ADVERTISEMENT

ಚೆಲುವಿನ ರಂಗೋಲಿ ಚಾಂದೋಲಿ

​ಪ್ರಜಾವಾಣಿ ವಾರ್ತೆ
Published 19 ಮೇ 2012, 19:30 IST
Last Updated 19 ಮೇ 2012, 19:30 IST
ಚೆಲುವಿನ ರಂಗೋಲಿ ಚಾಂದೋಲಿ
ಚೆಲುವಿನ ರಂಗೋಲಿ ಚಾಂದೋಲಿ   

ಸಹ್ಯಾದ್ರಿ ಬೆಟ್ಟ ಸಾಲುಗಳಲ್ಲಿ ಹರಡಿರುವ ಚಾಂದೋಲಿ ರಾಷ್ಟ್ರೀಯ ಉದ್ಯಾನವನ ವಿಶಿಷ್ಟವಾದ ಹಸಿರುತಾಣ. ಹಲವು ನದಿಗಳು, ಅಣೆಕಟ್ಟೆಗಳು, ವನ್ಯ ಜೀವಿಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಈ ಸುಂದರ ಕಾಡು ಮಹಾರಾಷ್ಟ್ರ ರಾಜ್ಯದಲ್ಲಿದೆ.

ಸಾಂಗ್ಲಿ ಜಿಲ್ಲೆಗೆ ಸೇರಿದ ಚಾಂದೋಲಿ ರಾಷ್ಟ್ರೀಯ ಉದ್ಯಾನವನ 317 ಚದರ ಮೀಟರ್ ವಿಸ್ತಾರ ಹೊಂದಿದೆ. ಮಹಾರಾಷ್ಟ್ರ ರಾಜ್ಯ ಅರಣ್ಯ ಇಲಾಖೆ ಇದನ್ನು ನಿರ್ವಹಿಸುತ್ತಿದ್ದು ಪ್ರವಾಸಿಗರಿಗೆ ಸೂಕ್ತ ರಕ್ಷಣೆ ಒದಗಿಸುತ್ತಿದೆ. ಚಾಂದೋಲಿಗೆ ಅಂಟಿಕೊಂಡಂತೆಯೇ ಸಹ್ಯಾದ್ರಿ ಹುಲಿ ರಕ್ಷಣಾ ವಲಯ ಮತ್ತು ಕೊಯ್ನಾ ವನ್ಯಜೀವಿ ಸಂರಕ್ಷಣಾ ವಲಯ ಕೂಡ ಇದೆ.

ಚಾಂದೋಲಿ ಅಣೆಕಟ್ಟೆ ಈ ಪ್ರದೇಶದಲ್ಲಿಯೇ ಬರುತ್ತದೆ. ಅಲ್ಲಿ ಜಲ ವಿದ್ಯುತ್ ಉತ್ಪಾದಿಸುವ ಯೋಚನೆ ರಾಜ್ಯ ಸರ್ಕಾರಕ್ಕೆ ಇದೆ. ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಇನ್ನು 17ನೇ ಶತಮಾನದಲ್ಲಿ ಶಿವಾಜಿ ಮಹಾರಾಜ ಇಲ್ಲಿ ಕಟ್ಟಿಸಿದ್ದ ಕೋಟೆಯನ್ನು ಕೂಡ ನೋಡಬಹುದು. ವರ್ನಾ ನದಿ ಹರಿದು ಸಾಗುವ ರೀತಿಯನ್ನು ಕಾಣಬಹುದು.
 
ವಸಂತ ಸಾಗರ ಜಲಾಶಯದ ಹತ್ತಿರ ಸುಳಿದಾಡಬಹುದು. ವರ್ನಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಣೆಕಟ್ಟೆಯಲ್ಲಿ ಅಡ್ಡಾಡಬಹುದು.ಹಸಿರು ಗುಡ್ಡಗಳು, ಬೆಟ್ಟಗಳು ತುಂಬಿಕೊಂಡ ಈ ವನಸಾಮ್ರಾಜ್ಯವನ್ನು ಒಂದು ಸುತ್ತು ಹಾಕಿಬರಲು ಮಳೆಗಾಲದಲ್ಲಿ ಸಾಧ್ಯವೇ ಇಲ್ಲ.

ಮಳೆಗಾಲದಲ್ಲಿ ದಿನವಿಡೀ ನಿಲ್ಲದೇ ಸುರಿಯುವ ಮಳೆ ಹೈರಾಣು ಮಾಡುತ್ತದೆ. ಅಲ್ಲಿಗೆ ತಲುಪುವ ರಸ್ತೆಯೂ ಕೆಲವೊಮ್ಮೆ ಸಂಪರ್ಕ ಕಳೆದುಕೊಂಡಿರುತ್ತದೆ. ಮಳೆಗಾಲ ಮುಗಿದ ನಂತರ ಮತ್ತು ಬೇಸಿಗೆಯಲ್ಲಿ ಇಲ್ಲಿಗೆ ಭೇಟಿ ನೀಡಬಹುದು.

1985ರಲ್ಲಿ ಈ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವನ ಎಂದು ಗುರುತಿಸಲಾಯಿತು. ಪಶ್ಚಿಮಘಟ್ಟದಲ್ಲಿ ಬರುವ ಈ ತಾಣ ನಿತ್ಯಹರಿದ್ವರ್ಣದ ಕಾಡು ಎಂದೇ ಹೆಸರುವಾಸಿ. ವರ್ಷವಿಡೀ ಹಸುರಿನಿಂದ ಕಂಗೊಳಿಸುವ, ಪ್ರವಾಸಿಗರ ಮೈಮನಸ್ಸಿಗೆ ಮುದ ನೀಡುವ ಇಲ್ಲಿ  ತರಹೇವಾರಿ ಜಾತಿಯ ಮರಗಳು ಇವೆ.

ಹುಲಿ, ಚಿರತೆ, ಕಾಡೆಮ್ಮೆ, ಸಿಂಹ, ಕರಡಿ, ದೊಡ್ಡ ಅಳಿಲು, ಜಿಂಕೆಯ ಹಲವು ಪ್ರಭೇದಗಳು ಇಲ್ಲಿ ನೆಲೆಸಿವೆ. ಚಾಂದೋಲಿಗೆ ಸಮೀಪದಲ್ಲಿಯೇ ಕಂಧರ್‌ದೋ ಮತ್ತು ತನಾಲಿ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತವೆ. ಕಾಡಿನ ನಡುವೆ ಅಲ್ಲಲ್ಲಿ ಕೆಲವು ಸೂರ್ಯೋದಯ ಮತ್ತು ಸೂರ್ಯಾಸ್ತದ ಪಾಯಿಂಟ್‌ಗಳನ್ನು ಗುರುತಿಸಲಾಗಿದೆ. ಮುಂಬೈನಿಂದ 380 ಕಿಮೀ, ಪುಣೆಯಿಂದ 210 ಕಿಮೀ, ಸಾಂಗ್ಲಿಯಿಂದ 75 ಕಿಮೀ ದೂರದಲ್ಲಿದೆ ಈ ವನ್ಯಲೋಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.