ದಿನಕ್ಕೊಮ್ಮೆ ನಕ್ಕರೆ ಹೃದಯಾಘಾತ ದೂರವಿರುತ್ತದಂತೆ. ಹಾಗೆಂದು ಹೃದಯ ತಜ್ಞರು ಹೇಳುತ್ತಾರೆ. ಬೆಂಗಳೂರಿನ ಅಪೊಲೊ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞರಾದ ಡಾ. ಸತ್ಯಾಕಿ ನಂಬಾಲ ಹೇಳುವ ಪ್ರಕಾರ, ಮನಸು ಬಿಚ್ಚಿ ನಗುವುದರಿಂದ ಏರೊಬಿಕ್ ಮಾಡಿದಷ್ಟೇ ಹೃದಯ ರಕ್ತನಾಳಗಳಿಗೆ ಚಟುವಟಿಕೆ ದೊರೆಯುತ್ತದೆ.
ಆದ್ದರಿಂದ ಆಗಾಗ್ಗ ನಗುತ್ತಿರಬೇಕು. ಇದರಿಂದ ರಕ್ತನಾಳಗಳ ಒಳಭಾಗ (ಎಂಡೋಥೀಲಿಯಂ) ಮೇಲೆ ಪರಿಣಾಮ ಉಂಟಾಗಿ ಅವು ವಿಶ್ರಾಂತಿ ಪಡೆಯಲು, ಹಿಗ್ಗಲು ಸಹಾಯವಾಗುತ್ತದೆ. ನಗು ಹೃದಯ ಮತ್ತು ಮೆದುಳಿಗೆ ಆಮ್ಲಜನಕದ ಹರಿವನ್ನು ಹೆಚ್ಚಿಸುತ್ತದೆ. ಈ ಎರಡೂ ಅಂಗಗಳಿಗೆ ನಿರಂತರ ಆಮ್ಲಜನಕದ ಪೂರೈಕೆಯ ಅಗತ್ಯವಿರುತ್ತದೆ. ನಗು ನೋವನ್ನು ಕಡಿಮೆ ಮಾಡುತ್ತದೆ ಹಾಗೂ ಜನರನ್ನು ಭಾವನಾತ್ಮಕವಾಗಿ ಜೋಡಿಸುತ್ತದೆ.
ಈ ಹಿನ್ನೆಲೆಯಲ್ಲಿ ವಿಶ್ವ ಹೃದಯ ದಿನದಂದು ಅಪೊಲೊ ಆಸ್ಪತ್ರೆ ವಿಶ್ವಖ್ಯಾತ ಹಾಸ್ಯಗಾರ ಡಾನ್ ನೈನನ್ ಅವರಿಂದ ಹಾಸ್ಯ ಕಾರ್ಯಕ್ರಮ ಏರ್ಪಡಿಸಿತ್ತು. ಕಾರ್ಯಕ್ರಮದ ಉದ್ದಕ್ಕೂ ನಗೆಯ ಸ್ಫೋಟ, ಸಭಾಂಗಣದಲ್ಲಿ ಪ್ರೇಕ್ಷಕರ ನಗೆಯ ಅಲೆ.
ಡಾನ್ ನೈನನ್ ಅವರಿಗಿಂತ ಮೊದಲು ಹಾಸ್ಯ ಪ್ರವೀಣ ಸಂಜಯ್ ಮಾನಕ್‌ತಾಲ ಅವರು ಕಾರ‌್ಯಕ್ರಮ ನೀಡಿದರು. ಜಾಹೀರಾತುಗಳಿಂದ ಆರಂಭಿಸಿ ಜಾವಾ ಪ್ರೋಗ್ರಾಮಿಂಗ್‌ವರೆಗೆ ಅದರಲ್ಲಿ ಇರುವ ಹಾಸ್ಯರಸ ಉಣಿಸಿದರು.
ಜಾಣ ಆಹಾರ:
ವಿಶ್ವ ಹೃದಯ ದಿನದ ಅಂಗವಾಗಿ ಅಪೊಲೊ ಆಸ್ಪತ್ರೆ ಎಲೆಕ್ಟ್ರಾನಿಕ್ ಸಿಟಿಯ ಸ್ವೆನ್ಸ್‌ಕಾ ಹೋಟೆಲ್ ಜತೆಗೂಡಿ ಹೃದಯಕ್ಕೆ ಹಿತವಾದ, ರುಚಿಕರವಾದ ಆಹಾರ ಸಿದ್ಧಪಡಿಸುವುದು ಹೇಗೆ ಎಂಬ ಕುರಿತು ಪ್ರಾತ್ಯಕ್ಷಿಕೆ ಏರ್ಪಡಿಸಿತ್ತು.
ಈ ಸಂದರ್ಭದಲ್ಲಿ ಡಾ. ಸತ್ಯಾಕಿ ನಂಬಾಲ, ಕಡಿಮೆ ಕೊಲೆಸ್ಟ್ರಾಲ್ ಆಹಾರ ಕ್ರಮವನ್ನು ನೀವು ಅನುಸರಿಸುತ್ತಿದ್ದೀರಿ ಎಂದ ಮಾತ್ರಕ್ಕೆ ಕಾರ್ಡ್‌ಬೋರ್ಡ್ ತಿನ್ನಬೇಕು ಎಂಬ ಅರ್ಥವಲ್ಲ. ಕೊಲೆಸ್ಟ್ರಾಲ್ ಮತ್ತು ಕೊಬ್ಬು ಹೆಚ್ಚಿಸದ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದಲ್ಲಿ ಹೃದಯದ ಆರೋಗ್ಯ ಹೆಚ್ಚುತ್ತದೆ.
ಅವಸರದ ಈ ಬದುಕಿನಲ್ಲಿ ಆರೋಗ್ಯಕರ ಭೋಜನ ತಯಾರಿಸುವುದಕ್ಕೆ ಕಷ್ಟವಾಗಬಹುದು. ಆದರೆ, ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಅನೇಕ ತಿಂಡಿ, ತಿನಿಸು ಇವೆ. ದೃಢಕಾಯರಾಗಿರಲು ಆರೋಗ್ಯಕರ ಆಯ್ಕೆಗಳನ್ನು ಮಾಡುವುದು ಅತ್ಯಗತ್ಯ ಎಂದರು.
ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡ 150ಕ್ಕೂ ಹೆಚ್ಚು ಜನರಿಗೆ ಪರಿಣಿತ ಷೆಫ್‌ಗಳು ಆರೋಗ್ಯಕರ ತಿನಿಸು ತಯಾರಿಕೆಯ ಗುಟ್ಟು ತೋರಿಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.