ADVERTISEMENT

ಮಾಲ್ಡೀವ್ಸ್‌ ದ್ವೀಪಗಳಲ್ಲಿ...

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 19:30 IST
Last Updated 4 ಡಿಸೆಂಬರ್ 2019, 19:30 IST
ಮಾಲ್ಡೀವ್ಸ್
ಮಾಲ್ಡೀವ್ಸ್   

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ದ್ವೀಪರಾಷ್ಟ್ರ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದೆ. ಮಾಲ್ಡೀವ್ಸ್‌ ಭಾರತದ ನೈರುತ್ಯಕ್ಕೆ ಹಿಂದೂ ಮಹಾಸಾಗರದಲ್ಲಿರುವ ಚಿಕ್ಕಚಿಕ್ಕ ದ್ವೀಪಗಳಿಂದ ಕೂಡಿದ ದೇಶ. ನಯನ ಮನೋಹರ ಕಡಲ ಕಿನಾರೆ, ವಿಶಾಲವಾದ ನೀಲಿ ಸಮುದ್ರ, ಹಡಗುಯಾನ, ಸ್ವಚ್ಛ ಪರಿಸರ, ಮೃದು ಮನಸ್ಸಿನ ಜನ.. ಇವೆಲ್ಲವೂ ಸೇರಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ ಈ ದ್ವೀಪಸಮೂಹಗಳ ರಾಷ್ಟ್ರ. ಅಷ್ಟೇ ಅಲ್ಲ, ಜಗತ್ತಿನ ಅತಿ ದುಬಾರಿ ಪ್ರವಾಸಿ ತಾಣಗಳಲ್ಲಿ ಇದೂ ಒಂದು.

ಇಂಥ ಸುಂದರ ತಾಣವನ್ನು ನೋಡಲು ಹೋಗಬೇಕೆಂದು ನಿರ್ಧರಿಸಿದಾಗ, ಎರಡು ವಿಷಯಗಳ ಮೇಲೆ ಗಮನ ಹರಿಸಿದ್ದೆ. ಒಂದು ‘ಆಫ್ ಸೀಜನ್’ನಲ್ಲಿ ಪ್ರವಾಸ ಹೊರಡುವುದು. ಎರಡನೆಯದು ಮಾಲ್ಡೀವ್ಸ್‌ನ ಉಚಿತ ಪ್ರವೇಶ ವೀಸಾ (ವೀಸಾ ಆನ್ ಅರೈವಲ್) ಲಾಭ ಪಡೆಯುವುದು. ಏಕೆಂದರೆ, ಆ ದೇಶದಲ್ಲಿ ಯಾವ ದೇಶದಿಂದ ಹೋದವರಿಗೂ ವೀಸಾಕ್ಕೆ ಶುಲ್ಕ ವಿಧಿಸುವುದಿಲ್ಲ. ಹಾಗಾಗಿ ರನ್ ಅರೌಂಡ್ (ಹೋಗಿ –ಬರುವ ಟಿಕೆಟ್) ಟಿಕೆಟ್ ಬುಕ್ ಮಾಡಿದೆ. ₹14 ಸಾವಿರ ಆಯಿತು. ಬೆಳಗಾವಿಯಿಂದ ಬೆಂಗಳೂರಿಗೆ ಬಂದು, ಬೆಂಗಳೂರಿನಿಂದ ವಿಮಾನದ ಮೂಲಕ ಮಾಲ್ಡೀವ್ಸ್‌ ತಲುಪಿದೆ.

ಹುಲುಮಾಲೆ – ಮಾನವ ನಿರ್ಮಿತ ದ್ವೀಪ

ADVERTISEMENT

ಮಾಲ್ಡೀವ್ಸ್‌ಗೆ ಬರುವ ಮುನ್ನ ಅಲ್ಲಿ ಉಳಿಯುವುದಕ್ಕಾಗಿ ಆನ್‌ಲೈನ್‌ನಲ್ಲಿ ಸರ್ವೀಸ್ ಅಪಾರ್ಟ್‌ಮೆಂಟ್‌ ಕಾಯ್ದಿರಿಸಿದ್ದೆ. ಅದು ಇದ್ದಿದ್ದು ಹುಲುಮಾಲೆ(Hulhumale) ಎಂಬ ದ್ವೀಪದಲ್ಲಿ. ಬೆಂಗಳೂರಿನಿಂದ ವಿಮಾನದಲ್ಲಿ ಹೊರಟ ನಾನು ಮಾಲ್ಡೀವ್ಸ್‌ ರಾಜಧಾನಿ ಮಾಲೆಯಲ್ಲಿರುವ ವೆಲಾನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಳಿದೆ. ಶಟಲ್‌ ಬಸ್‌ನಲ್ಲಿ 20 ರೂಫಿಯಾ ಕೊಟ್ಟು (ಮಾಲ್ಡೀವ್ಸ್‌ ಕರೆನ್ಸಿ) ಹುಲುಮಾಲೆಗೆ ಪ್ರಯಾಣಿಸಿದೆ.

ಹುಲುಮಾಲೆ ಒಂದು ಮಾನವ ನಿರ್ಮಿತ ದ್ವೀಪ ಎಂದು ನನಗೆ ಆತಿಥ್ಯ ನೀಡಿದವರು (ಅಪಾರ್ಟಮೆಂಟ್ ಮಾಲೀಕ) ಹೇಳಿದಾಗ ಆಶ್ಚರ್ಯವಾಯಿತು. ಏಕೆಂದರೆ, ಬಹಳ ಯೋಜನಾಬದ್ಧವಾಗಿ ಆ ನಗರವನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಅಗಲವಾದ ರಸ್ತೆಗಳು, ಆಧುನಿಕ ಅಪಾರ್ಟ್‌ಮೆಂಟ್‌ಗಳು, ಶಾಪಿಂಗ್ ಮಾಲ್‌ಗಳು, ಶಾಲೆ, ಉದ್ಯಾನಗಳಿವೆ. ಕ್ಷಿಪ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ನಗರ ನಿರ್ಮಾಣವಾಗಿದೆ. ಇಲ್ಲಿ ಹೊಸದಾಗಿ ನಿರ್ಮಿಸಲಾದ ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿದ್ದಾರೆ.

ಮಾಲೆ ಎಂಬ ಸುಂದರ ಲೋಕ

ಇದು ಮಾಲ್ಡೀವ್ಸ್‌ನ ರಾಜಧಾನಿ. ಸರ್ಕಾರದ ಪ್ರಮುಖ ಕಟ್ಟಡಗಳು ಸುಪ್ರೀಂಕೋರ್ಟ್, ವಸ್ತುಸಂಗ್ರಹಾಲಯ ಇರುವ ತಾಣ. ಇಲ್ಲಿ 2004ರಲ್ಲಿ ಸಂಭವಿಸಿದ ಸುನಾಮಿಯಲ್ಲಿ ಮಡಿದವರ ನೆನಪಿಗಾಗಿ ಒಂದು ಸ್ಮಾರಕವನ್ನು ನಿರ್ಮಿಸಲಾಗಿದೆ.

ಮಾಲ್ಡೀವ್ಸ್‌ನಲ್ಲಿ ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ಹೋಗಲು ಜಲಸಾರಿಗೆ ವ್ಯವಸ್ಥೆ ಇದೆ. ನಮ್ಮಲ್ಲಿ ಸರ್ಕಾರಿ ಸಾರಿಗೆ ಬಸ್ ಇರುವಂತೆ ಇಲ್ಲಿ ಸರ್ಕಾರಿ ಬೋಟ್‌ಗಳು ಇವೆ. ಅದಲ್ಲದೆ ಹಲವು ಖಾಸಗಿ ಕಂಪನಿಗಳು ಕೂಡ ಜಲಸಾರಿಗೆ ಸೌಲಭ್ಯ ಒದಗಿಸುತ್ತವೆ. ಇವು ಕೊಂಚ ದುಬಾರಿ.

ಇತ್ತೀಚೆಗೆ ಚೀನಾ ದೇಶದ ಸಹಯೋಗದೊಂದಿಗೆ ವೆಲಾನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಾಲೆ ನಗರವನ್ನು ಸಂಪರ್ಕಿಸಲು ಹೊಸದಾಗಿ ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದಕ್ಕೆ ‘ಚೀನಾ-ಮಾಲ್ಡೀವ್ಸ್‌ ಫ್ರೆಂಡ್ಸ್‌ ಬ್ರಿಡ್ಜ್‌’ ಎಂದು ಹೆಸರಿಡಲಾಗಿದೆ.

ಮಾಂಸಾಹಾರ ಅಥವಾ ಸೀಫುಡ್ ಇಷ್ಟಪಡುವವರಿಗೆ ಸಾಕಷ್ಟು ಆಯ್ಕೆಗಳಿವೆ. ಇಲ್ಲಿ ಭಾರತೀಯ ಶೈಲಿಯ ಹೋಟೆಲ್‌ಗಳೂ ಇವೆ. ಇಲ್ಲಿನ ಜನ ಬಹಳ ಮೃದು ಸ್ವಭಾವದವರು. ಪ್ರವಾಸಿಗರನ್ನು ಆದರವಾಗಿ ಕಾಣುತ್ತಾರೆ. ಅಂತೆಯೇ ಅವರು ತಮ್ಮ ಸಂಸ್ಕೃತಿ, ಸಂಪ್ರದಾಯದ ವಿಷಯದಲ್ಲಿ ಬಹಳ ಕಟ್ಟುನಿಟ್ಟು. ಇಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವಂತಿಲ್ಲ. ಪ್ರವಾಸಿಗರು ಇಲ್ಲಿ ಇಸ್ಲಾಂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಗಳಲ್ಲಿ ತೊಡಗುವಂತಿಲ್ಲ. ಇಷ್ಟನ್ನು ಹೊರತುಪಡಿಸಿ ಎಲ್ಲ ದೇಶ, ಭಾಷೆ, ಧರ್ಮದ ಜನರನ್ನು ಪ್ರೀತಿಯಿಂದ ಸ್ವಾಗತಿಸುವ, ಆತಿಥ್ಯ ನೀಡುವ ಮನೋಭಾವ ಇಲ್ಲಿನ ಜನರದ್ದು.

ಇಂಥ ದ್ವೀಪರಾಷ್ಟ್ರ ಸಮುದ್ರಮಟ್ಟದಿಂದ ಸರಾಸರಿ 1.5 ಮೀ ನಷ್ಟು ಎತ್ತರವಿದೆ. ಜಾಗತಿಕ ತಾಪಮಾನದ ಪರಿಣಾಮವಾಗಿ ಮುಳುಗಡೆಯ ಭೀತಿ ಎದುರಿಸುತ್ತಿದೆ.

ಹೋಗುವುದು ಹೇಗೆ?

ಬೆಂಗಳೂರಿನಿಂದ ಮಾಲ್ಡೀವ್ಸ್‌ಗೆ ನೇರ ವಿಮಾನ ಸೌಲಭ್ಯವಿದೆ. ಬೆಂಗಳೂರು, ಮೈಸೂರಿನವರಾದರೆ ಕೇರಳದ ಕೊಚ್ಚಿಯಿಂದಲೂ ಮಾಲೆಗೆ ಹೋಗಬಹುದು. ಇಲ್ಲಿಂದ ಹೋಗಿಬರುವ ವಿಮಾನಯಾನದ ಖರ್ಚು ₹ 9 ಸಾವಿರ ಆಸುಪಾಸಿನಲ್ಲಿರುತ್ತದೆ.

ರೆಸಾರ್ಟ್ ಡೇ ಟ್ರಿಪ್..

ಕಡಿಮೆ ಬಜೆಟ್‌ನಲ್ಲಿ ರೆಸಾರ್ಟ್‌ನ ಐಷಾರಾಮಿ ಸೌಲಭ್ಯವನ್ನು ಅನುಭವಿಸಬೇಕು ಎನ್ನುವವರಿಗೆ ಉತ್ತಮ ಆಯ್ಕೆ ‘ರೆಸಾರ್ಟ್ ಡೇ ಟ್ರಿಪ್’. ಇಲ್ಲಿನ ಟೂರ್ ಆಪರೇಟರ್‌ಗಳು ಮಾಡುವ ವ್ಯವಸ್ಥೆ ಇದು. ಇದಕ್ಕೆ ಒಂದು ದಿನಕ್ಕೆ 50 ರಿಂದ 100 ಡಾಲರ್. ಬೆಳಿಗ್ಗೆ ಒಂದು ನಿಗದಿತ ಸ್ಥಳದಿಂದ ನಿಮ್ಮನ್ನು ಸ್ಪೀಡ್ ಬೋಟ್‌ನಲ್ಲಿ ರೆಸಾರ್ಟ್‌ಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ನೀವು ದಿನವಿಡೀ ಇರಬಹುದು. ರೆಸಾರ್ಟ್‌ನ ಐಷಾರಾಮವನ್ನು ಅನುಭವಿಸಬಹುದು. ಸ್ಕೂಬಾ ಡೈವಿಂಗ್, ಸ್ನೋಕರ್ಲಿಂಗ್ ಅಲ್ಲದೇ ಹಲವು ಜಲಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದು. ಅಲ್ಲಿಯೇ ಮಧ್ಯಾಹ್ನದ ಊಟ ಮಾಡಿ, ಸಂಜೆ ಮತ್ತೆ ನಿಮ್ಮನ್ನು ರೆಸಾರ್ಟ್‌ನಿಂದ ಪ್ರಯಾಣ ಆರಂಭಿಸಿದ ಸ್ಥಳಕ್ಕೆ ಕರೆದುಕೊಂಡು ಬರುತ್ತಾರೆ.

ದುಬಾರಿ ಬಜೆಟ್ ರೆಸಾರ್ಟ್‌ಗಳು

ದಿನಕ್ಕೆ ಸರಾಸರಿ ₹4 ಸಾವಿರದಿಂದ ₹70 ಸಾವಿರ ಚಾರ್ಜ್ ಮಾಡುವ ರೆಸಾರ್ಟ್‌ಗಳಿವೆ. ಇಂಥ ಕಡೆ ರೂಮ್‌ ಕಾಯ್ದಿರಿಸಿದರೆ ಆ ಸಿಬ್ಬಂದಿಯೇ ನಿಮ್ಮನ್ನು ವಿಮಾನ ನಿಲ್ದಾಣದಿಂದ ಸ್ವಾಗತಿಸಿ ಸ್ಪೀಡ್ ಬೋಟ್‌ಗಳಲ್ಲಿ ಕರೆದೊಯ್ಯುತ್ತಾರೆ. ಇನ್ನು ಕೆಲವು ಐಷಾರಾಮಿ ರೆಸಾರ್ಟ್‌ಗಳು ಸೀಪ್ಲೆನ್ (Seaplane) ವ್ಯವಸ್ಥೆ ಹೊಂದಿವೆ. ಸೀಪ್ಲೇನ್‌ನಲ್ಲಿ ಪ್ರಯಾಣಿಸಲು ಪ್ರತಿ ವ್ಯಕ್ತಿಗೆ 230 ರಿಂದ 250 ಡಾಲರ್‌ ಪ್ರತ್ಯೇಕ ಚಾರ್ಜ್.

ಕಡಿಮೆ ವೆಚ್ಚದ ಪ್ರವಾಸಕ್ಕೆ..

ನವೆಂಬರ್‌ನಿಂದ ಏಪ್ರಿಲ್‌ವರೆಗೆ ಪ್ರವಾಸಕ್ಕೆ ಸೂಕ್ತ ಸಮಯ. ಇದೇ ಸಮಯದಲ್ಲಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಆಗ ವಿಮಾನಯಾನ, ಹೋಟೆಲ್ ದರಗಳು ದುಬಾರಿ. ಮೇ ತಿಂಗಳಿಂದ ಅಕ್ಟೋಬರ್ ಅವಧಿ ಆಫ್ ಸೀಸನ್. ಈ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಕಡಿಮೆ ವೆಚ್ಚದಲ್ಲಿ ಪ್ರವಾಸ ಮಾಡಬಹುದು.

ಸ್ಥಳೀಯ ಗೆಸ್ಟ್ ಹೌಸ್

ನಾನು ಮಾಲ್ಡೀವ್ಸ್‌ನಲ್ಲಿ ದುಬಾರಿ ಹೋಟೆಲ್‌ಗಳ ಬದಲಿಗೆ ಸ್ಥಳೀಯ ಗೆಸ್ಟ್‌ಹೌಸ್‌ಗಳಲ್ಲಿ ಉಳಿಯಲು ನಿರ್ಧರಿಸಿದ್ದೆ. ಅದರಂತೆ www.airbnb.com ವೆಬ್‌ಸೈಟ್ ಮೂಲಕ ಮೂರು ದಿನಗಳಿಗಾಗಿ (ಮೂರು ದಿನದ ಬೆಳಗಿನ ಉಪಹಾರ ಸೇರಿ) ಅಪಾರ್ಟ್‌ಮೆಂಟ್ ಬುಕ್ ಮಾಡಿದೆ. ಒಟ್ಟು ₹4700 ಪಾವತಿಸಿದೆ.

ಮಾಲ್ಡೀವ್ಸ್ ಕುರಿತು..

ಮಾಲ್ಡೀವ್ಸ್ ಭಾಷೆ ದಿವೇಹಿ. ಇಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ರೂಫಿಯಾ. ಒಂದು ಮಾಲ್ಡೀವಿಯನ್ ರೂಫಿಯಾ ಎಂದರೆ ಸುಮಾರು ₹4.60. ಇಲ್ಲಿನ ವಾತಾವರಣದಲ್ಲಿ ಅಧಿಕ ತೇವಾಂಶ ಇರುವುದರಿಂದ ಕಾಗದದ ನೋಟಿನ ಬದಲಾಗಿ ಪ್ಲಾಸ್ಟಿಕ್ ನೋಟ್ ಬಳಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.