ADVERTISEMENT

ಸರ್ಪ ದೋಣಿ ಸ್ಪರ್ಧೆಯ ಮೆರುಗು

ಲೋಕೇಶ್‌
Published 23 ಜೂನ್ 2018, 20:14 IST
Last Updated 23 ಜೂನ್ 2018, 20:14 IST
ಚಂಪುಕಾಲಂ ದೋಣಿ ಸ್ಪರ್ಧೆಯ ಒಂದು ನೋಟ
ಚಂಪುಕಾಲಂ ದೋಣಿ ಸ್ಪರ್ಧೆಯ ಒಂದು ನೋಟ   

‘ದೇವರ ನಾಡು’ ಎಂದೇ ಕರೆಸಿಕೊಳ್ಳುವ ಕೇರಳ ರಾಜ್ಯದ ಒಂದು ಜಿಲ್ಲೆ ‘ಅಲಪುಳ’. ಒಂದು ಹಚ್ಚ ಹಸರಿನ ತಾಣ ಅರಬ್ಬಿ ಸಮುದ್ರದಿಂದ ನೀರು ಹೊಳೆಯಂತೆ ಒಳನುಗ್ಗುವ ಇಡೀ ಅಲಪುಳ ಪ್ರಾಂತ್ಯದಲ್ಲಿ ಬಹಳ ಹಿಂದಿನಿಂದಲೂ ಲಾಂಜ್ ಹಾಗೂ ದೋಣಿಗಳದ್ದೇ ಕಾರುಬಾರು.

ನಾವು ಬೆಂಗಳೂರಿನಿಂದ ರೈಲಿನಲ್ಲಿ ಹೊರಟು ಕೊಚ್ಚಿಯಿಂದ ಸುಮಾರು 50 ಕಿ. ಮೀ. ದೂರವಿರುವ ಅಲಪುಳ ತಲುಪಿದಾಗ ಬೆಳಗಿನ ಸಮಯ. ಹಸಿರು ಗಿಡಗಳ – ತೆಂಗಿನ ಸಾಲು ಮರಗಳು - ಪಕ್ಕದಲ್ಲೇ ಅತ್ಯಂತ ಹತ್ತಿರದಲ್ಲಿ ಇಣುಕುವ ಅರಬ್ಬಿ ಸಮುದ್ರ ನಮ್ಮನ್ನು ಸ್ವಾಗತಿಸಿದವು.

ನಾವು ಉಳಿದುಕೊಂಡ ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ವಸತಿಗೃಹ ಪ್ರಶಾಂತವಾದ ವಾತಾವರಣದಲ್ಲಿತ್ತು. ‘ಚಂಪುಕಾಲಂ’ ದೋಣಿ ಓಟದ ಸ್ಪರ್ಧೆ ನೋಡಲೆಂದೇ ಅಲ್ಲಿಗೆ ಹೋಗಿದ್ದೆವು. ಅಲಪುಳ ಪಟ್ಟಣದಿಂದ 13 ಕಿ.ಮೀ. ದೂರದಲ್ಲಿರುವ ಒಳನಾಡಿನ ಸಾಧಾರಣ 200 ಮನೆಗಳಿರುವ ಪಟ್ಟಣ ಪ್ರದೇಶವೇ ಚಂಪುಕಾಲಂ. ಈ ಪಟ್ಟಣಕ್ಕೆ ಆಟೊದಲ್ಲಿ ಹೋದರೆ ಅರ್ಧಗಂಟೆಯ ಪ್ರಯಾಣ. ಬೋಟಿನಲ್ಲಿಯೂ ಪ್ರಯಾಣಿಸಬಹುದು. ಮಧ್ಯಾಹ್ನ 2 ಗಂಟೆ ಸುಮಾರಿಗೆ ‘ಸರ್ಪ ದೋಣಿ ರೇಸ್ ಸ್ಪರ್ಧೆ’ ಅಥವಾ ಸ್ನೇಕ್ ಬೋಟ್ ರೇಸ್ ಶುರುವೆಂದು ತಿಳಿದುಬಂತು.

ADVERTISEMENT

ಚಂಪುಕಾಲಂನಲ್ಲಿ ಸುಮಾರು ಒಂದು ಮೈಲಿಗಳಷ್ಟು ದೂರ ಸಮುದ್ರದ ಹಿನ್ನೀರು ನೇರವಾಗಿ ಹರಿಯುತ್ತದೆ. ಈ ಊರಿನಿಂದ 10 ಕಿ. ಮೀ. ದೂರದಲ್ಲಿರುವ ‘ಅಂಬಳಪುಳ’ ಎಂಬ ಹಳ್ಳಿಯಲ್ಲಿ ಶ್ರೀಕೃಷ್ಣ ದೇವಸ್ಥಾನವಿದೆ. ಮಲಯಾಲಂ ಪಂಚಾಂಗದ ಪ್ರಕಾರಪ್ರತಿ ವರ್ಷ ಜುಲೈನಲ್ಲಿ ಬರುವ ಮಿಥುನ ಮಾಸದ ಮೂಲಂ ದಿನ ಚಂಪುಕಾಲಂನಲ್ಲಿ ‘ವಲ್ಲಂಕಾಲಿ’ ಎಂಬ ಹೆಸರಿನಲ್ಲಿ ದೋಣಿ ಸ್ಪರ್ಧೆ ನಡೆಯುತ್ತದೆ. ಇಲ್ಲಿನ ಬೋಟ್ ರೇಸ್‍ ನಡೆದ (ಮೂಲಂ ದೋಣಿ ಸ್ಪರ್ಧೆ) ಸರಿಯಾಗಿ 48 ದಿನಕ್ಕೆ ಕೇರಳದ ಸಾಂಪ್ರದಾಯಿಕ ಹಬ್ಬ ‘ತಿರು ಓಣಂ’ ಜರುಗುತ್ತದೆ.

ಸರ್ಪ ದೋಣಿ ಸ್ಪರ್ಧೆಯ ಹಿನ್ನೆಲೆ

ಈ ಚಂಪಾಕಾಲಂ ದೋಣಿ ಓಟಕ್ಕೆ ಶುರುವಾದುದಕ್ಕೆ ಒಂದು ಅದ್ಭುತ ಕಥೆ ಇದೆ: ಅಲಪುಳ ರಾಜ್ಯವಾಳುತ್ತಿದ್ದ ಸಾಮಂತ ರಾಜ ಕ್ರಿ.ಶ. 1545ರಲ್ಲಿಅಂಬಳಪುಳದಲ್ಲಿ ಒಂದು ಕೃಷ್ಣನ ದೇವಸ್ಥಾನ ಕಟ್ಟಿಸುತ್ತಾನೆ. ಅದು ಉದ್ಘಾಟನೆಯಾಗುವ ಸ್ವಲ್ಪ ಮೊದಲು, ಕೆತ್ತಿರುವ ಮೂಲವಿಗ್ರಹ ಪ್ರತಿಷ್ಠಾಪನೆಗೆ ಪ್ರವಿತ್ರವಾದುದಲ್ಲ ಎಂದು ಶಾಸ್ತ್ರಜ್ಞರು ತಿಳಿಸುತ್ತಾರೆ. ಅದರ ಬದಲಾಗಿ ‘ಕರಿ ಕಾಲಂ’ ಎಂಬಲ್ಲಿರುವ ಶ್ರೀಕೃಷ್ಣನ ವಿಗ್ರಹ ಶ್ರೇಷ್ಠವೆಂದು ತಿಳಿಸುತ್ತಾರೆ. ರಾಜನೇ ಸ್ವಂತ ಅಲ್ಲಿಗೆ ಹೊರಟು ವಿಗ್ರಹವನ್ನು ದೋಣಿಯಲ್ಲಿ ಹೊತ್ತು ತರುತ್ತಾನೆ.

ಪ್ರಯಾಣದಲ್ಲಿ ಕತ್ತಲಾವರಿಸಿದಾಗ ಚಂಪುಕಾಲಂ ಗ್ರಾಮದಲ್ಲಿ ಇಟ್ಟಿ ತೋಮನ್ ಎಂಬ ಕ್ರಿಶ್ಚಿಯನ್‌ ವ್ಯಕ್ತಿಯ ಮನೆಯಲ್ಲಿ ತಂಗುತ್ತಾನೆ. ಅಂದು ಅಲ್ಲಿಯೇ ಶ್ರೀಕೃಷ್ಣನ ವಿಗ್ರಹಕ್ಕೆ ಪೂಜೆ ನಡೆಯುತ್ತದೆ. ಮರುದಿನ ಸಾಕಷ್ಟು ದೋಣಿಗಳ ಹಿಮ್ಮೇಳದೊಂದಿಗೆ ಅಂಬಳಪುಳಕ್ಕೆ ಒಯ್ದು ಅಲ್ಲಿ ವಿಗ್ರಹ ಪ್ರತಿಷ್ಠಾಪನೆ ನಡೆಸುತ್ತಾನೆ. ಈ ದೇವರ ಪ್ರತಿಷ್ಠಾಪನೆಯ ನೆನಪಿಗಾಗಿ ಮೈಲಿಗಿಂತ ದೂರ ನೇರವಾಗಿ ಹರಿಯುವ ನೀರಿನಲ್ಲಿ ಸರ್ಪ ದೋಣಿ ಸ್ಪರ್ಧೆ ಏರ್ಪಡಿಸುತ್ತಾನೆ. ಆ ಕ್ರಿಶ್ಚಿಯನ್‌ ವ್ಯಕ್ತಿಯ ಮನೆಗೆ ದಾನ ದತ್ತಿಗಳನ್ನು ನೀಡುತ್ತಾನೆ. ಹಾಗೂ ವರುಷದಲ್ಲಿ ಒಂದು ದಿನ– ಅಂದರೆ ಮೊದಲ ದಿನ ಶ್ರೀಕೃಷ್ಣ ಆ ಮನೆ / ಇಗರ್ಜಿಯಲ್ಲಿ ನೆಲೆಸುತ್ತಾನೆ ಎಂಬ ನಂಬಿಕೆಯಿಂದ ಪ್ರತಿವರ್ಷ ಅಂದು ಬೋಟ್ ರೇಸ್ ನಡೆಯಬೇಕೆಂದು ಏರ್ಪಾಟು ಮಾಡುತ್ತಾನೆ. ಆ ದಿನ ಈಗಲೂ ಆ ಇಗರ್ಜಿಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ನಡೆಯುತ್ತದೆ.

ಚಂಪುಕಾಲಂ ಬೋಟ್‍ರೇಸ್ ನೋಡುವುದು ಕಣ್ಣಿಗೆ ಹಬ್ಬ. ವಂಜಿ ಪತ್ತು ಎಂದು ಅಲ್ಲಿನ ಮಲೆಯಾಳಂ ಹಾಡಿನ ಜೊತೆ ಡ್ರಮ್‍ಗಳ ಕಿವಿಗಡಚಿಕ್ಕುವ ಶಬ್ದದೊಂದಿಗೆ ಹುಟ್ಟು ಹಾಕುವ ನಾವಿಕರನ್ನು ನೋಡುವುದೇ ಆನಂದ. 10ರಿಂದ 12 ಬೋಟುಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ಎಲ್ಲಾ ಬೋಟುಗಳು ಯಥಾಶಕ್ತಿ ಅಲಂಕೃತಗೊಂಡಿರುತ್ತವೆ. ಪ್ರತಿ ದೋಣಿಯಲ್ಲಿ 60/80ಜನ ಕುಳಿತು ದೋಣಿ ನಡೆಸುತ್ತಾರೆ.

ಇದೇ ತಿಂಗಳ ಜೂನ್ 28ರಂದೇ ಈ ಚಂಪುಕಾಲಂನಲ್ಲಿ ಸ್ನೇಕ್ ಬೋಟ್ ರೇಸ್ ನಡೆಯಲಿದೆ. ದೋಣಿಸ್ಪರ್ಧೆಯನ್ನು ಕಾಣುವ ಅಪೂರ್ವ ಅವಕಾಶ ನಿಮ್ಮದಾಗಿಸಿಕೊಳ್ಳಲು ಕಾಲವಿನ್ನೂ ಮಿಂಚಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.