ADVERTISEMENT

ಅಜ್ಜಿ ನೆನಪಿನ ಗಂಧರ್ವ ಗೀತೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2012, 19:30 IST
Last Updated 25 ಜೂನ್ 2012, 19:30 IST

“ಸರಿ ಸುಮಾರು 70 ವರ್ಷಗಳ ಹಿಂದೆ. ಸರಿಯಾಗಿ 1943. ಆಗ ನನಗೆ 12 ವರುಷ ಇದ್ದಿರಬಹುದು. ಆಡಿಟರ್ ಆಗಿದ್ದ ಅಪ್ಪನ ಕೆಲಸದ ಕಾರಣದಿಂದಾಗಿ ಕಲ್ಕತ್ತಾದಲ್ಲಿದ್ದೆವು. `ಅವರು~ ನಮ್ಮ ಮನೆಗೆ ಬಂದಿದ್ದರು. ಆಗಲೇ ಮೊದಲ ಸಲ `ಅವರ~ನ್ನು ನೋಡಿದ್ದು.

ಅವರಿಗೂ ಆಗ 19 ವರ್ಷ ಇದ್ದಿರಬಹುದು. ಮುಂಬೈನಲ್ಲಿ ಇರುತ್ತಿದ್ದ `ಅವರು~ ಸಂಗೀತ ಸಮಾರೋಹದಲ್ಲಿ ಭಾಗವಹಿಸುವುದಕ್ಕಾಗಿ ಕಲ್ಕತ್ತಾಕ್ಕೆ ಬಂದಿದ್ದರು. ಸಂಗೀತದಲ್ಲಿ ವಿಶೇಷ ಆಸಕ್ತಿ ಇದ್ದ ನನ್ನಣ್ಣ ಮನೋಹರ ಶ್ರೀಖಂಡೆ ಅವರನ್ನ ಮನೆಗೆ ಕರೆದುಕೊಂಡು ಬಂದಿದ್ದರು.
 
ಆಗ ಅವರ ಮದುವೆಯಿನ್ನೂ ಆಗಿರಲಿಲ್ಲ. ಏಳನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸಂಗೀತ ಸಮಾರೋಹಗಳಲ್ಲಿ ಹಾಡಲು ಆರಂಭಿಸಿದ `ಶಿವಪುತ್ರ ಕೋಮಕಾಳಿ~ ಅಷ್ಟೊತ್ತಿಗಾಗಲೇ ಕುಮಾರ ಗಂಧರ್ವ ಆಗಿದ್ದರು. ನಾನು ಕಾಲು ಮುಟ್ಟಿ ನಮಸ್ಕರಿಸಿದ್ದೆ.

ನಾನು ಸಂಗೀತ ಕಲಿಯುತ್ತಿದ್ದೇನೆ ಅಂತ ತಿಳಿದು `ಹಾಡು~ ಅಂತ ಹೇಳಿ ಹಾಡಿಸಿದ್ದರು. ಅನಿರೀಕ್ಷಿತವಾಗಿ ಹಾಡುವ ಸಂದರ್ಭ ಬಂದದ್ದರಿಂದ ಅರೆಕ್ಷಣ ಗಾಬರಿ-ಗೊಂದಲ ಆಯಿತು. ಸಾವರಿಸಿಕೊಂಡು ಸ್ವರ ಹಚ್ಚಿದೆ. ಏನು ಹಾಡಿದೆನೋ ದೇವರಿಗೇ ಗೊತ್ತು.

ಹಾಡು ಮುಗಿದ ಮೇಲೆ ಧೈರ್ಯ ಮಾಡಿ `ನಿಮ್ಮ ಬಳಿ ಸಂಗೀತ ಕಲಿಯಬೇಕು ಅಂತ ಆಸೆ. ಕಲಿಸುತ್ತೀರಾ?~ ಎಂದು ಕೇಳಿಯೇ ಬಿಟ್ಟೆ. ಅದಕ್ಕವರು `ಬಾಂಬೆಯಿಂದ ಕಲ್ಕತ್ತಾ ಭಾಳ ದೂರ. ಕಲಿಬೇಕಂದ್ರ ಬಾಂಬೆಗೆ ಬಾ~ ಅಂದಿದ್ರು”.

ಹೀಗೆ 81ರ ಹರಯದ ವಸುಂಧರಾ ಕೋಮಕಾಳಿ ಅವರು ತಮ್ಮ ಪತಿ, ಖ್ಯಾತ ಗಾಯಕರಾದ್ದ ಕುಮಾರ ಗಂಧರ್ವ ಅವರನ್ನು ಮೊದಲ ಸಲ ಭೇಟಿಯಾದ ದಿನಗಳನ್ನು ನೆನಪಿಸಿಕೊಂಡರು.

ಇತ್ತೀಚೆಗೆ `ಸುರ್‌ಸಾಗರ್~ ಸಂಸ್ಥೆ ಏರ್ಪಡಿಸಿದ್ದ ಸಂಗೀತ ಕಛೇರಿಯಲ್ಲಿ ಭಾಗವಹಿಸುವುದಕ್ಕಾಗಿ ನಗರಕ್ಕೆ ಆಗಮಿಸಿದ್ದ ವಸುಂಧರಾ, ಬನಶಂಕರಿ ಎರಡನೇ ಹಂತದಲ್ಲಿ ಇರುವ ಕಾಮತ್ ಅವರ ಮನೆಯಲ್ಲಿ ಉಳಿದುಕೊಂಡಿದ್ದರು.
 
ಬೆಳಗಿನ ಕಾಫಿ ಹೀರುತ್ತ ಮಾತು ಆರಂಭಿಸಿದ ವಸುಂಧರಾ ತಾಯಿ ಅವರು `ಕುಮಾರ್ ಗಂಧರ್ವ~ರ ಜೊತೆಗಿನ ಮೊದಲ ಭೇಟಿಯಿಂದ ಆರಂಭಿಸಿ ಶಿಷ್ಯೆಯಾಗಿ, ಪತ್ನಿಯಾಗಿ ಹೆಜ್ಜೆ ಹಾಕಿದ ದಿನಗಳನ್ನು ಮೆಲುಕು ಹಾಕಿದರು. “ಪತ್ನಿಯಾಗಿ 30 ವರ್ಷ ಗಂಧರ್ವರಿಗೆ ಸಾಥ್ ನೀಡುವ ಅವಕಾಶ ಒದಗಿ ಬಂದದ್ದು ನನ್ನ ಪುಣ್ಯ.
 
ಕೇವಲ ಹೆಂಡತಿಯಾಗಿ ಮಾತ್ರವಲ್ಲ, ಸಂಗೀತದಲ್ಲಿಯೂ ಅವರಿಗೆ ಸಾಥ್ ನೀಡಬೇಕಿತ್ತು. ಅದು ಸುಲಭದ ಕೆಲಸವೇನಾಗಿರಲಿಲ್ಲ. ನನಗೆ ಅವರ ಹಾಡು- ಮಾತು- ನಗು- ಸಂಭ್ರಮ ಏನೇನೆಲ್ಲ ನೆನಪಾಗುತ್ತದೆ. ಅದು ನೆನಪಲ್ಲ ಈಗಲೂ ಅವರು ನನ್ನ ಜೊತೆಗಿದ್ದಾರೆ. ಅವರನ್ನು ಮನೆಗೆ ಕರಕೊಂಡು ಬಂದಿದ್ದ ಮನೋಹರ ಕೂಡ `ಶಾಂತ~ ಆಗಿದ್ದಾನೆ” ಎಂದು ಒಂದರೆ ಗಳಿಗೆ ಮೌನವಾದರು.

(ಕುಮಾರ್ ಗಂಧರ್ವ-ಭಾನುಮತಿ ಕಂಸ ಅವರ ಮದುವೆ ನಡೆದದ್ದು 1947ರಲ್ಲಿ. ಅದಾದ ಮರುವರ್ಷವೇ ಕಲ್ಕತ್ತಾ ಸಂಗೀತ ಸಮ್ಮೇಳನದಲ್ಲಿ ಹಾಡಿದ ನಂತರ ವೇದಿಕೆಯಲ್ಲಿಯೇ ಕುಸಿದು ಬಿದ್ದರು. ಬಾಂಬೆಗೆ ಮರಳಿ ಬಂದ ನಂತರ ಪರೀಕ್ಷೆ ನಡೆಸಿದ ವೈದ್ಯರು `ಎಡಪುಪ್ಪಸ ಆಕುಂಚಿತಗೊಂಡು ನಿಷ್ಕ್ರಿಯವಾಗಿದೆ. ಇನ್ನು ಮುಂದೆ ಹಾಡುವಂತಿಲ್ಲ~ ಎಂದು ಹೇಳಿದಾಗ ಆಕಾಶವೇ ಕುಸಿದು ಬಿದ್ದಂತಾಗಿತ್ತು.
 
ಗಂಧರ್ವ ಅವರನ್ನು ಪರೀಕ್ಷಿಸಿದ ವೈದ್ಯ ಸಾಠೆ ಅವರು `ನೀವು ಇಲ್ಲಿರಬೇಡಿ ಕ್ಷಯ ಇರುವವರಿಗೆ ಮುಂಬೈ ಘಾತುಕವಾದದ್ದು~ ಎಂದು ಸಲಹೆ ನೀಡಿದ್ದರಿಂದ ಇಂದೋರ್ ಸಮೀಪದ ದೇವಾಸ್‌ಗೆ ಹೋಗಿ ಅಲ್ಲಿಯೇ ಉಳಿದುಕೊಂಡರು.

ಆ ದಿನಗಳಲ್ಲಿ ಹಾಡುವುದಿರಲಿ; ಮಾತು ಕೂಡ ಆಡದಂತೆ ವೈದ್ಯರು ನಿಷೇಧ ಹೇರಿದ್ದರು. ತಮ್ಮ ಅನಾರೋಗ್ಯದ ದಿನಗಳಲ್ಲಿ ಇನ್ನು ಮುಂದೆ ಹಾಡುವುದು ಸಾಧ್ಯವಿಲ್ಲ ಎನ್ನುವಾಗಲೂ ಕುಮಾರರು ಸಂಗೀತದಿಂದ ವಿಮುಖರಾಗಲಿಲ್ಲ. ಪ್ರತಿದಿನ ಸಂಜೆ ಭಾನುಮತಿ ಅವರು ಕುಮಾರ್ ಅವರೆದುರು ಕುಳಿತು ಹಾಡುತ್ತಿದ್ದರು.
 
`ಮೌನ~ವಾಗಿ ಕೇಳುತ್ತಿದ್ದರು. ಯಾರಾದರೂ ಸಂಗೀತಗಾರರು ಬಂದರು ಎಂದರೆ ಹಾಡುವಂತೆ ಕೇಳಿಕೊಳ್ಳುತ್ತಿದ್ದರು. ಐದು ವರ್ಷಗಳ ನಂತರ ಗಂಧರ್ವರು ಎದ್ದು ಕುಳಿತು ಹಾಡಲು ಆರಂಭಿಸಿದರು. ಅದೊಂದು ದಿವ್ಯಗಾನ. ಅವರ ಅನಾರೋಗ್ಯ- ಆದಾಯರಹಿತ ದಿನಗಳಲ್ಲಿ ಕುಟುಂಬ ನೋಡಿಕೊಂಡದ್ದು ಭಾನುಮತಿ.

ಆರೋಗ್ಯ ಸುಧಾರಿಸಿದ ನಂತರ ಹಣಕಾಸಿನ ತೊಂದರೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ವಿಮಾ ಏಜೆಂಟ್‌ನ ಕೆಲಸ ಮಾಡಬೇಕಾಯಿತು. ಅದು ಹೆಚ್ಚು ದಿನ ನಡೆಯಲಿಲ್ಲ. ಹದಿನಾಲ್ಕು ವರ್ಷಗಳ ದಾಂಪತ್ಯದ ನಂತರ (1961) ಭಾನುಮತಿ ಅವರು ಕುಮಾರ್ ಅವರ ಬದುಕಿನಿಂದ ನಿರ್ಗಮಿಸಿದರು. 1962ರಲ್ಲಿ ವಸುಂಧರಾ ಕುಮಾರ್ ಬಾಳ ಸಂಗಾತಿಯಾದರು.)

“ನಾನು ಪಂಡಿತ್ ಬಿ. ಆರ್. ದೇವಧರ್ ಅವರ ಸ್ಕೂಲ್ ಆಫ್ ಮ್ಯೂಸಿಕ್‌ನಲ್ಲಿ ಕಲಿಯುತ್ತಿರುವಾಗ `ಅವರು~ ನನ್ನ ಗುರುಗಳಾಗಿದ್ದರು. ಅವರ ಬಳಿ ಸಂಗೀತ ಕೇಳಿದ ಮೇಲೆ ಬೇರಾರ ಬಳಿಯೂ ಕಲಿಯುವುದು ಬೇಡ ಅನ್ನಿಸಿಬಿಟ್ಟಿತ್ತು. ಆದರೆ, ಅದಕ್ಕೆ ಏನೇನೋ ಅಡೆತಡೆಗಳು ಎದುರಾಗುತ್ತಿದ್ದವು.
 
ಅಕ್ಕ ಇದ್ದಾಗ ದೇವಾಸ್‌ಗೆ ಹೋಗಿ ಇದ್ದು ಕಲಿತು ಬರುತ್ತಿದ್ದೆ. ನಿಯಮಿತವಾಗಿ ಕಲಿಯುವುದು ಸಾಧ್ಯವಾಗಿರಲಿಲ್ಲ. ಮದುವೆಯ ನಂತರವೇ ಅದು ಸಾಧ್ಯವಾದದ್ದು. ಮದುವೆಯಾದ ದಿನಗಳಲ್ಲಿ ಸಂಗೀತ-ಸಂಸಾರ ಎರಡನ್ನೂ ಸರಿದೂಗಿಸಬಲ್ಲೆನೆ? ಎಂಬ ಆತಂಕ ಇತ್ತು.
 
ಅದನ್ನ ಹೇಳಿದರೆ `ಆರಂಭದಲ್ಲಿ ಗಾಯಕನಿಗೆ ಹೆದರಿಕೆ ಇದ್ದರೇ ಒಳ್ಳೆಯದು~ ಎಂದು ಹೇಳುತ್ತಿದ್ದರು. ಅವರ ಬೆಂಗಾವಲಿನಲ್ಲಿ ನನ್ನ ಬದುಕು- ಸಂಗೀತ ಎರಡೂ ಬೆಳೆದವು” ಎಂದು ವಸುಂಧರಾ ಸ್ಮರಿಸಿದರು.

ಅನಾರೋಗ್ಯದಿಂದ ಚೇತರಿಸಿಕೊಂಡ ನಂತರದ ದಿನಗಳಲ್ಲಿ ಮತ್ತು ವಸುಂಧರಾ ಅವರು ಬಾಳ ಸಂಗಾತಿಯಾದ ಮೇಲೆ ಮತ್ತು ಕುಮಾರ್ ಗಂಧರ್ವರು ಹೊಸರೀತಿಯ ಸಂಗೀತ ಕಾರ್ಯಕ್ರಮಗಳನ್ನು ರೂಪಿಸಿದರು.

`ಗೀತ ವರ್ಷ~, `ಗೀತ ಹೇಮಂತ~, `ಗಂಧರ್ವ ಗಾಯನ~, `ಠುಮರಿ-ಟಪ್ಪಾ- ತರಾನಾ~ದಂತಹ ವಿಭಿನ್ನ ಕಾರ್ಯಕ್ರಮ ನೀಡುವುದು ಕುಮಾರ್ ಅವರಿಗೆ ಸಾಧ್ಯವಾಯಿತು. ಆಗೆಲ್ಲ ಜೊತೆಯಾಗಿದ್ದವರು, ಸಲಹೆ-ಸೂಚನೆ ನೀಡಿದವರು ವಸುಂಧರಾ.

ಈ ಬಗ್ಗೆ ಮಾತನಾಡಿದಾಗ `ಅಯ್ಯೋ ನಾನೇನು ಮಾಡಿಲ್ಲ. ಅವರೇ ಎಲ್ಲ ನಿರ್ಧಾರ ಮಾಡುತ್ತಿದ್ದರು. ಯೋಚನೆ-ಯೋಜನೆ ಎಲ್ಲ ಅವರದೇ. ನಾನು ಅವರ ಜೊತೆಗೆ ಹಾಡುತ್ತಿದ್ದೆ. ಸಹಗಾಯನ ಮಾತ್ರ ನನ್ನದು~ ಎಂದು ಹೇಳುತ್ತಿದ್ದಂತೆಯೇ ಅಲ್ಲಿಯೇ ಕುಳಿತಿದ್ದ ಮೊಮ್ಮಗ ಭುವನೇಶ್ `ತಾಯಿ ಹಾಗೆ ಹೇಳೋದು ಅವರ ದೊಡ್ಡತನ.

ಕುಮಾರ್‌ಜಿ ಜೊತೆಯಲ್ಲಿ ಕುಳಿತು ಸಾಥ್ ನೀಡುವುದಕ್ಕೆ ಬಹಳ ತಯಾರಿ ಬೇಕಾಗುತ್ತಿತ್ತು. ಸಾಮಾನ್ಯರಿಗೆ ಅದು ಸಾಧ್ಯವೇ ಇರಲಿಲ್ಲ. ಕುಮಾರ್ ಅವರು ವಿಭಿನ್ನ ಕಾರ್ಯಕ್ರಮ ರೂಪಿಸುವಾಗ ಬಂದೀಶ್ ಆಯ್ಕೆ, ಪ್ರಸ್ತುತಿಗಳಲ್ಲಿ ವಸುಂಧರಾ ತಾಯಿ ಅವರ ಕೊಡುಗೆ ಬಹಳ ಇದೆ. `ನಾನೇನು ಮಾಡಿಲ್ಲ~ ಅಂತ ಹೇಳೋದು ಅವರ ಹಿರಿಮೆ~ ಎಂದು ಮಧ್ಯೆ ಪ್ರವೇಶಿಸಿದರು.

“ಅನಾರೋಗ್ಯದ ನಂತರದ ದಿನಗಳಲ್ಲಿ ಅವರ ಬದುಕು ಬಹಳ ಸೂಕ್ಷ್ಮವಾಗಿತ್ತು. ಎರಡು ಬಾರಿ `ಸೀರಿಯಸ್~ ದಿನಗಳನ್ನು ಕಳೆದು ಬಂದಿದ್ದರೂ ಹಾಡಲು ಕುಳಿತಾಗ ಆರೋಗ್ಯದ ಕಡೆಗೆ ಲಕ್ಷ್ಯ ಕೊಡುತ್ತಿರಲಿಲ್ಲ. ಹಾಡು ಹಾಡುತ್ತಲೇ ಜೋರ್‌ದಾರ್ ಹಾಡುಗಾರಿಕೆಗೆ ಜಾರಿ ಬಿಡುತ್ತಿದ್ದರು. ಅದು ಅವರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಾಗಿರಲಿಲ್ಲ.

ಒಮ್ಮೆ ಠುಮರಿ-ಟಪ್ಪಾ- ತರಾನಾ ಕಾರ್ಯಕ್ರಮದಲ್ಲಿ `ಅವರು~ ಶಕ್ತಿ ಮೀರಿ ಮೇಲೆ ಹೋಗುತ್ತಿದ್ದಾರೆ ಅನ್ನಿಸಿ ಮೆಲುದನಿಯಲ್ಲಿ ಎಚ್ಚರಿಸಿದೆ. ಹಾಡುವ ಮೂಡ್‌ನಲ್ಲಿದ್ದ `ಅವರು~ ಅದನ್ನು ಲಕ್ಷಿಸದೆ ಮೈಕ್ ಮುಂದೆಯೇ ನನ್ನ ಮೇಲೆ ರೇಗಿಬಿಟ್ಟರು. ಸಾರ್ವಜನಿಕವಾಗಿ ಇಂತಹ ಅವಮಾನ ನಿರೀಕ್ಷಿಸಿರಲಿಲ್ಲ. ಎಂಟು ದಿನ ಅಳುತ್ತಲೇ ಕಳೆದೆ. ಒಂಬತ್ತನೇ ದಿನ ಅವರಿಗೂ ತಮ್ಮ ತಪ್ಪಿನ ಅರಿವಾಗಿತ್ತು” ಎಂದು ವಸುಂಧರಾ ನೆನಪಿಸಿಕೊಂಡರು.

“ನಮಗೆ ಬರೀ ಕಷ್ಟಗಳೇ ಇದ್ದವು ಅಂತೇನಿಲ್ಲ. ಶಿಷ್ಯಳಾಗಿ ಅವರ ಎದುರು ಕುಳಿತು ಕಲಿತದ್ದು ಮಾತ್ರವಲ್ಲದೆ ಮನೆಗೆಲಸ ಮಾಡುತ್ತಲೇ ಅವರು ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿರುವಾಗ ಕೇಳಿ ಕಲಿತದ್ದೂ ಇದೆ.
 
ನನ್ನಷ್ಟಕ್ಕೆ ನಾನೇ ಹಾಡಿಕೊಳ್ಳುತ್ತಿರುವಾಗ, ರಿಯಾಜ್ ಮಾಡುವಾಗ ಅವರು ಕಿಟಕಿಯಲ್ಲಿ ನಿಂತು ಕೇಳಿಸಿಕೊಳ್ಳುತ್ತಿದ್ದರು. ಆಗಾಗ ಮುಖ ತೂರಿಸಿ `ಸರಿಯಾಗಿದೆ. ಮುಂದುವರಿಸು~ ಅಂತ ಸೂಚಿಸುತ್ತಿದ್ದರು. ಮಕ್ಕಳಿಗೆ-ವಿದ್ಯಾರ್ಥಿಗಳಿಗಾದರೆ ಎರಡೆರಡು ಗಂಟೆ ಎದುರು ಕುಳಿತು ಸಂಗೀತ ಪಾಠ ನನಗಾದರೋ ಕಿಟಕಿಯಿಂದಲೋ ಪಕ್ಕದ ಕೋಣೆಯಿಂದಲೋ ಸೂಚನೆ- ಸಲಹೆ ಅಂತ ನಾನು ಬೇಸರಿಸಿಕೊಂಡದ್ದು ಉಂಟು.
 
ಆಗ ನನ್ನನ್ನು ಪ್ರೀತಿಯಿಂದ ಮಾತನಾಡಿಸಿ `ನಿನ್ನನ್ನು ಮದುವೆಯಾಗಿ ನಾನು ನಿಜವಾಗಿಯೂ ಒಳ್ಳೆಯ ಕೆಲಸ ಮಾಡಿದೆ~ ಎಂದು ಹಲವಾರು ಬಾರಿ ಹೇಳಿದ್ದಾರೆ. ಇದಕ್ಕಿಂತ ಹೆಚ್ಚಿನ ಪ್ರೀತಿ-ವಿಶ್ವಾಸ ಬೇರೇನು -ಬೇರೆಲ್ಲಿ ಸಿಗಲು ಸಾಧ್ಯ?” ಎಂದು ಪ್ರಶ್ನಿಸುವಂತೆ ನೋಡಿದರು.

ಎದ್ದು ನಿಲ್ಲಲು ನಡೆದಾಡಲು ಕಷ್ಟ ಆಗುವಂತಹ ಕಾಲು ನೋವು ಇದ್ದರೂ ಅಜ್ಜಿ ಮಾತನಾಡುವ ಮೂಡ್‌ನಲ್ಲಿ ಇದ್ದರು. ಮೊಮ್ಮಗ ಭುವನೇಶ್ `ಫ್ಲೈಟ್‌ಗೆ ಲೇಟಾಗ್ತದೆ. ಮತ್ತೊಮ್ಮೆ ಸಿಗೋಣ. ದೇವಾಸ್‌ಗೆ ಬನ್ನಿ. ಕುಮಾರ್ ಗಂಧರ್ವರ ನೆನಪುಗಳನ್ನು ಹಾಗೆಯೇ ಉಳಿಸಿಕೊಂಡಿದ್ದೇವೆ.

ಅವರ ಆಡಿಯೋ-ವಿಡಿಯೋ ಎಲ್ಲ ಸಂಗ್ರಹಿಸಿದ್ದೇವೆ. ಡಿಜಿಟಲ್ ರೂಪಕ್ಕೆ ಅಳವಡಿಸಿದ್ದೇವೆ. ಗಂಧರ್ವರ ಹಾಡು ಕೇಳಲು ಬನ್ನಿ~ ಎಂದು ಪ್ರೀತಿಯ ಆಹ್ವಾನವಿತ್ತರು. ಕೈ ಮುಗಿದು ನಿಂತಾಗ `ಅಜ್ಜಿ~ ಪ್ರತಿ ನಮಸ್ಕಾರ ಮಾಡಿದರು. ಗಂಧರ್ವ ಗಾಯನ ಉಳಿಸಿ-ಬೆಳೆಸಿದ ಹಿರಿಯ ಜೀವದ ಸಾಧನೆ- ನಡೆದು ಬಂದ ದಾರಿ ಅಪೂರ್ವ-ಅಪರೂಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT