ಬಾಲಿಯ ದೇವಸ್ಥಾನವೊಂದರ ಮಹಾದ್ವಾರ
ಇಂಡೋನೇಷ್ಯಾದ ಬಾಲಿ ಮತ್ತು ನುಸಾ ಪೆನಿಡ ದ್ವೀಪಗಳು ಅಸಾಧಾರಣ ಪ್ರಕೃತಿ ಸೌಂದರ್ಯ, ಕಣ್ಮನ ಸೆಳೆಯುವ ದೇವಾಲಯಗಳು, ಆಕರ್ಷಕ ಕುಟುಂಬ ದೇವಾಲಯಗಳು, ಸೌಧಗಳು, ಭವನಗಳಿಂದ ಪ್ರವಾಸಿಗರ ನೆಚ್ಚಿನ ತಾಣಗಳಾಗಿವೆ. ಇವೆಲ್ಲಕ್ಕೂ ಕಳಸಪ್ರಾಯದಂತಿರುವ ಅತ್ಯಾಕರ್ಷಕ ‘ಮೇರು ಗೋಪುರ’ಗಳು ಹಾಗೂ ‘ಚಾಂದಿ ಬೆಂತಾರು’ಗಳು ಈ ದ್ವೀಪಗಳ ಪ್ರಮುಖ ಆಕರ್ಷಣೆಗಳು.
ಹಿಂದೂ ಹಾಗೂ ಬೌದ್ಧ ಪುರಾಣಗಳಲ್ಲಿ ದೇವತೆಗಳು ‘ಮಹಾ ಮೇರು ಪರ್ವತ’ದಲ್ಲಿ ವಾಸಿಸುತ್ತಾರೆ ಎಂಬ ನಂಬಿಕೆಯಿದೆ. ಈ ಮಹಾ ಮೇರು ಪರ್ವತವನ್ನು ಸಂಕೇತಿಸುವ ಮೇರು ಗೋಪುರಗಳನ್ನು ಇಂಡೋನೇಷ್ಯಾದ ಬಾಲಿ ದ್ವೀಪದ ಎಲ್ಲಾ ದೇವಸ್ಥಾನಗಳು ಹಾಗೂ ಕೆಲವೊಂದು ಕುಟುಂಬ ದೇವಾಲಯಗಳಲ್ಲಿ ನಿರ್ಮಿಸಿದ್ದಾರೆ. ಈ ಮೇರು ಗೋಪುರ ಉತ್ತರ ಹಾಗೂ ದಕ್ಷಿಣ ಭಾರತದ ದೇವಾಲಯಗಳಲ್ಲಿ ಕಂಡು ಬರುವ ‘ಶಿಖರ’ ಹಾಗೂ ‘ವಿಮಾನ’ಗಳ ಶೈಲಿಯನ್ನು ಹೋಲುತ್ತದೆ. ಇಟ್ಟಿಗೆ ಹಾಗೂ ಗಾರೆ ಅಥವಾ ಕಲ್ಲಿನ ಚೌಕಾಕಾರದ ತಳಪಾಯದ ಮೇಲೆ ಒಂದರ ಮೇಲೆ ಒಂದರಂತೆ 1,3,5,7,9,11 ರ ಬೆಸಸಂಖ್ಯೆಯಲ್ಲಿರುವ ಹಾಗೂ ಮೇಲಕ್ಕೆ ಹೋದಂತೆ ಕಿರಿದಾಗುತ್ತಾ ಹೋಗುವ ಮರದ ಚೌಕಟ್ಟಿನಲ್ಲಿ ನಿರ್ಮಿಸಿರುವ ಸಕ್ಕರೆ ತಾಳೆ ಹುಲ್ಲಿನ ಮಾಡುಗಳ ‘ಮೇರು ಗೋಪುರಗಳು’ ದೈವತ್ವದ ಪ್ರತೀಕವೆಂದು ಇಲ್ಲಿನ ನಿವಾಸಿಗಳ ನಂಬಿಕೆ. ಕಡು ಕಪ್ಪು ಬಣ್ಣದ ಹುಲ್ಲಿನ ಮಾಡುಗಳಿಂದಾಗಿ ಈ ಮೇರು ಗೋಪುರಗಳಿಗೆ ವಿಶಿಷ್ಟವಾದ ಹಾಗೂ ಅತ್ಯಂತ ಸೊಗಸಾದ ಹೊರನೋಟವಿದೆ. ಫಕ್ಕನೆ ನೋಡಿದಾಗ ಈ ಹುಲ್ಲಿನ ಮಾಡುಗಳು ತಲೆಕೂದಲಿಗೆ ಮಾಡಿದ ‘ಮಶ್ರೂಮ್ ಕಟ್’ನಂತೆ ಕಾಣುತ್ತವೆ.
ಇವುಗಳಲ್ಲಿರುವ ಮಹಡಿಯ ಸಂಖ್ಯೆ ಯಾವ ಹಿಂದೂ ದೇವರಿಗೆ, ಸ್ಥಳೀಯ ದೇವತೆಗಳಿಗೆ ಹಾಗೂ ಪೂರ್ವಜರ ಪವಿತ್ರಾತ್ಮಗಳಿಗೆ ಅರ್ಪಿತವಾಗಿದೆಯೋ ಆ ದೇವರ, ಪವಿತ್ರಾತ್ಮಗಳ ಪ್ರಾಮುಖ್ಯತೆ ಹಾಗೂ ಸ್ಥಾನಮಾನವನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಮೂರು ಅಂತಸ್ತಿನ ಗೋಪುರಗಳು ಪೂರ್ವಜರ ಪವಿತ್ರಾತ್ಮಗಳಿಗೆ, ಗ್ರಾಮ ದೇವತೆಗಳಿಗೆ ಹಾಗೂ 15-16ನೇ ಶತಮಾನದಲ್ಲಿದ್ದ ಬಾಲಿಯ ಹಿಂದೂಗಳ ಸರ್ವೋಚ್ಚ ಧಾರ್ಮಿಕ ನಾಯಕನೆಂದು ಪರಿಗಣಿಸಲ್ಪಟ್ಟಿರುವ ‘ಡ್ಯಾಂಗ್ಹ್ಯಾಂಗ್ ನಿರ್ಥನಿ’ಗೆ, ಐದು ಅಂತಸ್ತಿನ ಗೋಪುರಗಳು ಮೌಂಟ್ ಅಗುಂಗ್ ಪರ್ವತದ ದೇವತೆ ‘ಭತಾರ ಮಹಾಜಯ’ ದೇವತೆಗೆ ಹಾಗೂ ಹನ್ನೊಂದು ಅಂತಸ್ತಿನ ಗೋಪುರಗಳು ತ್ರಿಮೂರ್ತಿಗಳಾದ ‘ಬ್ರಹ್ಮ, ವಿಷ್ಣು, ಶಿವ’ ರಿಗೆ ಮೀಸಲಾಗಿವೆ.
ಕುಟುಂಬ ದೇವಾಲಯವೊಂದರಲ್ಲಿನ ಮೇರು ಗೋಪುರ
‘ಪೆಲಿಂಗಿಸ್’ ಎಂದು ಕರೆಯಲ್ಪಡುವ ಗೋಪುರದ ತುತ್ತತುದಿಯಲ್ಲಿ ಅದು ಯಾವ ದೇವತೆ ಪೂರ್ವಜರಿಗೆ ಅರ್ಪಿತವಾಗಿದೆಯೋ ಆ ದೇವರ, ಪೂರ್ವಜರ ಇರುವನ್ನು ಸೂಚಿಸುವ ಸಾಮಗ್ರಿಗಳು ಅಥವಾ ವಿಗ್ರಹಗಳನ್ನು ಇರಿಸಿರುತ್ತಾರೆ. ಈ ಗೋಪುರಗಳಲ್ಲಿ ಧಾರ್ಮಿಕ ಆಚರಣೆಗಳ ಸಂದರ್ಭಗಳಲ್ಲಿ ಪೂರ್ವಜರು, ದೇವತೆಗಳು ಇಲ್ಲಿ ತಂಗುತ್ತಾರೆ ಹಾಗೂ ಇವು ಅವರ ತಾತ್ಕಾಲಿಕ ಅರಮನೆಗಳೆಂದು ಬಾಲಿಯ ಹಿಂದೂಗಳ ನಂಬಿಕೆಯಾಗಿದೆ. ಆದ್ದರಿಂದ ಬಾಲಿಯ ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳು, ಆಚರಣೆಗಳ ಸಂದರ್ಭದಲ್ಲಿ ಈ ಮೇರು ಗೋಪುರಗಳು ಕೇಂದ್ರಬಿಂದು.
ಈ ಮೇರು ಗೋಪುರಗಳ ನಿರ್ಮಾಣದಲ್ಲಿ ಹಿಂದೂ, ಬೌದ್ಧ ಮತಗಳ ಪ್ರಭಾವ ಅಧಿಕವಾಗಿದೆ. ಇದಕ್ಕೆ ಕಾರಣ ಸುಮಾರು 1ನೇ ಶತಮಾನದಿಂದಲೇ ಭಾರತೀಯ ನಾವಿಕರು, ವಿದ್ವಾಂಸರು, ವ್ಯಾಪಾರಿಗಳು ಅದರಲ್ಲೂ ತಮಿಳುನಾಡಿನ ವ್ಯಾಪಾರಿಗಳು ಈಗಿನ ಇಂಡೋನೇಷ್ಯಾಕ್ಕೆ ವ್ಯಾಪಾರ, ವ್ಯವಹಾರಗಳ ಸಲುವಾಗಿ ಭೇಟಿ ನೀಡಲು ಪ್ರಾರಂಭಿಸಿದ್ದರು. ಹಾಗೆ ಹೋದ ನಾವಿಕರು, ವ್ಯಾಪಾರಿಗಳು ತಮ್ಮೊಂದಿಗೆ ತಮ್ಮ ಧಾರ್ಮಿಕ ನಂಬಿಕೆ, ಆಚರಣೆಗಳು ಹಾಗೂ ದೇವರುಗಳನ್ನೂ ತೆಗೆದುಕೊಂಡು ಹೋದರು. ಹೀಗೆ ಬೌದ್ಧ ಧರ್ಮ ಹಾಗೂ ಹಿಂದೂ ಧರ್ಮ ಇಂಡೋನೇಷ್ಯಾ ಪ್ರವೇಶಿಸಿದವು. ಈ ಧರ್ಮಗಳಿಗೆ ಇಂಡೋನೇಷ್ಯಾದ ‘ಮಾತರಮ್’, ‘ಸಿಂಘಸಾರಿ’, ‘ಶ್ರೀ ವಿಜಯ’ ಮುಂತಾದ ರಾಜಮನೆತನಗಳ ರಾಜಾಶ್ರಯವೂ ದೊರೆಯಿತು. ಅಂತೆಯೇ ಈಗ ಇಂಡೋನೇಷ್ಯಾದ ಭಾಗವಾದ ಪ್ರದೇಶಗಳೊಂದಿಗೆ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯೂ ಸಹ ಆಗಿನಿಂದಲೇ ಪ್ರಾರಂಭವಾಗಿತ್ತು. ಸುಮಾರು 9ನೇ ಶತಮಾನದ ಹೊತ್ತಿಗಾಗಲೇ ಬಾಲಿ ದ್ವೀಪದಲ್ಲಿ ಹಿಂದೂ ಧರ್ಮ ಬಲವಾಗಿ ಬೇರೂರಿತ್ತು. ಹೀಗಾಗಿ ಬಾಲಿ ಜನರ ಆಚರಣೆಗಳು, ದೇವಾಲಯಗಳ ನಿರ್ಮಾಣ, ಕಟ್ಟಡ, ಭವನಗಳ ವಾಸ್ತುಶಿಲ್ಪ ಮುಂತಾದ ಎಲ್ಲಾ ಚಟುವಟಿಕೆಗಳಲ್ಲೂ ಹಿಂದೂ ಧರ್ಮದ ಪ್ರಭಾವ ಗಾಢವಾಗಿತ್ತು. ಸುಮಾರು 13ನೇ ಶತಮಾನದಿಂದ 16ನೇ ಶತಮಾನದ ಕೊನೆಯವರೆಗೆ ಇಂಡೋನೇಷ್ಯಾದ ಭಾಗವಾಗಿರುವ ಪ್ರದೇಶಗಳು ಹಿಂದೂ/ಬೌದ್ಧ ಧರ್ಮಾವಲಂಬಿಗಳಾಗಿದ್ದ ‘ಮಜಾಪಹಿತ್’ ರಾಜಮನೆತನದ ಆಡಳಿತದಲ್ಲಿದ್ದವು. ಆ ಸಮಯದಲ್ಲಿ ಈ ಮೇರು ಗೋಪುರಗಳ ರಚನೆಗೆ ಸ್ಪಷ್ಟವಾದ ರೂಪುರೇಷೆ ನೀಡಲಾಯಿತು. ಮಜಾಪಹಿತ್ ಆಡಳಿತ ಕೊನೆಗೊಂಡ ಮೇಲೂ ಈ ಮೇರು ಗೋಪುರಗಳ ನಿರ್ಮಾಣವು ಅಭಿವೃದ್ಧಿ ಹೊಂದುತ್ತಲೇ ಹೋಗಿ ಈಗ ಸುಂದರ ಕಾಷ್ಠಶಿಲ್ಪದೊಂದಿಗೆ ಬಾಲಿಯ ಎಲ್ಲಾ ಕುಟುಂಬ ದೇವಾಲಯಗಳ, ಸಾರ್ವಜನಿಕ ದೇವಾಲಯಗಳ ಅದರಲ್ಲೂ ಮುಖ್ಯವಾಗಿ ‘ಬೆಸಾಕಿಹ್’, ‘ತಮನ್ ಅಯೂನ್’, ‘ಉಲುನ್ ದಾನು ಬ್ರಟಾನ್’ ಮುಂತಾದ ದೇವಾಲಯಗಳಲ್ಲಿ ಪ್ರಮುಖ ಆಕರ್ಷಣೆಗಳಾಗಿವೆ.
ಪ್ರವಾಸದ ವೇಳೆ ನಮ್ಮನ್ನು ಬಹುವಾಗಿ ಆಕರ್ಷಿಸಿದ ಇನ್ನೊಂದು ನಿರ್ಮಿತಿ ‘ಚಾಂದಿ ಬೆಂತಾರು’. ಒಂದು ಕಲಾತ್ಮಕ ದ್ವಾರವನ್ನು ಮೇಲಿಂದ ಕೆಳಗೆ ಲಂಬವಾಗಿ ಸೀಳಿ, ಮಧ್ಯ ಓಡಾಡಲು ಜಾಗ ಬಿಟ್ಟು ಒಂದರ ಎದುರು ಇನ್ನೊಂದನ್ನು ಇಟ್ಟಂತೆ ಕಾಣುವ ಅನನ್ಯ ಆಕರ್ಷಣೆ ಈ ‘ಚಾಂದಿ ಬೆಂತಾರು’. ಇದು ‘ವಿಭಜಿತ ದ್ವಾರ’. ದೇವಾಲಯಗಳ, ಕೆಲವೊಂದು ಕುಟುಂಬ ದೇವಾಲಯಗಳ, ಅರಮನೆಗಳ, ಸೌಧ/ಭವನಗಳ ಹಾಗೂ ಸ್ಮಶಾನಗಳ ಎದುರಿನಲ್ಲಿ ಪ್ರವೇಶದ್ವಾರದಂತೆ ನಿರ್ಮಿಸಲಾಗಿದೆ. ಈ ವಿಭಜಿತ ದ್ವಾರಗಳು ಮನುಷ್ಯರ ಭೌತಿಕ ಪ್ರಪಂಚದಿಂದ ಅಧ್ಯಾತ್ಮಿಕ ಪ್ರಪಂಚಕ್ಕೆ ಇರುವ ಕೊಂಡಿಗಳು. ಇವುಗಳ ಮೂಲಕ ಹಾದುಹೋಗುವ ಮುನ್ನ ಎಲ್ಲಾ ಪ್ರಾಪಂಚಿಕ ಮನೋವ್ಯಾಪಾರವನ್ನು ಹೊರಗೇ ಬಿಟ್ಟು ಅಂತರಂಗ ಶುದ್ಧಿಯೊಂದಿಗೆ ಅಧ್ಯಾತ್ಮಿಕ ಚಿಂತನೆ ಮಾಡಬೇಕು ಎಂಬುದನ್ನು ವಿಭಜಿತ ದ್ವಾರಗಳು ಸೂಚಿಸುತ್ತವೆ ಎನ್ನುವುದು ಬಾಲಿ ಹಾಗೂ ಜಾವಾ ದ್ವೀಪದ ಹಿಂದೂಗಳ ನಂಬಿಕೆ. ಹಾಗಾಗಿ ಚಾಂದಿ ಬೆಂತಾರುಗಳು ಬಾಲಿ ದ್ವೀಪ ವಾಸಿಗಳ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳ ಪ್ರಭಾವ ಇಲ್ಲಿ ಎಷ್ಟಿದೆ ಎಂದರೆ ಇಂಡೋನೇಷ್ಯಾದ ಕೆಲವೊಂದು ಮಸೀದಿಗಳ ಮುಂದೆಯೂ ಈ ವಿಭಜಿತ ದ್ವಾರಗಳನ್ನು ನಿರ್ಮಿಸಿದ್ದಾರೆ! ಈಗ ಇಂಡೋನೇಷ್ಯಾದ ಸರ್ಕಾರ ಪ್ರಾಂತೀಯ ಅಸ್ಮಿತೆಯನ್ನು ಉಳಿಸುವ ಸಲುವಾಗಿ ಈ ವಿಭಜಿತ ದ್ವಾರಗಳನ್ನು ನಿರ್ಮಿಸಲು ಪ್ರೋತ್ಸಾಹ ನೀಡುತ್ತಿದೆ.
ಕಪ್ಪು, ಕೆಂಪು ಶಿಲೆಗಳು, ಇಟ್ಟಿಗೆ ಹಾಗೂ ಗಾರೆಯಿಂದಲೂ ನಿರ್ಮಿಸಿರುವ ಚಾಂದಿ ಬೆಂತಾರುಗಳ ಮಧ್ಯದ ಭಾಗ ಯಾವ ಕೆತ್ತನೆಗಳೂ ಇಲ್ಲದೆ ಸಪಾಟಾಗಿರುತ್ತದೆ. ಬದಿಯ ಭಾಗಗಳು ಬಹಳ ಸಂಕೀರ್ಣವಾದ ಕಲಾತ್ಮಕ ಕೆತ್ತನೆಗಳಿಂದ ಕಣ್ಮನ ಸೆಳೆಯುತ್ತವೆ. ಇಲ್ಲಿ ಭಯ ಹುಟ್ಟಿಸುವ ದೈತ್ಯರಂತೆ ಕಾಣುವ ಪುರಾಣ ಪುರುಷರು, ದೇವತೆಗಳ ಕೆತ್ತನೆಗಳೂ ಇವೆ. ಇವು ದ್ವಾರಪಾಲಕರಂತೆ ದುಷ್ಟಶಕ್ತಿಗಳಿಂದ, ರಾಕ್ಷಸರಿಂದ ರಕ್ಷಣೆ ನೀಡುತ್ತವೆ. ದ್ವಾರದ ಎರಡು ಭಾಗಗಳು ಕತ್ತಲೆ-ಬೆಳಕಿನ ಪ್ರತೀಕ ಎಂದು ಬಾಲಿಯ ಹಿಂದೂಗಳು ನಂಬುತ್ತಾರೆ. ಇದು ಕಾಲ್ಪನಿಕ ಮೇರು ಪರ್ವತದ ಎರಡು ಭಾಗಗಳನ್ನು ಪ್ರತಿನಿಧಿಸುತ್ತದೆ ಎಂಬುದು ಇನ್ನೊಂದು ನಂಬಿಕೆ. ಆದರೆ ಕೆಲವು ವಿದ್ವಾಂಸರ ಪ್ರಕಾರ ಇದು ಕೇವಲ ದೇವಾಲಯಗಳ, ಅರಮನೆಗಳ, ಕುಟುಂಬ ದೇವಾಲಯಗಳ ಸೌಂದರ್ಯ ಹೆಚ್ಚಿಸಲು ನಿರ್ಮಿಸಿದ ವಿಭಜಿತ ದ್ವಾರಗಳಾಗಿವೆ.
ಅದು ಏನೇ ಇರಲಿ, ಈ ಚಾಂದಿ ಬೆಂತಾರುಗಳಿಂದ ಬಾಲಿಯ ಎಲ್ಲಾ ದೇವಾಲಯಗಳು, ಕುಟುಂಬ ದೇವಾಲಯಗಳು, ಸೌಧ/ಭವನಗಳ ಚೆಲುವನ್ನು ಇಮ್ಮಡಿಗೊಳಿಸಿ ಪ್ರವಾಸಿಗರನ್ನು ಸೆಳೆಯುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.