ADVERTISEMENT

ಚಳಿಯಲಿ...ಜೊತೆಯಲಿ...

ಸುಮಾ ಬಿ.
Published 2 ಫೆಬ್ರುವರಿ 2013, 19:59 IST
Last Updated 2 ಫೆಬ್ರುವರಿ 2013, 19:59 IST
ಚಳಿಯಲಿ...ಜೊತೆಯಲಿ...
ಚಳಿಯಲಿ...ಜೊತೆಯಲಿ...   

ಎತ್ತ ಕಣ್ಣು ಹೊರಳಿಸಿದರೂ ಗಿರಿ ಮರಗಳ ಸಾಲು. ಆಕಾಶದ ಅಪರಿಮಿತ ಕ್ಯಾನ್ವಾಸ್ ಮೇಲೆ ತಮ್ಮ ರುಜು ದಾಖಲಿಸಲು ತವಕಿಸುವಂತೆ ಮುಗಿಲಿಗೆ ಮುಖ ಮಾಡಿದ ವೃಕ್ಷ ಸಮೂಹ. ಮೈಯೆಲ್ಲ ಮತ್ತೇರಿಸುವ ನೀಲಗಿರಿಯ ಘಮಲು. ಇಲ್ಲಿಂದ ಮುಂದೆಲ್ಲ ಕಾಡು ಎನ್ನುವ ಭಾವ ಉಂಟು ಮಾಡುವ, ಕಾಡಿನ ನಡುವೆಯೂ ನಾಡಿನ ಚಹರೆಗಳು ಇರುವ ಪರಿಸರ. ಬೆಟ್ಟ, ಬಯಲು, ಆಕಾಶ, ಹಸಿರು- ಎಲ್ಲವನ್ನೂ ತನ್ನ ತೆಕ್ಕೆಯಲ್ಲಿ ಅಪ್ಪಿಕೊಳ್ಳುವಂತೆ ಕಾಣುವ ಹಿಮದ ಸೆರಗು. ಕಡು ಹಸಿರ ಹಾಸಿಗೆಯಂತೆ ಮಲಗಿರುವ ಚಹಾ ತೋಟ. ಬೈಗು ಬೆಳಗಿನ ವ್ಯತ್ಯಾಸದ ಅರಿವಿಲ್ಲದೆ ಬೀಸುವ ಚಳಿ ಗಾಳಿ.

ಅದು ಊಟಿ. ಉದಕಮಂಡಲ ಎಂದೂ ಅದನ್ನು ಕರೆಯಬಹುದು. ಇದರ ಹೆಸರಿಗೇ ಅದೆಷ್ಟೋ ಹೃದಯಗಳಲ್ಲಿ ಸಂಚಲನ ಉಂಟು ಮಾಡುವ ಶಕ್ತಿಯಿದೆ. ಅದೆಷ್ಟೋ ಹೃದಯಗಳ ಮಧುವನಕ್ಕೆ ಊಟಿ ರುಜು ಹಾಕಿದೆ. ಭಾರತೀಯ, ಅದರಲ್ಲೂ ದಕ್ಷಿಣ ಭಾರತದ ಪ್ರಣಯದ ಪಕ್ಷಿಗಳ ಪಾಲಿಗೆ ಇದು `ಪಕ್ಷಿಕಾಶಿ'.

ಊಟಿ ನೀಲಗಿರಿ ಬೆಟ್ಟಗಳಲ್ಲಿರುವ ಪ್ರಸಿದ್ಧ ಗಿರಿಧಾಮ. ಸಮುದ್ರ ಮಟ್ಟದಿಂದ 7,500 ಅಡಿ (2,286 ಮೀ) ಎತ್ತರದಲ್ಲಿದೆ. ಪೊಟ್ಟಣದಂತೆ ಒಂದರ ಮೇಲೊಂದು ಜೋಡಿಸಿಟ್ಟ ಮನೆಗಳು. ಬೆಟ್ಟದಲ್ಲಿ ಗೆರೆ ಕೊರೆದಂತೆ ಕಾಣಿಸುವ ಚಹಾ ತೋಟಗಳು.

ಮೂಲತಃ ಊಟಿ ಬುಡಕಟ್ಟು ಪ್ರದೇಶ. ಇಲ್ಲಿ `ಟೋಡ' ಎನ್ನುವ ಬುಡಕಟ್ಟು ಜನರು ವಾಸಿಸುತ್ತಿದ್ದರು. ಈ ಜನಾಂಗದವರು ಈ ಪ್ರದೇಶವನ್ನು ಕೊಯಮತ್ತೂರಿನ ಆಗಿನ ಗವರ್ನರ್ ಜಾನ್ ಸುಲ್ಲಿವನ್‌ಗೆ ಒಪ್ಪಿಸಿದರು. ಸುಲ್ಲಿವನ್ ಅದನ್ನು ನಗರವನ್ನಾಗಿ ಅಭಿವೃದ್ಧಿಪಡಿಸಿದ. ಚಹಾ, ಚಿಂಕೋನ ಮತ್ತು ತೇಗ ಮರಗಳನ್ನು ಊಟಿಯಲ್ಲಿ ಬೆಳೆಸಿದ್ದು ಕೂಡ ಅವರೇ ಎನ್ನುತ್ತದೆ ಇತಿಹಾಸ. ಅಂದಹಾಗೆ, ಇದು ಮೊದಲು ಮೈಸೂರು ಸಂಸ್ಥಾನದ ಭಾಗವಾಗಿತ್ತು. ರಾಜ್ಯಗಳ ಪುನರ್ ವಿಂಗಡನೆ ಸಮಯದಲ್ಲಿ ತಮಿಳುನಾಡಿಗೆ ಸೇರಿತು.

ಪ್ರಪಂಚದ ಪಿತ್ರಾರ್ಜಿತ ಆಸ್ತಿ
ಮೆಟ್ಟುಪಾಲಯಂನಿಂದ ಊಟಿಯ ಬೆಟ್ಟಕ್ಕೆ ಪ್ರವಾಸಿಗರನ್ನು ಹೊತ್ತೊಯ್ಯುಲು ನೀಲಗಿರಿ ಪ್ಯಾಸೆಂಜರ್ ರೈಲಿನ ವ್ಯವಸ್ಥೆಯಿದೆ. ನೀಲಗಿರಿ ಬೆಟ್ಟಸಾಲುಗಳ ಸೌಂದರ್ಯ ಸವಿಯಲು ಈ ರೈಲು ಮಾರ್ಗವೇ ಸೂಕ್ತ. ಚುಕುಬುಕು ಸದ್ದು ಮಾಡುತ್ತಾ, ಬೆಟ್ಟದ ದುರ್ಗಮ ಹಾದಿಯನ್ನು ಸೀಳುತ್ತಾ ಮುಂದೆ ಸಾಗುವ ರೈಲನ್ನು ನೋಡುವುದು ಕಣ್ಣಿಗೆ ಹಬ್ಬ. `ನೀಲಗಿರಿ ಮೌಂಟೆನ್ ರೈಲು' (ಎನ್‌ಎಂಆರ್) ಭಾರತದಲ್ಲೇ ಅತಿ ಪುರಾತನ ಬೆಟ್ಟ ಪ್ರದೇಶದ ರೈಲು ವ್ಯವಸ್ಥೆ. ಇದನ್ನು 2005ರಲ್ಲಿ ಯುನೆಸ್ಕೊ ಪ್ರಪಂಚದ ಪಿತ್ರಾರ್ಜಿತ ಆಸ್ತಿಯೆಂದು ಘೋಷಿಸಿದೆ.

ADVERTISEMENT

ದೊಡ್ಡ ಬೆಟ್ಟ
ನೀಲಗಿರಿಯಲ್ಲೇ ಹೆಚ್ಚು ಎತ್ತರವಾದ (2,623 ಮೀ) ಶಿಖರ `ದೊಡ್ಡ ಬೆಟ್ಟ'. ಊಟಿಯಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ. ಇದು ಪಶ್ಚಿಮ ಹಾಗೂ ಪೂರ್ವ ಘಟ್ಟಗಳ ಸಂಧಿಸ್ಥಾನ. ನೀಲಗಿರಿ ಬೆಟ್ಟಶ್ರೇಣಿಯ ದೃಶ್ಯಾವಳಿಗಳ ವಿಹಂಗಮ ನೋಟ ಆಸ್ವಾದಿಸುವ ಕಂಗಳಿಗಾಗಿ ಪ್ರಕೃತಿಯೇ ಕಡೆದಿಟ್ಟ ಜಾಗವಿದು. ಇದರ ಇಳಿಜಾರಿನಲ್ಲಿ ಸೊಗಸಾದ ಜೈವಿಕ ಉದ್ಯಾನ (ಬೊಟಾನಿಕಲ್ ಗಾರ್ಡನ್) ಇದೆ. ಈ ಉದ್ಯಾನ ನಮ್ಮ ಬೆಂಗಳೂರಿನ ಲಾಲ್‌ಬಾಗ್‌ನ ದೊಡ್ಡಮ್ಮನಂತಿದೆ.

ಊಟಿಯವರೆಗೂ ಪಾದ ಬೆಳೆಸಿ ಅಲ್ಲಿನ ಬೋಟ್ ಹತ್ತಲಿಲ್ಲವೆಂದರೆ ಪ್ರವಾಸ ಅಪೂರ್ಣವೇ ಸರಿ. ಸೂರ್ಯನೆಂದೂ ಗೆಲ್ಲಲು ಸಾಧ್ಯವಿಲ್ಲದಂತೆ ತೋರುವ ಊಟಿನ ಚಳಿಯ ನಡುಕ-ಪುಳಕಕ್ಕೆ ಮೈಯೊಡ್ಡಿಕೊಂಡು ಪೆಡಲ್ ಬೋಟಿಂಗ್‌ನಲ್ಲಿ ತೊಡಗಿದರೆ ಬೇರೊಂದು ಲೋಕಕ್ಕೆ ಪಯಣಿಸಿದ ಅನುಭವವಾಗುತ್ತದೆ. ಬೆಟ್ಟದಿಂದ ಬಳಕುತ್ತಾ ಇಳಿಯುವ ನೀರ ನಡಿಗೆ ವಿಶಾಲ ಕೆರೆಯಲ್ಲಿ ನಿಲ್ಲುವಂತೆ ಸುಮಾರು 65 ಎಕರೆ ಪ್ರದೇಶದಲ್ಲಿ ನಿರ್ಮಿತವಾದ ಅಣೆಕಟ್ಟಿನದು ಮತ್ತೊಂದು ವೈಭವ.

ಗುಲಾಬಿ ಹೂಗಳ ತೋಟ, ಸಸ್ಯೋದ್ಯಾನ, ಸರೋವರ ಮತ್ತು ದೋಣಿ ಮನೆ, ಸ್ಟೋನ್ ಹೌಸ್, ಟೋಡ ಗುಡಿಸಲು, ಟ್ರೈಬಲ್ ಮ್ಯೂಸಿಯಂ, ಚಹಾ ತೋಟಗಳು, ವ್ಯಾಲಿ ವ್ಯೆ ಇವೆಲ್ಲ ಊಟಿಯಲ್ಲಿ ನೋಡಲೇಬೇಕಾದವು. ಮನೆಯಲ್ಲಿಯೇ ತಯಾರಿಸಿದ ಚಾಕೊಲೇಟ್‌ಗಳು ಊಟಿಯ ಮತ್ತೊಂದು ವಿಶೇಷ.

ಊಟಿ ಬೆಂಗಳೂರಿನಿಂದ 290 ಕಿ.ಮೀ ದೂರದಲ್ಲಿದೆ. ಮೈಸೂರಿನಿಂದ 155 ಕಿ. ಮೀ. ಅಂತರ. ಮೈಸೂರು- ನಂಜನಗೂಡು- ಗುಂಡ್ಲುಪೇಟೆ- ಬಂಡೀಪುರ ಮಾರ್ಗವಾಗಿ ಊಟಿಗೆ ಹೋಗಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.