ADVERTISEMENT

ದೀರ್ಘ ಸುರಂಗ; ಪುಟ್ಟ ನಿಲ್ದಾಣ!

ಆನಂದತೀರ್ಥ ಪ್ಯಾಟಿ
Published 29 ಸೆಪ್ಟೆಂಬರ್ 2018, 19:45 IST
Last Updated 29 ಸೆಪ್ಟೆಂಬರ್ 2018, 19:45 IST
ನಿಲ್ದಾಣದ ಎದುರಿನಿಂದಲೇ ರಾಷ್ಟ್ರೀಯ ಉದ್ಯಾನಕ್ಕೆ ಪ್ರವೇಶ
ನಿಲ್ದಾಣದ ಎದುರಿನಿಂದಲೇ ರಾಷ್ಟ್ರೀಯ ಉದ್ಯಾನಕ್ಕೆ ಪ್ರವೇಶ   

ಹಸಿರಿನಿಂದ ಸಂಪದ್ಭರಿತವಾಗಿದ್ದ ಬೆಟ್ಟಗಳ ಮಧ್ಯೆ ಅಂಕುಡೊಂಕಿನ ರಸ್ತೆಯಲ್ಲಿ ಸಾಗುತ್ತ ಒಂದೆಡೆ ವ್ಯಾನಿನಿಂದ ಇಳಿದಾಗ ಥಾಯ್ ಭಾಷೆಯ ಫಲಕ ಕಂಡಿತು: ‘ಖುನ್ ತಾನ್ - 300 ಮೀಟರ್.’ ನಿರ್ಜನವಾಗಿದ್ದ ಆ ಏರುರಸ್ತೆಯಲ್ಲಿ ಟ್ರಾಲಿ ಎಳೆದುಕೊಂಡು ಸಾಗುತ್ತ ಮಾರ್ಗದರ್ಶಕ ಮೈಕೆಲ್ ಕಾಮನ್ಸ್ ಅವರನ್ನು ‘ಇಲ್ಲಿ ರೈಲು ನಿಲ್ದಾಣ ಇದೆಯೇ?’ ಎಂದು ಕೇಳಿದಾಗ, ‘ನೀವೇ ನೋಡುವಿರಲ್ಲ?’ ಎಂದು ಮುಗುಳ್ನಕ್ಕರು. ಕೆಲವೇ ನಿಮಿಷಗಳಲ್ಲಿ ತಿರುವು ದಾಟಿದ ತಕ್ಷಣ ಬೆರಗುಗೊಳಿಸುವ ರೈಲು ನಿಲ್ದಾಣ ನಮ್ಮೆದುರು ತೆರೆದುಕೊಂಡಿತು.

ರೈಲು ನಿಲ್ದಾಣವೆಂದರೆ ಸಂಶಯ ಬರುವಷ್ಟು ಸಣ್ಣದು. ಮೂರು ಜೋಡಿ ಹಳಿಗಳು. ಒಂದಡಿ ಎತ್ತರದ ಪ್ಲಾಟ್‌ಫಾರ್ಮ್‌ಗಳು. ಸುತ್ತಮುತ್ತ ಹಸಿರಿನ ಬೆಟ್ಟಗಳಿಂದ ಆವೃತವಾದ ನಿಲ್ದಾಣಕ್ಕೆ ಇನ್ನೂರು ಮೀಟರ್ ಅಂತರದಲ್ಲಿ ಸುರಂಗದ ಪ್ರವೇಶದ್ವಾರ ಕಂಡಿತು. ಸಂಜೆಯ ಹೊತ್ತು ಪಕ್ಷಿಗಳ ಚಿಲಿಪಿಲಿ ಸದ್ದಿನಿಂದ ಇಡೀ ನಿಲ್ದಾಣಕ್ಕೊಂದು ಸಂಭ್ರಮ ಬಂದಿತ್ತು. ನಮ್ಮ ತಂಡದ ಡಜನ್ ಸದಸ್ಯರ (ಪ್ರಯಾಣಿಕರು!) ಹೊರತಾಗಿ ಅಲ್ಲಿದ್ದುದು ಸ್ಟೇಷನ್ ಮಾಸ್ಟರ್ ಹಾಗೂ ಟಿಕೆಟ್ ಕೌಂಟರಿನಲ್ಲಿ ಕೂತಿದ್ದ ಗುಮಾಸ್ತ. ಅದರಲ್ಲೂ ಆ ಸ್ಟೇಷನ್ ಮಾಸ್ಟರ್, ‘ಒಂದೇ ರೈಲಿನಲ್ಲಿ ತೆರಳುವ ಇಷ್ಟೊಂದು ಪ್ರಯಾಣಿಕರು ಹೀಗೆ ಬಂದಿರುವುದು ಅಪರೂಪ’ ಎಂದು ಖುಷಿಪಟ್ಟಿದ್ದು ವಿಶೇಷವಾಗಿತ್ತು!

ಥಾಯ್ಲೆಂಡಿನ ಚಾಂಗ್ ಮಾಯ್ ನಗರದ ಸಮೀಪವಿರುವ ‘ಖುನ್ ತಾನ್’ ಅತಿ ಪುಟ್ಟ ರೈಲು ನಿಲ್ದಾಣಗಳಲ್ಲಿ ಒಂದು. ಖುಲಂಫುನ್ ಪ್ರಾಂತ್ಯದಲ್ಲಿ (ಮೆ ಥಾ ಜಿಲ್ಲೆ) ಹಾದು ಹೋಗಿರುವ ರೈಲುಮಾರ್ಗದಲ್ಲಿನ ಈ ನಿಲ್ದಾಣ ಬ್ಯಾಂಕಾಕಿನಿಂದ 680 ಕಿ.ಮೀ ದೂರದಲ್ಲಿದ್ದು, ಸಮುದ್ರಮಟ್ಟದಿಂದ 578 ಮೀಟರ್ ಎತ್ತರದಲ್ಲಿದೆ. ಜೀವವೈವಿಧ್ಯದ ತಾಣ ‘ದೊಯಿ ಖುನ್ ತಾನ್ ರಾಷ್ಟ್ರೀಯ ಉದ್ಯಾನ’ ಈ ನಿಲ್ದಾಣ ಆಚೆಬದಿಯಿಂದಲೇ ಆರಂಭವಾಗುತ್ತದೆ. ಪಕ್ಕದಲ್ಲೇ ಥಾಯ್ಲೆಂಡ್ ರೈಲ್ವೆ ಇಲಾಖೆ ಸುಪರ್ದಿಯಲ್ಲಿನ ಹಳೆಯ ಬಂಗಲೆಗಳಿವೆ. ಆಸಕ್ತ ಚಾರಣಿಗರು ಹಾಗೂ ಪ್ರವಾಸಿಗರು ಬರಬೇಕೆಂದರೆ, ಆಧುನಿಕ ಸಾರಿಗೆ ಸಂಪರ್ಕಕ್ಕೆ ಈ ನಿಲ್ದಾಣವೇ ಏಕೈಕ ಆಸರೆ! ಆದರೆ ರೈಲಿನಲ್ಲಿ ಬರುವ ಬದಲಿಗೆ ಚಾರಣ ಮಾಡುತ್ತ ಬರುವವರೇ ಹೆಚ್ಚು!

ADVERTISEMENT

ರೋಚಕ ಇತಿಹಾಸ

ಕಡಿದಾದ ಬೆಟ್ಟದ ಮೇಲೆ ನಿರ್ಮಾಣವಾದ ‘ಖುನ್ ತಾನ್’ ನಿಲ್ದಾಣಕ್ಕೆ ಶತಮಾನಕ್ಕೂ ಹೆಚ್ಚು ಕಾಲದ ಇತಿಹಾಸವಿದೆ. ಅದರಲ್ಲೂ ಈ ನಿಲ್ದಾಣದ ಅನತಿ ದೂರದಲ್ಲೇ ಶುರುವಾಗುವ ಸುರಂಗದ ಇತಿಹಾಸವಂತೂ ಬಲು ರೋಚಕ.

ಥಾಯ್ಲೆಂಡಿನ ಲಂಪಾಂಗ್ ಹಾಗೂ ಲಂಫುನ್ ಪ್ರಾಂತ್ಯಗಳನ್ನು ಸಂಪರ್ಕಿಸಲು ‘ಖುನ್ ತಾನ್’ ಬೆಟ್ಟಗಳನ್ನು ಸುತ್ತುವರಿದು ಸಾಗುವಂಥ ರೈಲು ಮಾರ್ಗವನ್ನು ರೂಪಿಸಲಾಗಿತ್ತು. ಆದರೆ ಈ ಯೋಜನೆ ಕಾರ್ಯಗತವಾದರೆ ತಮ್ಮ ಪ್ರದೇಶ ಸಾರಿಗೆ ಸೌಲಭ್ಯ ಸಿಗದೇ ಹಿಂದುಳಿಯುತ್ತದೆ ಎಂದು ಈ ಭಾಗದ (ಖುನ್ ತಾನ್ ಸುತ್ತಲಿನ ಪ್ರದೇಶದ) ಜನರು ಪ್ರತಿಭಟನೆ ನಡೆಸಿದ್ದರಿಂದ ಬೆಟ್ಟದೊಳಗೇ ರೈಲು ಮಾರ್ಗ ಸ್ಥಾಪನೆಯ ನಿರ್ಧಾರ ತೆಗೆದುಕೊಳ್ಳಲಾಯಿತು. ಉತ್ತರ (ಚಾಂಗ್ ಮಾಯ್) ಹಾಗೂ ಮಧ್ಯ ಥಾಯ್ಲೆಂಡಿನ (ಬ್ಯಾಂಕಾಕ್) ಮಧ್ಯೆ ಶೀಘ್ರ ಸಾರಿಗೆ ಸಂಪರ್ಕ ಕಲ್ಪಿಸುವುದು ಯೋಜನೆಯ ಮೂಲ ಉದ್ದೇಶ. ಥಾಯ್ಲೆಂಡಿನಲ್ಲಿ ಆಗ ತಂತ್ರಜ್ಞಾನ ಅಷ್ಟೊಂದು ಲಭ್ಯ ಇರಲಿಲ್ಲ. ಹೀಗಾಗಿ ಜರ್ಮನಿಯ ತಂತ್ರಜ್ಞರನ್ನು ಕರೆಸಿ, ಕೆಲಸ ಶುರು ಮಾಡಲಾಯಿತು.

ಖುನ್ ತಾನ್ ರೈಲ್ವೆ ಸ್ಟೇಷನ್

ಖುನ್ ತಾನ್ ನಿಲ್ದಾಣ ಸ್ಥಾಪನೆಗೂ ಮುನ್ನ ಸುರಂಗದ ಕೆಲಸ ನಡೆಯಿತು. ಸ್ಥಳ ಗುರುತಿಸಿ, ಸಮೀಕ್ಷೆಯನ್ನು 1905ರಲ್ಲಿ ನಡೆಸಲಾಯಿತು. 1907ರಲ್ಲಿ ಆರಂಭವಾದ ಕಾಮಗಾರಿ 1918ರಲ್ಲಿ ಪೂರ್ಣಗೊಂಡಿತು. 1,352 ಮೀಟರ್ ಉದ್ದದ ಸುರಂಗ ನಿರ್ಮಾಣಕ್ಕೆ ಹನ್ನೊಂದು ವರ್ಷಗಳು ಬೇಕಾದವು. ಆಗ ಇದಕ್ಕೆ ಮಾಡಲಾದ ವೆಚ್ಚ 13 ಲಕ್ಷ ಬಹ್ತ್.

ಮೊದಲಿಗೆ ಈ ಬೆಟ್ಟದಲ್ಲಿ ರೈಲು ಹಳಿ ಸ್ಥಾಪನೆಗೆ ಬೇಕಾಗುವಷ್ಟು ಜಾಗವನ್ನು ದಾರಿಯುದ್ದಕ್ಕೂ ಸ್ಫೋಟಿಸಿ, ಹಳಿ ಹಾಕುವ ಯೋಜನೆಯಿತ್ತು. ಅದು ಅಸಾಧ್ಯ ಎಂಬುದು ಗೊತ್ತಾದ ಮೇಲೆ, ಸುರಂಗ ಕೊರೆಯಲು ನಿರ್ಧರಿಸಲಾಯಿತು. ಆಗಿನ ಕಾಲದಲ್ಲಿ ಲಭ್ಯವಿದ್ದ ಯಂತ್ರ ಬಳಸಿ, ಕಲ್ಲು ಕೊರೆಯಲಾಯಿತು. ಮಧ್ಯೆ ಮಧ್ಯೆ ಯಂತ್ರಗಳು ಕೈಕೊಟ್ಟಾಗ ಲೋಹದ ಚಿಸಲ್ ಬಳಸಿ ಕಲ್ಲು ಕತ್ತರಿಸಲಾಯಿತು. ಸ್ಥಳಾವಕಾಶ ಸಿಗುತ್ತಿದ್ದಂತೆ, ರೈಲು ಹಳಿಗಳನ್ನು ಹಾಕಲಾಯಿತು. ರಾಮಾ-5 ಅರಸನ ಕಾಲದಲ್ಲಿ ಈ ಯೋಜನೆ ನಡೆದಿದ್ದು. ಕುತೂಹಲದ ಸಂಗತಿ ಎಂದರೆ ಥಾಯ್ಲೆಂಡಿನಲ್ಲಿ ಕಟ್ಟಡಗಳ ನಿರ್ಮಾಣ ಮಾಡುತ್ತಿದ್ದ ಕಾರ್ಮಿಕರು ಕೆಸರು- ಮಣ್ಣು- ದೂಳಿನಿಂದ ತುಂಬಿದ್ದ ಈ ಕೆಲಸಕ್ಕೆ ಬರಲಿಲ್ಲ. ಹೀಗಾಗಿ ಲಾವೋಸ್ ಹಾಗೂ ಈಶಾನ್ಯ ಥಾಯ್ಲೆಂಡಿನ ಕೆಲಸಗಾರರನ್ನು ಕರೆತರಲಾಯಿತು. ಅವರ ಪೈಕಿ ಬಹುತೇಕ ಮಂದಿ ಗಾಂಜಾ ವ್ಯಸನಿಗಳು. ಕೆಲಸಕ್ಕೆ ಮುನ್ನ ಗಾಂಜಾ ಕೊಟ್ಟೇ ಅವರನ್ನು ಸುರಂಗದ ಒಳಗೆ ಕಳಿಸಲಾಗುತ್ತಿತ್ತಂತೆ! ಯೋಜನೆಯ ಉಸ್ತುವಾರಿ ವಹಿಸಿದ್ದವರ ಪೈಕಿ ಜರ್ಮನಿಯ ಎಂಜಿನಿಯರ್ ಇಮೆಲ್ ಐಸೆನ್ ಹಾಫರ್ ಮುಖ್ಯ ರೂವಾರಿ. ಕಾಮಗಾರಿ ಸಮಯದಲ್ಲಿ ಮಲೇರಿಯಾದಂಥ ರೋಗಗಳೂ, ಹುಲಿಗಳೂ ಸುಮಾರು ಸಾವಿರ ಕಾರ್ಮಿಕರನ್ನು ಬಲಿ ಪಡೆದವು ಎಂದು ಹೇಳಲಾಗಿದೆ. ಇದರ ಜತೆಗೆ ಸಾಮಗ್ರಿ ಸಾಗಿಸಲು ಬಳಸುತ್ತಿದ್ದ ಕುದುರೆ, ಹೇಸರಗತ್ತೆಗಳೂ ಸಾವಿರಾರು ಸಂಖ್ಯೆಯಲ್ಲಿ ಜೀವತೆತ್ತವು. ಬೇಟೆಗಾರರನ್ನು ನಿಯೋಜಿಸಿ, ನರಭಕ್ಷಕಗಳನ್ನು ಹತ್ಯೆ ಮಾಡುವ ಪ್ರಯತ್ನಗಳಂತೂ ಸತತವಾಗಿ ನಡೆಯುತ್ತಿದ್ದವು. ಪ್ರಾಕೃತಿಕ ವಿಕೋಪ, ಕಾರ್ಮಿಕರ ಸಾವು- ನೋವಿನ ಮಧ್ಯೆ ಕೆಲಸ ನಡೆಯುತ್ತಿರುವಾಗ ಮೊದಲ ಮಹಾಯುದ್ಧ ಶುರುವಾಗಿ, ಈ ಯೋಜನೆಯ ಆಧಾರಸ್ತಂಭಗಳಾಗಿದ್ದ ಜರ್ಮನಿಯ ಎಂಜಿನಿಯರುಗಳನ್ನು ವಾಪಸು ಕರೆಸಿಕೊಳ್ಳಲಾಯಿತು. ಹಾಗೂ ಹೀಗೂ ಕೆಲಸ ಮುಂದುವರಿಯುತ್ತ 1918ರಲ್ಲಿ ಸುರಂಗ ಪೂರ್ಣಗೊಂಡಿತು. ಇತರ ಕಾಮಗಾರಿ ಪೂರ್ಣಗೊಂಡು, 1922ರಲ್ಲಿ ಮೊದಲ ಬಾರಿಗೆ ರೈಲು ಸುರಂಗದ ಈ ದ್ವಾರದಿಂದ ಆಚೆ ಹೊರಬಂದಾಗ ರಾಜನ ಪ್ರತಿನಿಧಿಗಳು ಅದಕ್ಕೆ ಹೂಮಾಲೆ ಹಾಕಿ ಸ್ವಾಗತಿಸಿದರು. ಈ ಅಪೂರ್ವ ಯೋಜನೆಗೆ ಎಂಜಿನಿಯರ್ ಐಸೆನ್ ಹಾಫರ್ ನೀಡಿದ ಕೊಡುಗೆಯನ್ನು ಸ್ಮರಿಸಿ, ಆತನ ನೆನಪಿಗೆ ಸ್ಮಾರಕವೊಂದನ್ನು ಸುರಂಗದ ಮೇಲ್ಭಾಗದಲ್ಲಿ ನಿರ್ಮಿಸಲಾಗಿದೆ.

ಸ್ವಚ್ಛ- ಸುಂದರ

ಈ ನಿಲ್ದಾಣದಲ್ಲಿ ರೈಲುಗಳನ್ನು ಹತ್ತುವ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ; ಕೆಲವೊಮ್ಮೆ ದಿನಕ್ಕೆ ಆರೆಂಟು ಜನರು ಕೂಡ ಇರುವುದಿಲ್ಲವಂತೆ! ಆದರೂ ಆರು ಪ್ರಮುಖ ರೈಲುಗಳಿಗೆ ಇಲ್ಲಿ ನಿಲುಗಡೆಯಿದೆ. ಹಚ್ಚಹಸಿರಿನ ಪರ್ವತ ಶ್ರೇಣಿಗಳಿಂದ ಸುತ್ತುವರಿದಿರುವ ಖುನ್ ತಾನ್ ನೋಡಲು ಮನಮೋಹಕ. ಈ ನಿಲ್ದಾಣದ ಕೊನೆಯ ಹಳಿಗಳ ಮೇಲೆ ವಿಶ್ರಾಂತಿ ಪಡೆಯುವ ರೈಲು ಎಂಜಿನ್‌ಗಳು, ಕಡಿದಾದ ಎತ್ತರದ ಸುರಂಗ ಏರುವ ಇತರ ರೈಲುಗಳಿಗೆ ‘ಸಾತ್’ ನೀಡಲಿಕ್ಕೆಂದೇ ಕಾಯುತ್ತ ನಿಂತಿರುತ್ತವೆ. ರೈಲು ಕಣಿವೆ ಆಚೆ ಇಳಿಯಲು ಶುರು ಮಾಡಿದಂತೆ ವಾಪಸು ಬಂದು, ಮತ್ತೊಂದು ರೈಲನ್ನು ಎಳೆದೊಯ್ಯಲು ಸಿದ್ಧವಾಗುತ್ತವೆ.

ನಿಲ್ದಾಣ ತೀರಾ ಸಣ್ಣದು. ಆದರೆ ಅದರ ಅಚ್ಚುಕಟ್ಟುತನ ಹಾಗೂ ಸ್ವಚ್ಛತೆ ಗಮನ ಸೆಳೆಯುತ್ತದೆ. ಸುರಂಗದ ನಿರ್ಮಾಣ ಕೆಲಸಗಳ ಫೋಟೊಗಳನ್ನು ನಿಲ್ದಾಣದ ಆವರಣದಲ್ಲಿ ಹಾಕಲಾಗಿದೆ. ಹೊರಭಾಗದಲ್ಲಿ ಗ್ರಾಹಕರೇ ಕಾಣದ ಕಿರಾಣಿ ಮತ್ತು ನಾಲ್ಕೈದು ಗುಜರಿ ಬೈಕುಗಳು ನಿಂತಿರುವ ‘ರಿಪೇರಿ ಅಂಗಡಿ’ ಕಾಣುತ್ತವೆ. ಬ್ಯಾಂಕಾಕ್ ಇಲ್ಲವೇ ಚಾಂಗ್ ಮಾಯ್‌ನಂಥ ಮಾಯಾನಗರಿಗಳಿಂದ ಐಷಾರಾಮಿ ರೈಲುಗಳು ಇಲ್ಲಿ ಬಂದು ನಿಲ್ಲುತ್ತವೆ. ಅವು ಬರುವ ಕೆಲವೇ ನಿಮಿಷಗಳ ಮೊದಲು ಪಕ್ಕದ ಹಳ್ಳಿಗಳಿಂದ ಒಂದಷ್ಟು ಯುವಕರು ಬಂದು ನೀರು, ತಂಪು ಪಾನೀಯ ಹಾಗೂ ಕುರುಕಲು ತಿಂಡಿ ಮಾರಾಟ ಮಾಡುತ್ತಾರೆ. ಇಳಿಯುವವರೂ, ಹತ್ತುವವರೂ ತೀರಾ ಕಡಿಮೆ; ಅಥವಾ ಇಲ್ಲವೇ ಇಲ್ಲ! ಐದು- ಹತ್ತು ನಿಮಿಷಗಳ ತರುವಾಯ ಗಾರ್ಡ್ ಯಥಾಪ್ರಕಾರ ಬಾವುಟ ತೋರಿಸುತ್ತಿದ್ದಂತೆ, ರೈಲು ಹೊರಡುತ್ತದೆ. ಗುಹೆಯೊಳಗೆ ಹೆಬ್ಬಾವಿನಂತೆ ರೈಲು ಒಳಗೆ ಹೋದ ಕೆಲ ಕ್ಷಣಗಳಲ್ಲೇ ಸದ್ದು ದಿಢೀರ್ ‘ನಾಪತ್ತೆ’ಯಾಗಿ, ಇಡೀ ನಿಲ್ದಾಣ ಮತ್ತೆ ಮೌನದಲ್ಲಿ ಮುಳುಗುತ್ತದೆ. ಆಗಾಗ್ಗೆ ಪಕ್ಷಿಗಳ ಕಲರವ ಬಿಟ್ಟರೆ ಮತ್ತೇನೂ ಕೇಳಿಸುವುದಿಲ್ಲ…

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.