ADVERTISEMENT

ಉಂಚಳ್ಳಿಯ ನೀರಹಾಡು

ಎನ್.ಕೆ.ಪದ್ಮನಾಭ
Published 13 ಜುಲೈ 2013, 19:59 IST
Last Updated 13 ಜುಲೈ 2013, 19:59 IST
ಉಂಚಳ್ಳಿಯ ನೀರಹಾಡು
ಉಂಚಳ್ಳಿಯ ನೀರಹಾಡು   

ಉಂಚಳ್ಳಿ ಜಲಪಾತದೆಡೆಗೆ ಪಯಣಿಸುವ ಹೊತ್ತಿಗೆ ಮಧ್ಯಾಹ್ನವಾಗಿತ್ತು. ಬಿಸಿಲು-ಮೋಡಗಳ ದೃಶ್ಯ-ಅದೃಶ್ಯದಾಟದ ಜುಗಲ್‌ಬಂದಿ ನಡೆದಿತ್ತು. ಇದೆಲ್ಲದರ ನಡುವೆ ಜಲಪಾತದ ಮುಂದೆ ನಿಂತಾಗ ಸೃಷ್ಟಿ ಸೊಬಗಿನ ಸಿರಿಯನ್ನು ಕಣ್ಣು ತುಂಬಿಕೊಂಡ ಅನುಭವ.

ಶಿರಸಿಯಿಂದ 35 ಕಿ.ಮೀ ದೂರವಿರುವ ಈ ಜಲಪಾತವನ್ನು ತಲುಪಿಕೊಳ್ಳಲು ಹಾರ್ಸಿಕಟ್ಟಾದಿಂದ 20 ನಿಮಿಷದ ದಾರಿ. ಅಲ್ಲಿಗೆ ತಲುಪಿದ ನಮ್ಮ ಕಣ್ಣುಗಳಿಗೆ ಹಬ್ಬಸಂಭ್ರಮ. ಹಿಂದಿನ ದಿನದ ಸಂಗೀತದ ರಸದೌತಣದ ಗುಂಗಿನಲ್ಲಿರುವಾಗಲೇ ನಮ್ಮ ಕಣ್ಣಮುಂದೆ ಅನಾವರಣಗೊಂಡದ್ದು ನೀರಿನ ಚಿಕ್ಕ-ದೊಡ್ಡ ಎಳೆಗಳ ಮಾಯಾಜಾಲ.

ಅಷ್ಟೆತ್ತರದ ಗಗನದ ತುದಿಯಲ್ಲಿ ನಿಂತ ಸೃಷ್ಟಿಯ ಜಾದೂಗಾರರು ಹಾಲ್ನೊರೆಯನ್ನು ಹರಿಬಿಡುತ್ತಿದ್ದಾರೇನೋ ಎಂಬಂತೆ ಭಾಸವಾಗುತ್ತಿದ್ದ ಜಲಪಾತದ ವೈಭವ. ದಟ್ಟ ಕಾನನದ ಹಸಿರ ಭಿತ್ತಿಯಿಂದ ನೀರ‌್ನೊರೆಯ ಧುಮ್ಮಿಕ್ಕುವಿಕೆಯ ಭೋರ್ಗರೆತ. ಒಂದೊಂದು ಕೋನದಿಂದಲೂ ಒಂದೊಂದು ಬಗೆಯಲ್ಲಿ ಕಂಗೊಳಿಸುತ್ತಿದ್ದ ನೀರವೈಯ್ಯೊರ.

ಇದನ್ನು ಗಮನಿಸುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಜಲಪಾತದ ಮಧ್ಯೆ ಮೂಡಿದ ಕಾಮನಬಿಲ್ಲು. ಎರೆಡೆರಡು ನಿಮಿಷ ಅದು ಮೂಡಿ ಮಾಯವಾಗುತ್ತಿದ್ದ ವಿಭಿನ್ನ ಪರಿ. ಅಲ್ಲಿದ್ದ ಅಷ್ಟೂ ಹೊತ್ತು ಹಲವು ಸಲ ಮೂಡುತ್ತಾ ಜಲಪಾತದ ಸೊಬಗನ್ನು ಹೆಚ್ಚಿಸಿದ ಕಾಮನಬಿಲ್ಲು. ಗಗನದ ಕ್ಯಾನ್‌ವಾಸ್‌ನಲ್ಲಿ ಮೂಡುತ್ತಿದ್ದ ಕಾಮನಬಿಲ್ಲು ಜಲಪಾತದ ಮಧ್ಯೆ ಕಾಣಿಸಿಕೊಂಡ ಗಳಿಗೆ ನೀಡಿದ ಅನುಭವ ಅಪೂರ್ವ.

ಯಾರೋ ಮೇಲಿನಿಂದ ಸಮ್ಮಿಶ್ರ ಬೆಳಕನ್ನು ಜಲಪಾತದೆಡೆಗೆ ಹಾಯಿಸಿ ಸೃಷ್ಟಿಯ ಚೆಲುವನ್ನು ದೃಶ್ಯೀಕರಿಸುತ್ತಿದ್ದಾರೇನೋ ಎನ್ನುವ ಭಾವ. ಮತ್ತೊಂದೆಡೆಗೆ ಆಗಸಕ್ಕೆ ಮುಖಮಾಡಿ ಅದನ್ನು ತಾಕುವ ಉಮೇದಿಯಿಟ್ಟುಕೊಂಡ ದಟ್ಟ ಕಾಡು. ಜಲಪಾತದ ಹಾಲ್ನೊರೆಯಿಂದ ಎದ್ದುಬರುವ ಬಿಳಿಹೊಗೆಯ ಚಾದರ ಬೆಟ್ಟಕಾಡನ್ನು ಅಪ್ಪಿಕೊಳ್ಳುತ್ತಿರುವ ದೃಶ್ಯಸೊಬಗು.

ಇದರ ನಡುವೆ ಅದೃಷ್ಟವಂತ ಹಕ್ಕಿಗಳು ಜಲಪಾತದ ಧಾರೆಗಳ ಮಧ್ಯೆ ಹಾರಾಡಿ ಸಂಭ್ರಮಿಸುತ್ತಿದ್ದ ಪರಿ. ಅಲ್ಲಲ್ಲಿ ಚಿಟ್ಟೆಗಳ ಕಣ್ಕಟ್ಟುವ ಸಿರಿ. ನೋಟ ಹಾಯಿಸಿದಷ್ಟೂ ಮನವ ಮುದಗೊಳಿಸುವ ಚೆಲುವು. ಅಘನಾಶಿನಿ ನದಿ 116 ಮೀಟರುಗಳ ಎತ್ತರದಿಂದ ಧುಮ್ಮಿಕ್ಕುವ ಪರಿ, ಹೊಮ್ಮಿಸುವ ಜಲನಿನಾದ ಸೃಷ್ಟಿಯ ವೈಖರಿಗೆ ಸಾಕ್ಷಿಯಾಗಿತ್ತು. ಬಹುಹೊತ್ತಿನವರೆಗೆ ಅಲ್ಲಿದ್ದು ಮರಳುವ ಹೊತ್ತಿಗೆ ಅನ್ನಿಸಿದ್ದು; ಉಂಚಳ್ಳಿ ಜಲಪಾತದ ವರ್ಣನೆಗೆ ಸಂಗೀತಕ್ಕಿಂತ ಪ್ರಭಾವಿಯಾದ ರೂಪಕ ಬೇರೊಂದಿಲ್ಲ.         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.