ADVERTISEMENT

ದೊರೆಗಳ ಊರಿನ ದಾರಿಯಲ್ಲಿ

ಗಣಂಗೂರು ನಂಜೇಗೌಡ
Published 4 ಫೆಬ್ರುವರಿ 2019, 19:30 IST
Last Updated 4 ಫೆಬ್ರುವರಿ 2019, 19:30 IST
ನಡಿಗೆ
ನಡಿಗೆ   

‘ಈ ದೇಶದಲ್ಲಿ ವಿಭಿನ್ನ ಸಂಸ್ಕೃತಿಯ ಐದು ರಾಜ ಮನೆತನಗಳು ಆಳ್ವಿಕೆ ನಡೆಸಿದ ಪಾರಂಪರಿಕ ನಗರಿ ಶ್ರೀರಂಗಪಟ್ಟಣ ಒಂದೇ’ ಎಂದರು ಪ್ರೊ.ಎಂ. ಕರಿಮುದ್ದೀನ್.

‘ಹೌದೌದು! ತಲಕಾಡಿನ ಗಂಗರು, ವಿಜಯನಗರದ ಅರಸರು, ದ್ವಾರಸಮುದ್ರದ ಹೊಯ್ಸಳರು, ಯದು ವಂಶದ ಒಡೆಯರ್ ದೊರೆಗಳು ಹಾಗೂ ಹೈದರ್ ಮತ್ತು ಆತನ ಮಗ ಟಿಪ್ಪು ಈ ಊರನ್ನು ಒಬ್ಬರಾದ ಮೇಲೆ ಒಬ್ಬರಂತೆ ಸರಿ ಸುಮಾರು 900 ವರ್ಷಗಳ ಕಾಲ ಆಳಿ ಹೋಗಿದ್ದಾರೆ’– ಹವ್ಯಾಸಿ ಬರಹಗಾರ ಕೆ.ಎಸ್. ಬಾಲಸುಬ್ರಹ್ಮಣ್ಯ ಪ್ರೊಫೆಸರ್ ಮಾತಿಗೆ ದನಿಗೂಡಿಸಿದರು.

ಶ್ರೀರಂಗಪಟ್ಟಣದಲ್ಲಿ ಇತ್ತೀಚೆ ನಡೆದ ‘ಸ್ಮಾರಕಗಳ ಜತೆ ಮೌನ ಮಾತುಕತೆ’ ಹೆಸರಿನ ‘ಒನ್ ಡೇ ನಡಿಗೆ’ಯಲ್ಲಿ ಕೋಟೆ, ಕಂದಕ, ಬುರುಜು, ಶಸ್ತ್ರಾಗಾರ, ಸೆರೆಮನೆ, ಮಸೀದಿ, ಇಗರ್ಜಿ, ದೇವಾಗಾರಗಳನ್ನು ಹುಡುಕುತ್ತಾ ಹೊರಟ ತಂಡಕ್ಕೆ ಇತಿಹಾಸ ತಿಳಿದ ಈ ಇಬ್ಬರು ದ್ವೀಪ ಪಟ್ಟಣದ ಗತ ವೈಭವದ ಘಟನಾವಳಿಗಳನ್ನು ರಸವತ್ತಾಗಿ ಬಣ್ಣಿಸಿದರು. ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಬಂದಿದ್ದ ಇತಿಹಾಸಕ್ತರು ಪ್ರಾಥಮಿಕ ಶಾಲೆಯ ಮಕ್ಕಳಂತೆ ಕಲ್ಲು ಕಲ್ಲೂ ಕತೆ ಹೇಳುವ ಊರಿನ ರೋಚಕವಾದ ಕತೆಯನ್ನು ಕೇಳುತ್ತಾ ಮುನ್ನಡೆದರು.

ADVERTISEMENT

‘ಅಲ್ಲಿ ನೋಡಿ, ಅದು ಜಾಮಿಯಾ ಮಸೀದಿ. 1784ರಲ್ಲಿ ಟಿಪ್ಪು ಸುಲ್ತಾನ್ ಕಟ್ಟಿಸಿದ್ದು. ಅದರ ಮಿನಾರುಗಳ ತುತ್ತ ತುದಿಯಲ್ಲಿರುವ ಲೋಹದ ಕಳಸದಲ್ಲಿ ಎರಡು ಖಂಡುಗ ರಾಗಿ ತುಂಬಬಹುದು. ಸೈನಿಕರು ಈ ಮಿನಾರುಗಳ ಮೇಲೆ ನಿಂತು ಶತ್ರುಗಳ ಚಲನವಲನದ ಬಗ್ಗೆ ನಿಗಾ ಇಡುತ್ತಿದ್ದರು’ ಎಂದು ಪ್ರೊ.ಕರಿಮುದ್ದೀನ್ ಮಸೀದಿಯ ಟೆರೇಸಿನ ಮೇಲಕ್ಕೆ ಇಡೀ ತಂಡವನ್ನು ಕರೆದೊಯ್ದು ಸೂರ್ಯ ಗಡಿಯಾರ, ಮಸೀದಿಯ ಒಳಕ್ಕೆ ಟಿಪ್ಪು ಕುದುರೆಯೇರಿ ಬರುತ್ತಿದ್ದ ದಾರಿ, ಕಲ್ಯಾಣಿಯ ದರ್ಶನ ಮಾಡಿಸಿದರು.

‘ಅದು ಬೆಂಗಳೂರು ದ್ವಾರದ ಕೋಟೆ. ಒಡೆಯರ್ ದೊರೆಗಳು ಕಟ್ಟಿದ 6.5 ಕಿ.ಮೀ. ಸುತ್ತಳತೆಯ ಮೂರು ಸುತ್ತಿನ ಈ ಕೋಟೆಯನ್ನು ಟಿಪ್ಪು ಸುಲ್ತಾನ್ ಕೋರಿಕೆ ಮೇರೆಗೆ ಫ್ರೆಂಚ್ ಎಂಜಿನಿಯರ್ ಹ್ಯೂಬನ್ ಎಂಬಾತ ಅಭಿವೃದ್ಧಿಪಡಿಸಿದ. ಏಳೆಂಟು ಯುದ್ದಗಳನ್ನು ಕಂಡರೂ ಕಗ್ಗಲ್ಲ ಕೋಟೆ ಜಗ್ಗದೆ ನಿಂತಿದೆ’ ಎಂದು ಹೇಳತ್ತಲೇ ಬತೇರಿಯ ಮೇಲಕ್ಕೆ ಹತ್ತಿಸಿದರು ಬಾಲಸುಬ್ರಹ್ಮಣ್ಯ.

ಪಟ್ಟಣದ ಅತಿ ಎತ್ತರದ ಜಾಗದಲ್ಲಿರುವ ಈ ಬತೇರಿ ಸಮುದ್ರ ಮಟ್ಟದಿಂದ ಮೂರು ಸಾವಿರ ಅಡಿಗಳ ಎತ್ತರದಲ್ಲಿದೆ. ಮೈಸೂರು ನಗರ, ಪಾಂಡವಪುರ, ಮೇಲುಕೋಟೆ, ಕುಂತಿಬೆಟ್ಟ, ಕೆಆರ್‍ಎಸ್ ಅಣೆಕಟ್ಟೆ, ಕರಿಘಟ್ಟ ತಾಣಗಳು ಇಲ್ಲಿಂದ ಬರಿಗಣ್ಣಿಗೆ ಗೋಚರಿಸುತ್ತವೆ.

ಬತೇರಿಯಿಂದ ಇಳಿದು ಈಶಾನ್ಯ ಮೂಲೆಗೆ ಬಂದಾಗ, ‘ಅಲ್ಲಿ ಚೆಕ್‍ಪೋಸ್ಟ್ ಹತ್ತಿರುವ ಕಾಣುತ್ತಿದೆಯಲ್ಲ, ಅದು ಆನೆಕೋಟೆ ದ್ವಾರ. ದುರ್ಗಮ ಎನಿಸುವ ಮೂರು ಬಾಗಿಲುಗಳನ್ನು ದಾಟಿದರಷ್ಟೇ ಈ ಮಾರ್ಗದಲ್ಲಿ ಊರೊಳಕ್ಕೆ ಬರಲು ಸಾಧ್ಯ’ ಎನ್ನುತ್ತಲೇ ನಮ್ಮನ್ನು ಅದರೊಳಕ್ಕೆ ನುಗ್ಗಿಸಿದರು. ಮಕ್ಕಳು, ಮಹಿಳೆಯರಾದಿಯಾಗಿ ಎಲ್ಲರೂ ಆನೆ ಕೋಟೆ ದ್ವಾರದೊಳಗೆ ಹೊಕ್ಕಾಡಿ, ಮರದ ಬೃಹತ್ ಬಾಗಿಲುಗಳನ್ನು ಮುಟ್ಟಿ ಪುಳಕಿತರಾದರು.
ಆನೆ ಕೋಟೆ ದ್ವಾರದ ನೆರಳಿನಲ್ಲಿ ನಿಂತು ಫ್ರಾನ್ಸ್ ಕ್ರಾಂತಿಗೆ ಮುಖ್ಯ ಪ್ರೇರಣೆ ಎನ್ನಲಾದ ‘ಜಾಕೋಬಿನ್ ಕ್ಲಬ್’ ಮತ್ತು ಶ್ರೀರಂಗಪಟ್ಟಣದಲ್ಲಿದ್ದ ಆ ಕ್ಲಬ್‍ನ ಶಾಖೆ, ಟಿಪ್ಪು ಅದರ ಪ್ರಥಮ ಸದಸ್ಯನಾಗಿದ್ದದ್ದು, ಎರಡನೇ ಆಂಗ್ಲೊ- ಮೈಸೂರು ಯುದ್ದದಲ್ಲಿ ಬ್ರಿಟಿಷರನ್ನು ಸೋಲಿಸಿ ಕರ್ನಲ್ ಬೇಯ್‍ಲಿಯನ್ನು ಸೆರೆ ಹಿಡಿದ್ದು, 1801ರಲ್ಲಿ ಬ್ರಿಟಿಷರು ಇಲ್ಲಿ ಕ್ರಿಕೆಟ್ ಕ್ಲಬ್ ಆರಂಭಿಸಿದ್ದು, ಬೇಸಿಗೆ ಅರಮನೆಯ ಸೌಂದರ್ಯಕ್ಕೆ ಮನಸೋತ ಲಾರ್ಡ್ ವೆಲ್ಲೆಸ್ಲಿ ಅಲ್ಲೇ ಠಿಕಾಣಿ ಹೂಡಿದ್ದ. ಕಂಠೀರವ ನರಸರಾಜ ಒಡೆಯರ್ 17ನೇ ಶತಮಾನದಲ್ಲಿ ನಾಲೆ ತೋಡಿಸಿ ಪಟ್ಟಣಕ್ಕೆ ನೀರು ತಂದದ್ದು, ಗಂಗರು ಶ್ರೀರಂಗನಾಥ ದೇಗುಲ ನಿರ್ಮಿಸಿದ್ದು, ಮೂರು ಪರ್ಲಾಂಗು ದೂರದ ಗಂಜಾಂನಲ್ಲಿ ಕ್ರೈಸ್ತ ಮಿಷನರಿ ಅಬ್ಬೆದುಬ್ವಾ 1800ರಲ್ಲಿ ಚರ್ಚ್ ಮತ್ತು ಶಾಲೆ ತೆರೆದದ್ದು..’ ಹೀಗೆ ಅರ್ಧ ತಾಸಿನಲ್ಲಿ ಹತ್ತನ್ನೆರಡು ಕುತೂಹಲಕಾರಿ ಘಟನೆಗಳನ್ನು ಬಾಲಸುಬ್ರಹ್ಮಣ್ಯ ವರ್ಣಿಸಿದರು.

ನೆತ್ತಿ ಮೇಲಿನ ಬಿಸಿಲಿನ ತಾಪ ತಣಿಸಲು ಕಲ್ಲಂಗಡಿ ಹಣ್ಣು ತಿನ್ನುತ್ತ ಮುನ್ನಡೆದ ತಂಡಕ್ಕೆ ನಂತರ ಕಾಣಿಸಿದ್ದು ಶಂಭುಲಿಂಗಯ್ಯನ ಕಟ್ಟೆ ದ್ವಾರ. ಕೋಟೆಯ ಕೆಳಗೆ ಸುರಂಗ ಕೊರೆದಂತೆ ಇರುವ 6 ಅಡಿ ಎತ್ತರ, 50 ಅಡಿ ಉದ್ದದ ಕಮಾನು ಮಾದರಿಯ ಈ ಮಾರ್ಗ ನದಿಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಅಲ್ಲಿಂದ ಬಲಕ್ಕೆ ಹೊರಳಿದರೆ ತೂಗು ಸೇತುವೆ ಕಾಣಿಸುತ್ತದೆ.

ಫ್ರೆಂಚ್ ಎಂಜಿನಿಯರ್ ಕರ್ನಲ್ ಡಿ’ ಹೆವಿಲಾಂಡ್ 1808ರಲ್ಲಿ, ಪ್ರಯೋಗಾರ್ಥವಾಗಿ ಈ ಸೇತುವೆಯನ್ನು ನಿರ್ಮಿಸಿದ್ದ. ಪೂರ್ವ-ಪಶ್ಚಿಮವಾಗಿ 112 ಅಡಿ ಉದ್ದ, 4 ಅಡಿ ಅಗಲ ಇದೆ. ಬಿಲ್ಲಿನಂತೆ ಮೇಲ್ಮುಖವಾಗಿ ಉಬ್ಬಿದ್ದ ಚುರಕಿ ಗಾರೆಯ ಈ ಸೇತುವೆ ಸ್ಪ್ರಿಂಗ್ ಮಾದರಿಯಲ್ಲಿ ಮೇಲೆ ಕೆಳಗೆ ಜೀಕುತ್ತಿತ್ತು. ಸ್ಥಳೀಯರ ಬಾಯಲ್ಲಿ ಇದು ಜಗ್ ಸೇತುವೆ ಎನಿಸಿಕೊಂಡಿದೆ. 1936ರಲ್ಲಿ ಇದು ಕುಸಿದು ಬಿದ್ದಿದ್ದು ಗಿಡ ಗಂಟಿಗಳಿಂದ ಮುಚ್ಚಿ ಹೋಗಿದೆ.

ಪಶ್ಚಿಮದತ್ತ ತಿರುಗಿ ನಡೆಯುತ್ತಿದ್ದ ತಂಡವನ್ನು ನಿಲ್ಲಿಸಿ ‘ಅಲ್ಲಿ ಕಾಣುವುದೇ ಡೆಲ್ಲಿ ಗೇಟ್. ಇಲ್ಲಿಂದಲೇ ಬ್ರಿಟಿಷರು 1799ರ ಮೇ 4ರಂದು ಫಿರಂಗಿ ಸಿಡಿಸಿ ಕೋಟೆಯನ್ನು ಉರುಳಿಸಿದ್ದು; ಕಾವೇರಿ ನದಿಯನ್ನು ಈಜಿಕೊಂಡು ಊರೊಳಕ್ಕೆ ನುಗ್ಗಿದ್ದು; ಜನರಲ್ ಹ್ಯಾರಿಸ್ ನೇತೃತ್ವದ ಸೇನೆ ಟಿಪ್ಪು ಸುಲ್ತಾನನನ್ನು ಕೊಂದದ್ದು; ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡು ಕೊಳ್ಳೆ ಹೊಡೆದದ್ದು’ ಎಂದು ಬಾಲಸುಬ್ರಹ್ಮಣ್ಯ ಹೇಳುತ್ತಿದ್ದಂತೆಯೇ ಕೇಳುಗರ ಕಿವಿಗಳು ನಿಮಿರಿದವು.

ಬ್ರಿಟಿಷರ 24 ಸಾವಿರ, ಹೈದರಾಬಾದ್ ನಿಜಾಮನ 11 ಸಾವಿರ, ಮರಾಠರ 6 ಸಾವಿರ ಸೇನೆಯ ಮೈತ್ರಿ ಕೂಟ ಮೀರ್‍ಸಾಧಿಕ್ ಸುಳಿವಿನ ನೆರವಿನಿಂದ ಕೋಟೆಗೆ ಲಗ್ಗೆ ಇಟ್ಟ ಕತೆ ಹೇಳುತ್ತ ಹೇಳುತ್ತಲೇ ತಂಡವನ್ನು ಕಂದಕಕ್ಕೆ ಇಳಿಸಿದರು. ದಿಡ್ಡಿ ಬಾಗಿಲು ದಾಟಿ ನಡೆದವರಿಗೆ ಮೂರು ಸುತ್ತಿನ ಕೋಟೆಯ ಕುರುಹುಗಳು ಸ್ಪಷ್ಟವಾಗಿ ಗೋಚರಿಸಿದ್ದೇ ಅಲ್ಲಿ. ವಿಜಯ
ನಗರ ಅರಸರ ಸಾಮಂತ ತಿಮ್ಮಣ್ಣ ದಣ್ಣಾಯಕ ಕಟ್ಟಿದ ಮೊದಲ ಸುತ್ತಿನ ಕೋಟೆ ಮತ್ತು ನಂತರದ ಎರಡು ಸುತ್ತುಗಳನ್ನು ಕಣ್ತುಂಬಿಕೊಂಡರು. ರಾಜಧಾನಿಯನ್ನು ಶತ್ರುಗಳಿಂದ ರಕ್ಷಿಸಲು ನೀರು ಹರಿಸುತ್ತಿದ್ದ, ಮೊಸಳೆಗಳು ಸರಿದಾಡುತ್ತಿದ್ದ ಆಳ ಕಂದಕಗಳಲ್ಲಿ ಈ ತಂಡ ಅಡ್ಡಾಡಿತು.

ಅರ್ಧ ತಾಸಿನ ಬಳಿಕ ಎದುಸಿರು ಬಿಡುತ್ತ ಕಂದಕದಿಂದ ಮೇಲೆ ಹತ್ತಿ ಬಂದ ಇತಿಹಾಸಪ್ರಿಯರ ತಂಡ ಬ್ರಿಟಿಷ್ ಮಿತ್ರ ಪಡೆಯ ಸೇನಾ ತುಕಡಿಗಳ ಮತ್ತು ಅಧಿಕಾರಿಗಳ ಹೆಸರುಳ್ಳ ಸ್ಮಾರಕ ಸ್ತಂಭದ (ಒಬೆಲಿಸ್ಕ್) ಬಳಿ ತುಸು ಹೊತ್ತು ದಣಿವಾರಿಸಿಕೊಂಡಿತು. ಪಶ್ಚಿಮದ ದಿಬ್ಬದಲ್ಲಿ ನಿಂತು ನದಿಯ ಮಧ್ಯೆ ಕಾಣುವ ಗೌತಮ ಮುನಿಯ ಕಲ್ಲಿನ ಮಂಟಪ ಮತ್ತು ಕಾವೇರಿ ಮೂರು ಹೋಳಾಗಿ ಹರಿಯುವ ಪರಿಯನ್ನು ನೋಡುತ್ತ ಮೈ ಮರೆತಿದ್ದಾಗ ‘ಗಂಟೆ ಮೂರಾಯ್ತು. ಹೊಟ್ಟೆ ತಾಳ ಹಾಕ್ತಾ ಇದೆ. ನಡೀರಿ ನಡೀರಿ’ ಎಂದು ‘ಸ್ಮಾರಕಗಳ ಜತೆ ಮೌನ ಮಾತುಕತೆ’ಯ ಆಯೋಜಕ ಡಾ.ಕೆ.ವೈ.ಶ್ರೀನಿವಾಸ್ 50 ಜನರ ತಂಡವನ್ನು ಹೊರಡಿಸಿದರು; ವಕೀಲರೊಬ್ಬರ ಮನೆಯಲ್ಲಿ ಭರ್ಜರಿ ಊಟ ಹಾಕಿಸಿ ಅವರವರ ಊರಿಗೆ ಕಳುಹಿಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.