ಚಂದ್ರಂಪಳ್ಳಿ ಜಲಾಶಯದ ಹಿನ್ನೀರು ಪ್ರದೇಶ ಹಾಗೂ ಕಾಡು, ಮಾಣಿಕಪುರ ಜಲಪಾತದಲ್ಲಿ ಪ್ರವಾಸಿಗರು ಚಿತ್ರಗಳು: ಜಗನ್ನಾಥ ಡಿ. ಶೇರಿಕಾರ
ಅದು ಮುಂಗಾರು ಮಳೆಯ ಸಮಯ. ಬೆಂಗಳೂರಿನಿಂದ ಸ್ನೇಹಿತ ಬಂದಿದ್ದ. ಅವನನ್ನು ಸುತ್ತಾಡಿಸಲು ಹೊರಟಿದ್ದೆ. ಅವನು ಪ್ರಯಾಣದ ಆಯಾಸದಿಂದ ನಿದ್ರೆಗೆ ಜಾರಿದ್ದು ಸ್ವಲ್ಪ ಸಮಯದ ಬಳಿಕ ಎಚ್ಚರಗೊಂಡ. ಆತನಿಗೆ ತಾನು ಎಲ್ಲಿದ್ದೀನಿ ಎನ್ನುವುದು ತಿಳಿಯದೇ ‘ನಾವು ಈಗ ಮಲೆನಾಡಿನಲ್ಲಿ ಇದ್ದೀವಾ? ಚಿಂಚೋಳಿಯಿಂದ ಇಲ್ಲಿಗೆ ಯಾಕೆ ಕರೆದುಕೊಂಡ ಬಂದೆ’ ಎಂದು ಅಚ್ಚರಿಯಿಂದ ಕೇಳಿದ. ಆಗ ನಾನು ಸಮಾಧಾನದಿಂದಲೇ, ‘ನಾವು ಈಗ ಇರುವುದು ಚಿಂಚೋಳಿ ತಾಲ್ಲೂಕಿನ ಕುಂಚಾವರಂ ಅರಣ್ಯ ಪ್ರದೇಶದಲ್ಲಿಯೇ ಹೊರತು ಮಲೆನಾಡಿನಲ್ಲಿ ಅಲ್ಲ’ ಎಂದೆ. ನನ್ನ ಈ ಮಾತನ್ನು ನಂಬಲು ಗೆಳೆಯ
ಸಿದ್ಧವಿರಲಿಲ್ಲ. ಒಂದು ಕಡೆ ಇದ್ದ ಮಾಹಿತಿ ಫಲಕವನ್ನು ತೋರಿಸಿದ ನಂತರವೇ ಆತ ನಂಬಿದ್ದು!
ಹೌದು. ಒಂದು ವೇಳೆ ನೀವು ಈಗ ಕಲಬುರಗಿ ಜಿಲ್ಲೆಯ ಕುಂಚಾವರಂ ಅರಣ್ಯ ಪ್ರದೇಶಕ್ಕೆ ಏನಾದರೂ ಭೇಟಿ ಕೊಟ್ಟರೆ ಖಂಡಿತ ಅಚ್ಚರಿಗೆ ಒಳಗಾಗುತ್ತೀರಿ. ಏಕೆಂದರೆ, ಈ ಪ್ರದೇಶ ಮಲೆನಾಡಿನ ಪ್ರಕೃತಿಯನ್ನು ನೆನಪಿಸುತ್ತದೆ. ಬಿಸಿಲನಾಡು ಎಂದು ಕರೆಸಿಕೊಳ್ಳುವ ಈ ಪ್ರದೇಶದಲ್ಲಿ ಇಂಥ ಹಚ್ಚ ಹಸುರಿನ ಪರಿಸರವನ್ನು ಕಂಡವರು ವಿಸ್ಮಯಕ್ಕೆ ಒಳಗಾಗುತ್ತಾರೆ.
ಎತ್ತರದ ಬೆಟ್ಟಗುಡ್ಡಗಳು, ಕಣ್ಣು ಕುಕ್ಕುವ ಹಸಿರ ಸಿರಿ, ರುದ್ರ ನರ್ತನದ ಜಲಪಾತಗಳು, ಚಾರಣಕ್ಕೆ ಹೇಳಿ ಮಾಡಿಸಿದ ಸಾಹಸ ತಾಣಗಳು, ನಾಲಾ ನದಿ ತೊರೆ, ಕಾನನದ ಮಧ್ಯೆ ಶಾಂತವಾಗಿ ಆಕರ್ಷಿಸುವ ಜಲಾಶಯ, ಕೆರೆ, ಕುಂಟೆಗಳ ಸೌಂದರ್ಯ, ದುಂಬಿಗಳ ಝೇಂಕಾರ, ಬಾನಾಡಿಗಳ ಕಲರವ ಮಲೆನಾಡನ್ನೇ ನೆನಪಿಸುತ್ತದೆ.
ದಕ್ಷಿಣ ಭಾರತದ ಏಕೈಕ ಒಣ ವಲಯದ ವನ್ಯಧಾಮ ಎಂಬ ಹೆಗ್ಗಳಿಕೆ ಕುಂಚಾವರಂ ಅರಣ್ಯ ಪ್ರದೇಶಕ್ಕಿದೆ. ಎಲೆ ಉದುರುವ ಕಾಡುಗಳ ಪಟ್ಟಿಗೆ ಸೇರುವ ಬಯಲು ಸೀಮೆಯ ಚಿಂಚೋಳಿಯ ವನ್ಯಜೀವಿ ಧಾಮ ಸುಮಾರು 134 ಚದರ ಕಿಲೋಮೀಟರ್‌ನಷ್ಟಿದೆ. ಕರ್ನಾಟಕ ಮತ್ತು ತೆಲಂಗಾಣ ಗಡಿಗೆ ಹೊಂದಿಕೊಂಡ ಜೀವ ವೈವಿಧ್ಯತೆಯ ಪರಿಸರ ಸೂಕ್ಷ್ಮ ತಾಣವಾಗಿದೆ. ಮನಸ್ಸಿಗೆ ಮುದ ನೀಡುವ ಪರಿಸರ ಪ್ರವಾಸದ ಆಕರ್ಷಕ ತಾಣ. ಜೊತೆಗೆ ಬಯಲು ಸೀಮೆಯ ಈ ಹಸಿರು ಹೊದಿಕೆ ಜೀವ ವೈವಿಧ್ಯತೆಯ ಆಗರ. ಅವಸಾನದ ಅಂಚಿನಲ್ಲಿರುವ ಹಲವು ಸಸ್ಯ ಪ್ರಭೇದ ಹಾಗೂ ಪ್ರಾಣಿ ಸಂಕುಲಗಳಿಗೆ ಆಶ್ರಯ ನೀಡಿ ಪೋಷಿಸಿಕೊಂಡು ಬರುತ್ತಿದೆ.
ಇದು ಬೀದರ್‌ನಿಂದ 50 ಕಿಲೋಮೀಟರ್, ಕಲಬುರಗಿಯಿಂದ 100 ಕಿಲೋಮೀಟರ್, ಹೈದರಾಬಾದ್‌ನಿಂದ 130 ಕಿಲೋಮೀಟರ್ ದೂರದಲ್ಲಿದೆ. ಎತ್ತಿಪೋತೆ ಜಲಪಾತ, ಮಾಣಿಕಪುರ ಜಲಪಾತ, ಚಂದ್ರಂಪಳ್ಳಿ ಜಲಾಶಯ ಹಾಗೂ ಪ್ರಾಗೈತಿಹಾಸಿಕ ಕಾಲದ ನೆಲೆವೀಡಾದ ಯೋಗಿ ಬಕ್ಕಪ್ರಭುಗಳ ತಪೋಭೂಮಿಯಾದ ಗೊಟ್ಟಮಗೊಟ್ಟ ಇಲ್ಲಿನ ಪ್ರಮುಖ ಪರಿಸರ ಪ್ರವಾಸಿ ತಾಣಗಳಾಗಿವೆ.
ಚಂದ್ರಂಪಳ್ಳಿಯಿಂದ ಗೊಟ್ಟಮಗೊಟ್ಟ, ಚಂದ್ರಂಪಳ್ಳಿಯಿಂದ ಶೇರಿಭಿಕನಳ್ಳಿ, ಗೊಟ್ಟಮಗೊಟ್ಟದಿಂದ ಶೇರಿಭಿಕನಳ್ಳಿ, ಮಂಡಿ ಬಸವಣ್ಣ ಕ್ಯಾಂಪ್‌ನಿಂದ ಶೇರಿಭಿಕನಳ್ಳಿ ಹೀಗೆ ನಾಲ್ಕು ಚಾರಣ ಮಾರ್ಗಗಳಿವೆ. ಚಂದ್ರಂಪಳ್ಳಿ ಗೊಟ್ಟಮಗೊಟ್ಟ ಚಾರಣ ಮಾರ್ಗ ಚಾರಣಿಗರಿಗೆ ಮುಕ್ತವಾಗಿದೆ. ಇದಕ್ಕಾಗಿ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಹಾಗೂ ಶುಲ್ಕ ಪಡೆದು ಗೈಡ್ ಅನ್ನು ಒದಗಿಸಲಾಗಿದೆ.
ವಾರ್ಷಿಕ ಸರಾಸರಿ 700 ರಿಂದ 950 ಮಿ.ಮೀ ಮಳೆ ಇಲ್ಲಿ ಸುರಿಯುತ್ತದೆ. ಇಲ್ಲಿ 49 ರಿಂದ 63 ಮಳೆ ದಿನಗಳು ಹಾಗೂ ಕನಿಷ್ಠ 10 ಡಿಗ್ರಿ ಸೆಲ್ಸಿಯಸ್, ಗರಿಷ್ಠ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಸಮುದ್ರ ಮಟ್ಟದಿಂದ ಇಲ್ಲಿನ ಬುರುಗುದೊಡ್ಡಿ 634 ಮೀಟರ್, ಶೇರಿಭಿಕನಳ್ಳಿ 601 ಮೀಟರ್, ಧರ್ಮಾಸಾಗರ 594 ಮೀಟರ್, ಗೊಟ್ಟಮಗೊಟ್ಟ 547 ಮೀಟರ್, ಶಾದಿಪುರ 502 ಮೀಟರ್, ಚಿಂದಾನೂರ 500 ಮೀಟರ್, ಭೈರಂಪಳ್ಳಿ 478 ಮೀಟರ್ ಎತ್ತರದಲ್ಲಿವೆ.
ಸಂಗಾಪುರ ಮತ್ತು ಒಂಟಿಚಿಂತಾ ಮಧ್ಯೆ ಬರುವ ಎತ್ತಿಪೋತೆ ಜಲಪಾತ ಹಾಗೂ ಮಾಣಿಕಪುರ ಬಳಿಯ ರಾಚೇನಹಳ್ಳಿ ನಾಲಾದಲ್ಲಿ ಕೇವಲ 500 ಮೀಟರ್ ಅಂತರದಲ್ಲಿ ಮೂರು ಜಲಪಾತಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಇಲ್ಲಿನ ಹುಲಿಮೋಕ್ ಅದ್ಭುತ ವ್ಯಾಲಿಯಿದ್ದು ಪರಿಸರ ಪ್ರೇಮಿಗಳ ನೆಚ್ಚಿನ ತಾಣವಾಗಿವೆ. ಕಲ್ಯಾಣ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣ ಎಂದು ಹೆಸರು ಪಡೆದ ಸುಮಾರು 360 ಹೆಕ್ಟೇರ್ ವಿಶಾಲವಾದ ಚಂದ್ರಂಪಳ್ಳಿ ಜಲಾಶಯದ ಪ್ರಕೃತಿ ಸೌಂದರ್ಯ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತದೆ.
ಗೊಟ್ಟಮಗೊಟ್ಟ, ನವಿಲುಗುಡ್ಡ, ಮಹಿಶಮ್ಮನ ಬೆಟ್ಟ, ಮಲ್ಲಣ್ಣ ದೇವರ ಗುಡ್ಡ, ಹಾಥಿ ಪಗಡಿ, ಚಂದ್ರಂಪಳ್ಳಿ ವೀಕ್ಷಣಾ ಗೋಪುರಗಳು, ಚಿಕ್ಕಲಿಂಗದಳ್ಳಿ, ಲಾಲ್ ತಾಲಾಬ್, ಅಂತಾವರಂ, ಲಿಂಗಾನಗರ, ಕೊಳ್ಳೂರು, ನಾಗಾಈದಲಾಯಿ ಕೆರೆಗಳು ಅರಣ್ಯದ ಸೆರಗಿನಲ್ಲಿವೆ. ಸರ್ನಾಲಾ, ಕೊತ್ವಾಲ ನಾಲಾ, ರಾಚೇನಹಳ್ಳ ನಾಲಾ, ಬುರುಗದೊಡ್ಡಿ ನಾಲಾ, ಯಾಕತಪುರ ನಾಲಾ, ಮೂರಕಲ್ ನಾಲಾ, ಹನುಮಾನ ಮಡಗ ನಿಸರ್ಗ ಸಿರಿಯ ತಾಣಗಳಾಗಿವೆ.
ಮಾಣಿಕಪುರ ಜಲಪಾತ
ಜೀವವೈಧ್ಯತೆಯ ಆಗರ
ಅವಸಾನದ ಅಂಚಿನಲ್ಲಿರುವ ರಕ್ತಚಂದನ, ರಕ್ತಹೊನ್ನೆ, ಬನ್ನಿ (ಶಮಿ), ಬೇಲ್, ಧೂಪ, ಸಿರಿಗಂಧ, ಹೊಳೆಮತ್ತಿ, ಬಿಳಿಮತ್ತಿ, ಕರಿಮತ್ತಿ, ನೆಲ್ಲಿ, ಶಿವಣೆ, ತೇಗ, ಸೀಸ್ಸೂ, ಮುತ್ತುಗ, ದಿಂಡಿಲು (ಶಿರವಾಳ), ಹಿಪ್ಪೆ, ಠಾಣಿ (ತಾರೆ), ಬೇವು, ಆಲ, ಅರಳೆಯಂತಹ ಮರಗಳಿವೆ. ವನ್ಯಜೀವಿಗಳಾದ ಚುಕ್ಕೆ ಜಿಂಕೆ, ಕಾಡು ಕುರಿ, ನರಿ, ಮೊಲ, ಕಾಡು ಕೋಣ, ಹೈನಾ, ನೀಲಗಾಯ್, ಮುಳ್ಳು ಹಂದಿ, ಕಾಡು ಹಂದಿ, ಮಂಗಗಳು, ಕೃಷ್ಣಮೃಗ, ಕಾಡುಬೆಕ್ಕು, ತೋಳ, ಚಿರತೆ, ಚೌಸಿಂಗಾ, ಚಿಪ್ಪು ಹಂದಿ, ಮಕಾಕ್ ಕೋತಿ, ಉಸುರುವಳ್ಳಿ, ಸರಿಸೃಪಗಳಾದ ನಾಗರಹಾವು, ಹೆಬ್ಬಾವು, ಭಾರತದ ಅತ್ಯಂತ ವಿಷಪೂರಿತ ಮಂಡಲ ಹಾವುಗಳು, ಪಕ್ಷಿಗಳಾದ ಕಿಂಗ್‌ಫಿಶರ್, ಗೋಲ್ಡನ್ ಬ್ಯಾಕ್ಡ್ ವುಡ್ ಪಿಕರ್, ಕಾಡುಕೋಳಿ ಇಲ್ಲಿರುವುದು ವಿಶೇಷ. ಅಳಿವಿನ ಅಂಚಿನಲ್ಲಿರುವ ಹಲವು ಸಸ್ಯ ಪ್ರಭೇದ ಪ್ರಾಣಿ, ಪಕ್ಷಿಗಳು ಸೇರಿದಂತೆ ಸುಮಾರು 230ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿಂದ ಸಮೃದ್ಧವಾದ ಜೀವವೈವಿಧ್ಯತೆಯ ತಾಣವಾಗಿದೆ.
ಈ ಕುಂಚಾವರಂ ಅರಣ್ಯ ಪ್ರದೇಶದಲ್ಲಿನ ಸುತ್ತಾಟದ ನಂತರ ಬೆಂಗಳೂರಿನ ನನ್ನ ಸ್ನೇಹಿತ ಖುಷಿಯಾಗಿದ್ದ. ಮುಂದಿನ ಬಾರಿ ಮಲೆನಾಡಿಗೆ ಬದಲು ಇಲ್ಲಿಗೇ ಬರುವುದಾಗಿ ಹೇಳಿ ಹೋದ!
ಕಾಟೇಜ್ ಟೆಂಟ್ ಹೌಸ್
ಇಲ್ಲಿಗೆ ನಿತ್ಯ ನೂರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಕಲಬುರಗಿ ಬೀದರ್ ಯಾದಗಿರಿ ಹೈದರಾಬಾದ್ ತೆಲಂಗಾಣದ ವಿಕಾರಾಬಾದ್ ಮೆದಕ್ ರಂಗಾರೆಡ್ಡಿ ನಗರಗಳಿಂದ ಜನ ಕುಟುಂಬ ಸಮೇತ ಬಂದು ನಿಸರ್ಗದ ಮಡಿಲಲ್ಲಿ ಸಮಯ ಕಳೆಯುತ್ತಾರೆ. ಇಲ್ಲಿ ತಂಗಲು ಕಾಟೇಜ್ ಸೌಲಭ್ಯವನ್ನು ವನ್ಯಧಾಮ ಕಲ್ಪಿಸಿದೆ. ಗೊಟ್ಟಮಗೊಟ್ಟದಲ್ಲಿ ಟೆಂಟ್ ಹೌಸ್ ಸೌಕರ್ಯವಿದೆ. ಬೇಕೆಂದರೆ ಅಡುಗೆ ಮಾಡಿ ಕೊಡುತ್ತಾರೆ. ಹೀಗಾಗಿ ಬಲುಬೇಡಿಕೆಯೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.