ADVERTISEMENT

ಅಣೆಕಟ್ಟೆಯ ಊರಲ್ಲಿ ದ್ವಾರ ವೈಭವ

ಚಂದ್ರಶೇಖರ ಕೊಳೇಕರ
Published 19 ಜೂನ್ 2011, 19:30 IST
Last Updated 19 ಜೂನ್ 2011, 19:30 IST

ಆಲಮಟ್ಟಿ: ಆಲಮಟ್ಟಿ ಬಳಿ ಕೃಷ್ಣಾ ನದಿಗೆ  ಅಣೆಕಟ್ಟು ಕಟ್ಟಿದ ಬಳಿಕ ಒಂದು ದಶಕದಲ್ಲಿ ಆಲಮಟ್ಟಿ ವ್ಯಾಪ್ತಿಯಲ್ಲಿ ನೂರಾರು ಎಕರೆ ವಿಸ್ತಾರದಲ್ಲಿ ವಿವಿಧ ಉದ್ಯಾನಗಳು ತಲೆ ಎತ್ತಿ, ಪ್ರತಿನಿತ್ಯ ಸಹಸ್ರಾರು ಪ್ರೇಕ್ಷಕರ ಆಕರ್ಷಣೀಯ ಸ್ಥಳಗಳಾಗಿವೆ.

ಇಲ್ಲಿಯ 40 ಎಕರೆ ವ್ಯಾಪ್ತಿಯ ರಾಕ್ ಉದ್ಯಾನ, 5 ಎಕರೆ ವ್ಯಾಪ್ತಿಯ ಕೃಷ್ಣಾ ಉದ್ಯಾನ, ನಾಲ್ಕು ಎಕರೆ ವ್ಯಾಪ್ತಿಯಲ್ಲಿರುವ ಲವಕುಶ ಉದ್ಯಾನ, 77 ಎಕರೆ ವಿಸ್ತಾರದ ಮೊಘಲ್, ಇಟಾಲಿಯನ್, ಫ್ರೆಂಚ್ ಉದ್ಯಾನಗಳು, ಸಂಗೀತ ಕಾರಂಜಿ ಮುಂತಾದ ಪ್ರವಾಸಿ ತಾಣಗಳು ಆಲಮಟ್ಟಿಯ ಸೌಂದರ್ಯ ಹೆಚ್ಚಿಸಿವೆ.

ಈ ಎಲ್ಲ ಉದ್ಯಾನಗಳಿಗೂ ವಿನೂತನ ಮಾದರಿಯ ವಿಶಿಷ್ಟ ಅರ್ಥ ಕೊಡುವ ಸುಂದರ ದ್ವಾರಗಳನ್ನು ನಿರ್ಮಿಸಲಾಗಿದೆ. ಈ ಎಲ್ಲ ದ್ವಾರಗಳೂ ಪ್ರವಾಸಿಗರನ್ನು ಸಮ್ಮೊಹನಗೊಳಿಸುತ್ತವೆ.
ಆಲಮಟ್ಟಿ ಅಣೆಕಟ್ಟು ಪ್ರದೇಶದಲ್ಲಿ ತಿರುಗಾಡುವಾಗ ಮಲೆನಾಡಿನ ಅನುಭವ ಆಗುತ್ತದೆ. ಸಾಲು ಸಾಲು ಹಚ್ಚಹಸಿರಿನ ಮರಗಳು, ನೀರಿನ ಬುಗ್ಗೆಗಳು ಮನಸ್ಸಿಗೆ ಉಲ್ಲಾಸವನ್ನುಂಟು ಮಾಡುತ್ತವೆ.

ರಾಕ್ ಉದ್ಯಾನ ದ್ವಾರ

40 ಎಕರೆ ವಿಸ್ತಾರದಲ್ಲಿ ವ್ಯಾಪಿಸಿದ ರಾಕ್ ಉದ್ಯಾನದ ದ್ವಾರಗಳು ತುಂಬ ಸುಂದರವಾಗಿವೆ. ಭಾವೈಕ್ಯದ ಪ್ರತಿಬಿಂಬದಂತಿರುವ ಈ ದ್ವಾರದಲ್ಲಿ ಹಿಂದೂ, ಮುಸ್ಲಿಂ, ಸಿಕ್, ಇಸಾಯಿ ನಾನಾ ಧರ್ಮಗಳನ್ನು ಪ್ರತಿನಿಧಿಸುವ ವ್ಯಕ್ತಿಗಳ ಮೂರ್ತಿಗಳನ್ನು ರಚಿಸಲಾಗಿದ್ದು, ಅವರೆಲ್ಲರೂ ಪ್ರಕೃತಿಯ ರೂಪಕವಾಗಿರುವ ಗುಡ್ಡವನ್ನು ಎತ್ತಿ ಹಿಡಿದಿದ್ದಾರೆ.  ಇಲ್ಲಿನ ದ್ವಾರದ ಪ್ರತಿ ಶಿಲೆಗಳಲ್ಲಿ ಕಲಾವಿದ ಟಿ.ಬಿ. ಸೊಲಬಕ್ಕನವರ ಅವರ ಸೃಜನಶೀಲತೆಯನ್ನು ಕಾಣಬಹುದು.

ರಾಕ್ ಉದ್ಯಾನದ ಇನ್ನೊಂದು ದ್ವಾರವು ವಿಶಿಷ್ಟವಾದ ಚಿಕಣಿ ಚಿತ್ರಕಲಾ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಈ ದ್ವಾರದ ಮೇಲೆ ಮೂರು ಮಂಗಗಳ ಚಿತ್ರ ಬಿಡಿಸಲಾಗಿದ್ದು, ಅವುಗಳಲ್ಲಿ ಒಂದು ಮಂಗ ಕಣ್ಣು ಮುಚ್ಚಿದೆ, ಇನ್ನೊಂದು ಬಾಯಿ ಮುಚ್ಚಿದೆ  ಮತ್ತೊಂದು ಕಿವಿ ಮುಚ್ಚಿಕೊಂಡು ಕುಳಿತಿದೆ. ನಮ್ಮ ಬದುಕು ಕಾಯಾ- ವಾಚಾ-ಮನಸಾ ಶುದ್ಧವಾಗಿರಬೇಕು ಎನ್ನುವಂತೆ ಕಲಾವಿದ ಚಿತ್ರಿಸಿದ್ದಾನೆ.

ಅಣೆಕಟ್ಟೆ ಮುಖ್ಯ ದ್ವಾರ:
ಆಲಮಟ್ಟಿ ಅಣೆಕಟ್ಟೆಯ ಎರಡೂ ಬದಿಯಿರುವ ದ್ವಾರ ಸುಂದರವಾಗಿವೆ. ಕೆಂಪು ಕಲ್ಲಿನಿಂದ ಕಟ್ಟಲಾದ ಈ ದ್ವಾರ ಎಲ್ಲರನ್ನು ಆಕರ್ಷಿಸುತ್ತದೆ. ಕೃಷ್ಣಾ ಉದ್ಯಾನದ ಬಾಗಿಲಿಗೂ ವಿಶೇಷತೆ ಇದೆ. ಎರಡು ಎತ್ತಿನ ಬಂಡಿ ನಿರ್ಮಿಸಲಾಗಿದ್ದು, ಅದನ್ನು ಸರಿಸುವ ಮೂಲಕ ದ್ವಾರ ಮುಚ್ಚುವುದು, ತೆಗೆಯುವುದು ಆಗುತ್ತದೆ.

ಪೆಟ್ರೋಲ್ ಪಂಪ್ ಬಳಿಯ ಮುಖ್ಯ ದ್ವಾರ:
ಪೆಟ್ರೋಲ್ ಪಂಪ್ ಬಳಿ ಇರುವ ಸುಂದರ, ಬೃಹದಾಕಾರದ ಮುಖ್ಯ ದ್ವಾರವೂ ಜನಾಕರ್ಷಕವಾಗಿದೆ.

ಆಲಮಟ್ಟಿ ಅಣೆಕಟ್ಟೆಗೆ ಅಡಿಗಲ್ಲು ಇಟ್ಟ ಭಾರತದ ಹಿಂದಿನ ಪ್ರಧಾನಿ ಲಾಲಬಹಾದ್ದೂರ್ ಶಾಸ್ತ್ರಿ ಅವರ ಹೆಸರನ್ನಿಡಲಾಗಿದೆ. ಆ ಮುಖ್ಯ ದ್ವಾರದ ಬಳಿ `ಲಾಲ ಬಹಾದ್ದೂರ ಶಾಸ್ತ್ರಿ ಸಾಗರ~ ಎಂದು ದೊಡ್ಡ ಅಕ್ಷರದಲ್ಲಿ ಬರೆಯಲಾಗಿದೆ.

ಇನ್ನು 77 ಎಕರೆ ವಿಸ್ತಾರದ ಮೊಘಲ್ ಉದ್ಯಾನಕ್ಕೂ ಅತ್ಯಂತ ದೊಡ್ಡ ಎಂಟ್ರನ್ಸ್ ಪ್ಲಾಜಾ ನಿರ್ಮಿಸಲಾಗುತ್ತಿದ್ದು, ಅಲಂಕಾರಿಕ ಕಾರ್ಯ ಪ್ರಾರಂಭಗೊಂಡಿದೆ.

ಸಂಗೀತ ಕಾರಂಜಿ ದ್ವಾರ
ಪ್ರತಿನಿತ್ಯ ಸಹಸ್ರಾರು ಪ್ರೇಕ್ಷಕರ ಆಕರ್ಷಣೆಯ ತಾಣವಾಗಿರುವ ಆಲಮಟ್ಟಿ ಸಂಗೀತ ಕಾರಂಜಿಯ ದ್ವಾರ  ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಅದರ ಮುಂದೆ ಕುಳಿತು ಎಲ್ಲರೂ ಭಾವಚಿತ್ರ ತೆಗೆಯಿಸಿಕೊಳ್ಳುವುದು ಸಾಮಾನ್ಯ.

ಸುಂದರ ಪ್ರವಾಸಿ ತಾಣವಾಗಿರುವ ಆಲಮಟ್ಟಿ ಅಣೆಕಟ್ಟಿನ ವಿವಿಧ ಉದ್ಯಾನಗಳ ದ್ವಾರಗಳು ಜನರನ್ನು ಆಕರ್ಷಿಸುವುದರ ಜೊತೆಗೆ ವಿವಿಧ ಸಂದೇಶವನ್ನೂ ಸಾರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.