ADVERTISEMENT

ಅಂಕಗಳಿಂದ ಅಂಕದವರೆಗೆ

ಎಸ್.ರಶ್ಮಿ
Published 29 ಮೇ 2012, 19:30 IST
Last Updated 29 ಮೇ 2012, 19:30 IST

`ಆದದ್ದೆಲ್ಲ ಒಳಿತೇ ಆಯಿತು ಅಂತಾರಲ್ಲ, ಹಂಗೈತಿ ನನ್ನ ಜೀವನ~ ಎನ್ನುವ ಮಾಧುರಿ ಶಿವಣಗಿ ಓದಿದ್ದು ಬಿಕಾಂ, ಎಂಕಾಂ. ಥ್ರೋಬಾಲ್‌ನಲ್ಲಿ ರಾಜ್ಯ ಮಟ್ಟದ ಕ್ರೀಡಾಪಟು. ಡಿಸ್ಕಸ್ ಥ್ರೋ, ಶಾಟ್‌ಪಟ್‌ಗಳಲ್ಲಿಯೂ ದಾಖಲೆ ಬರೆದಾಕೆ. ಆದರೆ ಈಗ ಇರುವುದು ಮನರಂಜನಾ ಕ್ಷೇತ್ರದಲ್ಲಿ.

ಕೆಲಸ ಹುಡುಕಿಕೊಂಡಿದ್ದು ರಂಗಭೂಮಿಯಲ್ಲಿ. ಸಾಮರ್ಥ್ಯ ಪಳಗಿಸಿಕೊಂಡದ್ದು ಜಾಹೀರಾತು ನಿರ್ಮಾಣ ಪ್ರಪಂಚದಲ್ಲಿ. ಹೀಗೆ ಬಗೆಬಗೆಯ ಕ್ಷೇತ್ರಗಳಲ್ಲಿ ತಮ್ಮದೊಂದು ಗುರುತು ಮೂಡಿಸಿದವರು ಮಾಧುರಿ.

ಇವರು ಮೂಲತಃ ವಿಜಾಪುರದವರು. ಓದಿದ್ದು ಬೆಂಗಳೂರಿನ ರಾಜಾಜಿನಗರದ ವಿದ್ಯಾವರ್ಧಕ ಸಂಘದ ಶಾಲೆಯಲ್ಲಿ. ಪದವಿ ಮುಗಿಸಿದ್ದು ಸಹ ಇದೇ ಸಂಸ್ಥೆಯ ಕಾಲೇಜಿನಲ್ಲಿ.

ಮೂವರು ಅಕ್ಕಂದಿರು, ಸಹೋದರರಿರುವ ತುಂಬು ಕುಟುಂಬ. ಇವರೇ ಕೊನೆಯ ಕೂಸು. ಅಕ್ಕರೆಯ ಕೂಸು. ಎಲ್ಲರೂ ಹೆಚ್ಚಿನ ಓದಿನ ಹಾದಿ ಹಿಡಿದಿದ್ದಾಗ ಇವರು ಮಾತ್ರ ಬಿ.ಕಾಂ ಮಾಡುತ್ತಿದ್ದರು. ಅಪ್ಪನಿಗೆ ಅಸಮಾಧಾನ.

ಆದರೆ ಪದವಿ ಮಾಡುವಾಗಲೇ ಸಾಂಸ್ಕೃತಿಕ ನಂಟು ಬೆಳೆಯಿತು. ದೂರದರ್ಶನಕ್ಕೆ ಪುಟ್ಟಣ್ಣ ಕಣಗಾಲ್ ಮಗ ರಾಮು ಕಣಗಾಲ್ ಅವರು `ವಾಲ್ಮೀಕಿ~ ಎಂಬ ಕಿರುಚಿತ್ರ ನಿರ್ಮಾಣ ಮಾಡುತ್ತಿದ್ದರು. ಅದಕ್ಕೆ ಕಲಾವಿದೆಯರನ್ನು ಒಟ್ಟುಗೂಡಿಸಿ, ಶೂಟಿಂಗ್‌ಗೆ ಕರೆದೊಯ್ಯುವುದು, ಕೆಲಸದ ಸ್ವರೂಪ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಇವರದ್ದಾಗಿತ್ತು. ಕಿರುತೆರೆ ಲೋಕದಲ್ಲಿ  ಸಿಕ್ಕ ಮೊದಲ ಅನುಭವ ಅದು.

ಪದವಿ ಮುಗಿದ ತಕ್ಷಣ ಅಕೌಂಟೆಂಟ್ ಕೆಲಸವೂ ಸಿಕ್ಕಿತ್ತು. ಆದರೆ ಅಪ್ಪನಿಗೆ ಮಾಧುರಿ ಉನ್ನತ ಅಧ್ಯಯನದೆಡೆಗೆ ಗಮನಹರಿಸುತ್ತಿಲ್ಲವಲ್ಲ ಎಂಬ ಆತಂಕ, ಅಸಮಾಧಾನ.
ಎಂ.ಕಾಂ ಮಾಡುವ ಮನಸ್ಸಾಯಿತು. ಕರ್ನಾಟಕ ವಿಶ್ವವಿದ್ಯಾಲಯದ ಸೆಳೆತವೇ ಹಾಗಿತ್ತು. ಮನೆಯಲ್ಲಿ ಎಲ್ಲರೂ ಈ ವಿ.ವಿ.ಯಿಂದಲೇ ಓದಿ ಬಂದವರು. ಅಜ್ಜ ಸಹ ಇಲ್ಲಿ ಸಂಸ್ಕೃತ ವಿದ್ವಾಂಸರಾಗಿದ್ದವರು. ಅಲ್ಲೇನೂ ಮಾಡಲಿಲ್ಲವಲ್ಲ ಎಂಬ ಹಳಹಳಿಕೆಯಿಂದ ಹೊರಬರಲು ಎಂ.ಕಾಂ ಪ್ರವೇಶ ಪಡೆಯುವುದು ಕಾರಣವಾಯಿತು.

ಅಂತಿಮ ವರ್ಷದಲ್ಲಿದ್ದಾಗ ಕೆಲಸ ಬಿಟ್ಟರು. ಪರೀಕ್ಷೆ ಆಯಿತು. ನಂತರ ಅವಕಾಶ ತೆರೆದುಕೊಂಡಿದ್ದು ರಂಗಭೂಮಿಯಲ್ಲಿ.`ರಂಗಾಯಣದಲ್ಲಿ ತರಬೇತಿ ಪಡೆದೆ. ಮನೆಯಲ್ಲೆಲ್ಲ ಸಂಪೂರ್ಣ ಬೆಂಬಲ ಸಿಗಲಿಲ್ಲ. ಹಾಗಂತ ಉತ್ಸಾಹಕ್ಕೆ ತಣ್ಣೀರನ್ನೂ ಎರಚಲಿಲ್ಲ. ವಿಜಾಪುರದ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದ ಹುಡುಗಿಯರು ಉನ್ನತ ಅಧ್ಯಯನದಲ್ಲಿ ತೊಡಗುವುದು ಬಿಟ್ಟರೆ ಉಳಿದುದೆಲ್ಲವೂ ಸಾಹಸ ಎಂಬಂಥ ವಾತಾವರಣ ಅಲ್ಲಿಯದು. ನಂತರ ಕನ್ನಡದ ಮೊದಲ ನಟಿ

ಪದ್ಮಾದೇವಿ ಅವರ ಮಗ ನಂದಕಿಶೋರ್ ಅವರ ಎಂಟರ್‌ಟೇನರ್ಸ್‌ ಇಂಡಿಯಾದಲ್ಲಿ ಪ್ರೊಡಕ್ಷನ್ ಎಕ್ಸಿಕ್ಯುಟಿವ್ ಆಗಿ 1994-99ರವರೆಗೆ ಕೈಜೋಡಿಸಿದೆ. ಆಗ ಟಿ.ವಿ. ವಾಹಿನಿಗಳು ಹೀಗೆ ಬೆಳೆದಿರಲಿಲ್ಲ. ನಿರ್ಮಾಪಕರ ಪಾತ್ರದಲ್ಲಿ ಮಹಿಳೆಯನ್ನು ನೋಡುವುದು ಸುಲಭದ ಮಾತಾಗಿರಲಿಲ್ಲ. ಆದರೂ ಲಿಂಗ ತಾರತಮ್ಯ ಬರದಂತೆ ಎಚ್ಚರವಹಿಸಿದೆ.

ಬಹುಶಃ ಇದೊಂದು ಕಲೆ. ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ತಮ್ಮ ಹುದ್ದೆ ಮತ್ತು ಕಾರ್ಯವೈಖರಿಯ ಮೂಲಕ ಗುರುತಿಸಿಕೊಂಡರೆ ಹೆಣ್ಣು ಎಂದು ಹೀಗಳೆಯುವ ದೃಷ್ಟಿಯನ್ನು ಎದುರಿಸುವ ಸಂದರ್ಭಗಳೇ ಬರುವುದಿಲ್ಲ. ಉಳಿದಂತೆ ಕೆಲ ಪುರುಷರ ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬಂತೆ ಸುಮ್ಮನಿರುತ್ತಿದ್ದೆ. ಭಿನ್ನಾಭಿಪ್ರಾಯ, ಸಣ್ಣಪುಟ್ಟ ಅಸಮಾಧಾನಗಳು ಇದ್ದೇ ಇರುತ್ತಿದ್ದವು.

ಯಾವಾಗ ಯಾವುದಕ್ಕೂ ಸಮರ್ಥನೆಗಳಿರುತ್ತಿರಲಿಲ್ಲವೋ... ತಮ್ಮ ಸೋಲನ್ನು ಒಪ್ಪಿಕೊಳ್ಳುವ ಸಂದರ್ಭದಲ್ಲಿ `ಏನು ಬಿಡ್ರಿ ಹೆಣ್ಮಕ್ಕಳ ಜೊತೆಗೆ~ ಎಂದು ಸುಮ್ಮನಾಗುತ್ತಿದ್ದರು. ಇಂಥ ಧೋರಣೆಗೆ ಮೊದಲು ಆಕ್ರೋಶ ಹುಟ್ಟುತ್ತಿತ್ತು. ನಂತರ ಅನುಕಂಪ. ಈಗ  ನಕ್ಕು ಸುಮ್ಮನಾಗುತ್ತೇನೆ. ಇಲ್ಲಿ ಉದಾಸೀನ, ವ್ಯಂಗ್ಯ, ಹಾಸ್ಯ ಎಲ್ಲವೂ ಸಮ್ಮಿಳಿತವಾಗಿರುತ್ತದೆ.`ಎಲ್ಲರಂತಲ್ಲ ನಮ್ಮ ರಾಜಿ~ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗೆ

ಎಕ್ಸಿಕ್ಯುಟಿವ್ ಪ್ರೊಡ್ಯುಸರ್ ಆಗಿ ಕಾರ್ಯ ನಿರ್ವಹಿಸಿದೆ. ಆರ್ಕೆ ಗುಲಾಬ್ ಜಾಮೂನ್, ಕೆಎಸ್‌ಐಸಿ ಸೀರೆ, ಕೆಪಿಸಿಎಲ್‌ಗೆ ಜಾಹೀರಾತು ನಿರ್ದೇಶನ ಮಾಡಿದೆ.ಕಾರ್ಪೋರೆಟ್ ಚಿತ್ರಗಳಿಗೆ ಸಹನಿರ್ದೇಶಕಳಾಗಿ ಕೆಲಸ ಮಾಡಿದೆ. ಡಾಕು ಡ್ರಾಮಾಗಳನ್ನು ನಿರ್ದೇಶಿಸಿದೆ.  ಹಲವಾರು ಡಾಕ್ಯುಮೆಂಟ್ರಿಗಳನ್ನು ನಿರ್ದೇಶಿಸಿದೆ. ನಿರ್ಮಾಣದಿಂದ ನಿರ್ದೇಶನದತ್ತ ಚಿತ್ತ ಹರಿದಿದ್ದೇ ಗೊತ್ತಾಗಲಿಲ್ಲ.

ಹೆಣ್ಣುಮಕ್ಕಳು ನಾಟಕದಾಗ ಮಾಡೂದು? ಅಂತ ಹುಬ್ಬೇರಿಸಿದವರೆಲ್ಲ, ನಮ್ಮ ಮಾಧುರಿ... ಅಂತ ಮಾತನಾಡುವ ಹಾಗಾಗಿದ್ದಾರೆ. ಆದರೆ ಈ ಯಾನ 90ರ ದಶಕದಿಂದಲೇ ಆರಂಭವಾಗಿತ್ತು. ಯಾರ ಅವಹೇಳನ, ಅಪಮಾನ, ಕೆಲವೊಮ್ಮೆ ಅನುಮಾನಗಳಿಂದಲೂ ಕುಗ್ಗದೇ ಮುಂದುವರಿದಿರುವುದೇ ಇದಕ್ಕೆ ಕಾರಣ. ಈ ನಿಟ್ಟಿನಲ್ಲಿ ನನ್ನ ಕುಟುಂಬ ಯಾವತ್ತಿಗೂ ನನ್ನ ಬೆಂಬಲಕ್ಕಿದೆ. ಟಿ.ಎನ್.ಸೀತಾರಾಮ್, ನಾಗೇಂದ್ರ ಶಾ ಅವರನ್ನು ಸ್ಮರಿಸದೇ ಇರಲಾಗದು.

ಮೊದಲು ಸಂಘಟನಾ ಶಕ್ತಿಯಿಂದ ಈ ವೃತ್ತಿಗಿಳಿದಿದ್ದು. ನಂತರ ತರಬೇತಿಗಳಿಂದ ಸೃಜನಶೀಲ ಶಕ್ತಿಯೂ ಹೊರ ಬಂತು. ಈಗ ಅಪ್ಪನಿಗೆ ಖುಷಿಯಾಗುತ್ತದೆ. ಎಲ್ಲರಂತೆ ಓದಲಿಲ್ಲ ಎಂಬ ಕೊರಗು, ಎಲ್ಲರಂತಲ್ಲ ಎಂಬ ಅಭಿಮಾನದಲ್ಲಿ ಬದಲಾಗಿದೆ. 

ಮಾಧುರಿ ನಿರ್ದೇಶನ, ನಟನೆ ಬರಹ
ಮಾಧುರಿ ಶಿವಣಗಿ ಕೆಲವು ಧಾರಾವಾಹಿಗಳ ಸಂಚಿಕೆ ನಿರ್ದೇಶಕಿಯಾಗಿಯೂ ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ.ಕಪಿನಿಪತಿ-26 ಸಂಚಿಕೆಗಳು, ನಿರಂತರ-200 ಸಂಚಿಕೆ, ಮತ್ತೆ ಬರುವನು ಚಂದಿರ -200 ಸಂಚಿಕೆಗಳನ್ನು ನಿರ್ದೇಶಿಸಿದ್ದಾರೆ. 

ಇಷ್ಟಲ್ಲದೇ ಎಚ್‌ಆರ್‌ಎಂ ಮ್ಯಾನೆಜ್ಮೆಂಟ್ ಕನ್ಸಲ್ಟನ್ಸಿಗಾಗಿ ಫಿಲ್ಮ್‌ಗಳನ್ನು ಮಾಡಿದ್ದಾರೆ.
ಪಾ.ಪ. ಪಾಂಡು, ಸಿಲ್ಲಿ ಲಲ್ಲಿ, ಯದ್ವಾ-ತದ್ವಾ, ಕಪಿನಿಪತಿ, ವೆಂಕಟರಮಣ ಗೋವಿಂದ, ಗೋಧೂಳಿ, ಮಿಂಚು, ಮುಕ್ತ, ಬದುಕು, ಉತ್ಸವ, ಮುಕ್ತ ಮುಕ್ತ, ನಮ್ಮಮ್ಮ ಶಾರದೆ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಬದುಕು ಧಾರಾವಾಹಿಗಾಗಿ 100 ಸಂಚಿಕೆಗಳನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.ಕನ್ನಡ, ಹಿಂದಿ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಬಲ್ಲವರಾಗಿದ್ದಾರೆ ಮಾಧುರಿ.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.