ಕದಿರನ್ನು ಕುಟುಂಬದ ಮುಖ್ಯಸ್ಥರು, ಹೊತ್ತು ತರುತ್ತಾರೆ. ಉಳಿದವರು‘ಪೊಲಿ ಪೊಲಿ ದೇವಾ ಪೊಲಿಯೋ ಬಾ...’ ಎಂಬ ಘೋಷಣೆ ಕೂಗುತ್ತಾ ಹೆಜ್ಜೆ ಹಾಕುತ್ತಾರೆ. ಕದಿರು ಕೊಯ್ಲು ಮಾಡಿದ ದಿನವೇ ಐನ್‌ಮನೆಗೆ (ಆಯಾ ಕುಟುಂಬದ ಮೂಲಮನೆ) ಕುಟುಂಬಸ್ಥರು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದು ಹಬ್ಬಕ್ಕೆ ಕಳೆಗಟ್ಟುವಂತೆ ಮಾಡುತ್ತಾರೆ.

ಹಬ್ಬದಂದು ಕುಂಬಾರರು ಹುತ್ತರಿ ಕುಡಿಕೆ, ಮರ ಕೆಲಸದವರು ಭತ್ತದ ಕದಿರು ತುಂಬುವ ಬುಟ್ಟಿ, ಬಿದಿರು ಕೆಲಸಗಾರರು ಹುತ್ತರಿ ಕುಕ್ಕೆ ತಂದುಕೊಟ್ಟು ಅಕ್ಕಿ, ಬೆಲ್ಲ, ಬಾಳೆ ಹಣ್ಣು, ಹುತ್ತರಿ ಗೆಣಸು ಹಾಗೂ ವಿಶೇಷ ಭಕ್ಷ್ಯ ಪಡೆದುಕೊಳ್ಳುತ್ತಾರೆ ಎಂದು ಹಿರಿಯರು ಹೇಳುತ್ತಾರೆ. ಹಬ್ಬದಂದು ತಂಬಿಟ್ಟು, ಕಡಂಬಿಟ್ಟು ಸೇರಿದಂತೆ ಕೊಡಗಿನ ಸಾಂಪ್ರದಾಯಿಕ ಅಡುಗೆಗಳನ್ನು ತಯಾರಿಸಿ ಸಾಮೂಹಿಕ ಭೋಜನ ಸೇವಿಸುವುದು ವಿಶೇಷ. ಈ ಹಬ್ಬಕ್ಕೆ ಜಿಲ್ಲೆಯಿಂದ ಹೊರಗಿದ್ದವರೂ ಗ್ರಾಮಕ್ಕೆ ಬಂದು ಪಾಲ್ಗೊಳ್ಳುತ್ತಾರೆ.

ಕೋಲಾಟವೂ ಕ್ರೀಡಾಕೂಟವೂ

ಹಬ್ಬ ನಡೆದ ಮರು ದಿನವೇ ಅಂದರೆ ಗುರುವಾರ ಹುತ್ತರಿ ಕೋಲಾಟ, ಕ್ರೀಡಾಕೂಟಗಳು ನಡೆಯುತ್ತವೆ. ಮಂದ್‌ಗಳಲ್ಲಿ ನಡೆಯುವ ಕೋಲಾಟಕ್ಕೆ ಪ್ರಾಮುಖ್ಯತೆ ಇದೆ. ಇನ್ನು ಮಂಜಿನ ನಗರಿ ಮಡಿಕೇರಿಯ ಹಳೇ ಕೋಟೆ ಆವರಣದಲ್ಲಿ ಕೊಡವ, ಅರೆಭಾಷೆ ಗೌಡ ಸಮಾಜದಿಂದ ಕೋಲಾಟ, ಕತ್ತಿಯಾಟ್‌, ಉಮ್ಮತ್ತಾಟ್‌, ದುಡಿಕೊಟ್‌ ಪಾಟ್‌ ನಡೆಯುವುದು ವಿಶೇಷ. ಇಲ್ಲಿ ಎಲ್ಲರೂ ಒಟ್ಟಾಗಿ ಸಂಭ್ರಮಿಸುತ್ತಾರೆ. ಜನಪ್ರತಿನಿಧಿಗಳೂ ಅಲ್ಲಿಗೆ ಬಂದು ಕೊಡವ ವಾಲಗಕ್ಕೆ ಹೆಜ್ಜೆ ಹಾಕುತ್ತಾರೆ. ಇದನ್ನು ನೋಡಲು ದೂರದ ಊರುಗಳಿಂದ ಜನ ಬರುತ್ತಾರೆ.

ಹಬ್ಬದ ನಂತರ ಒಂದು ವಾರ ಕ್ರೀಡೆಗಳೂ ನಡೆಯುತ್ತವೆ. ಮಂದ್ ಹಾಗೂ ವಾಡೆಗಳಲ್ಲಿ ನಾನಾ ರೀತಿಯ ಸ್ಪರ್ಧೆಗಳನ್ನು ಆಯೋಜಿಸುತ್ತಾರೆ. ತೆಂಗಿನಕಾಯಿಗೆ ಗುಂಡು ಹೊಡೆಯುವ ಕ್ರೀಡೆ ಪ್ರಮುಖವಾದದ್ದು. ಮಹಾಮಳೆಯಿಂದ ಆಗಿರುವ ನೋವು ಹಬ್ಬದ ಮೇಲೂ ಪರಿಣಾಮ ಬೀರಿದೆ. ಆದರೆ, ಸಂಪ್ರದಾಯ ಮತ್ತು ಆಚರಣೆಯ ಮೇಲಿನ ನಂಬಿಕೆ, ನೋವನ್ನು ಮರೆಸಿದೆ. ಹಬ್ಬಕ್ಕೆ ಸಿದ್ಧತೆ ನಡೆದಿದೆ.

ಆಚರಣೆ ಹೀಗಿರಲಿದೆ...

ನಾಪೋಕ್ಲು ಸಮೀಪದ ಕಕ್ಕಬ್ಬೆ ಪಾಡಿ ಇಗ್ಗುತ್ತಪ್ಪ ದೇಗುಲದಲ್ಲಿ ಈಗಾಗಲೇ ಹಬ್ಬದ ಸಮಯ ನಿಗದಿ ಪಡಿಸಲಾಗಿದೆ. ಇದೇ 11ರ ರೋಹಿಣಿ ನಕ್ಷತ್ರದಂದು ರಾತ್ರಿ 7ಕ್ಕೆ ದೇವಾಲಯದಲ್ಲಿ ನೆರೆ ಕಟ್ಟುವ ಕಾರ್ಯ ಆರಂಭಗೊಳ್ಳಲಿದೆ. ರಾತ್ರಿ 8ಕ್ಕೆ ಕದಿರು ತೆಗೆಯಲಾಗುತ್ತದೆ. ರಾತ್ರಿ 9ಕ್ಕೆ ಪ್ರಸಾದ ಸ್ವೀಕರಿಸಲು ಸಮಯ ನಿಗದಿಗೊಳಿಸಲಾಗಿದೆ. ಈ ದೇಗುಲದಲ್ಲಿ ಮೊದಲು ಹುತ್ತರಿ ಆಚರಣೆ ನಡೆದ ಬಳಿಕವಷ್ಟೇ ಜಿಲ್ಲೆಯಾದ್ಯಂತ ಹಬ್ಬದ ಸಂಭ್ರಮ ಇರಲಿದೆ.
ಸಾರ್ವಜನಿಕರು, ರಾತ್ರಿ 7.35ಕ್ಕೆ ನೆರೆ ಕಟ್ಟುವುದು, 8.35ಕ್ಕೆ ಕದಿರು ಕೊಯ್ಲು, ರಾತ್ರಿ 9.35ಕ್ಕೆ ಪ್ರಸಾದ ಸ್ವೀಕರಿಸುತ್ತಾರೆ ಎಂದು ದೇವಸ್ಥಾನದ ಅರ್ಚಕರು ಹೇಳುತ್ತಾರೆ.

‘ಕಳೆದ ವರ್ಷ ಸಂಭವಿಸಿದ ಪ್ರವಾಹ, ಭೂಕುಸಿತದಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಹೂಳು ತುಂಬಿಕೊಂಡಿತು. ಅದರಿಂದ ಬೇಸತ್ತ ಕೃಷಿಕರು ಭತ್ತದ ಕೃಷಿಯಿಂದಲೇ ವಿಮುಖರಾಗುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ. ಹೀಗೇ ಆದರೆ, ಭವಿಷ್ಯದಲ್ಲಿ ಹುತ್ತರಿ ಆಚರಣೆಗೆ ಭತ್ತದ ಗದ್ದೆಗಳನ್ನು ಹುಡುಕುವ ಸ್ಥಿತಿ ಬರಲಿದೆ. ಹುತ್ತರಿಯಲ್ಲಿ ಭತ್ತದ ಪೈರಿಗೆ ಪ್ರಾಧಾನ್ಯ‌. ಆದ್ದರಿಂದ, ಭತ್ತದ ಬೆಳೆಗೆ ಸರ್ಕಾರ ಪ್ರೋತ್ಸಾಹಧನ ನೀಡಬೇಕು ಎಂಬುದು ನಮ್ಮ ಒತ್ತಾಯ. ಭತ್ತದ ಕೃಷಿಯತ್ತ ರೈತರ ಒಲವು ಹೆಚ್ಚಿಸಲು ಹುತ್ತರಿ ಸಂದರ್ಭದಲ್ಲಿ ಅರಿವು ಮೂಡಿಸಲಾಗುವುದು ಎನ್ನುತ್ತಾರೆಕೊಡವ ಮಕ್ಕಡ ಕೂಟಅಧ್ಯಕ್ಷಬೊಳ್ಳಜಿರ ಅಯ್ಯಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.