ADVERTISEMENT

ನಾಪೋಕ್ಲು ತುಂಬಾ ಬೆಳ್ಳಕ್ಕಿ ಕಲರವ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 7:25 IST
Last Updated 19 ಜೂನ್ 2011, 7:25 IST
ನಾಪೋಕ್ಲು ತುಂಬಾ ಬೆಳ್ಳಕ್ಕಿ ಕಲರವ
ನಾಪೋಕ್ಲು ತುಂಬಾ ಬೆಳ್ಳಕ್ಕಿ ಕಲರವ   

ನಾಪೋಕ್ಲು; ಪ್ರಪಂಚದಲ್ಲಿ ಜೀವ ವೈವಿಧ್ಯತೆಗೆ ಹೆಸರಾದ ಪಶ್ಚಿಮ ಘಟ್ಟಗಳಿಂದ ಆವೃತವಾದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಈಗ ಬೆಳ್ಳಕ್ಕಿಗಳ ಕಲರವ. ಅದರಲ್ಲೂ ನಾಪೋಕ್ಲು ವ್ಯಾಪ್ತಿಯ ಬಾನಲ್ಲಿ ಎಲ್ಲಿ ನೋಡಿದರಲ್ಲಿ ಬೆಳ್ಳಕ್ಕಿಗಳದೇ ಕಾರುಬಾರು. ಪಟ್ಟಣ ವ್ಯಾಪ್ತಿಯಲ್ಲಿರುವ ಅಡಿಕೆ ಮರಗಳು ಬೆಳ್ಳಕ್ಕಿಗಳ ಆಶ್ರಯ ತಾಣವಾದರೂ ಗದ್ದೆ ಬಯಲಿನ ಕಾಫಿ ತೋಟಗಳ ವಿವಿಧ ಮರಗಳನ್ನೂ ಆಶ್ರಯಿಸಿಕೊಂಡಿವೆ.

 ಹಸಿರು ಮರಗಳಲ್ಲಿ ಗೂಡು ಕಟ್ಟಿ ಮೊಟ್ಟೆಯಿಡುವ ಕಾರ್ಯದಲ್ಲಿ ನಿರತವಾಗಿರುವ ಬೆಳ್ಳಕ್ಕಿಗಳು ಮೂರ್ನಾಡು- ನಾಪೋಕ್ಲು ವ್ಯಾಪ್ತಿಯ ಪರಿಸರದಲ್ಲಿ ಎಲ್ಲೆಂದರಲ್ಲಿ ಕಂಡು ಬರುತ್ತಿದ್ದು ಪ್ರಕೃತಿಪ್ರಿಯರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತಿವೆ. ಕೊಡಗಿನಲ್ಲಿ ಮುಂಗಾರು ಆರಂಭವಾಗುತ್ತಿದ್ದಂತಯೇ ಎಲ್ಲೆಂದರಲ್ಲಿ ಅಡ್ಡಾಡಿಕೊಂಡಿದ್ದ ಬೆಳ್ಳಕ್ಕಿಗಳು ಇದೀಗ ಗುಂಪುಗೂಡಿ ಸೂಕ್ತ ಆಶ್ರಯ ತಾಣವನ್ನರಸುತ್ತಿವೆ. ಪ್ರತಿ ವರ್ಷ ನಾಪೋಕ್ಲು ಪಟ್ಟಣದ ಸಮೀಪದಲ್ಲಿನ ಕಾವೇರಿ ನದಿತೀರದ ಚೆರಿಯಪರಂಬು ನೆಡುತೋಪನ್ನು ಗೂಡುಕಟ್ಟುವ ಕ್ರಿಯೆಗೆ ಸಂತಾನಾಭಿವೃದ್ದಿ ಕಾರ್ಯಕ್ಕೆ ಈ ಬೆಳ್ಳಕ್ಕಿಗಳು ಆಶ್ರಯಿಸಿಕೊಂಡಿದ್ದವು.

 ಇವುಗಳೊಂದಿಗೆ ಪಟ್ಟಣ ವ್ಯಾಪ್ತಿಯ ಅಡಿಕೆ ಮರಗಳು ಬೆಳ್ಳಕ್ಕಿಗಳ ವಾಸಸ್ಥಾನವಾಗಿದ್ದವು. ಇದೀಗ ನೆಡುತೋಪಿನ ಮರಗಳನ್ನು ಅರಣ್ಯ ಇಲಾಖೆ ಕಡಿದು ತೆರವುಗೊಳಿಸಿದ್ದರಿಂದ ಬೆಳ್ಳಕ್ಕಿಗಳು ಸಂಪೂರ್ಣವಾಗಿ ಪಟ್ಟಣ ವ್ಯಾಪ್ತಿಯ ಮರಗಳನ್ನು ಆಶ್ರಯಿಸಿಕೊಂಡಿವೆ. ಅಡಿಕೆ ಮರಗಳ ಸೋಗೆಯ ಬುಡದಲ್ಲಿ ಅಡಿಕೆ ಗೊಂಚಲುಗಳಲ್ಲಿ ಕಸ-ಕಡ್ಡಿಗಳು ತಂದು ಒಪ್ಪವಾಗಿ ಜೋಡಿಸಿ ಗೂಡುಕಟ್ಟಿರುವ ಬೆಳ್ಳಿಕ್ಕಿಗಳು ಮೊಟ್ಟೆಯಿಟ್ಟು ಮರಿ ಮಾಡಿ ಗುಟುಕು ನೀಡಿ ಮರಿಗಳನ್ನು ಪೋಷಿಸುತ್ತವೆ.

 ಈ ಅವಧಿಯಲ್ಲಿ ಹೆಚ್ಚು ಆಹಾರ ಸಂಗ್ರಹಣೆ ಅವಶ್ಯಕವಾಗಿರುವುದರಿಂದ ಆಹಾರವನ್ನರಸಿಕೊಂಡು ಗದ್ದೆಯ ಬಯಲುಗಳಲ್ಲಿ ಉದ್ದಕ್ಕೂ ಸಾಗುತ್ತವೆ. ಇತ್ತೀಚೆಗೆ ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆಯಾಗಿದ್ದು, ಕೃಷಿಕರು ಕೃಷಿ ಚಟುವಟಿಕೆಗಳಲ್ಲಿ  ನಿರತರಾಗಿದ್ದಾರೆ. ಹೆಚ್ಚಿನ ಭಾಗ ಉಳುಮೆಯಾಗಿರುವ  ಗದ್ದೆಗಳಲ್ಲಿ ಹತ್ತಾರು ಕಿಲೋ ಮೀಟರ್‌ಗಳವರೆಗೆ ಬೆಳ್ಳಕ್ಕಿಗಳು ಹುಳು ಹುಪ್ಪಡಿಗಳನ್ನು ಹಿಡಿದು ತಿನ್ನುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ.

 ನಾಟಿ ಮಾಡಿರುವ ಹಸಿರು ಗದ್ದೆಗಳ ನಡುವೆ ಕತ್ತೆತ್ತಿ ಅತ್ತಿತ್ತ ನೋಡುತ್ತಾ ಹೊಂಚು ಹಾಕಿ ಹುಳು ಹುಪ್ಪಟೆಗಳನ್ನು ಹಿಡಿಯುವುದು ನೋಡುಗರ ಕಣ್ಣಿಗೆ ಹಬ್ಬ. ಗುಂಪಾಗಿ ವಾಸಿಸುವ ಆಹಾರಕ್ಕೆ ಜಲಚರಗಳನ್ನೇ ನಂಬಿಕೊಂಡಿರುವ ಹಕ್ಕಿಗಳು ಈ ಬೆಳ್ಳಕ್ಕಿಗಳು ಇವುಗಳೊಂದಿಗೆ ಕ್ರೌಂಚ ಹಾಗೂ ಜೌಗು ಹಕ್ಕಿಗಳು ಹೊಂದಾಣಿಕೆಯಿಂದ ಸಂಸಾರ ನಡೆಸುತ್ತಿರುವುದು ವೈಶಿಷ್ಟ್ಯ. ಬೆಳ್ಳಕ್ಕಿಗಳಲ್ಲಿ ಕೊಕ್ಕರೆ ಬೆಳ್ಳಕ್ಕಿ, ಮಧ್ಯಮ ಬೆಳ್ಳಕ್ಕಿ ಹಾಗೂ ದೊಡ್ಡ ಬೆಳ್ಳಕ್ಕಿಗಳೆಂಬ ವಿಧಗಳಿದ್ದು ಗುಂಪಾಗಿ ವಾಸಿಸುವಾಗ ಒಂದೇ ತೆರನಾಗಿ ಕಾಣುತ್ತವೆ. ಉದ್ದುದ್ದ  ಜುಟ್ಟುಗಳನ್ನು  ಹೊಂದಿರುವ ಬೆಳ್ಳಕ್ಕಿಗಳು ಅಪ್ಪಟ ಶ್ವೇತ ವರ್ಣ ಹಾಗೂ ಬೂದು ವರ್ಣ ಹೊಂದಿವೆ. ಪ್ರತಿ ವರ್ಷದ ಮಳೆಗಾಲದ ಆರಂಭದಲ್ಲಿ ಆಹಾರ ಹಾಗೂ ಸಂತಾನೋತ್ಪತ್ತಿಗಾಗಿ ದೂರದ ಯಾವುದೇ ಪ್ರದೇಶದಿಂದ ಈ ಬೆಳ್ಳಕ್ಕಿಗಳು ವಲಸೆ ಬರುತ್ತಿರಬಹುದು ಎಂಬುದು ಸ್ಥಳೀಯರ ಅಭಿಪ್ರಾಯ.

ಗೂಡುಕಟ್ಟುವ ಬೆಳ್ಳಕ್ಕಿಗಳು ಸ್ಥಳೀಯ ಹಕ್ಕಿಗಳೇ ಆಗಿವೆ. ಗೂಡುಕಟ್ಟುವ ಅವಧಿಗೆ ಹೆಚ್ಚಿನ ಆಹಾರ ಬೇಕಾಗುವುದರಿಂದ ಎಲ್ಲವೂ ಒಂದೆಡೆ ಸೇರಿ ಸೂಕ್ತ ಆಶ್ರಯ ತಾಣವನ್ನು ಅವಲಂಬಿಸುತ್ತವೆ. ಸೆಪ್ಟೆಂಬರ್ ನಂತರದ ಅವಧಿಯಲ್ಲಿ ಅವು ಉಳಿದೆಡೆ ಚದುರಿ ಹೋಗುವುದರಿಂದ ಮತ್ತೆ ಮಳೆಗಾಲದಲ್ಲಿ ಎಲ್ಲಿಂದಲೋ ವಲಸೆ ಬಂದಂತೆ ತೋರುತ್ತವಷ್ಟೇ ಹೊರತು ಅವು ವಲಸೆ ಹಕ್ಕಿಗಳಲ್ಲ” ಎನ್ನುತ್ತಾರೆ ಕೊಡಗಿನ ಪಕ್ಷಿ ತಜ್ಙ ಡಾ. ನರಸಿಂಹನ್.
ಆಹಾರವನ್ನರಸಿ ಬರುವ ಬೆಳ್ಳಕ್ಕಿಗಳಿಗೆ ಇತ್ತೀಚಿನ ದಿನಗಳಲ್ಲಿ ಆಹಾರದ ಕೊರತೆಯುಂಟಾಗಿದೆ. ಬತ್ತ ಬೆಳೆಯುತ್ತಿದ್ದ ಗದ್ದೆಗಳಲ್ಲೆಗ ಅಡಿಕೆ ಶುಂಠಿ, ಕಾಫಿ ಮುಂತಾದ ಪರ್ಯಾಯ ಬೆಳೆ ಬೆಳೆಯುತ್ತಿರುವುದರಿಂದ ಗುಟುಕು ಆಹಾರ ತರಲು ಬೆಳ್ಳಕ್ಕಿಗಳು ಆಹಾರ, ಸಮಯ ವ್ಯಯಿಸಬೇಕಾಗಿ ಬಂದಿದೆ. ಹಾಗಿದ್ದೂ ಬೆಳ್ಳಕ್ಕಿಗಳ ನಿರಂತರ ಚಟುವಟಿಕೆ ಮುಂದುವರಿದಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.