ತಮ್ಮ ಕಾಲುಗಳಿಗಿಂತಲೂ ಉದ್ದವಾದ ಕೊಂಬುಗಳನ್ನು ಹೊತ್ತು ಅಡ್ಡಾಡುವ ಹರಿಣಗಳು, ಮೈಮೇಲೆ ಸುಂದರ ಚುಕ್ಕೆಗಳನ್ನು ಇರಿಸಿಕೊಂಡ ಜಿಂಕೆಗಳು, ಕಪ್ಪು-ಬಿಳಿ ಪಟ್ಟೆಯ ನಯನಮನೋಹರ ಕೃಷ್ಣ ಮೃಗಗಳು, ಮುದ್ದು ಮುಖದ ಮುಗ್ಧ ನೋಟದ ಚಿಗರೆಗಳು... ಹಾಂ, ಇದು ಜಿಂಕೆ ಪುರಾಣವಲ್ಲ, ಜಿಂಕೆ ಉದ್ಯಾನದ ಕಥೆ.
ವೈವಿಧ್ಯಮಯವಾದ ಹಲವು ಪ್ರಬೇಧದ ಹುಲ್ಲೆಗಳನ್ನು ಹೊಂದಿರುವ ಇದು ಜಿಂಕೆ ಪ್ರಿಯರ ನೆಚ್ಚಿನ ತಾಣ. ಇಲ್ಲಿರುವ ಚಿಗರೆಗಳಿಗೆ ಗಕ್ಕನೆ ಬಂದು ಹಿಡಿದು ತಿನ್ನುವ ಕ್ರೂರಮೃಗಗಳ ಕಾಟವಿಲ್ಲ. ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್‌ನಿಂದ 24 ಕಿ.ಮೀ ಅಂತರದಲ್ಲಿ ಇರುವ ಶಮೀರ್‌ಪೇಟೆಯಲ್ಲಿದೆ ಈ ಜಿಂಕೆ ಉದ್ಯಾನವನ.
ಆಂಧ್ರಪ್ರದೇಶ ಸರ್ಕಾರದ ನಿರ್ವಹಣೆಯಲ್ಲಿರುವ, ಈ ಪ್ರದೇಶದಲ್ಲೊಂದು ಕೃತಕ ಸರೋವರವೂ ಇದೆ. ಹೈದರಾಬಾದ್ ನಿಜಾಮರ ಕಾಲದಲ್ಲಿ ನಿರ್ಮಿಸಲಾಗಿರುವ ಈ ಕೃತಕ ಸರೋವರದ ಆಕರ್ಷಣೆಗೆ ಹಕ್ಕಿಗಳು ಮನಸೋತಿವೆ. ಪಕ್ಷಿ ವೀಕ್ಷಕರ ಹಿಂಡೇ ಇಲ್ಲಿಗೆ ಭೇಟಿ ನೀಡಿ ಪುಳಕಿತವಾಗುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರು ಸೂರ್ಯೋದಯದ ಅಂದವನ್ನು ಕೂಡ ಕಣ್ತುಂಬಿಕೊಂಡು ಹೋಗಬಹುದು. ಶಾಂತಮಯವಾಗಿ ಕಾಲಕಳೆಯಲು ಬರುವ ಪ್ರವಾಸಿಗರಿಗೆ ಸಾಕಷ್ಟು ವಸತಿಗೃಹಗಳೂ ಅಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.