ADVERTISEMENT

ಕೌತುಕಗಳ ಹಾಲಿವುಡ್

ವಿ.ಶ್ರೀನಿವಾಸ
Published 30 ಜನವರಿ 2019, 19:30 IST
Last Updated 30 ಜನವರಿ 2019, 19:30 IST
ಹಾಲಿವುಡ್‌
ಹಾಲಿವುಡ್‌   

‘ಹಾಲಿವುಡ್’ ಹೆಸರು ಕೇಳದ ಸಿನಿಪ್ರಿಯರೇ ಇಲ್ಲ. ಹಾಲಿವುಡ್ ಎಂದಾಕ್ಷಣ ಪ್ರಖ್ಯಾತ ನಿರ್ದೇಶಕ ಸ್ಟೀವನ್ ಸ್ಪಿಲ್‌ಬರ್ಗ್‌ ಅವರ ‘ಜಾಸ್’, ‘ಇ.ಟಿ’, ‘ಜುರಾಸಿಕ್ ಪಾರ್ಕ್’, ಸಿನಿಮಾಗಳು ಅಲ್ಲದೆ, ‘ಹ್ಯಾರಿಪಾಟರ್’ ಸರಣಿಯ ಚಿತ್ರಗಳು, ‘ದಿ ಮಮ್ಮಿ’, ‘ಟ್ರಾನ್ಸ್‌ಫಾರ್ಮರ್ಸ್’ ‘ಕಿಂಗ್ ಕಾಂಗ್’ ಮುಂತಾದ ವಿಶ್ವ ವಿಖ್ಯಾತ ಸಿನಿಮಾಗಳು ನಮ್ಮ ನೆನಪಿನ ಪರದೆಯ ಮೇಲೆ ಹಾದು ಹೋಗುತ್ತವೆ. ಇಂಥ ಸಿನಿಮಾಗಳನ್ನು ತಯಾರಿಸುವ ಸಂಸ್ಥೆ ‘ಯೂನಿವರ್ಸಲ್ ಸ್ಟುಡಿಯೋಸ್ ಹಾಲಿವುಡ್’. ಇದು ಅಮೆರಿಕದಲ್ಲಿದೆ. ಇತ್ತೀಚೆಗೆ ಅದನ್ನು ನೋಡುವ ಸೌಭಾಗ್ಯ ನಮ್ಮದಾಗಿತ್ತು. ನಾವು ಹಾಲಿವುಡ್‌ ಸ್ಟುಡಿಯೊಕ್ಕೆ ಭೇಟಿ ನೀಡಿದ್ದು ಕ್ರಿಸ್‍ಮಸ್ ಮತ್ತು ಹೊಸ ವರ್ಷದ ವೇಳೆಯಲ್ಲಿ. ಮೊದಲೇ ಅದು ಥಳುಕಿನ ಸಿನಿಮಾ ಲೋಕ, ಜೊತೆಗೆ ಹಬ್ಬದ ಅಲಂಕಾರಗಳು, ಸಣ್ಣ, ಪುಟ್ಟ ಹಾಗೂ ಬೃಹದಾಕಾರದ ಕ್ರಿಸ್‍ಮಸ್ ಟ್ರೀಗಳು ಹಾಗೂ ಬಣ್ಣ ಬಣ್ಣದ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು.

ಇದು ಲಾಸ್‌ಏಂಜಲಿಸ್ ಸ್ಟುಡಿಯೊ

ಯೂನಿವರ್ಸಲ್ ಸ್ಟುಡಿಯೋಸ್ ಈಗ ನಾಲ್ಕು ಸ್ಥಳಗಳಲ್ಲಿದೆ. ನಾವು ಭೇಟಿ ನೀಡಿದ್ದು ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತ್ಯದ ಲಾಸ್ ಏಂಜಲಿಸ್ ನಗರದಲ್ಲಿರುವ ಹಾಲಿವುಡ್ ಯೂನಿವರ್ಸಲ್ ಸ್ಟುಡಿಯೋಸ್‌ಗೆ. ಅನೇಕ ಮೂವಿ ಸ್ಟುಡಿಯೊಗಳು, ರೇಡಿಯೊ ಸ್ಟೇಶನ್‍ಗಳು, ಟಿ.ವಿ ಕೇಂದ್ರಗಳು, ಮ್ಯೂಸಿಕ್ ಕಂಪನಿಗಳು ಮುಂತಾದ ಮನರಂಜನಾ ಉದ್ಯಮಗಳಿಂದ ಕೂಡಿದ ‘ಹಾಲಿವುಡ್’ ಇರುವುದರಿಂದ ಲಾಸ್ ಏಂಜಲಿಸ್ ನಗರ ಜಗತ್ತಿನ ಮನರಂಜನಾ ರಾಜಧಾನಿ ಎಂದು ಖ್ಯಾತವಾಗಿದೆ. ಅಲ್ಲಿರುವ ಯೂನಿವರ್ಸಲ್ ಸ್ಟುಡಿಯೊ ತನ್ನನ್ನು ಲಾಸ್ ಏಂಜಲಿಸ್‍ನ ಮನರಂಜನಾ ರಾಜಧಾನಿ ಎಂದು ಕರೆದುಕೊಂಡಿದೆ!

ADVERTISEMENT

1912ರಲ್ಲಿ ಪ್ರಾರಂಭವಾಗಿ ಇಂದಿಗೂ ಕಾರ್ಯನಿರತವಾಗಿರುವ ಮೊಟ್ಟಮೊದಲ ಸಿನಿಮಾ ಸ್ಟುಡಿಯೊ ಇದು. ಉಳಿದ ಮೂರರಲ್ಲಿ ಒಂದು ಅಮೆರಿಕದ ಫ್ಲೋರಿಡಾ ಪ್ರಾಂತ್ಯದ ಓರ್ಲಾಂಡ್‍ನಲ್ಲಿ, ಇನ್ನೊಂದು ಜಪಾನ್ ದೇಶದಲ್ಲಿ ಹಾಗೂ ನಾಲ್ಕನೆಯದು ಸಿಂಗಪುರ್‌ದಲ್ಲಿ ಇವೆ. 1964ರಲ್ಲಿ ಇದಕ್ಕೆ ಮೊಟ್ಟ ಮೊದಲ ಥೀಂ ಪಾರ್ಕ್ ಅಥವಾ ಮನರಂಜನಾ ಕೇಂದ್ರವೂ ಸೇರಿ ಈಗ ಆಕರ್ಷಣೀಯ ಪ್ರವಾಸಿ ಕೇಂದ್ರವಾಗಿದೆ. ವಾರ್ಷಿಕ ಸುಮಾರು 10 ಲಕ್ಷ ಜನ ಭೇಟಿ ನೀಡುತ್ತಾರೆ. ಲಾಸ್ ಏಂಜಲಿಸ್ ನಗರದ ಎಲ್ಲ ಪ್ರಮುಖ ಕೇಂದ್ರಗಳಿಂದಲೂ ಇಲ್ಲಿಗೆ ತಲುಪಲು ಮೆಟ್ರೊ ರೈಲು ಹಾಗೂ ಬಸ್‍ಗಳ ಸೌಲಭ್ಯವಿದೆ.

ಇದು ಸುಮಾರು 415 ಎಕರೆ ಗುಡ್ಡದ ಪ್ರದೇಶದಲ್ಲಿ ಹರಡಿಕೊಂಡಿದೆ. ಹಾಗಾಗಿ ಗುಡ್ಡದ ಮೇಲ್ಭಾಗ ಕೆಳಭಾಗಗಳನ್ನು ‘ಅಪ್ಪರ್ ಲಾಟ್’ ಮತ್ತು ‘ಲೋಯರ್ ಲಾಟ್’ ಎಂದು ಕರೆಯುತ್ತಾರೆ. ‘ಅಪ್ಪರ್ ಲಾಟ್’ನಲ್ಲಿ ಟ್ರಾಮ್‌ನಲ್ಲಿ ಕುಳಿತು ಸ್ಟುಡಿಯೊ ಸೆಟ್‍ಗಳನ್ನು ವೀಕ್ಷಿಸುವ ಸುಮಾರು ಒಂದು ಗಂಟೆ ಅವಧಿಯ ‘ಸ್ಟುಡಿಯೊ ಟೂರ್’ ಇರುತ್ತದೆ. ವಿವಿಧ ಬೀದಿಗಳು, ಕಟ್ಟಡಗಳು ಅಲ್ಲದೆ, ಅಪಘಾತವಾಗಿ ಬಿದ್ದಿರುವ ವಿಮಾನ, ಇದ್ದಕ್ಕಿದ್ದಂತೆ ನಗರದಲ್ಲಿ ಸುನಾಮಿ ಪ್ರವಾಹ ನುಗ್ಗಿ ಬರುವ ದೃಶ್ಯ ಮುಂತಾದವುಗಳನ್ನು ಕಾಣಬಹುದು.

ರೋಚಕ ಅನುಭವದ ರೈಡ್‌

ಶೋಗಳು ಹಾಗೂ ರೈಡ್‍ಗಳು ಇಲ್ಲಿನ ಪ್ರಮುಖ ಆಕರ್ಷಣೆ. ‘ಶೋ’ ಅಥವಾ ಪ್ರದರ್ಶನಗಳೆಂದರೆ ಕಲಾವಿದರು ನಡೆಸಿಕೊಡುವ ಕಾರ್ಯಕ್ರಮಗಳನ್ನು ನಾವು ಕುಳಿತು ನೋಡುವುದು. ‘ರೈಡ್’ ಎಂದರೆ ನಾವು ಕುರ್ಚಿ ಅಥವಾ ವಾಹನದಲ್ಲಿ ಕುಳಿತು ಚಲಿಸುವ, ಅನುಭವಿಸುವ ಸವಾರಿಗಳು. ಹ್ಯಾರಿಪಾಟರ್ ಮಾಂತ್ರಿಕ ಲೋಕ ಯೂನಿವರ್ಸಲ್ ಸ್ಟುಡಿಯೊಗೆ ಇತ್ತೀಚೆಗೆ ಸೇರ್ಪಡೆಯಾಗಿರುವ ಹೊಸ ವಿಭಾಗ. ಇಲ್ಲಿ ರೈಡ್ ಅಥವಾ ಸವಾರಿಯಂತೂ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದೆ. ನಾವೇ ಸಿನಿಮಾದ ಪಾತ್ರವಾದಂತಹ ಅನುಭವ ನೀಡುತ್ತದೆ. ಮಾಂತ್ರಿಕ ಪೊರಕೆಯ ಮೇಲೆ ಕುಳಿತು ಹಾರಾಡುವ ರೋಚಕ ಅನುಭವವಂತೂ ಅದ್ಭುತ. ಕಟ್ಟಡಗಳೂ ಮಾಂತ್ರಿಕ ಲೋಕದ ಹಾಗೇ ಇದ್ದು ನಾವು ಸಿನಿಮಾದ ಒಳಗೇ ಓಡಾಡಿದ ಅನುಭವ ಉಂಟಾಗುತ್ತದೆ. ಇವು ನನ್ನ ಮೇಲೆ ಎಷ್ಟು ಪ್ರಭಾವ ಬೀರಿತು ಎಂದರೆ ಹ್ಯಾರಿಪಾಟರ್ ಸರಣಿಯ ಎಂಟು ಸಿನಿಮಾಗಳನ್ನೂ ಮತ್ತೆ ನೋಡಿದೆ! ಹ್ಯಾರಿಪಾಟರ್ ಮಾಂತ್ರಿಕ ಲೋಕದ ವಸ್ತುಗಳನ್ನು ಮಾರುವ ಅಂಗಡಿಗಳು ಕೂಡಾ ಇವೆ.

ಜುರಾಸಿಕ್ ಪಾರ್ಕ್‌ನ ಡೈನೋಸಾರ್‌ಗಳ ನಡುವೆ ಪಯಣದ ಸವಾರಿ ಕೂಡ ಅಷ್ಟೇ ರೋಚಕ. ರೋಲರ್ ಕೋಸ್ಟರ್ ನಿಧಾನವಾಗಿ ಹೋಗುತ್ತಾ ಇದ್ದಕ್ಕಿದ್ದಂತೆ ವೇಗವಾಗಿ ಏರುವುದು, ಇಳಿಯುವುದು, ನಡುನಡುವೆ ಬೇರೆ ಬೇರೆ ಡೈನೋಸಾರ್‌ಗಳು ನಮ್ಮ ಸಮೀಪಕ್ಕೇ ಬಂದು ಗಾಬರಿ ಹುಟ್ಟಿಸುವುದು, ನೀರೆರಚು
ವುದು, ಅಬ್ಬಾ... ಅದ್ಭುತ! ಹತ್ತು ಹದಿನೈದು ನಿಮಿಷಗಳ ಸವಾರಿ
ಗಾಗಿ ಒಂದೂವರೆ ಎರಡು ಗಂಟೆ ಸರತಿ ಸಾಲಿನಲ್ಲಿ ಕಾದಿದ್ದೂ ಸಾರ್ಥಕವಾಯಿತೆಂಬ ಭಾವ. ಹಾಗೆಯೇ ‘ದಿ ಮಮ್ಮಿ’ ಸಿನಿಮಾದ ಸವಾರಿ ಕೂಡ ಭಯಂಕರವೇ. ಕತ್ತಲಲ್ಲೇ ಅತ್ಯಂತ ವೇಗದಿಂದ ಸಾಗುವ ಈ ರೈಡ್ ಮಾಡಲು ಹೃದಯ ಗಟ್ಟಿ ಇರಬೇಕು!

ವೈವಿಧ್ಯಮಯ ಪ್ರದರ್ಶನಗಳು

ಸವಾರಿ, ಶೋಗಳಲ್ಲಿ ಪ್ರಧಾನ ಆಕರ್ಷಣೆಯೆಂದರೆ ‘ಅನಿಮಲ್ ಆಕ್ಟರ್ಸ್ ಶೋ’. ಸಿನಿಮಾದಲ್ಲಿ ನಟಿಸುವ ಅನೇಕ ಪ್ರಾಣಿ, ಪಕ್ಷಿಗಳು ಅವುಗಳ ತರಬೇತುದಾರರು ಹೇಳಿದಂತೆ ನಟಿಸುತ್ತವೆ. ಮಕ್ಕಳ ಆಕ
ರ್ಷಣೆಯ ‘ಡಿಸ್ಪಿಕಬಲ್ ಮೀ’ ಸಿನಿಮಾದ ಮಿನಿಯನ್‍ಗಳ ಶೋ ದೊಡ್ಡವರನ್ನೂ ಕೂಡ ರಂಜಿಸುತ್ತದೆ. ‘ಸ್ಪೆಷಲ್ ಎಫೆಕ್ಟ್ಸ್’ ಹೇಗೆ ಮಾಡುತ್ತಾರೆಂದು ತೋರಿಸುವ ಶೋ ಕೂಡಾ ಇದೆ. ಹಾಗೆಯೇ ಕೇಡಿಗಳ ಡೆನ್ ಸೆಟ್‍ನಲ್ಲಿ ಹೊಡೆದಾಟ–ಬಡಿದಾಟ, ಗುಂಡಿನ ಕಾಳಗ, ಬೆಂಕಿ-ನೀರಿನ ಸಾಹಸಗಳ ಸ್ಟಂಟ್ ಶೋ ಕೂಡಾ ಇದೆ.

ನಾವು ವರ್ಷಾಂತ್ಯ ರಜಾಕಾಲದಲ್ಲಿ ಭೇಟಿ ನೀಡಿದ್ದರಿಂದ ಜನಸಂದಣಿ ಹೆಚ್ಚಾಗಿತ್ತು. ಎಲ್ಲಾ ರೈಡ್‍ಗಳು ಹಾಗೂ ಶೋಗಳಿಗೆ ಒಂದು, ಎರಡು, ಮೂರು ಗಂಟೆಗಳವರೆಗೂ ಸರತಿ ಸಾಲಿನಲ್ಲಿ ಕಾಯಬೇಕಾಗಿತ್ತು. ಎಷ್ಟು ನಿಮಿಷಗಳು ಕಾಯಬೇಕು ಎಂಬುದು ಮೊಬೈಲ್ ಆಪ್‍ನಲ್ಲಿ ಹಾಗೂ ಅಲ್ಲಲ್ಲಿ ಇರುವ ಫಲಕಗಳಲ್ಲಿ ತೋರಿಸುತ್ತಿತ್ತು.

ಅಚ್ಚರಿಯೆಂದರೆ ಯಾವ ಸರತಿ ಸಾಲುಗಳಲ್ಲೂ ನೂಕು ನುಗ್ಗಲು, ಗದ್ದಲಗಳಿರಲಿಲ್ಲ! ಎಲ್ಲರೂ ಸಮಾಧಾನವಾಗಿ ಸರತಿಯಲ್ಲಿ ನಿಂತು ತಮ್ಮ ಸಮಯಕ್ಕಾಗಿ ಕಾಯುತ್ತಿದ್ದರು. ಒಂದು ಇಡೀ ದಿನ ಹಬ್ಬದ ಸಂಭ್ರಮದ ವಾತಾವರಣದಲ್ಲಿ ಹಾಲಿವುಡ್ ಸಿನಿಮಾ ಲೋಕದಲ್ಲಿ ವಿಹರಿಸಿದ ಅನುಭವ ಮರೆಯಲಾಗದಂಥಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.