ADVERTISEMENT

ರಂಗು ರಂಗಿನ ರಂಗೂನ್‌ ನೆಲದಲ್ಲಿ...

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2017, 19:30 IST
Last Updated 4 ಫೆಬ್ರುವರಿ 2017, 19:30 IST
ಹೊಳೆಯುವ ಹೊಂಬಣ್ಣದ ಶ್ವೇದಗಾನ್ ಪಾಯ ಪಗೋಡ
ಹೊಳೆಯುವ ಹೊಂಬಣ್ಣದ ಶ್ವೇದಗಾನ್ ಪಾಯ ಪಗೋಡ   

ಜಯಶ್ರೀ ಭಟ್‌, ಸಿಂಗಪುರ

ಕೆಳಗಿಳಿಯುತ್ತಿದ್ದ ವಿಮಾನದ ಕಿಟಕಿಯಿಂದ ಕೂತೂಹಲಭರಿತಳಾಗಿ ಕೆಳಗೆ ನೋಡುತ್ತಲೇ ಇದ್ದೆ. ನನ್ನ ಕಣ್ಣಿಗೆ ಬಿದ್ದ ಮೊದಲ ಕೊನೆಯ ಎಲ್ಲ ಕಟ್ಟಡಗಳೂ ಪಗೋಡಗಳೇ! ‘ಪಗೋಡಗಳ ದೇಶಕ್ಕೆ ಸ್ವಾಗತ’ ಎಂದು ನನಗೆ ನಾನೇ ಮನಸಲ್ಲಿ ಹೇಳಿಕೊಂಡೆ.

ಮಯನ್ಮಾರ್ (ಬರ್ಮಾ) ನಮ್ಮ ನೆರೆಯ ದೇಶವೇ ಆದರೂ ನಮಗೆ ಅದರ ಬಗ್ಗೆ ತಿಳಿದಿದ್ದು ಕಡಿಮೆಯೇ ಅನ್ನಬಹುದು. ಯಾಂಗಾನ್ ಅಥವಾ ರಂಗೂನ್ ಇಲ್ಲಿನ ಅತಿ ದೊಡ್ಡ ನಗರ ಹಾಗೂ ಇತ್ತೀಚೆಗಿನವರೆಗೂ ರಾಜಧಾನಿ ಕೂಡ; ನೆಪಿಡಾ ನಗರವನ್ನು ರಾಜಧಾನಿ ಎಂದು ಘೋಷಿಸುವವರೆಗೂ. ಬಹುಪಾಲು ಬೌದ್ಧ ಧರ್ಮೀಯರೇ ಇದ್ದರೂ ಯಾಂಗಾನ್‌ನಲ್ಲಿ ಮಸೀದಿಗಳೂ, ಚರ್ಚುಗಳೂ, ಮಾರಿಯಮ್ಮ, ಕಾಳಮ್ಮನ ದೇವಸ್ಥಾನಗಳೂ ಕಾಣುವುದು ಅಪರೂಪವೇನಲ್ಲ. ಆದರೆ ಎಲ್ಲ ಕಡೆಯೂ ಕಣ್ಣಿಗೆ ಕುಕ್ಕುವುದು ಆಕರ್ಷಕ ಗೋಪುರದ ಹೊಳೆಯುವ ಹೊಂಬಣ್ಣದ ಪಗೋಡಾಗಳೇ.

ಬ್ರಿಟಿಷರು ಆಳಿ ಬಿಟ್ಟುಹೋದ ಕುರುಹಾಗಿ ಉಳಿದಿರುವ ಕಲೋನಿಯಲ್ ಕಟ್ಟಡಗಳು ಇಲ್ಲಿರುವಷ್ಟು ಚೆನ್ನಾಗಿ ಇನ್ನುಳಿದ ಅಕ್ಕಪಕ್ಕದ ದೇಶಗಳಲ್ಲೆಲ್ಲೂ ಇಲ್ಲ. ಆದರೆ ಬ್ರಿಟಿಷರ ಆಳ್ವಿಕೆಯ ಕುರುಹಾಗಿ ಈ ನಿರ್ಜೀವ ಕಟ್ಟಡಗಳನ್ನಷ್ಟೇ ಇಟ್ಟುಕೊಂಡ ಅಗ್ಗಳಿಕೆ ಈ ಬರ್ಮೀಯರದ್ದು ಎಂದು ಗೊತ್ತಾಗಲು ನನಗೆ ಹೆಚ್ಚು ಸಮಯವೇನೂ ಹಿಡಿಯಲಿಲ್ಲ.

ನಮ್ಮನ್ನು ನಾವಲ್ಲಿರುವಷ್ಟು ದಿನವೂ ಎಲ್ಲಿಗೆ ಬೇಕಾದರೂ ಕರೆದೊಯ್ದು, ಊಟ ತಿಂಡಿ ಎಲ್ಲ ನಾವು ಹೇಳಿದಲ್ಲಿ ಮಾಡಿಸಿ, ಬೇಡ ಬೇಡವೆಂದರೂ ಬಿಲ್ಲು ತೆತ್ತು, ನಗು ಮುಖದಿಂದ ಮೆಲು ಮಾತಿನಿಂದ ನಮ್ಮ ಟೂರ್ ಗೈಡ್ ರೀತಿ ಇದ್ದ ಮಿಸ್ಟರ್ ಆಂಗ್ ಅಸಲಿಗೆ ಟೂರ್ ಗೈಡ್ ಅಲ್ಲ. ಆತ ಒಂದು ಫಾರ್ಮಾಸ್ಯೂಟಿಕಲ್ ಕಂಪೆನಿಯಲ್ಲಿ ಕೆಮಿಸ್ಟ್. ಅವರ ಬಾಸ್ ಹೇಳಿದ್ದರಿಂದ ನಮ್ಮ ದೇಖರೇಖೆ ನೋಡಿಕೊಳ್ಳುತ್ತಿದ್ದರು ಅಷ್ಟೇ. ಆಂಗ್‌ನ ಬಾಸ್‌ಗೆ ಪೇಂಟಿಂಗ್ಸ್‌ ಅಂದರೆ ಎಲ್ಲಿಲ್ಲದ ಹುಚ್ಚು. ಅವರ ಪೇಂಟಿಂಗ್ಸ್‌ಗಳ ಸಂರಕ್ಷಣಾ ಕೆಲಸಕ್ಕಾಗಿಯೇ ನಮ್ಮನ್ನು ಕರೆಸಿಕೊಂಡಿದ್ದರು. ಅವರ ಆಣತಿಯ ಮೇಲೆ ನಮ್ಮ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ಆಂಗ್‌, ನನಗೆ ರಾಮನ ಬಂಟ ಹನುಮಂತನನ್ನು ನೆನಪಿಸುತ್ತಿದ್ದ. ತನ್ನ ಬಾಸ್ ಬಗ್ಗೆ ಆತನ ನಿಷ್ಠೆ ಅಂತದ್ದು.

ಬಂದ ದಿನವೇ ಮುಳುಗುತ್ತಿದ್ದ ಸೂರ್ಯನನ್ನೂ ನಾಚಿಸುವಂತೆ ಹೊಂಬಣ್ಣದಿಂದ ಹೊಳೆಯುತ್ತಿದ್ದ ಶ್ವೇದಗಾನ್ ಪಾಯ ಪಗೋಡಕ್ಕೆ ಕರೆದುಕೊಂಡು ಹೋದ ಆಂಗ್. ಶ್ವೇದಗಾನ್ ಪಾಯ ಪಗೋಡ ನಗರದ ಕೇಂದ್ರಬಿಂದುವಿನಂತಿದ್ದು, ಟ್ರಾಫಿಕ್, ಬಜಾರ್  ಎಲ್ಲವೂ ಇದರ ಸುತ್ತಲೂ ಚಾಚಿಕೊಂಡಿದೆ. ಹತ್ತಿರ ಹೋದರೆ ಅದೆಷ್ಟು ಸುಂದರ ದೇಗುಲ, ಅದೆಷ್ಟು ವಿಶಾಲ, ಎಲ್ಲೆಲ್ಲೂ ಮಿನುಗುವ ಕಲ್ಲಿನ ಕುಸುರಿ ಕೆಲಸದ ಬಂಗಾರ ವರ್ಣದ ಬುದ್ಧನ ಪುತ್ಥಳಿಗಳು, ಆ ಅಸಂಖ್ಯಾತ ಬುದ್ಧರನ್ನು ಪೂಜಿಸುವ ಅಷ್ಟೇ ದೊಡ್ಡ ಸಂಖ್ಯೆಯ ಬರ್ಮೀಯರು, ಅವರೆಲ್ಲರ ಕೈಯಲ್ಲೂ ಕಣ್ಸೆಳೆಯುವಂತಿದ್ದ ಸೂಳಿ ಹೂವಿನ ಬಿಳಿ ಹಳದಿ ಹೂವಿನ ಮಾಲೆ, ಅವುಗಳಿಂದ ಹೊರಹೊಮ್ಮುತ್ತಿದ್ದ ಸುವಾಸನೆ ಗಾಳಿಯಲ್ಲೆಲ್ಲ ಆವರಿಸಿತ್ತು.

ಮೇಲೆ ಮೇಲೆ ಏರುತ್ತಾ ಹೋದಂತೆ ಒಮ್ಮೆಲೆ ಬೇರೆಯದೇ ಜಗತ್ತನ್ನು ಪ್ರವೇಶಿಸಿದಂತೆ ವಿಶಿಷ್ಟವಾದ ಕುಸುರಿ ಕಲೆಯಲ್ಲಿ ಮುಳುಗೆದ್ದ ಚಿಕ್ಕ ದೊಡ್ಡ ದೇಗುಲಗಳಿಂದ ತುಂಬಿದ್ದ ಬೃಹತ್ತಾದ ಜಗುಲಿ, ಅಲ್ಲಿ ನಟ್ಟ ನಡುವಿನಲ್ಲಿ ತಲೆ ಎತ್ತಿ ನೋಡಲಾರದಷ್ಟು ಎತ್ತರದ ಗೋಪುರ. ಚಿನ್ನ ಹಾಗೂ ಬೆಳ್ಳಿಯ ತಗಡಿನಿಂದ ಮಾಡಿದ ಆ ಗೋಪುರ ಸೂರ್ಯಕಿರಣವನ್ನು ದಶದಿಕ್ಕುಗಳಿಗೂ ಪ್ರತಿಫಲಿಸಿ ಉಂಟು ಮಾಡುತ್ತಿದ್ದ ಭ್ರಮಾಲೋಕ, ಬೌದ್ಧರ ಮಂತ್ರ ಪಠಣ, ಗೋಪುರದ ನೆತ್ತಿಯಲ್ಲಿ ವಜ್ರ ವೈಢೂರ್ಯಗಳಿವೆಯಂತೆ. ಅವು ಸೂರ್ಯನಿಗೇ ಸವಾಲೆಸೆಯುವಷ್ಟು ಹೊಳೆಯುತ್ತಿದ್ದವು. ಹೌದೋ ಅಲ್ಲವೋ ಎಂದು ಪರೀಕ್ಷಿಸಿ ನೋಡಲಾದರೂ ಸಾಧ್ಯವೇ ಆ ಬೆಳಕಿನ ಪುಂಜವನ್ನು, ಆ ಮೇರು ಶಿಖರವನ್ನು?

ವಾರದ ಎಲ್ಲಾ ದಿನಗಳ ಹೆಸರಿನಲ್ಲೂ ಒಂದೊಂದು ಕಿರು ದೇಗುಲ, ನಮ್ಮ ಹುಟ್ಟಿದ ದಿನ ಯಾವುದೋ ಆ ಗುಡಿಯೆದುರು ಗೊಂಬೆಯಂತೆ ಕುಳಿತ ಬುದ್ಧನಿಗೆ ನಾವೇ ಸೂಳಿ ಹೂವಿನ ಹಾರ ಹಾಕಿ ನೀರು ಪ್ರೋಕ್ಷಿಸಿ ಪೂಜೆ ಮಾಡಬಹುದಾದ ಸ್ಥಳ. ವೃತ್ತಾಕಾರದಲ್ಲಿ ಆ ಜಗುಲಿಯನ್ನು ಸುತ್ತುವರೆದ ಕಾರ್ತಿಕ ದೀಪವನ್ನು ಹೋಲುವ ಹಣತೆಯಲ್ಲಿ ಎಣ್ಣೆಯಲ್ಲದ್ದಿದ ಎಳ್ಳಿನಬತ್ತಿ. ಎದುರು ಕೂತು ಧ್ಯಾನವೋ, ಮೌನವೋ, ಪಠಣವೋ ಮಾಡುತ್ತಿರುವ ಮಂದಿ, ಭಿಕ್ಷುಗಳು. ನಾವೂ ಹೋಗಿ ಸ್ವಲ್ಪ ಹೊತ್ತು ಆ ಅಚ್ಚರಿಯನ್ನು ಕಣ್ಣು ತುಂಬಿಸಿಕೊಳ್ಳುತ್ತಾ ಅವರ ನಡುವೆಯೇ ಕುಳಿತೆವು.

ಎಲ್ಲರ ಕೆನ್ನೆಯ ಮೇಲೂ ಹಚ್ಚಿದ ಗಂಧ ನಾನೆಣಿಸಿದಂತೆ ದೇಗುಲಕ್ಕೆ ಬರುವ ಭಕ್ತಾದಿಗಳು ಹಚ್ಚಿಕೊಳ್ಳುವ ಸಾಮಗ್ರಿಯಾಗಿರದೆ, ಕಚೇರಿಯೋ ಮನೆಯೋ ಗಂಡೋ ಹೆಣ್ಣೋ ಎಂಬ ಯಾವ ಭೇದವಿಲ್ಲದೆ ಎಲ್ಲ ಬರ್ಮೀಯರೂ ನಿತ್ಯವೂ ಹಚ್ಚಿಕೊಳ್ಳುವ ಸರ್ವಾಂತರ್ಯಾಮಿ ವಸ್ತು ಎಂದು ಮರುದಿನ ಬೆಳಗಾಗುವವರೆಗೂ ತಿಳಿಯಲಿಲ್ಲ. ಇಲ್ಲಿ ಕಾಸ್ಮೆಟಿಕ್ಸ್‌ಗಳಿಗೆ ಏನೂ ಕೆಲಸವಿಲ್ಲೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಇದಕ್ಕಿಂತ ಮಜಾ ಎಂದರೆ ನಿಜವಾದ ‘ಲುಂಗಿ ಡಾನ್ಸ್’ ನೋಡಲು ಇಲ್ಲಿಗೆ ಬರಬೇಕು. ಆಂಗ್ ಮತ್ತವರ ಸಹವರ್ತಿಗಳನ್ನು ಬಿಟ್ಟು ನಾನು ನೋಡಿದ ಬಹುಪಾಲು ಜನ ಗಂಡಸರು ಲುಂಗಿಧಾರಿಗಳು. ಕೈಯಲ್ಲಿ ಊಟದ ಡಬ್ಬಿ ಹಿಡಿದು, ಲುಂಗಿ ಉಟ್ಟು ಆಫೀಸಿಗೆ ಹೊರಡಲಣಿಯಾದ ಜನ, ಪಾರ್ಕಿನಲ್ಲಿ ಹುಡುಗಿಯನ್ನು ತಬ್ಬಿನಿಂತ ತರುಣನೂ ಅದೇ ಲುಂಗಿಧಾರಿ! ಎಲ್ಲೆಲ್ಲೂ ಗಂಧ ಬಳಿದ ಮುಖದ, ಲುಂಗಿ ತೊಟ್ಟ, ಒಂದಕ್ಷರ ಇಂಗ್ಲಿಷ್‌ ಮಾತಾಡದ ಇವರೆಲ್ಲಾ ಇದ್ದುದು ಈ ದೇಶದ ಅತಿದೊಡ್ಡ ನಗರದಲ್ಲಿ ಎಂಬುದೇ ನಂಬಲಸದಳವಾದದ್ದು. ಬರ್ಮೀಯರ ಸಾಂಪ್ರದಾಯಿಕ ಜೀವನ ಶೈಲಿಗೆ ಬ್ರಿಟಿಷ್‌ ಆಡಳಿತ ಸೂಜಿಮೊನೆಯಷ್ಟೂ ಘಾಸಿ ಮಾಡಿಲ್ಲ ಎನಿಸಿತು.  

ತಮಿಳರೂ ಬಂಗಾಳಿಗಳೂ ಮಾರ್ವಾಡಿಗಳೂ ಹಾಗೂ ಮುಸ್ಲಿಂ ವ್ಯಾಪಾರಿಗಳು–ಹೀಗೆ ನಮ್ಮ ದೇಶದ ಅನೇಕ ಜನಾಂಗ ಇಲ್ಲಿ ತಲೆ ತಲಾಂತರಗಳಿಂದ ಇವೆ. ಅವರೂ ಅರೆಬರ್ಮೀಯರೇ ಆಗಿದ್ದಾರೆ. ಜೇಡ್ ಹಾಗೂ ರೂಬಿ ಹರಳಿಗೆ ಹೆಸರುವಾಸಿಯಾದ ಈ ದೇಶದಲ್ಲಿ ಅವುಗಳ ಬಹುದೊಡ್ಡ ಉದ್ಯಮವೇ ಇದೆ. ಅಲ್ಲಲ್ಲಿ ಬಾರ್, ಪಬ್‌ಗಳು ಕಂಡರೂ ಬರ್ಮೀಯರನ್ನು ಸೆಳೆಯುವಲ್ಲಿ ಅವೂ ಸಫಲವಾಗಿಲ್ಲ. ಸಿಗರೇಟಿನ ಹೊಗೆಯೂ ನನಗೆಲ್ಲೂ ಕಾಣಲಿಲ್ಲ. ಹಳೆಯ ಮಾರ್ಕೆಟ್‌ನಲ್ಲಿ ಮಾತ್ರ ಬಾಂಗ್ಲಾ ಜನರಿಂದ ಎಲೆ ಅಡಿಕೆಯ ಉಗಿತಕ್ಕೆ ರಸ್ತೆಯೆಲ್ಲ ಕೆಂಪಾಗಿ ಹೋಗಿದ್ದು ಬಿಟ್ಟರೆ ಉಳಿದಂತೆ ಈ ನಗರ ಸ್ವಚ್ಛವಾಗಿಯೇ ಇದೆ.
‘ಸ್ಕಾಟ್ ಮಾರ್ಕೆಟ್’ ಇಲ್ಲಿನ ಪ್ರಸಿದ್ಧ ವ್ಯಾಪಾರಿ ಸ್ಥಳ.

ನಮ್ಮ ವೆಜಿಟೇರಿಯನ್ ಡಯೆಟ್‌ಗೆ ತೊಂದರೆಯಾಗದಂತೆ ಹಲವಾರು ಇಂಡಿಯನ್ ಹೋಟೆಲುಗಳಿವೆ. ಹತ್ತೊಂಬತ್ತನೇ ಶತಮಾನದಿಂದ ಈಗಷ್ಟೇ ಮೈ ಕೊಡವಿಕೊಂಡು ಏಳುತ್ತಿರುವ ಈ ಯಾಂಗಾನ್‌ಗೆ ನಾವು ಸಿಂಗಾಪುರದಿಂದ ಹೋಗಿದ್ದೆವಾದರೂ ಭಾರತದ ಎಲ್ಲ ಪ್ರಮುಖ ನಗರಗಳಿಂದ ಬ್ಯಾಂಕಾಕ್, ಮಲೇಷ್ಯಾ ಅಥವಾ ಸಿಂಗಾಪುರ ಮೂಲಕ ವಿಮಾನ ಸೌಕರ್ಯ ಇದೆ.

ಹೊರಡುವ ಮೊದಲು ಆಂಗ್ ತನ್ನ ಬಾಸ್ ಮನೆಯಲ್ಲಿ ನಮಗೆ ಊಟಕ್ಕೆ ಆಮಂತ್ರಣವಿದ್ದುದರಿಂದ ಕರೆದುಕೊಂಡು ಹೋದ. ಮ್ಯೂಸಿಯಂ ಅನ್ನೂ ನಾಚಿಸುವಂತಿದ್ದ ಬಾಸ್ ಮನೆಯಲ್ಲಿ ನಮಗೆ ಪುಷ್ಕಳ ಶಾಖಾಹಾರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಾಮಾನ್ಯವಾಗಿ ಇಲ್ಲಿನ ಜನರೆಲ್ಲ ಮಾಂಸಾಹಾರಿಗಳು. ಆದರೂ ಅನ್ನ, ಪಲ್ಯ, ಸಲಾಡ್, ಎಂದು ಹತ್ತಾರು ಬಗೆಯನ್ನು ಮಾಡಿಸಿಟ್ಟು ಒತ್ತಾಯದಿಂದ ಬಡಿಸಿದ ಅವರ ಆತಿಥ್ಯ ಮರೆಯಲಾಗದ್ದು.

ಆಂಗ್ ದಶಕಗಳಿಂದ ಅದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ನಿತ್ಯವೂ ಮಧ್ಯಾಹ್ನದ ಭೋಜನ ಬಾಸ್ ಮನೆಯಲ್ಲಿಯೇ ಎಂದಾಗ ನನಗೆ ಮತ್ತೆ ರಾಮ–ಹನುಮಂತರ ನೆನಪಾಯಿತು. ಆಂಗ್ ನಮಗೆ ಉಡುಗೊರೆಯಾಗಿ ಕೊಟ್ಟ ಲೋಹದ ಗಣೇಶನ ಕೈಯಲ್ಲಿ ಕೊಳಲು ನೋಡಿ ನಾನಂತೂ ಸುಸ್ತಾಗಿಹೋದೆ.
ಸುಂದರವಾದ ಲೇಕ್‌ಗಳು, ವಿಶಾಲವಾದ ಗಾರ್ಡನ್‌ಗಳು, ನಿಬಿಡವಾದ ಕಟ್ಟಡಗಳು ನೋಡಲೇ ಬೇಕಾದ ಪಗೋಡಗಳು, ಅಮೂಲ್ಯ ಹರಳುಗಳು, ನ್ಯಾಶನಲ್ ಮ್ಯೂಸಿಯಮ್, ಬರ್ಮಾ ಕಲಾವಿದರ ಪೇಂಟಿಂಗ್‌ಗಳು ಎಲ್ಲಕ್ಕಿಂತ ಮುಖ್ಯವಾಗಿ ಸ್ವಾಭಿಮಾನಿ, ಸ್ವಾವಲಂಬಿ, ತಲೆಹರಟೆ ಗೊತ್ತಿಲ್ಲದ ಸೀದಾ ಸಾದಾ ಬರ್ಮೀಯರನ್ನು ನೋಡಲು ಒಮ್ಮೆ ಇಲ್ಲಿಗೆ ಭೇಟಿ ಕೊಡಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.