ADVERTISEMENT

ಮುತ್ತತ್ತಿ ತಿಟ್ಹತ್ತಿ

ಸುತ್ತಾಣ

ಬಿಂಡಿಗನವಿಲೆ ಭಗವಾನ್
Published 6 ಸೆಪ್ಟೆಂಬರ್ 2013, 19:59 IST
Last Updated 6 ಸೆಪ್ಟೆಂಬರ್ 2013, 19:59 IST
ಮುತ್ತತ್ತಿ ತಿಟ್ಹತ್ತಿ
ಮುತ್ತತ್ತಿ ತಿಟ್ಹತ್ತಿ   

ವಾರಾಂತ್ಯದ ರಜೆ ಕಳೆಯಬೇಕೆ? ಯಾಂತ್ರಿಕ ಬದುಕಿನ ಬೇಸರ, ಧಾವಂತ ಹೊರಹಾಕಿ ಹಗುರಾಗಬೇಕೆ? ಮುತ್ತತ್ತಿ ಅದಕ್ಕೆ ಸೂಕ್ತ ಸ್ಥಳ. ಬೆಂಗಳೂರಿನಿಂದ ನೂರು ಕಿ.ಮೀ. ದೂರದ ಈ ರಮ್ಯ ಕಾವೇರಿ ತಟ ‘ಮಾತೆತ್ತಿದರೆ ಮುತ್ತತ್ತಿ’ ಎಂಬ ಗಾದೆಯನ್ನು ಮಹಾನಗರದಲ್ಲಿ ಚಲಾವಣೆಗೆ ತಂದಿದೆ.

ಬೆಂಗಳೂರಿನಿಂದ ಹೋಗಿ ಬರುವ ಒಂದು ದಿನದ ಪ್ರವಾಸಕ್ಕೆ ಇದು ಹೇಳಿ ಮಾಡಿಸಿದ ತಾಣ. ಇಲ್ಲಿಗೆ ರಾಜ್ಯ ಸಾರಿಗೆ ಬಸ್ಸುಗಳ ಸೌಕರ್ಯ ಸಾಕಷ್ಟಿವೆ. ಮೊದಲು ೬೦ ಕಿ.ಮೀ. ದೂರವಿರುವ ಕನಕಪುರ ತಲುಪಬೇಕು. ಅಲ್ಲಿಂದ ೧೫ ಕಿ.ಮೀ. ಪ್ರಯಾಣ ಮಾಡಿ ಸಾತನೂರು ಸೇರಬೇಕು. ಬಸ್ ನಿಲ್ದಾಣಕ್ಕೆ ಮುನ್ನವೇ ಎಡಕ್ಕೆ ಇರುವ ದಾರಿಯಲ್ಲಿ ೨೪ ಕಿ.ಮೀ. ಕ್ರಮಿಸಿದರೆ ಮುತ್ತತ್ತಿ ಸಿಗುತ್ತದೆ.

ಸಾತನೂರಿನಿಂದ ಮುತ್ತತ್ತಿ ತಲುಪುವುದೇ ತುಸು ತ್ರಾಸ. ಏಕೆಂದರೆ ಅಲ್ಲಿಂದ ಬಸ್ಸುಗಳ ಸಂಚಾರ ಕಡಿಮೆ. ಹಾಗಾಗಿ ಹಲವರು ಸ್ವಂತ ಅಥವಾ ಬಾಡಿಗೆ ವಾಹನಗಳಲ್ಲಿ ಮುತ್ತತ್ತಿ ಪ್ರವಾಸ ಕೈಗೊಳ್ಳುತ್ತಾರೆ. ಆ ೨೪ ಕಿ.ಮೀ. ದೂರದ ಹಾದಿ ಪಶ್ಚಿಮ ಘಟ್ಟದಲ್ಲಿ ಪ್ರಯಾಣಿಸುವ ಅನುಭವ ನೀಡುವುದರಿಂದ ಬೈಕ್ ಸವಾರಿಯಂತೂ ಚೇತೋಹಾರಿಯೆನಿಸುತ್ತದೆ. ಪ್ರಯಾಣಕ್ಕೆ ಆಟೊಗಳು ಲಭ್ಯ. ಎಲ್ಲೆಂದರಲ್ಲಿ ಕೋತಿಗಳು ಕಂಡುಬರುತ್ತವೆ.

ಪಯಣಿಸುವ ಮುಖ್ಯ ರಸ್ತೆಗೆ ಸಮಾನಾಂತರವಾಗಿರುವ  ಕಾವೇರಿ ಮುತ್ತತ್ತಿಯಲ್ಲಿ ನಿರಾಳ ಮತ್ತು ವಿಶಾಲ ಸ್ವರೂಪಿಯಾಗಿ ಕಂಡು ಬರುತ್ತಾಳೆ. ಅಲ್ಲದೇ ಬಂಡೆಗಳು ಕಲಾವಿದನ ರಚನೆಯಂತೆ ಕಾಣುತ್ತವೆ. ಹೊಳೆಗೆ ಹಿನ್ನೆಲೆಯಾಗಿರುವ ಬೆಟ್ಟಗಳು ನಯನಮನೋಹರವಾಗಿವೆ. ಅತಿಯಾದ ಜನಜಂಗುಳಿ ಇರದ ಕಾರಣ ನದಿದಂಡೆಯಲ್ಲಿ ಆನಾಯಾಸವಾಗಿ ವಿಹರಿಸಬಹುದು. ಬಂಡೆಗಳೇ ಆಸನಗಳಾಗುತ್ತವೆ.

ಮಲಿನವಾದ ಕಾವೇರಿ
ಮುತ್ತತ್ತಿ ರಮಣೀಯತೆಗೆ ಗ್ರಹಣ ಬಡಿದಂತೆ ಅದನ್ನು ಪರಿಸರ ಮಾಲಿನ್ಯವೂ ಕಾಡಿದೆ. ಹೇಗೂ ಹರಿಯುವ ನೀರಲ್ಲವೇ ಎಂದು ಬೊಗಸೆಯಲ್ಲಿ ನೀರು ಎತ್ತಿಕೊಳ್ಳುವುದೇ ತಡ ಕಸ, ಕಡ್ಡಿ, ಚಿಂದಿ, ಚೂರು ಕಣ್ಣಿಗೆ ರಾಚುತ್ತವೆ. ಕೆಲವು ಪ್ರವಾಸಿಗರಿಂದ ಸ್ವಚ್ಛತೆಗೆ ಸಂಚಕಾರವಾಗಿದೆ. ಅಲ್ಲಿ  ಹೋಟೆಲುಗಳಿಲ್ಲ. ಆದರೆ ಅಡುಗೆ ತಯಾರಿಸಿಕೊಳ್ಳಲು ದಿನಸಿ, ತರಕಾರಿ, ಮಾಂಸ, ಕಟ್ಟಿಗೆ, ಸಂಬಾರು ಪದಾರ್ಥಗಳು ದೊರೆಯುತ್ತವೆ.

ADVERTISEMENT

ಪಾತ್ರೆಗಳೂ ಬಾಡಿಗೆಗೆ ಸಿಗುತ್ತವೆ. ಮತ್ತೊಂದೆಡೆ ಮಸಾಲೆ ರುಬ್ಬಿಕೊಡುತ್ತೇವೆ, ಅಡುಗೆ ತಯಾರಿಸಿ ಕೊಡುತ್ತೇವೆ ಎಂಬ ಫಲಕಗಳು ಕಣ್ಣಿಗೆ ಬೀಳುತ್ತವೆ.
ಎಲ್ಲೆಂದರಲ್ಲಿ ಅಡುಗೆ ತಯಾರಿಸಿಕೊಂಡು ಊಟ ಮಾಡಿದ ನಂತರ ತ್ಯಾಜ್ಯವನ್ನು ಅಲ್ಲೇ ಬಿಟ್ಟು ಹೋಗುವವರೂ ಇದ್ದಾರೆ. ಬೂದಿ, ಪ್ಲಾಸ್ಟಿಕ್, ಪ್ರಾಣಿ ತ್ಯಾಜ್ಯ, ಸಿಪ್ಪೆ, ಎಲೆ ಅಲ್ಲಲ್ಲಿ ಹರಡಿಕೊಂಡಿವೆ. ಇದರಿಂದ ಪರಿಸರಕ್ಕೂ ಹಾನಿಯಾಗುತ್ತದೆ ಎಂಬ ಅರಿವು ಇರಬೇಕು.

ಈಜುವುದು ಅಪಾಯಕಾರಿ
ಮುತ್ತತ್ತಿಯಲ್ಲಿ ಸುಳಿಯಿದ್ದು, ಈಜಲು ನೀರಿಗಿಳಿಯುವುದು ಅಪಾಯ. ಹಾಗಾಗಿ ಸುಂದರ ತಾಣದಲ್ಲಿ ದಿನಕಳೆದು ಸುರಕ್ಷಿತವಾಗಿ ಮರಳಿ ಬರುವುದು ಉತ್ತಮ.                                                           

ನಗರದ ಸುತ್ತ ಪಿಕ್‌ನಿಕ್‌ ಹೋಗಬಲ್ಲ ತಾಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಒಂದೇ ದಿನದಲ್ಲಿ ಹೋಗಿ, ಸಂತಸದ ಕ್ಷಣಗಳನ್ನು ಮೊಗೆದುಕೊಂಡು ಬರಬಹುದಾದ ಕೆಲವು ತಾಣಗಳು ಅಪ್‌ಡೇಟ್‌ ಆಗಿವೆ. ತಲೆಎತ್ತಿರುವ ಹೊಸ ಪಿಕ್‌ನಿಕ್‌ ಸ್ಪಾಟ್‌ಗಳೂ ಉಂಟು. ವಾರಾಂತ್ಯದ ಓದಿಗೆ ಪ್ರತಿ ಶನಿವಾರದ ಸಂಚಿಕೆಯಲ್ಲಿ ಒಂದು ‘ಸುತ್ತಾಣ’ ಪ್ರಕಟವಾಗಲಿದೆ. ಓದುಗರೂ ಉತ್ತಮ ಗುಣಮಟ್ಟದ ಚಿತ್ರಗಳ ಸಹಿತ 500 ಪದಗಳಿಗೆ ಮೀರದಂತೆ ತಾಣಗಳ ಪರಿಚಯ ಮಾಡಿಕೊಡಬಹುದು. ಬರಹ, ನುಡಿ ಅಥವಾ ಯೂನಿಕೋಡ್‌ನಲ್ಲಿ ಬರೆದು metropv@prajavani.co.in
ಇ–ಮೇಲ್‌ಗೆ ಕಳುಹಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.