ADVERTISEMENT

ಸುತ್ತಾಟ: ಕದನಗಳ ಕತೆ ಹೇಳುವ ದಿಘಾಲಿಪುಕುರಿ ಯುದ್ಧ ಸ್ಮಾರಕ

ಪ್ರಜಾವಾಣಿ ವಿಶೇಷ
Published 3 ಮಾರ್ಚ್ 2024, 0:53 IST
Last Updated 3 ಮಾರ್ಚ್ 2024, 0:53 IST
<div class="paragraphs"><p>ಸೈನಿಕರ ಸ್ಮಾರಕದ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಪ್ರವಾಸಿಗರು.</p></div>

ಸೈನಿಕರ ಸ್ಮಾರಕದ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಪ್ರವಾಸಿಗರು.

   

ಅಸ್ಸಾಮಿನ ಗುವಾಹಟಿಯಲ್ಲಿರುವ ‘ದಿಘಾಲಿಪುಕುರಿ ಯುದ್ಧ ಸ್ಮಾರಕ ಪಾರ್ಕ್’ ಸೇನೆ ಮತ್ತು ಸೈನಿಕರ ಮಹತ್ವ, ಜೀವವನ್ನೇ ಪಣವಾಗಿಡುವ ಅವರ ತ್ಯಾಗ ಪರಿಶ್ರಮ ಕುರಿತು ಅರಿವು ಮೂಡಿಸುವ ತಾಣ. ಗುವಾಹಟಿ ನಗರದಲ್ಲಿ ಹೈಕೋರ್ಟ್ ಸಮೀಪದಲ್ಲಿ ದಿಘಾಲಿಪುಕುರಿ ಎಂಬ ವಿಶಾಲವಾದ ಸುಂದರ ಕೊಳ ಮತ್ತು ಅದೇ ಹೆಸರಿನ ಪಾರ್ಕ್‌ನ ಅಂಚಿನಲ್ಲಿ ಸೇನಾ ಸ್ಮಾರಕ ಇದೆ. ಈ ಯುದ್ಧ ಸ್ಮಾರಕದ ಪ್ರವೇಶ ದ್ವಾರದಲ್ಲಿ ಅಸ್ಸಾಮಿನ ಸಾಂಸ್ಕೃತಿಕ ಕ್ಷೇತ್ರದ ಅದ್ವಿತೀಯ ವ್ಯಕ್ತಿ, ಸಂಗೀತಲೋಕದ ಗಾರುಡಿಗ ಭಾರತ ರತ್ನ ಭೂಪೇನ್ ಹಜಾರಿಕಾ ಅವರ ಆಳೆತ್ತರದ ಪ್ರತಿಮೆ ಇದೆ. ಹಿನ್ನೆಲೆಯಲ್ಲಿ ಬಣ್ಣಬಣ್ಣದ ಹೂಗಿಡಗಳ ಹಸಿರು ಚಿಮ್ಮುವ ಪಾರ್ಕ್, ಅದರಾಚೆಯ ವಿಸ್ತಾರವಾದ ಕೊಳ, ಅದರ ಹಿನ್ನೆಲೆಯಲ್ಲಿನ ಬೆಟ್ಟ ಸಾಲುಗಳು ಸ್ಮಾರಕದ ಸೌಂದರ್ಯವನ್ನು ಹೆಚ್ಚಿಸಿವೆ.

ಸ್ಮಾರಕವನ್ನು ಪ್ರವೇಶಿಸುತ್ತಲೇ ಭೂಸೇನೆಯ ‘ವಿಜಯಂತಾ’ ಹೆಸರಿನ ಬೃಹತ್ ಟ್ಯಾಂಕ್ ಇದೆ. ಭಾರತದ ಮೊಟ್ಟಮೊದಲ ದೇಶೀಯ ಟ್ಯಾಂಕ್‌ ಅಂತೆ ಇದು. 1965ರ ಮತ್ತು 1971ರ ಯುದ್ಧಗಳಲ್ಲಿ ಬಳಕೆಯಾಗಿದ್ದು, 2008ರ ವರೆಗೂ ಕಾರ್ಯಪ್ರವೃತ್ತವಾಗಿತ್ತು. ಗುಡ್ಡಗಾಡುಗಳಲ್ಲೂ ಗಂಟೆಗೆ 50 ಕಿಲೊಮೀಟರ್‌ ಗರಿಷ್ಠ ವೇಗದಲ್ಲಿ ಚಲಿಸಬಲ್ಲ 39 ಸಾವಿರ ಕೆ.ಜಿ. ತೂಕದ ಈ ಟ್ಯಾಂಕ್ ಅನ್ನು ಭಾರತೀಯ ಭೂದಳವು ಗೊವಾಹಟಿಯ ಸ್ಮಾರಕಕ್ಕೆ ಕೊಡುಗೆಯಾಗಿ ನೀಡಿದೆ. ಇಂತಹ ಇನ್ನೂ ಹಲವು ವಾಯುದಳ, ಭೂದಳಗಳ ವಾಹನಗಳ ಕ್ಷಿಪಣಿಗಳ ಪ್ರತಿಕೃತಿಗಳು ಇಲ್ಲಿವೆ.

ADVERTISEMENT

ಇವುಗಳನ್ನು ನೋಡುತ್ತಾ ಮೆಟ್ಟಿಲಿಳಿದು ಮುಂದೆ ಸಾಗಿದರೆ ವಿಶಾಲ ಪ್ರಾಂಗಣದಲ್ಲಿ ‘ಅಮರ ಜವಾನ್’ ಜ್ಯೋತಿ ಇದೆ. ಅಕ್ಕಪಕ್ಕಗಳಲ್ಲಿ ಸೈನಿಕರ ಆಳೆತ್ತರದ ಪ್ರತಿಮೆಗಳಿವೆ. 17ನೇ ಶತಮಾನದಲ್ಲಿ ಸರೈಘಾಟ್ ಯುದ್ಧದಲ್ಲಿ ಮೊಘಲರ ಸೇನೆ ಮುಂದೊತ್ತಿ ಬರುವುದನ್ನು ಪ್ರತಿಭಟಿಸಿದ್ದ ಅಸ್ಸಾಮಿನ ಅಹೋಂರ ಸೇನೆಯ ಶೌರ್ಯದ ಕಾದಾಟಗಳ ವಿವಿಧ ಉಬ್ಬುಚಿತ್ರಗಳ ಫಲಕಗಳಿವೆ. ನೆಲದಲ್ಲಲ್ಲದೆ ಜಲದಲ್ಲೂ ಮೊಘಲರನ್ನು ಎದುರಿಸಿದ್ದನ್ನು ಸೂಚಿಸಲು ನೌಕೆಯೊಂದರಲ್ಲಿ ಅಹೋಂ ಸೈನಿಕರು ಯುದ್ಧ ಮಗ್ನರಾಗಿರುವ ಕೆತ್ತನೆ ಇದೆ. ಅಸ್ಸಾಂ ಅನ್ನು ರಕ್ಷಿಸಿದ ಅಹೋಂ ವೀರರ ಪರಿಶ್ರಮವು ಮರೆವಿಗೆ ಸಂದು ಹೋಗದೆ ಆ ಕುರಿತ ಅರಿವುಂಟಾಗಲಿ ಎಂಬುದು ಈ ನಿರ್ಮಾಣದ ಉದ್ದೇಶ ಎಂಬುದು ಕೂಡ ಮೌಲ್ಯಗಳನ್ನು ಪರಂಪರೆಯಿಂದ ಪರಂಪರೆಗೆ ದಾಟಿಸುವ ಎಚ್ಚರವನ್ನು ಎತ್ತಿ ಹಿಡಿಯುತ್ತದೆ.

ಅಸ್ಸಾಮಿಗೆ ಸಂಬಂಧಿಸಿದ ಈ ಯುದ್ಧ ಮಾತ್ರವೇ ಅಲ್ಲದೆ, ಕಾರ್ಗಿಲ್ ಯುದ್ಧ, 1962ರ ಭಾರತ ಚೀನಾ ಯುದ್ಧ, 1965 ಮತ್ತು 1971ರ ಯುದ್ಧಗಳ ಹಲವು ದೃಶ್ಯಗಳ ಉಬ್ಬುಚಿತ್ರ ಫಲಕಗಳು, ಮಾಹಿತಿ ಫಲಕಗಳು ಇವೆ.

1962ರ ಅಕ್ಟೋಬರ್ 28ರಂದು ಪಂಚಶೀಲ, ಹಿಂದಿ–ಚೀನೀ ಭಾಯಿ–ಭಾಯಿ ಆಶ್ವಾಸನೆಯ ಭ್ರಾತೃತ್ವವನ್ನೆಲ್ಲಾ ಗಾಳಿಗೆ ತೂರಿ ಮೆಕ್‌ಮೋಹನ್ ರೇಖೆ ಉಲ್ಲಂಘಿಸಿ ಚೀನಾ ಅತಿಕ್ರಮಿಸಿದಾಗ ಭಾರತಕ್ಕೆ ಇದು ಅನಿರೀಕ್ಷಿತವಾದ ದಾಳಿಯಾಗಿತ್ತು. ಶಸ್ತ್ರಾಸ್ತ್ರಗಳ ವಾಹನಗಳ ಸಂಚಾರಕ್ಕೆ ತಕ್ಕ ರಸ್ತೆಗಳಿರಲಿ; ಸೈನಿಕರಿಗೆ ಸೂಕ್ತ ಉಡುಗೆ–ತೊಡುಗೆ, ಆಹಾರದ ಸರಬರಾಜು ಕೂಡ ಇಲ್ಲದೆ, ತಮಗಿಂತ ಬಹು ಹೆಚ್ಚಿನ ಸಂಖ್ಯೆಯಲ್ಲಿದ್ದ ಚೀನಾ ಸೈನಿಕರನ್ನು ಎದುರಿಸಲಾಗದೆ ಭಾರತಿಯ ಸೈನಿಕರು ಬಸವಳಿದಿದ್ದರು. ಪರ್ವತದ ತಪ್ಪಲಿನ ಕಡಿದಾದ ಕೊರಕಲಿನ ಕಚ್ಚಾರಸ್ತೆಯಲ್ಲಿ ಸೇನಾ ವಾಹನವನ್ನು ಸೈನಿಕರು ದೈಹಿಕ ಪರಿಶ್ರಮದಿಂದ ಮುಂದೆ ತಳ್ಳಿ ಸಾಗಿಸಬೇಕಿದ್ದ ದೃಶ್ಯಗಳ ಚಿತ್ರ ಫಲಕಗಳು ಮನ ಕರಗಿಸುತ್ತವೆ.

1965ರ ಹದಿನೇಳು ದಿನಗಳ ಇಂಡೋ–ಪಾಕ್ ಯುದ್ಧದಲ್ಲಿ ಎರಡೂ ಕಡೆಯ ಸೈನಿಕರು
ಗಾಯಾಳುಗಳಾದುದು, ಪ್ರಾಣ ತೆತ್ತಿರುವುದರ ಚಿತ್ರಣಗಳಿವೆ. ಅಜೇಯವೆನಿಸಿದ್ದ ಪಾಕಿಸ್ತಾನದ ಪೇಟನ್ ಟ್ಯಾಂಕ್‌ಗಳನ್ನು ಭಾರತೀಯ ಸೇನೆ ಧೂಳೀಪಟವಾಗಿಸಿದುದರ, ಸೇಬರ್ ಜೆಟ್‌ಗಳನ್ನು ವಾಯುದಳವು ನಿರ್ನಾಮ ಮಾಡಿದುದರ ಚಿತ್ರಣಗಳಿವೆ. 1971ರ ಯುದ್ಧದಲ್ಲಿ ಡಿಸೆಂಬರ್‌ 16 ರಂದು ಭಾರೀ ಸಂಖ್ಯೆಯ ಪಾಕಿಸ್ತಾನದ ಸೈನಿಕರ ಬೇಷರತ್ ಶರಣಾಗತಿಯನ್ನು ಎರಡನೇ ಮಹಾಯುದ್ಧದ ನಂತರ ಅತಿ ದೊಡ್ಡ ಶರಣಾಗತಿ ಎಂಬುದಾಗಿ ಇಲ್ಲಿ ದಾಖಲಿಸಿದ್ದಾರೆ. ಕಾರ್ಗಿಲ್ ಯುದ್ಧಕ್ಕೆ ಸಂಬಂಧಿಸಿದ ಹಲವು ಚೌಕಾಕೃತಿಯ ಉಬ್ಬುಚಿತ್ರಗಳ ಗೋಡೆ ಕೆತ್ತನೆಗಳಿವೆ.
ಈ ಯುದ್ಧ ಸ್ಮಾರಕ ಬರಿಯ ಯುದ್ಧ ಸಂಬಂಧಿ ಕೆತ್ತನೆಗಳು, ಚಿತ್ರಗಳು, ಪ್ರತಿಮೆಗಳಿಂದಷ್ಟೇ ಕೂಡಿಲ್ಲ. ಅಲ್ಲಲ್ಲಿ ಕುಳಿತು ವಿಶ್ರಮಿಸಿಕೊಳ್ಳಲು, ಹಿನ್ನೆಲೆಯ ಕೊಳ ಉದ್ಯಾನವನ ಬೆಟ್ಟಸಾಲುಗಳ ಮನಮೋಹಕ ಸೌಂದರ್ಯ ಸವಿಯಬಹುದು.

ಇಲ್ಲಿ ಒಂದು ಸುತ್ತು ಹಾಕಿದ ಮೇಲೆ ಈ ಯುದ್ಧ ಸ್ಮಾರಕ ದೇಶಭಕ್ತಿ ಪ್ರೇರೇಪಿಸಲು ಯಶಸ್ವಿಯಾಗಿದೆ ಅನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.